ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡಿಎಚ್‌, ಎವರೆಸ್ಟ್‌ ಮಸಾಲೆ ಉತ್ಪನ್ನಗಳಲ್ಲಿ ಕೀಟನಾಶಕ ಪತ್ತೆ

ಹಾಂಗ್‌ಕಾಂಗ್‌, ಸಿಂಗಪುರದಲ್ಲಿ ಉತ್ಪನ್ನಗಳಿಗೆ ನಿಷೇಧ
Published 22 ಏಪ್ರಿಲ್ 2024, 16:13 IST
Last Updated 22 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ನವದೆಹಲಿ: ಎಂಡಿಎಚ್‌ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ನ ನಾಲ್ಕು ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಎಂಬ ಕೀಟನಾಶಕ ಅಂಶ ಪತ್ತೆಯಾಗಿದ್ದು, ಹಾಂಗ್‌ಕಾಂಗ್‌ ಹಾಗೂ ಸಿಂಗಪುರದಲ್ಲಿ ಈ ಪದಾರ್ಥಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. 

ಗ್ರಾಹಕರು ಈ ಉತ್ಪನ್ನಗಳನ್ನು ಖರೀದಿಸಬಾರದು. ವ್ಯಾ‍ಪಾರಿಗಳು ಇವುಗಳನ್ನು ಮಾರಾಟ ಮಾಡಬಾರದು ಎಂದು ಹಾಂಗ್‌ಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರವು ಸೂಚಿಸಿದೆ. ಸಿಂಗಪುರದಲ್ಲಿಯೂ ಅಲ್ಲಿನ ಆಹಾರ ಏಜೆನ್ಸಿಯು ಈ ಆದೇಶ ಹೊರಡಿಸಿದೆ.  

ಎಂಡಿಎಚ್‌ನ ಮದ್ರಾಸ್‌ ಕರ‍್ರಿ ಪೌಡರ್‌, ಎವರೆಸ್ಟ್‌ ಫಿಶ್‌ ಕರ‍್ರಿ ಮಸಾಲೆ, ಎಂಡಿಎಚ್‌ ಸಾಂಬಾರ್‌ ಮಸಾಲೆ ಮಿಕ್ಸ್ಡ್‌ ಪೌಡರ್‌ ಹಾಗೂ ಎಂಡಿಎಚ್‌ ಕರ‍್ರಿ ಪೌಡರ್‌ ಮಿಕ್ಸ್ಡ್‌ ಮಸಾಲೆ ಪೌಡರ್‌ನಲ್ಲಿ ಕೀಟನಾಶಕ ಅಂಶ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹಾಂಗ್‌ಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರ ತಿಳಿಸಿದೆ.

ಆದರೆ, ಈ ಬಗ್ಗೆ ಕಂಪನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಭಾರತದ ಮಸಾಲೆ ಪದಾರ್ಥಗಳ ಮಾರಾಟಕ್ಕೆ ನಿಷೇಧ ಹೇರಿರುವ ವಿಷಯವು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಭಾರತೀಯ ಮಸಾಲೆ ಮಂಡಳಿಯ ನಿರ್ದೇಶಕರಾದ ಎ.ಬಿ. ರೆಮಾ ಶ್ರೀ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‍ಪರೀಕ್ಷೆಗೆ ಮುಂದಾದ ಎಫ್‌ಎಸ್‌ಎಸ್‌ಎಐ:

ಕೀಟನಾಶಕ ಅಂಶ ಇದೆ ಎಂಬ ಆರೋಪದ ಬೆನ್ನಲ್ಲೇ ಈ ಎರಡೂ ಬ್ರ್ಯಾಂಡ್‌ಗಳ ಮಸಾಲೆ ಪದಾರ್ಥಗಳ ಗುಣಮಟ್ಟದ ಪರೀಕ್ಷೆಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಕ್ಕೆ ರಫ್ತು ಮಾಡುವ ಮಸಾಲೆ ಪದಾರ್ಥಗಳನ್ನು ಎಫ್‌ಎಸ್‌ಎಸ್‌ಎಐ ಪರಿಶೀಲಿಸುವುದಿಲ್ಲ. ಆದರೆ, ಪ್ರಾಧಿಕಾರವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ದೇಶೀಯವಾಗಿ ಈ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ. ಹಾಗಾಗಿ, ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಇವುಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ ಎಂದು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT