ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ ಎಂದರೆ...

ಅಂತರ್ಯುದ್ಧ
Last Updated 29 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಸಾಧ್ಯ ಅಥವಾ ಅಸಾಧ್ಯ ಎನ್ನುವುದು ಒಂದು ಗುರಿ. ಈ ಗುರಿಯ ಸಾಧನೆ ಅದರ ಗಾತ್ರವನ್ನು ಅವಲಂಬಿಸಿರುವುದಿಲ್ಲ. ಬದಲಾಗಿ, ಆ ಗುರಿಯ ಮೇಲೆ ನಮಗೆಷ್ಟು ನಂಬಿಕೆ ಇದೆ ಎಂಬುದನ್ನು ಅವಲಂಬಿಸಿರುತ್ತದೆ. ಹಾಗಿದ್ದರೆ ನಂಬಿಕೆ ಎಂದರೆ ಏನು? ಯಾವುದು ನಮಗೆ ಕಾಣಿಸದೆ ಹೋದರೂ ಅದರ ಮೇಲೆ ವಿಶ್ವಾಸ ಇಡಲು ಸಿದ್ಧರಾಗಿದ್ದೇವೋ ಅದೇ ನಂಬಿಕೆ.

ಯಾವುದು ಇದುವರೆಗೂ ಪ್ರಪಂಚದಲ್ಲಿ ಆಗಿಲ್ಲವೋ ಅದು ಆಗುತ್ತದೆ ಎನ್ನುವ ಭರವಸೆ ಇಟ್ಟುಕೊಳ್ಳುವುದು ನಂಬಿಕೆ. ಯಾವುದೋ ಒಂದು ವಿಷಯ ಸಕಾರಾತ್ಮಕವಾಗಿದೆ, ಆದರೆ ಈವರೆಗೂ ಅದಕ್ಕೆ ಯಾವುದೇ ದಾಖಲೆ ಇಲ್ಲ. ಆದರೂ ಅದನ್ನು ಸ್ವೀಕರಿಸಲು ನಾವು ಸಿದ್ಧರಿ-­ದ್ದೇವೆ ಎಂದರೆ ಅದು ನಂಬಿಕೆ. ಯಾವುದೇ ಸಾಕ್ಷಿ ಆಧಾರವಿಲ್ಲದೇ ಯಾವುದನ್ನು ಸ್ವೀಕಾರ ಮಾಡಲು ನಮಗೆ ಸಾಧ್ಯವಾಗುತ್ತಿ­ದೆಯೋ ಅದು ಸಹ ನಂಬಿಕೆ. ಆದ್ದರಿಂದ, ಯಾವುದೇ ಕೆಲಸ ಆರಂಭಿಸುವ ಮೊದಲು ಬೇಕಾಗಿರುವುದು ಪೂರ್ವ ಷರತ್ತಿಲ್ಲದ ಸಂಪೂರ್ಣವಾದ ನಂಬಿಕೆ.

ಇದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:
ಬಹಳಷ್ಟು ವರ್ಷಗಳ ಹಿಂದೆ ಒಂದು ಪುಟ್ಟ ಸುಭಿಕ್ಷ ರಾಜ್ಯದ ಮೇಲೆ ದೊಡ್ಡ ರಾಜ್ಯದ ರಾಜ ದಂಡೆತ್ತಿ ಬಂದ. ಎರಡು ಕಡೆಯವರಿಗೂ ಭೀಕರ ಯುದ್ಧ ಆರಂಭವಾಯಿತು. ಸಣ್ಣ ರಾಜ್ಯದ ಪ್ರಜೆಗಳಿಗೆ ತಮ್ಮ ರಾಜನ ಮೇಲೆ ಅತ್ಯಂತ ಪ್ರೀತಿ. ಆದರೆ ಆ ರಾಜ್ಯ ಸೋಲುವ ಸ್ಥಿತಿ ಉಂಟಾಯಿತು.

‘ಇಲ್ಲೇ ಇದ್ದರೆ ಇನ್ನು ನನಗೆ ಉಳಿಗಾಲವಿಲ್ಲ, ಪ್ರಾಣವೇ ಹೋದ ಮೇಲೆ ಇನ್ನು ಇವರ ವಿರುದ್ಧ ಹೋರಾಡುವುದಾದರೂ ಹೇಗೆ? ಈಗ ಮೊದಲು ಪ್ರಾಣ ಉಳಿಸಿಕೊಂಡರೆ ಮುಂದೆಯಾದರೂ ಜಯ ಸಾಧಿಸಬಹುದು’ ಎಂದು ಎಣಿಸಿದ ಸಣ್ಣ ರಾಜ್ಯದ ರಾಜ ಅಲ್ಲಿಂದ ಪಾರಾಗಲು ಓಡಿದ. ಶೌರ್ಯವಂತನಾದ ಅವನು ಮತ್ತೆ ಸೈನ್ಯವನ್ನು ಒಗ್ಗೂಡಿಸಿ ದೊಡ್ಡ ರಾಜ್ಯವನ್ನು ಮಣಿಸಲೇಬೇಕು ಎಂದುಕೊಂಡು ಪರಾರಿಯಾಗುವ ನಿರ್ಧಾರಕ್ಕೆ ಬಂದಿದ್ದ.

ಓಡುತ್ತಾ ಓಡುತ್ತಾ ಬೆಟ್ಟವೊಂದಕ್ಕೆ ಬಂದ ಅವನು, ಅಲ್ಲಿದ್ದ ಹಲವಾರು ಗುಹೆಗಳಲ್ಲಿ ಒಂದರ ಒಳ ಹೊಕ್ಕು ಬಚ್ಚಿಟ್ಟುಕೊಂಡ. ಆದರೆ ಇದು ಸುರಕ್ಷಿತವಾದ ತಾಣವಲ್ಲ, ಇನ್ನು ಕೆಲವೇ ಹೊತ್ತಿನಲ್ಲಿ ಶತ್ರು ಪಾಳಯ ತನ್ನನ್ನು ಹುಡುಕಿಕೊಂಡು ಬಂದೇ ಬರುತ್ತದೆ ಎಂಬುದು ಅವನಿಗೆ ತಿಳಿದಿತ್ತು.

ಆದರೂ ಏನು ಮಾಡಲೂ ತೋಚದೆ ದೇವರನ್ನು ನಂಬಿ ಅಪಾರವಾದ ಭಕ್ತಿಯಿಂದ ಕಣ್ಣುಮುಚ್ಚಿ ಪ್ರಾರ್ಥನೆ ಮಾಡಲು ಶುರು ಮಾಡಿದ. ‘ದೇವರೇ ನನಗೆ ನನ್ನ ರಾಜ್ಯ ಬೇಕು. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ನನ್ನನ್ನು ಮತ್ತು ಆ ಮೂಲಕ ನನ್ನ ಪ್ರಜೆಗಳನ್ನು ರಕ್ಷಿಸುವ ಹೊಣೆ ನಿನ್ನದು’ ಎಂದು ಮೊರೆಯಿಟ್ಟ.

ಅಷ್ಟರಲ್ಲಿ ಅಲ್ಲಿದ್ದ ಜೇಡವೊಂದು ಗುಹೆಯ ಬಾಗಿಲಲ್ಲಿ ಬಲೆ ಕಟ್ಟಲು ಶುರು ಮಾಡಿತು. ಅದನ್ನು ಕಂಡ ರಾಜ, ಅಯ್ಯೋ ದೇವರೇ ಇಲ್ಲೊಂದು ಕಲ್ಲಿನದೋ ಪೊದೆಯದೋ ಗೋಡೆ ಕಟ್ಟಿ ನನ್ನನ್ನು ಕಾಪಾಡುವೆ ಎಂದುಕೊಂಡರೆ, ಕೇವಲ ಕೈಯಲ್ಲಿ ಸರಿಸಿ ಒಳನುಗ್ಗಬಹುದಾದ ಬಲೆ ಸೃಷ್ಟಿಸುತ್ತಿರುವೆಯಲ್ಲಾ ಎಂದು ಪೇಚಾಡಿಕೊಂಡ. ಅಷ್ಟರಲ್ಲಾಗಲೇ ಶತ್ರುಪಡೆಯ ಹೆಜ್ಜೆ ಸಪ್ಪಳ ಕೇಳಿಸಿತು. ಅವರು ಎಲ್ಲ ಗುಹೆಗಳನ್ನೂ ಹುಡುಕತೊಡಗಿದರು.

ಈ ಗುಹೆಯ ಬಳಿಗೂ ಬಂದರು. ಇನ್ನು ತನ್ನ ಗತಿ ಮುಗಿದೇಹೋಯಿತು ಎಂದು ಚಿಂತಾಕ್ರಾಂತನಾದ ರಾಜ ಉಸಿರು ಬಿಗಿಹಿಡಿದು ಕುಳಿತ. ಹೊರಗಿದ್ದವರು ಈ ಗುಹೆಯ ಒಳ ಹೋಗಲು ಅಡಿ ಇಡುತ್ತಿದ್ದಂತೆಯೇ ಅವರನ್ನು ತಡೆದ ಮುಖ್ಯಸ್ಥ ‘ಏಯ್‌ ಈ ಗುಹೆಯ ಒಳಗೆ ಹೋಗಿ ಸುಮ್ಮನೆ ಕಾಲಹರಣ ಮಾಡಬೇಡಿ. ಇಲ್ಲಿ ಬಾಗಿಲಲ್ಲೇ ಜೇಡರ ಬಲೆ ಇದೆ ನೋಡಿ. ಯಾರಾದರೂ ಒಳಗೆ ಹೋಗಿದ್ದರೆ ಬಲೆಯನ್ನು ಸರಿಸಿ ಹೋಗುತ್ತಿದ್ದರು. ಹೀಗಾಗಿ ರಾಜನಿಗಾಗಿ ಬೇರೆ ಗುಹೆಗಳಲ್ಲಿ ಹುಡುಕಿ’ ಎಂದು ಆದೇಶಿಸಿದ. ಹೀಗೆ ರಾಜನ ಪ್ರಾಣ ಉಳಿದಿತ್ತು.

ನಂಬಿಕೆಗೆ ಹಲವಾರು ದಾರಿಗಳು ಇರುತ್ತವೆ. ಆ ದೇವರು ನಾವು ಅಂದುಕೊಳ್ಳುವ ದಾರಿಯಲ್ಲಿ ಕರೆದೊಯ್ಯದೇ ಇರಬಹುದು. ಆದರೆ, ರೈಲು ನಿಲ್ದಾಣ ತಲುಪಲು ನಮಗೆ ಸಾಕಷ್ಟು ದಾರಿಗಳು ಇರುತ್ತವೆ ಅಲ್ಲವೇ? ಹಾಗೇ ನಂಬಿಕೆಗೂ ನೂರಾರು ದಾರಿಗಳು.
                                                                              * * *
ಒಬ್ಬ ಧನಿಕ ಸಾಕಷ್ಟು ದಾನ– ಧರ್ಮ, ಸಮಾಜ ಸೇವೆ ಮಾಡಿ ಕುಟುಂಬದ ಕಲ್ಯಾಣಕ್ಕೂ ದುಡಿಯುತ್ತಿದ್ದ. ಕೆಲಸದ ಒತ್ತಡದಿಂದ ಪಾರಾಗಲು ಆಗಾಗ್ಗೆ ದ್ವೀಪವೊಂದಕ್ಕೆ ಹೋಗಿ ಮನಸ್ಸು ತಣಿಸಿಕೊಂಡು ಬರುತ್ತಿದ್ದ. ಹೀಗೆ ಒಮ್ಮೆ ಹಡಗಿನಲ್ಲಿ ಆ ದ್ವೀಪಕ್ಕೆ ತೆರಳುವಾಗ ಭಯಂಕರ ಚಂಡಮಾರುತ ಬಂದು ಹಡಗು ಪೂರ್ತಿ ಮುಳುಗಿಹೋಯಿತು. ಅದರಲ್ಲಿದ್ದ ಹಲವರು ನೀರು ಪಾಲಾದರು.

ದೇವರ ಮೇಲೆ ಅಪಾರ ಭಕ್ತಿ, ನಂಬಿಕೆ ಇದ್ದ ಧನಿಕ ಮರದ ತುಂಡೊಂದರ ಮೇಲೆ ತೇಲುತ್ತಾ ಬಂದು ಯಾವುದೋ ದಡ ಸೇರಿಕೊಂಡ. ಕಣ್ಣು ತೆರೆದು ನೋಡಿದರೆ ಜನರ ಸುಳಿವೇ ಇಲ್ಲದ ಚಿಕ್ಕದೊಂದು ದ್ವೀಪದಲ್ಲಿ ತಾನಿರುವುದು ತಿಳಿಯಿತು. ಹಸಿವೆಯಿಂದ ಹೊಟ್ಟೆ ಸುಡುತ್ತಿತ್ತು. ಅಲ್ಲಿದ್ದ ತೆಂಗಿನಕಾಯಿ ಒಡೆದು ನೀರು ಕುಡಿದು ತಿರುಳು ತಿಂದ. ಗೆಡ್ಡೆ ಗೆಣಸು ಕಿತ್ತು ತಿಂದ. ಹೀಗೇ ಬಯಲಲ್ಲಿ ಎಷ್ಟು ಹೊತ್ತು ಇರುವುದು? ಕಷ್ಟಪಟ್ಟು ಅಲ್ಲಿದ್ದ ತರಗೆಲೆಗಳನ್ನು ಒಗ್ಗೂಡಿಸಿ ಗುಡಿಸಿಲನ್ನು ಕಟ್ಟಿಕೊಂಡ.

ಕಲ್ಲುಗಳನ್ನು ಉಜ್ಜಿ ಬೆಂಕಿ ಮಾಡಿಕೊಂಡು ಗೆಡ್ಡೆ– ಗೆಣಸನ್ನು ಬೇಯಿಸಿ ತಿನ್ನಲು ಶುರು ಮಾಡಿದ. ಮರುದಿನ ಆಹಾರ ಹುಡುಕುತ್ತಾ ಹೋಗಿದ್ದವ ವಾಪಸು ಬರುವಷ್ಟರಲ್ಲಿ ಅವನ ಗುಡಿಸಿಲು ಹೊತ್ತಿ ಉರಿಯು­ತ್ತಿತ್ತು. ದಿಗ್ಭ್ರಾಂತನಾದ ಅವನಿಗೆ ದಿಕ್ಕು ತೋಚದಂತೆ ಆಯಿತು. ‘ಅಯ್ಯೋ ದೇವರೇ ಯಾವ ತಪ್ಪು ಮಾಡಿದ್ದಕ್ಕೆ ನನಗೆ ಇಂತಹ ಶಿಕ್ಷೆ’  ಎಂದು ಹಲುಬುತ್ತಾ ಹಾಗೇ ನಿದ್ರೆಗೆ ಜಾರಿದ.

ಕೆಲ ಹೊತ್ತಿನ ಬಳಿಕ ಶಬ್ದಕ್ಕೆ ಎಚ್ಚರವಾಗಿ ನೋಡಿದರೆ ಸರಕು ಸಾಗಣೆ ಹಡಗಿನ ಸಿಬ್ಬಂದಿ ಅವನನ್ನು ಎಬ್ಬಿಸುತ್ತಿದ್ದಾರೆ. ‘ದಾರಿಯಲ್ಲಿ ಹಡಗು ಮುಳುಗಿದ್ದ ವಿಷಯ ತಿಳಿಯಿತು. ಅದರ­ಲ್ಲಿದ್ದ ಬಹಳಷ್ಟು ಮಂದಿ ಸಾವಿಗೀಡಾಗಿದ್ದರು. ಮುಂದೆ ಬರುತ್ತಿದ್ದ ನಮಗೆ ಈ ದ್ವೀಪದ ನಡುವೆ ಹೊತ್ತಿ ಉರಿಯುತ್ತಿದ್ದ ಗುಡಿಸಿಲು ಕಾಣಿಸಿತು.

ಬೆಂಕಿ ಇದ್ದ ಮೇಲೆ ಅಲ್ಲಿ ಮನುಷ್ಯ ಇರಲೇಬೇಕು ಕಾಪಾಡೋಣ ಎಂದುಕೊಂಡು ಹುಡುಕುತ್ತಾ ಇಲ್ಲಿಗೆ ಬಂದೆವು’ ಎಂದರು. ಕಷ್ಟ ಬಂದಾಗ, ಇದು ಮುಂದೆ ಆಗುವ ಒಳ್ಳೆಯದಕ್ಕೆ ಎಂಬ ನಂಬಿಕೆ ನಮಗಿದ್ದರೆ, ಎಂತಹ ನಕಾರಾತ್ಮಕ ಸಂಗತಿಗಳನ್ನೂ ಸಕಾರಾತ್ಮಕವಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT