ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಕ್ಕೆ ಬಣ್ಣ ನೀಡದ ಸುಣ್ಣ...

Last Updated 18 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಸೂಳೇಭಾವಿ ಸುಣ್ಣಕ್ಕೆ ಪ್ರಸಿದ್ಧಿ. ದುರದೃಷ್ಟವಶಾತ್ ಬಾಗಲಕೋಟೆ ಬಣ್ಣಕ್ಕೆ ಸಿಕ್ಕ ಖ್ಯಾತಿ ಸುಣ್ಣಕ್ಕೆ ಸಿಗಲಿಲ್ಲ. ಪ್ರಚಾರದ ಕೊರತೆ ಆಧುನಿಕತೆ ಸ್ಪರ್ಶದಿಂದ ಸುಣ್ಣ ತನ್ನ ಖ್ಯಾತಿ ಗಳಿಸಲು ವಿಫಲವಾಯಿತು. ಆದರೂ ಗ್ರಾಮೀಣ ಜನತೆಯ ಮನೆ ಮನೆಗಳಲ್ಲಿ ಸೂಳೇಭಾವಿ ಸುಣ್ಣ ಮಿಂಚುತ್ತಿದೆ.

   ಹಿಂದುಳಿದ ಅಂಬಿಗ ಜನಾಂಗಕ್ಕೆ ಸೇರಿದ ಈ ಕುಟುಂಬಗಳ ಬಹುತೇಕ ಸದಸ್ಯರು ಅನಕ್ಷರಸ್ಥರು, ಮುಗ್ಧಕಾಯಕ ಜೀವಿಗಳಾದ ಇವರು ಶಾಲೆ ಮುಖ ನೋಡಿಲ್ಲ. ಸರ್ಕಾರದ ಯಾವ ಸೌಲಭ್ಯಗಳೂ ಇವರಿಗೆ ದೊರೆತಿಲ್ಲ. ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಬಹುತೇಕ ಮಹಿಳೆಯರು. ಐದು ದಶಕಗಳಿಂದ ಸುಣ್ಣ ತಯಾರಿಸುತ್ತಿರುವ ನಾಗವ್ವಮ್ಮ, `ಸುಣಗಾರ ಸಾಯಕತ್ತೀವ್ಹಿರಿ, ಯಾರೂ ನಮ್ಮನ್ ತಿರಗಿ ನೋಡಕತ್ತಿಲ್ರಿ, ಐದಾರು ತಲೆಮಾರಿಂದ ಇದನ್ ಮಾಡಕೊಂತ ಬಂದಿವ್ರಿ' ಎನ್ನುತ್ತಾರೆ.

ಪರರ ಮನೆ ಸುಂದರವಾಗಿಸುವ ಸುಣ್ಣ ತಯಾರಿಕಾ ಕುಟುಂಬಗಳ ಬದುಕು ಶೋಚನೀಯ. ಗ್ರಾಮದ ಇಪ್ಪತ್ತು ಕುಟುಂಬಗಳು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ. ಸಂಬಂಧಪಟ್ಟ ಇಲಾಖೆ ಜನಪ್ರತಿನಿಧಿಗಳು ಈಗಲಾದರೂ ಇವರ ಸಮಸ್ಯೆಗಳತ್ತ ಗಮನ ಹರಿಸಲಿ ಎಂಬುದು ಪರಸಪ್ಪ ಹೆದ್ದೇರಿ, ಯಲ್ಲಪ್ಪ ಸುಣಗಾರ, ನೀಲಪ್ಪ ಹೆದ್ದೇರಿ, ಹನಮಂತ ಸುಣಗಾರ ಮುಂತಾದವರ ಅಭಿಪ್ರಾಯ.

ತಯಾರಿಕೆ ಹೀಗೆ
ವೃತ್ತಾಕಾರ ಕಲ್ಲಿನಿಂದ ನಿರ್ಮಿಸಿದ ಸುಣ್ಣ ತಯಾರಿಕಾ ಕೇಂದ್ರ ಬಟ್ಟಿಯಲ್ಲಿ ಹಿಂದೆ ಮುಂದೆ ಮತ್ತು ಮೇಲ್ಭಾಗಗಳಲ್ಲಿ ರಂಧ್ರ ಮಾಡುತ್ತಾರೆ. ಇದರಲ್ಲಿ ಹುಲ್ಯಾಳ ಕಲ್ಲಗೋನಾಳದಿಂದ ತಂದ ಕಚ್ಚಾ ಸುಣ್ಣದ ಕಲ್ಲು ಒಡೆದು, ಸಣ್ಣ ಮಾಡಿ ಪ್ರಮಾಣಕ್ಕುನುಗುಣವಾಗಿ ಇದ್ದಿಲು ಕಟ್ಟಿಗೆ ಬೆರೆಸಿ ಬಟ್ಟಿಯಲ್ಲಿ ಹಾಕಿ ಉರುವಲು ಹಾಕುತ್ತಾರೆ. ಮರುದಿನ ಕಲ್ಲು ಅರಳಿ ಹೂವಿನಂತೆ ಸುಂದರವಾಗಿ ಕಾಣುತ್ತದೆ. ಬಟ್ಟಿಯ ಮುಂದಿನ ರಂಧ್ರದಿಂದ ಸುಣ್ಣ ತಗೆದು ಮಾರಾಟ ಮಾಡುತ್ತಾರೆ.

ಪರ ಊರಿಗೆ ಹೋಗಿ ಸುಣ್ಣ ಮಾರಾಟ ಮಾಡಿದರೂ ಮಾಸಿಕ ಲಾಭ 2-3 ಸಾವಿರಮಾತ್ರ. ಇಂದು ಮನೆಗಳಿಗೆ ಆಧುನಿಕ ಪೇಯಿಂಟ್‌ಗಳನ್ನು ಬಳಸುವುದರಿಂದ ಸುಣ್ಣದ ಬೇಡಿಕೆ ತಗ್ಗಿದೆ. ಇದರಿಂದಾಗಿ ಸುಣ್ಣದ ಆದಾಯವನ್ನೇ ನಂಬಿ ಬದುಕುತ್ತಿರುವ ಗ್ರಾಮೀಣಿಗರ ಪರಿಸ್ಥಿತಿ ಶೋಚನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT