ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿ ಕೆಟ್ಟವರಿಲ್ಲವೊ...

ಅಂತರ್ಯದ್ಧ
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ತುಂಬಾ ಸಂಪಾದನೆ ಮಾಡಿ, ಬಹಳಷ್ಟು ಸಮಾಜ ಸೇವೆ ಮಾಡಿ ಶಾಲೆಗಳಿಗೆ, ಆಶ್ರಮಗಳಿಗೆ, ಮಕ್ಕಳಿಗೋಸ್ಕರ ತನ್ನ ಆದಾಯವನ್ನು ವಿನಿಯೋಗಿಸುತ್ತಿದ್ದ.
ಅಪ್ಪ, ಅಮ್ಮನಿಗಾಗಿ, ತನ್ನ ಕುಟುಂಬಕ್ಕಾಗಿ ಆದಾಯದ ಒಂದಷ್ಟು ಭಾಗವನ್ನು ಮೀಸಲಿಡುತ್ತಿದ್ದ.

ದುಡಿಮೆಯಿಂದ ಬಸವಳಿದ ಅವನು  ಸಾಗರೋತ್ತರ ದೇಶಗಳಿಗೆ  ಹೋಗಬೇಕು. ಹಡಗು ಪ್ರವಾಸವನ್ನು ಆನಂದಿಸಬೇಕು ಎಂದು  ಒಂದು ವಾರಕ್ಕೆ ಒಂದು ಲಕ್ಷ ಕೊಟ್ಟು ಪ್ರವಾಸ ಕೈಗೊಳ್ಳುತ್ತಾನೆ. 

ಜೀವನಪೂರ್ತಿ ತನ್ನ ಕುಟುಂಬಕ್ಕಾಗಿ, ಸಮಾಜಕ್ಕಾಗಿ ತನ್ನ ಜೀವವನ್ನು ಸವೆಸಿರುತ್ತಾನೆ. ತನಗಾಗಿ ಎಂದು ಒಂದು ವಾರ ಪ್ರವಾಸ ಕೈಗೊಳ್ಳುತ್ತಾನೆ. 6 ರಾತ್ರಿ, 7 ದಿನಗಳ ಪ್ರವಾಸ ಅದು.  ಮೂರನೇ ರಾತ್ರಿ ಬಿರುಗಾಳಿ ಬೀಸುತ್ತದೆ.  ಬಂದು ಹಡಗು ಮುಳುಗುತ್ತದೆ. ಕೆಲವರು ಹಡಗಿನೊಂದಿಗೇ ಮುಳುಗಿ ಹೋದರು. ಇನ್ನೂ ಕೆಲವರು ಈಜಲು ಪ್ರಯತ್ನಿಸಿ ಮುಳುಗಿದರು. ಇನ್ನಷ್ಟು ಜನರು ಹಡಗಿನ ತುಂಡುಗಳಿಗೆ ನೇತಾಡುತ್ತ ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಪ್ರಯತ್ನಿ­ಸಿದರು. ಕೈ ಸೋತು ಅವರೂ ಜಲಸಮಾಧಿಯಾದರು.

ಪ್ರವಾಸಕ್ಕೆ ಹೊರಟ ವ್ಯಕ್ತಿ, ದೇವರ ಮೇಲೆ ಭಕ್ತಿ, ನಂಬಿಕೆ ಇರೋ ಮನುಷ್ಯ. ಎಲ್ಲೋ ಒಂದು ಕಡೆ ಮರದ ತುಂಡು ಸಿಗುತ್ತದೆ.  ಅದನ್ನೇ ಆಸರೆಯಾಗಿ ಹಿಡಿದುಕೊಳ್ಳುತ್ತಾನೆ.  ‘ದೇವರೆ ನಾನು ಏನು ತಪ್ಪು ಮಾಡಿದ್ದೀನಿ. ಎಲ್ಲಾ ಜವಾ­ಬ್ದಾರಿ ಮುಗೀತಲ್ಲ ಎಂದುಕೊಂಡು ಪ್ರವಾಸಕ್ಕೆ ಬಂದಿದ್ದೆ. ಆದರೆ, ಒಂದು ವಾರವೂ ಬದುಕು ಆನಂದಿಸಲಾಗಲಿಲ್ಲವಲ್ಲ, ಎಂದು ಹಳಹಳಿಸುತ್ತಾನೆ. ಪ್ರವಾಹದ ವಿರುದ್ಧ ಈಜಿ ಸುಸ್ತಾ­ದರೂ ಮರದಾಸರೆಯ ಮೇಲೆ ಸುಮ್ಮನಾಗುತ್ತಾನೆ. ಕಗ್ಗ­ತ್ತಲೆ ರಾತ್ರಿಯಲ್ಲಿ, ಏನಾದರಾಗಲಿ ಎಂದುಕೊಂಡು ಮರದ ದಿಮ್ಮಿಯನ್ನಪ್ಪಿ ಮಲಗಿಕೊಳ್ಳುತ್ತಾನೆ. ಎಚ್ಚರವಾ­ದಾಗ ಆ ದಿಮ್ಮಿ ಒಂದು ಭೂ ಪ್ರದೇಶದ ಬಳಿ ತಲುಪಿರುತ್ತದೆ.

ಜನವಾಸವೇ ಇಲ್ಲದ ದ್ವೀಪ ಅದು.  ಎದ್ದು  ನೋಡ್ತಾನೆ. ಹಡಗಿಲ್ಲ. ಜನ ಇಲ್ಲ. ಏನೂ ಇಲ್ಲ. ‘ಏನಪ್ಪ ದೇವರೆ ಏನು ಮಾಡು ಅಂತಿಯಾ ನನ್ನನ್ನು. ಯಾವ ಜನ್ಮದಲ್ಲಿ ಏನು ತಪ್ಪು ಮಾಡಿದ್ದೆ?’ ಎಂದು ಮತ್ತೆ ದೇವರಲ್ಲಿ ಆರ್ತನಾಗಿ ಕೇಳುತ್ತಾನೆ. ಆದರೆ ಏನೂ ಮಾಡೋಕ್ಕಾಗಲ್ಲ. 

ಹಸಿವು, ದಾಹ ಎರಡೂ ಕಾಡತೊಡಗುತ್ತವೆ. ತೆಂಗಿನಮ­ರ­ಗಳು ಕೈ ಬೀಸಿ ಕರೆಯುತ್ತವೆ. ಎಳನೀರನ್ನು ಬಿಡಿಸಿ, ನೀರು ಕುಡಿದು ಎಳೆಕೊಬ್ಬರಿ ತಿಂದು ಸುಧಾರಿಸಿಕೊ­ಳ್ಳು­ತ್ತಾನೆ.  ಕಾಡು ಹಣ್ಣುಗಳೂ ಸಿಗುತ್ತವೆ. ಕೆಲವು ಕಹಿ, ಇನ್ನಷ್ಟು ಸಿಹಿ. ಅವನ್ನೇ ತಿನ್ನುತ್ತ ಕಾಲ ಕಳೆಯುತ್ತಾನೆ. ಆದರೆ ಅದೆಷ್ಟು ದಿನ ಇಂತಹ ಬದುಕು? ಬೆಂಕಿ ಮಾಡಲು ಪ್ರಯತ್ನಿಸುತ್ತಾನೆ. 

ಎರಡು ಕಲ್ಲನ್ನು ಉಜ್ಜಿ, ಪರಸ್ಪರ ಸಂಘರ್ಷದಿಂದ ಬೆಳಕು ಮತ್ತು ಬೆಂಕಿ ಬರುವ ಈ ಕಲೆಯನ್ನು ಅವನೂ ಪ್ರಯೋಗಿಸು­ತ್ತಾನೆ. ಚಳಿಗೆ ಹಾಗೂ ಕಾಡು ಪ್ರಾಣಿಯಿಂದ ಕಾಪಾಡಿ­ಕೊಳ್ಳಲು ಬೆಂಕಿಯೇನೋ ಆಗುತ್ತದೆ.  ಆದರೆ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ತಲೆ ಮೇಲೊಂದು ಸೂರು ಬೇಕೇಬೇಕು. ಅದಕ್ಕಾಗಿ ಲಭ್ಯ ಇರುವ ಕಸ, ಬಿದಿರು, ಹುಲ್ಲುಗಳನ್ನು ಬಳಸಿ ಗುಡಿಸಲನ್ನೂ ನಿರ್ಮಿಸುತ್ತಾನೆ. 

ಇನ್ನು ಊಟದ ಸಮಸ್ಯೆಗೆ ಪರಿಹಾರ ಹುಡುಕಲು ಮತ್ತೆ ಹುಟುಕಾಟದಲ್ಲಿ ತೊಡಗುತ್ತಾನೆ. ಬೆಂಕಿ ಕಂಡ ಮೇಲೆ ಸ್ವಾದಿ­ಷ್ಟವಾಗಿ ಯಾವುದಾದರೂ ಗೆಡ್ಡೆ ಗೆಣಸು ಬೇಯಿಸಿ ತಿನ್ನಬೇಕು ಎಂದು ಅವನ್ನು ಹುಡುಕಲು ಮತ್ತೆ ಹೊರಗೆ ಹೋಗುತ್ತಾನೆ. ಅವನು ಮರಳಿ ಬರುವಾಗಲೇ ಅವನು ಹಚ್ಚಿದ ಬೆಂಕಿಗೆ ಇಡೀ ಗುಡಿಸಲು ಬಲಿಯಾಗಿ ಬೂದಿಯ ರಾಶಿಯಾಗಿರುತ್ತದೆ. ಹೊತ್ತುರಿದ ಗುಡಿಸಿಲಿನ ಬೆಂಕಿ ಜ್ವಾಲೆಯಿಂದಾಗಿ ದೂರದವರೆಗೂ ಹೊಗೆ ಪಸರಿಸಿರುತ್ತದೆ.

ಈ ವ್ಯಕ್ತಿ ದೇವರನ್ನು ದೂರಲು ಆರಂಭಿಸುತ್ತಾನೆ. ಅದ್ಯಾಕೆ ಹೀಗೆ ಪರೀಕ್ಷೆಗಳನ್ನು ನೀಡುತ್ತಿರುವೆ? ಬದುಕು ಆನಂದಿಸುವ ಸಮಯದಲ್ಲಿ ಸಾವಿನೊಂದಿಗೆ ಮುಖಾಮುಖಿ­ಯಾದೆ. ಬದುಕುಳಿದೆನಲ್ಲ ಎಂದರೆ, ಜನವಿರದ ದ್ವೀಪಕ್ಕೆ ತಂದೆ­ಸೆದೆ. ಇಲ್ಲಿಯೂ ಬದುಕಲು ಮಾರ್ಗೋಪಾಯ ಹುಡುಕುವುದರಲ್ಲಿಯೇ  ಗುಡಿಸಿಲಿಗೂ ಬೆಂಕಿ ಹಾಕಿದೆ. ಯಾಕಪ್ಪ ದೇವರೇ ಈ ಶಿಕ್ಷೆ?’ ಎಂದು ಅಳಲಾರಂಭಿಸುತ್ತಾನೆ. ದುಃಖ ಶಮನವಾಗುವ ಮೊದಲೇ ನಿದ್ದೆಗೆ ಜಾರುತ್ತಾನೆ.  ಸ್ವಲ್ಪ ಸಮಯದಲ್ಲಿಯೇ ಯಾರೋ ಬಂದು ಎಚ್ಚರಿಸಲು ಯತ್ನಿಸುತ್ತಾರೆ.

ಈ ವ್ಯಕ್ತಿಗದು ಕನಸು ಎಂದೇ ಎನಿಸುತ್ತದೆ. ಆದರೆ  ಸರಕು ತಗೊಂಡು ಹೋಗುವ ಹಡಗೊಂದು ದಂಡೆಯಲ್ಲಿ ಕಾಣಿಸುತ್ತದೆ. ‘ಬಾ, ಬಾ, ಬಾ, ನಿನ್ನನ್ನು ಕಾಪಾಡೋದುಕ್ಕೆ ಬಂದಿದ್ದೀವಿ’ ಎಂದು ನಾವಿಕನೊಬ್ಬ ಇವನನ್ನು ಕರೆಯುತ್ತಾನೆ. ‘ನಾನು ಇಲ್ಲಿ ಇರೋದು ಹೇಗೆ ಗೊತ್ತಾಯ್ತು. ಇಲ್ಲಿ ಬರೀ ನೀರೇ ಇದೆ. ನಾನು ಇಲ್ಲಿ ಇರೋದು ಹೇಗೆ ಗೊತ್ತಾಯ್ತು’ ಎಂದು ಪ್ರಶ್ನಿಸುತ್ತಾನೆ.

ನಿನ್ನೊಂದಿಗೆ ಹಡಗಿನಲ್ಲಿ ಪ್ರವಾಸಕ್ಕೆಂದು ಬಂದವರೆಲ್ಲರೂ ಸಾವಿಗೀಡಾದರು. ಸಾವಿರಾರು ಜನ ಸತ್ತು ಹೋಗಿದ್ದಾರೆ. ನೀನೊಬ್ಬನೇ ಬಚಾವ್‌ ಆಗಿರೋದು. ಇಂಥ ಪರಿಸ್ಥಿತಿಯಲ್ಲಿ ಬೆಂಕಿ ಮಾಡಿ, ಉಳಿದವರಿಗೆ ನಿನ್ನ ಬದುಕಿನ ಗುರುತು ನೀಡಬೇಕು ಎಂಬ ವಿಚಾರ ಹೇಗೆ ಬಂತು? ಜನವಿಲ್ಲದ ದ್ವೀಪದಲ್ಲಿ ಹೇಗೆ ಬೆಂಕಿ ಮಾಡಿದೆ? ಬೆಂಕಿಯಿಂದ ಹೊಗೆ  ಆಕಾಶದೆತ್ತರ ಏರುವಂತೆ ಸೌದೆ ಒಟ್ಟು ಮಾಡಿದ್ದು ಹೇಗೆ? ಆ ಹೊಗೆ ನೋಡಿಯೇ ಇಲ್ಲಿ ಯಾರಾದರೂ ಇರಬಹುದು ಎನಿಸಿತು. ಆ ಹೊಗೆಯನ್ನು ನೋಡಿಯೇ ಈ ದ್ವೀಪದ ಕಡೆಗೆ ಹಡಗು ತಂದೆವು ಎಂದು ನಾವಿಕ ಉತ್ತರಿಸಿದ.

ಅಂತೂ ದೇವರು ಏನೇ ಮಾಡಿದರೂ ನಮ್ಮ ಒಳಿತಿಗೇ ಮಾಡ್ತಿದ್ದಾನೆ ಅಂತ ನಂಬಿಕೆ ಇರಬೇಕು. ಆದರೆ ಕಷ್ಟಗಳು ಎದುರಾದಾಗ ಆ ನಂಬಿಕೆಯೇ ನಮ್ಮಲ್ಲಿ ಉಳಿದಿರುವುದಿಲ್ಲ. ಕಷ್ಟ ಬಂದಾಗ ಅದು ನಮ್ಮ ಭವಿಷ್ಯವನ್ನು ಬಲಪಡಿಸಲಿದೆ ಎಂಬ ನಂಬಿಕೆಯೇ ನಮ್ಮಲ್ಲಿ ಉಳಿದಿರುವುದಿಲ್ಲ. ಬಂದದ್ದೆಲ್ಲ ಬರಲಿ, ಇದೆಲ್ಲವೂ ನಮ್ಮ ಒಳಿತಿಗೆ ಎಂಬ ನಂಬಿಕೆ ಇದ್ದರೆ ಬದುಕನ್ನು ಜಯಿಸಬಹುದು.  ಇದೆಲ್ಲವೂ ನಮ್ಮ ನಂಬಿಕೆಯನ್ನು ಆಧರಿಸಿದೆ ಅಷ್ಟೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT