ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠ ರೋಗಿಗಳ ‘ದೇವ ಮಾನವ’

ಸದ್ದಿಲ್ಲದ ಸಾಧಕರು - 6
ಅಕ್ಷರ ಗಾತ್ರ

ಕಲಬುರ್ಗಿಯ ದೇವಿನಗರ ಬಡಾವಣೆಯಲ್ಲೊಂದು   ‘ಮಹಾತ್ಮಗಾಂಧಿ ಕುಷ್ಠರೋಗಿಗಳ ಕಾಲೊನಿ’ ಇದೆ. ಇಲ್ಲಿ 85 ಮನೆಗಳಿವೆ. ಶುದ್ಧ ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ಬೀದಿ ದೀಪದಂಥ ಎಲ್ಲ ಮೂಲ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಎಲ್ಲೋ ಬಿದ್ದು ಜೀವನ ಕಳೆಯುತ್ತಿದ್ದವರಿಗೆ ಇಲ್ಲಿ ಆಶ್ರಯ ಸಿಕ್ಕಿದೆ. ಇವರ ಮಕ್ಕಳಿಗೆ ಕಂಪ್ಯೂಟರ್, ಹೊಲಿಗೆ ತರಬೇತಿ, ಶಿಕ್ಷಣ, ಉದ್ಯೋಗ ಎಲ್ಲವೂ ದಕ್ಕಿದೆ. ಇದಕ್ಕೆ ಕಾರಣ ಆಟೊ ಚಾಲಕ ಹಣಮಂತ. ಬಡತನದ ನೋವುಂಡ ಇವರು ಇದೀಗ ಕುಷ್ಠ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದು, ಅವರ ಬಾಯಲ್ಲಿ ‘ದೇವ ಮಾನವ’ ಎನಿಸಿಕೊಂಡಿದ್ದಾರೆ.

ತಾಯಿಯ ನೆನಪಲ್ಲಿ...
ಹಣಮಂತನವರು ಕುಷ್ಠರೋಗಿಗಳ ಸೇವೆ ಮಾಡುವ ಹಿಂದೆ ಮನಕಲುಕುವ ಕಥೆ ಇದೆ. ಅವರ ತಾಯಿ ಸರೂಬಾಯಿ ಕುಷ್ಠರೋಗಕ್ಕೆ ತುತ್ತಾದಾಗ ಹಣಮಂತ ಅವರಿಗೆ ಇನ್ನೂ ಒಂದು ವರ್ಷ. ಅಪ್ಪ ತಾಯಿಯನ್ನು ತೊರೆದು ಮರು ಮದುವೆಯಾದರು. ಆದರೆ, ತಾಯಿಗೆ ಒಂದು ವರ್ಷದ ಮಗನನ್ನು ಸಾಕುವುದು ಸವಾಲಾಗಿತ್ತು. ಭಿಕ್ಷೆ ಬೇಡುತ್ತ, ಸಿಗುತ್ತಿದ್ದ ಹಣದಲ್ಲೇ ಮಗನನ್ನು ಸಾಕಬೇಕಿತ್ತು. ಆದರೆ ಕುಷ್ಠ ರೋಗದ ಕಾರಣ ಜನರು ತುತ್ತು ಅನ್ನ ನೀಡಲೂ ನಿರಾಕರಿಸಿದರು. ಕುಡಿಯುವ ನೀರೂ ದುಸ್ತರವಾಯಿತು.

‘ಊರಲ್ಲಿರುವ ಕೈ ಪಂಪ್  ನಾವು ಮುಟ್ಟುವಂತಿರಲಿಲ್ಲ. ರಸ್ತೆಯಲ್ಲಿ ನಡೆಯಬೇಕಾದರೆ ಜನರು ದೂರ ಸರಿಯುತ್ತಿದ್ದರು, ರಸ್ತೆ ಬಿಟ್ಟು ಪಕ್ಕದ ರಸ್ತೆಗೆ ಹೋಗುತ್ತಿದ್ದರು. ಕೀಳಾಗಿ ನಡೆಸಿಕೊಳ್ಳುತ್ತಿದ್ದರು’ ಎಂದು ಹಿಂದಿನ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಹಣಮಂತ.

ಅಂದು ತಮ್ಮ ತಾಯಿಗೆ ಆದ ಅವಮಾನ ಆ ಹುಡುಗನ ಮನದಲ್ಲಿ ಆಳವಾಗಿ ಬೇರೂರಿತು. ಈ ರೀತಿಯ ಅನ್ಯಾಯ, ಅವಮಾನ ಯಾರಿಗೂ ಬರಬಾರದು ಎಂದು ಅಂದು ನಿರ್ಧರಿಸಿದ ಪರಿಣಾಮವೇ ಈ ಕುಷ್ಠ ರೋಗಿಗಳ ಕೇಂದ್ರದ ಸ್ಥಾಪನೆಗೆ ಕಾರಣವಾಗಿದೆ.

‘ನನಗೆ 20 ವರ್ಷವಿದ್ದಾಗ ತಾಯಿ ತೀರಿಹೋದರು. ನಾನು ಆರೈಕೆ ಮಾಡಿದ್ದ ಕುಷ್ಠರೋಗಿಗಳು ನನ್ನನ್ನು ಮನೆ ಮಗನಂತೆ ನೋಡಿಕೊಂಡರು. ಅವರೇ ಸೇರಿ ತಮ್ಮಲ್ಲಿದ್ದ ಹಣ ನೀಡಿ ನನಗೊಂದು ಆಟೊ ಕೊಡಿಸಿದ್ದಾರೆ’ ಎಂದು ನೆನೆಯುತ್ತಾರೆ ಹಣಮಂತ.

ಆಟೊದಲ್ಲಿ ಬರುವ ಸಂಪಾದನೆಯಿಂದ ಪ್ರತಿದಿನ 100 ರೂಪಾಯಿಗಳನ್ನು ತೆಗೆದಿಟ್ಟು 2007ರಲ್ಲಿ ಕುಷ್ಠ ರೋಗಿಗಳ ಕೇಂದ್ರ ಆರಂಭಿಸಿದ್ದಾರೆ, ಖುದ್ದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮುಂಬೈನ ಸಮಾಜ ಸೇವಕ ಮೈಕೆಲ್ ಡಿಸೋಜಾ ಅವರು ಚಿಕಿತ್ಸೆಗೆ ಬೇಕಾದ ಔಷಧಿಗಳನ್ನು ಪೂರೈಸುತ್ತಿದ್ದಾರೆ, ಉಳಿದ ಖರ್ಚೆಲ್ಲಾ ಹಣಮಂತ ಅವರದ್ದೇ.

ರೋಗಿಗಳಿಗೆ ಮನೆ ನಿರ್ಮಾಣ
ಕುಷ್ಠರೋಗಿಗಳಿಗಾಗಿಯೇ ಸರ್ಕಾರದಿಂದ ಮನೆ ನಿರ್ಮಾಣ ಮಾಡಿಸುವ, ಅಲ್ಲಿ ಸೌಲಭ್ಯ ಕಲ್ಪಿಸುವ ಹಾಗೂ ರೋಗಿಗಳ ಮಕ್ಕಳಿಗಾಗಿ ಶಾಲೆಯನ್ನು ಮಂಜೂರು ಮಾಡಿಸಿದ್ದಾರೆ ಹಣಮಂತ. ‘1999ರಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ ನಮ್ಮ ಬಡಾವಣೆಯ ಗುಡಿಸಲುಗಳೆಲ್ಲ ಸುಟ್ಟುಹೋದವು. ಆಗ ಎಲ್ಲರೂ ಬೀದಿ ಪಾಲಾದೆವು. ಈ ಸುದ್ದಿಯನ್ನು ಜಿಲ್ಲಾಧಿಕಾರಿಗೆ ತಿಳಿಸಿದಾಗ ಸರ್ಕಾರವು 80 ಮನೆಗಳನ್ನು ನಿರ್ಮಿಸಿ ಕೊಟ್ಟಿತು. ಈಗ ಆ ಜಾಗದ ಹಕ್ಕು ಪತ್ರಗಳನ್ನೂ ನೀಡಲಾಗಿದೆ. ಹೋರಾಟದ ಮೂಲಕ ಮೂಲ ಸೌಕರ್ಯಗಳನ್ನು‍ಪಡೆದುಕೊಳ್ಳಲಾಗಿದೆ.

ರೋಗಿಗಳ ಮಕ್ಕಳು ನಿರೋಗಿಗಳಾಗಿದ್ದರೂ ಸಾಮಾನ್ಯ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಗಿತ್ತು, ಅವರನ್ನು ಉಳಿದ ಮಕ್ಕಳು ಅಸ್ಪ್ರಶ್ಯರಂತೆ ಕಂಡರು. ಪುನಃ ಸರ್ಕಾರದ ಮೊರೆ ಹೋದ ಪರಿಣಾಮ ಅಂಗನವಾಡಿ ಕೇಂದ್ರ ಆರಂಭವಾಗಿದೆ.

ಇಂಥ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡಲು ವಿವೇಕಾನಂದ ಕುಷ್ಠ ಸೇವಾ ಸಮಿತಿಯ ಸಂಸ್ಥಾಪಕ ಗುರುನಾಯಕ ಅವರು ಗಾಣಗಾಪುರದಲ್ಲಿ ದತ್ತ ಬಾಲ ಸೇವಾಶ್ರಮ ಸ್ಥಾಪಿಸಿದ್ದಾರೆ. ಅವರಿಂದ ಪ್ರೇರಣೆ ಪಡೆದ ನಾನು ಕುಷ್ಠರೋಗಿಗಳ ಮಕ್ಕಳಿಗೆ ಆಶ್ರಯ ಕಲ್ಪಿಸಲು ನಿರ್ಧರಿಸಿದೆ. ಆದರೆ ಹಣದ ಕೊರತೆ ಇತ್ತು. ಆದರೂ ಧೃತಿಗೆಡಲಿಲ್ಲ. ಆಟೊದಿಂದ ಬಂದ ಹಣದಲ್ಲಿಯೇ ಸ್ವಲ್ಪ ಹಣ ಮೀಸಲಿಟ್ಟೆ.‌ಬೆಂಗಳೂರಿನಲ್ಲಿ ಇಂತಹ ಮಕ್ಕಳಿಗೆ ಉನ್ನತ ಅಭ್ಯಾಸಕ್ಕೆ ಉಚಿತ ಶಿಕ್ಷಣ, ವಸತಿ ನೀಡಲಾಗುತ್ತಿದೆ ಎಂಬ ವಿಷಯ ಕೇಳಿ ತುಂಬಾ ಹರ್ಷವಾಯಿತು’ ಎನ್ನುತ್ತಾರೆ ಹಣಮಂತ.­

ಕುಷ್ಠರೋಗಿಗಳಿಗೆ ಸಕಲ ಸೌಕರ್ಯ
ಕುಷ್ಠ ರೋಗಿಗಳಿಗೆ ಸರ್ಕಾರದಿಂದ ಬರಬೇಕಿರುವ ಎಲ್ಲ ಸೌಕರ್ಯಗಳನ್ನು ಕೊಡಿಸಲು ಹಣಮಂತನವರದ್ದು ನಿರಂತರ ಹೋರಾಟ. ರೋಗಿಗಳ ಪರ ಅರ್ಜಿ ಹಾಕುವುದು, ಮಾಸಾಶನ ಮಾಡಿಸುವುದು, ಪಡಿತರ ಚೀಟಿ ಒದಗಿಸುವುದು ಎಲ್ಲವನ್ನೂ ಮಾಡಿದುದರ ಫಲವಾಗಿ ಇಂದು ಎಲ್ಲರಿಗೂ ಪಡಿತರ ಚೀಟಿ ಲಭ್ಯವಿದೆ. ಪ್ರತಿ ತಿಂಗಳು ವೃದ್ಧರಿಗೆ ₹1200 ಮಾಸಾಶನ ಬರುತ್ತಿದೆ. ಕೆಲವರಿಗೆ ಉದ್ಯೋಗ ದೊರಕಿದೆ. ಕೆಲವರು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ, ನಾಲ್ಕು ಜನ ಆಟೊ ಓಡಿಸುತ್ತಿದ್ದಾರೆ.

ಈಗ ಹಣಮಂತ ಅವರು ಕಲಬುರ್ಗಿಯ ಸೂಪರ್ ಮಾರ್ಕೆಟ್‌ನಲ್ಲಿ ಡಿಟಿಪಿ, ಜೆರಾಕ್ಸ್ ಅಂಗಡಿ ಆರಂಭಿಸಿದ್ದಾರೆ. ಅಲ್ಲದೇ ಇನ್ನು ಹಲವರನ್ನು ಕಂಪ್ಯೂಟರ್ ಕೇಂದ್ರಗಳಲ್ಲಿ ಕೆಲಸಕ್ಕೆ ಸೇರಿಸಿದ್ದಾರೆ. ಮಹಿಳಾ ಮಂಡಳಿ ಪ್ರಾರಂಭಿಸಿದ್ದಾರೆ. ಅಲ್ಲಿ ರೋಗದಿಂದ ಮುಕ್ತರಾಗಿರುವ ಶಿಕ್ಷಣ ವಂಚಿತ ಮಕ್ಕಳಿಗೆ ₹ 3.50ಲಕ್ಷ ಸಾಲ ನೀಡಿ ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡಿದ್ದಾರೆ. ಯುವತಿಯರಿಗೆ ತರಬೇತಿ ಕೊಡಿಸುತ್ತಿದ್ದಾರೆ. ಸರ್ಕಾರಕ್ಕೆ  ಮನವಿ ಸಲ್ಲಿಸಿ ಇಂಥ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ದೊರಕಿಸಿಕೊಟ್ಟಿದ್ದಾರೆ.

‘ನಮ್ಮ ಕಾಲೊನಿಯಲ್ಲಿ ಎಲ್ಲ ಜಾತಿಯವರೂ ವಾಸವಿದ್ದಾರೆ. ಈ ರೋಗಕ್ಕೆ ತುತ್ತಾಗಿ ಯಾರಿಗೂ ಬೇಡವೆಂದೆನಿಸಿರುವವರು ಇಲ್ಲಿಗೆ ಬಂದು ನೆಲೆಸುತ್ತಾರೆ’ ಎನ್ನುವ ಹಣಮಂತ ಅವರಿಗೆ ಕುಷ್ಠರೋಗಿಗಳ  ನಿರೋಗಿ ಮಕ್ಕಳನ್ನೂ ದೂರ ತಳ್ಳುತ್ತಿರುವ ಬಗ್ಗೆ ನೋವಿದೆ. ‘ಅವರನ್ನು ಯಾರೂ ಮದುವೆಯಾಗುತ್ತಿಲ್ಲ. ರೋಗಿಯ ಮಕ್ಕಳನ್ನು ರೋಗಿಯ ಮಕ್ಕಳೇ ಮದುವೆಯಾಗುವ ಪರಿಸ್ಥಿತಿ ಇದೆ’ ಎಂದು ಹೇಳುತ್ತಾರೆ. ಇಲ್ಲಿಯವರೆಗೆ ಇವರು ಕಲಬುರ್ಗಿಯಲ್ಲಿ 175 ರೋಗಿಗಳಿಗೆ, ರಾಯಚೂರಿನಲ್ಲಿ 115 ಹಾಗೂ ಬಳ್ಳಾರಿಯಲ್ಲಿ 75 ರೋಗಿಗಳಿಗೆ ಚಿಕಿತ್ಸೆ ದೊರಕಿಸಿಕೊಟ್ಟಿದ್ದಾರೆ.

ಅಂಗವಿಕಲರ ಸಬಲೀಕರಣಕ್ಕೆ ಶ್ರಮಿಸುವ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ನೀಡುವ ರಾಷ್ಟ್ರೀಯ ಪ್ರಶಸ್ತಿಯು 2008ರಲ್ಲಿ ಇವರಿಗೆ ಸಿಕ್ಕಿದೆ. ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಂದ ಹಣಮಂತ ಪ್ರಶಸ್ತಿ ಸ್ವೀಕರಿಸಿದ್ದಾರೆ.

ರೋಗಿಗಳಿಗೆ ನೆರವು
ಹೈದರಾಬಾದ್ ಕರ್ನಾಟಕ ಭಾಗಕ್ಕೆ 2013ರಲ್ಲಿ ಕುಷ್ಠ ರೋಗಿಗಳ ಸಂಘ ಸ್ಥಾಪನೆಯಾಗಿದೆ. ಹಣಮಂತ ಅದರ ಅಧ್ಯಕ್ಷರು. ಜಿಲ್ಲೆಯಲ್ಲಿ ಯಾರಿಗೆ ಕುಷ್ಠ ರೋಗವಿದೆ ಎಂದು ಹುಡುಕಿ ಅಂಥವರಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಪ್ರಾಥಮಿಕ ಹಂತದಲ್ಲಿದ್ದರೆ ಅವರಿಗೆ 6 ತಿಂಗಳ ಎಂಡಿಟಿ ಚಿಕಿತ್ಸೆ ನೀಡಿ ರೋಗವನ್ನು ಸಂಪೂರ್ಣ ಗುಣಮಾಡಲಾಗುತ್ತದೆ.

ಪತ್ನಿ ಬಸಮ್ಮ ಪತಿಯ ಸೇವೆಯಲ್ಲಿ ಕೈಜೋಡಿಸುತ್ತಿದ್ದಾರೆ. ಈ ಮೊದಲು ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಆಸ್ಪತ್ರೆಯಲ್ಲಿ ಕುಷ್ಠ ರೋಗಿಗಳ ಹೆರಿಗೆ ಸಮಯದಲ್ಲಿ ನರ್ಸ್‌ಗಳು ಮುಂದೆ ಬರದಿದ್ದಾಗ ಬಸಮ್ಮ ಅವರೇ ಹೆರಿಗೆ ಮಾಡಿಸಿದ್ದಾರೆ. ಈವರೆಗೆ 45 ಜನರಿಗೆ ಸಹಜ ಹೆರಿಗೆ, ಬಾಣಂತನ ಮಾಡಿ ಜೀವದಾನ ನೀಡಿದ್ದಾರೆ. ಇವರಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT