ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಜಾಲಿ ಮರಗಳ ತೆರೆಮರೆಯ ಕಲರವ...

Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತುಂಗಭದ್ರಾ ಹಿನ್ನೀರಿನಲ್ಲಿರುವ ಅಂಕಸಮುದ್ರ ಗ್ರಾಮದ ಕೆರೆಯಲ್ಲೀಗ ಅಂಕೆಯಿಲ್ಲದಷ್ಟು ಪಕ್ಷಿಗಳ ನಿನಾದ. ಕೆರೆಯ ತುಂಬಾ ಹರಡಿಕೊಂಡಿರುವ ಕರಿಜಾಲಿ ಮರಗಳ ಮೇಲೆ ಗರಿಗೆದರಿನಿಂತ ವೈವಿಧ್ಯ ಬಣ್ಣಗಳ ಪಕ್ಷಿಗಳದ್ದೇ ನೋಟ.

ಯಾರ ಅರಿವಿಗೂ ಬಾರದೇ ತೆರೆಮರೆಯಲ್ಲಿಯೇ ಕರಿಜಾಲಿ ಮರಗಳ ಮೇಲೆ ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಬೂದು ಬಕ (ಗ್ರೇ ಹೆರಾನ್), ಕರಿತಲೆಯ ಇರುಳು ಬಕ (ನೈಟ್ ಹೆರಾನ್) ಮುಂತಾದ ಹಕ್ಕಿಗಳು ಗೂಡು ಕಟ್ಟಿ ಮರಿಮಾಡುತ್ತಿವೆ. ಕೆಳಗೆ ಮೊಣಕಾಲೆತ್ತರ ನೀರಿನಲ್ಲಿ ಚುಕ್ಕೆ ಬಾತು (ಸ್ಪಾಟ್ ಬಿಲ್ಡ್‌್ ಡಕ್), ಕೊಂಬಿನ ಬಾತು (ಕೂಂಬ್ ಡಕ್), ಗುಳು ಮುಳುಕ (ಲಿಟ್ಲ್ ಗ್ರೀಬ್) ಮುಂತಾದ ಹಕ್ಕಿಗಳು ತೇಲು ಗೂಡುಗಳನ್ನು ರಚಿಸಿ ತಮ್ಮ ಸಂತಾನವೃದ್ಧಿ ಮಾಡಿಕೊಂಡಿವೆ.

ಇನ್ನು ಮೇಲೆ ಗೋವಕ್ಕಿ (ಕ್ಯಾಟಲ್ ಈಗ್ರೆಟ್), ನೀರು ಕಾಗೆ (ಕಾರ್ಮೋರಂಟ್) ಕರಿ ಹಾಗೂ ಬಿಳಿ ಕೆಂಬರಲು (ಐಬೀಸ್) ಮುಂತಾದುವುಗಳ ಸರದಿ. ಅಷ್ಟೇ ಅಲ್ಲದೇ, ಹಗಲೆಲ್ಲಾ ಪಕ್ಕದ ತುಂಗಭದ್ರಾ ಹಿನ್ನೀರಿನಲ್ಲಿ ಮೃಷ್ಟಾನ್ನ ಭೋಜನ ಮಾಡಿ ರಾತ್ರಿ ವಾಸಕ್ಕೆ ಬರುವ ಸಾವಿ ರಾರು ಹಕ್ಕಿಗಳಿಗೆ ಈ ಕೆರೆಯ ಕರಿಜಾಲಿಯೇ ತಂಗುದಾಣ. 

ಈ ಮೂಲೆಯಲ್ಲಿರುವ ಕೆರೆಯಲ್ಲೇ ಯಾಕೆ ಇಷ್ಟೊಂದು ಹಕ್ಕಿಗಳು ಆಶ್ರಯ ಪಡೆಯುತ್ತಿವೆ ಎಂಬ ಪ್ರಶ್ನೆಗೆ ಉತ್ತರವೂ ಇದೆ. ತುಂಬಾ ಹಳೆಯದಾದ ಈ ಕೆರೆ ಈ ಭಾಗಕ್ಕೆ ನೀರನ್ನು ಒದಗಿಸುತ್ತಿತ್ತು. ಆದರೆ ಕೆಲ ದಶಕಗಳ ಹಿಂದೆ ಈ ಕೆರೆಯ ಜಲಮೂಲದುದ್ದಕ್ಕೂ ಅನೇಕ ಚೆಕ್ ಡ್ಯಾಮ್‌ಗಳು, ಗೋಕಟ್ಟೆ ಗಳು ನಿರ್ಮಾಣಗೊಂಡಿದ್ದರಿಂದ ಈ ಕೆರೆ ಕ್ರಮೇಣ ಒಣಗುತ್ತಾ ವರ್ಷವಿಡೀ ನೀರಿಲ್ಲದೇ ಬಯಲಾಗಿತ್ತು.

ಖಾಲಿ ಕೆರೆಯ ಅಂಗಳ ಎಂದರೆ ಕೇಳಬೇಕೆ. ಅಕ್ಕಪಕ್ಕದ ಹೊಲದವರು ಒತ್ತುವರಿ ಮಾಡಿ ಕೊಳ್ಳತೊಡಗಿದರು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಇದು ಹೀಗೇ ಬಿಟ್ಟರೆ ಕೆರೆಯೇ ಕಣ್ಮರೆಯಾಗುವ ಸಾಧ್ಯತೆ ಎಂದು ಅರಿತ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಅದೇ ತಾನೇ ರಾಜ್ಯದಲ್ಲಿ ಆರಂಭವಾಗಿದ್ದ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಈ ಕೆರೆಯ ಅಂಚಿನುದ್ದಕ್ಕೂ ಕರಿಜಾಲಿ ಮರಗಳನ್ನು ನೆಟ್ಟರು. ಆದರೆ ಕೆರೆಯಲ್ಲಿ ನೀರಿಲ್ಲದೆ ಅಂತರ್ಜಲ ಕುಸಿಯಿತು.

ಪಕ್ಕದಲ್ಲೇ ತುಂಗಭದ್ರ ಜಲಾಶಯ ವಿದ್ದರೂ ಸುತ್ತಮುತ್ತಲಿನ ಸಾವಿರಾರು ಎಕರೆ ಹೊಲಗಳ ಲ್ಲಿರುವ ಕೊಳವೆ ಬಾವಿಗಳು ಬೇಸಿಗೆಯಲ್ಲಿ ನಿರ್ಜಲವಾಗ ತೊಡಗಿದವು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಒಂದು ದಶಕದ ಹಿಂದೆ ಈ ಕೆರೆಗೆ ಏತನೀರಾವರಿ ಮೂಲಕ ನೀರುಣಿಸುವ ಪ್ರಯತ್ನ ಮಾಡಲಾಯಿತು. ಆದರೆ ಕೆಲವು ವರ್ಷಗಳ ನಂತರ ಇದೂ ವಿಫಲವಾಗಿ ಕೆರೆಗೆ ನೀರಿಲ್ಲದಂತಾಯಿತು.

ಈ ಮಧ್ಯೆ ಫಲವತ್ತಾದ ನೆಲಸಿಕ್ಕ ಕರಿಜಾಲಿ ಮರಗಳು ಒಂದೇ ಸಮನೆ ಬೆಳೆದು ಕೆರೆ ತುಂಬಾ ಹರಡಿದವು. ಇದಕ್ಕೆ ಪೂರಕವೆಂಬಂತೆ ಸ್ಥಳೀಯ ಕುರಿಗಾಹಿಗಳು ಈ ಗಿಡಗಳ ಕೊಂಬೆಗಳನ್ನು ಕಡಿದು ಕುರಿ ಮೇಕೆಗಳಿಗೆ ಎಲೆ ಹಾಗೂ ಅವುಗಳ ಕಾಯಿ ಮೇಯಿಸಿದರು. ಹೀಗೆ ಬೀಜ ಪ್ರಸರಣವಾಗಿ ಇಡೀ ಕೆರೆ ಕರಿಜಾಲಿ ವನವಾಯಿತು. ಎಲ್ಲೆಡೆ ಹರಡಿದ ಮುಳ್ಳುಗಳಿಂದಾಗಿ ಕೆರೆಯಲ್ಲಿ ಜನರ ಓಡಾಟವೂ ಕಡಿಮೆಯಾಯಿತು.

ಮುಳ್ಳಿನ ಗಿಡಗಳು ಪಕ್ಷಿಗಳ ರಾತ್ರಿ ವಾಸಕ್ಕೆ ಸೂಕ್ತ, ಹಾಗಾಗಿ ಪಕ್ಕದ ತುಂಗಭದ್ರೆಯಲ್ಲಿ ಇಡೀ ದಿನ ಆಹಾರವನ್ನರಸಿ ಹೋಗುವ ಹತ್ತಾರು ವಿಧದ ಹಕ್ಕಿಗಳಿಗೆ ರಾತ್ರಿವಾಸಕ್ಕೆ ಈ ಕೆರೆ ಸುರಕ್ಷಿತ ನೆಲೆ ಒದಗಿಸಿತು. ತೆರೆದ ಕೊಕ್ಕಿನ ಕೊಕ್ಕರೆ, ಬಿಳಿ ಕತ್ತಿನ ಕೊಕ್ಕರೆ, ಕೆನ್ನೀಲಿ ಬಕಪಕ್ಷಿಗಳು, ಗೋವಕ್ಕಿಗಳು ಸೇರಿದಂತೆ ಅನೇಕ ಪ್ರಬೇಧದ ಸಾವಿರಾರು ಹಕ್ಕಿಗಳು ಈ ಕೆರೆಯನ್ನು ತಮ್ಮ ಕಾಯಂ ನೆಲೆಯನ್ನಾಗಿಸಿಕೊಂಡವು.

ಕೆಟ್ಟು ಹೋದ ಏತನೀರಾವರಿಯಿಂದಾಗಿ ಕೆರೆಯಲ್ಲಿ ನೀರಿಲ್ಲದ ಪರಿಣಾಮ ಸುತ್ತಮುತ್ತಲಿನ ನೂರಾರು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋದಾಗ ಪಂಚಾಯಿತಿ ಸದಸ್ಯರ ಪ್ರಯತ್ನದ ಫಲವಾಗಿ ಮತ್ತೆ ಐದಾರು ಮೋಟಾರ್‌ಗಳ ಮೂಲಕ ಈ ಕೆರೆಯನ್ನು ತುಂಬಿಸಲಾಯಿತು. ಕೆಳಗೆ ನೀರು ಮೇಲೆ ಮುಳ್ಳಿನ ಗಿಡ - ಗೂಡು ಕಟ್ಟುವ ದೊಡ್ಡ ಹಕ್ಕಿಗಳಿಗೆ ಸೂಕ್ತ.

ಹೀಗಾಗಿ ಕಳೆದೆರಡು ವರ್ಷಗಳಿಂದ ಕೇವಲ ಮೈಸೂರು ಸುತ್ತಮುತ್ತ ಗೂಡು ಕಟ್ಟಿ ಮರಿಮಾಡುತ್ತಿದ್ದ ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಬೂದು ಬಕ (ಗ್ರೇ ಹೆರಾನ್), ಇರುಳು ಬಕ (ನೈಟ್ ಹೆರಾನ್) ಮುಂತಾದ ಹಕ್ಕಿಗಳು ಇಲ್ಲಿ ನೂರಾರು ಸಂಖ್ಯೆಯಲ್ಲಿ ಗೂಡು ಕಟ್ಟಿ ಮರಿಮಾಡುತ್ತಿವೆ. ಅಲ್ಲದೇ ಮಳೆಗಾಲದಲ್ಲಿ ತೇಲು ಗೂಡುಗಳಲ್ಲಿ ಚುಕ್ಕೆ ಬಾತು, ಗುಳು ಮುಳಕ, ಕೊಂಬಿನ ಬಾತು ಮುಂತಾದವು ಸಂತಾನೋತ್ಪತ್ತಿ ಮಾಡುತ್ತಿವೆ.

ಗೋವಕ್ಕೆ, ನೀರು ಕಾಗೆ, ಚಮಚಕೊಕ್ಕು (ಸ್ಪೂನ್ ಬಿಲ್) ಮುಂತಾದ ಹಕ್ಕಿಗಳು ಸಂತಾನೋತ್ಪತ್ತಿಗೆ ಸಿದ್ಧತೆ ನಡೆಸಿವೆ.  ಹೈದರಾಬಾದ್ ಕರ್ನಾಟಕದಲ್ಲಿ ಹೀಗೆ ಅನೇಕ ಅಪರೂಪದ ಹಕ್ಕಿಗಳು ಸಂತಾನೋತ್ಪತ್ತಿ ಮಾಡುವುದು ವಿರಳ. ಆದರೆ ಈ ಹಕ್ಕಿಗಳಿಗೆ ಅಪಾಯ ಇಲ್ಲವೆನ್ನುವ ಹಾಗಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದ ಹಗರಿ ಬೊಮ್ಮನ ಹಳ್ಳಿಯ ಬೇಟೆಗಾರರು ಅನೇಕ ಹಕ್ಕಿಗಳನ್ನು ಹೊಡೆದು ಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ಯುವಕರು ವಿಷಾದ ವ್ಯಕ್ತಪಡಿಸುತ್ತಾರೆ.

ಇನ್ನು ಕೆಲವರು ಮೀನು ಹಿಡಿಯಲು ಬಂದು ಈ ಹಕ್ಕಿಗಳನ್ನು ಹಿಡಿದು ಸುಟ್ಟು ತಿಂದಿದ್ದಾರೆ ಎಂದು ಅಲ್ಲೇ ಬಿದ್ದಿರುವ ಬಣ್ಣದ ಕೊಕ್ಕರೆಯ ಪುಕ್ಕಗಳನ್ನು ತೋರಿಸುತ್ತಾರೆ ಇಲ್ಲಿನ ರೈತರು. ಈ ಕೆರೆಗೆ ತುರ್ತಾಗಿ ರಕ್ಷಣೆ ಬೇಕಾಗಿದೆ. ಸಂತಾನೋತ್ಪತ್ತಿಯ ಸಂಭ್ರಮ ದಲ್ಲಿರುವ ಹಕ್ಕಿಗಳಿಗೆ ಯಾವುದೇ ತೊಂದರೆಯಾದರೆ ಅವು ಮುಂದಿನ ಬಾರಿ ಬೇರೆ ಸ್ಥಳವನ್ನು ಅರಿಸಿ ಹೋಗುತ್ತವೆ.

ಹಗರಣಗಳಿಗೆ ರಾಷ್ಟ್ರದಲ್ಲೇ ಕುಖ್ಯಾತಿ ಪಡೆದ ಜಿಲ್ಲೆಗೆ ಈ ಹಕ್ಕಿಗಳಿಂದಾದರೂ ಒಳ್ಳೆಯ ಹೆಸರು ಬರಲಿದೆ. ಈಗಾಗಲೇ  ನಿಸರ್ಗಪರ ಸಂಸ್ಥೆ ಹಾಗೂ ಸ್ಥಳೀಯರು ಕೈಜೋಡಿಸಿ ಅಂಕಸಮುದ್ರ ಕೆರೆಯ ಖಗ ಸಿರಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ಕೆರೆಯನ್ನು ಸಮುದಾಯ ಆಧಾರಿತ ಸಂರಕ್ಷಣಾ ಪ್ರದೇಶ ಎಂದು ಘೋಷಿಸಲು ಹೊಸಪೇಟೆಯ ವನ್ಯಜೀವಿ ಮತ್ತು ನಿಸರ್ಗಪರ ಸಂಸ್ಥೆ (ಸ್ವಾನ್) ಪ್ರಯತ್ನಮಾಡುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT