ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಪೋರಿಯ ಜಾದು

Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೂರೂವರೆ ವಯಸ್ಸಿನ ಮಕ್ಕಳು ಗೊಂಬೆಗಳೊಂದಿಗೆ ಆಟವಾಡುತ್ತ ಕಾಲ ಕಳೆಯುವುದು ಸಾಮಾನ್ಯ. ಆದರೆ ಇಂತಹ ಎಳೆ ವಯಸ್ಸಿನಲ್ಲಿಯೇ ಜಾದೂ ಕಲಿಕೆಯತ್ತ ಆಸಕ್ತಿ ತೋರಿಸಿ, ಮೂರು ವರ್ಷಗಳಿಂದ ವೇದಿಕೆಯ ಮೇಲೆ ಜಾದೂ ಪ್ರದರ್ಶನ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದಾಳೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಬಾಲಕಿ ಶ್ರೇಯಾ ಉದ್ನೂರ. 

ಜಾದೂ ಒಂದು ಅದ್ಭುತ ಕಲೆ. ಜಾದೂಗಾರನ ಕೈಚಳದ ಮೇಲೆ ಜಾದೂಗಾರನ ಯಶಸ್ಸು ಅವಲಂಬಿಸಿದೆ. ಏಕಾಗ್ರತೆ, ಚಾಕಚಕ್ಯತೆ ಬೇಡುವ ಜಾದೂ ವಿದ್ಯೆಯ ಟ್ರಿಕ್‌ಗಳನ್ನು ಶ್ರೇಯಾ ಕಲಿತಿದ್ದಾಳೆ. ಈ ಬಾಲೆಗೆ ಈಗ ಆರು ವರ್ಷ. ಒಂದನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ  ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾಳೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ರಾಜ್ಯಗಳ ಜಾದೂಗಾರರು ಭಾಗವಹಿಸಿದ್ದ ರಾಷ್ಟ್ರಮಟ್ಟದ ಜಾದೂಪ್ರದರ್ಶನ ‘ಟಾಕ್ ಮ್ಯಾಜಿಕ್’ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಅತ್ಯಂತ ಚಿಕ್ಕ ವಯಸ್ಸಿನ ಜಾದೂಗಾತಿ ಎನಿಸಿರುವ ಶ್ರೇಯಾಳಿಗೆ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ  ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ನಾಣ್ಯ ಮಾಯ ಮಾಡುವುದು, ಖಾಲಿ ಡಬ್ಬಿಯಿಂದ ಧ್ವಜ, ಸಿಹಿ ಪದಾರ್ಥ ಸೃಷ್ಟಿಸುವುದು, ಹೂ ಅರಳಿಸುವುದು... ಇಂತಹ ಜಾದೂ ಟ್ರಿಕ್‌ಗಳಲ್ಲದೇ ಪರಿಣಿತ ಜಾದೂಗಾರರು ಪ್ರದರ್ಶಿಸುವ ಎಸ್ಕೇಪಿಂಗ್ (ಕೈ ಕಾಲುಗಳಿಗೆ ಕಟ್ಟಿದ ಹಗ್ಗ ಬಿಡಿಸಿಕೊಳ್ಳುವ ಕಲೆ) ಟ್ರಿಕ್‌ಗಳನ್ನು ಶ್ರೇಯಾ ವೇದಿಕೆ ಮೇಲೆ ಪ್ರದರ್ಶಿಸಿದಾಗ ಅಚ್ಚರಿಗೊಳ್ಳಲಾರದವರೇ ಇರಲಾರರು. ಹೊಸ ಹೊಸ ಟ್ರಿಕ್‌ಗಳನ್ನು ಕಲಿಯುವ ಮೂಲಕ ಅಚ್ಚರಿ ಹುಟ್ಟಿಸುತ್ತಿದ್ದಾಳೆ ಶ್ರೇಯಾ.

ಗುಳೇದಗುಡ್ಡದ ಚಂದ್ರಕಾಂತ, ಲಕ್ಷ್ಮೀ ದಂಪತಿಯ ಮಗುವಾಗಿರುವ ಶ್ರೇಯಾಳದ್ದು ಬಡ ನೇಕಾರಿಕೆ ತುಂಬು ಕುಟುಂಬ. ಅಜ್ಜ ಬಸಪ್ಪ, ಅಜ್ಜಿ ಗೌರವ್ವ ಅವರಿಗೆ ಮೊಮ್ಮಗಳ ಮೇಲೆ ಇನ್ನಿಲ್ಲದ ಅಕ್ಕರೆ. ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿರುವ ಈಕೆಯ ಚಿಕ್ಕಪ್ಪ ಶಿವು, ಜಾದೂ ಕಲೆಯಲ್ಲಿ ಪರಿಣತ. ಬೆಂಗಳೂರಿನ ಮ್ಯಾಜಿಕ್ ಸೆಂಟರ್‌ನಲ್ಲಿ ಜಾದೂ ಕಲಿತು, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಅನೇಕ ಜಾದೂ ಕಾರ್ಯಕ್ರಮಗಳನ್ನು ನೀಡಿದ್ದು, ಶ್ರೇಯಾಳಿಗೆ ಇವರೇ ಗುರು, ಮಾರ್ಗದರ್ಶಕ.

ಲಿಮ್ಕಾ ದಾಖಲೆಯಲ್ಲಿ ಇಷ್ಟು ಚಿಕ್ಕವಯಸ್ಸಿನಲ್ಲಿ ಜಾದೂ ಪ್ರದರ್ಶಿಸಿದ ದಾಖಲೆ ಇಲ್ಲ. ಲಿಮ್ಕಾ ದಾಖಲೆಗಾಗಿ ಎಲ್ಲ ದಾಖಲೆಗಳನ್ನು ಕಳುಹಿಸಲಾಗಿದ್ದು, ಲಿಮ್ಕಾದಲ್ಲಿ ಶ್ರೇಯಾಳ ಹೆಸರು ದಾಖಲಾಗುವ ಸಾಧ್ಯತೆ ಇದೆ ಎನ್ನುವ ಚಿಕ್ಕಪ್ಪ ಶಿವು, ಶ್ರೇಯಾಳನ್ನು ದೊಡ್ಡ ಜಾದೂಗಾರಳನ್ನಾಗಿ ಮಾಡುವ ಕನಸು ಹೊತ್ತಿದ್ದಾರೆ. ಸಂಪರ್ಕಕ್ಕೆ ಶಿವು ಅವರ ದೂರವಾಣಿ: 9686878088.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT