ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನಕ್ಕೆ ಜಾರುತಿರುವ ಪಾವಗಡ ಕೋಟೆ

Last Updated 12 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸುತ್ತಲೂ ಹಸಿರುಟ್ಟ ಪ್ರಕೃತಿ ಮಾತೆ. ಕಣ್ಣು ಹಾಯಿಸಿದಷ್ಟೂ ಮತ್ತಷ್ಟು, ಇನ್ನಷ್ಟು ನೋಡಬೇಕೆನ್ನುವ ಸೌಂದರ್ಯ, ಮೈ-ಮನಗಳಿಗೆ ಮುದ ನೀಡುವ ತಂಗಾಳಿ, ಇವುಗಳ ನಡುವೆ ಸೂಜಿಗಲ್ಲಿನಂತೆ ಮನಸೂರೆಗೊಳ್ಳುವ ಭದ್ರ ಕೋಟೆ...

ಇದು ತುಮಕೂರು ಜಿಲ್ಲೆಯ `ಪಾವಗಡ ಕೋಟೆ'ಯ ಚಿತ್ರಣ. ಇಲ್ಲಿರುವ ಪ್ರತಿಯೊಂದು ಕಲ್ಲುಗಳು ಶತಶತಮಾನಗಳ ಕಥೆಯನ್ನು ಸಾರುತ್ತವೆ. ಶತ್ರುಗಳನ್ನು ಬಗ್ಗುಬಡಿಯಲು ಉಪಯೋಗಿಸುತ್ತಿದ್ದ ತಂತ್ರಗಾರಿಕೆ, ಸೈನಿಕರು ಓಡಾಡುವ ತಾಣ, ಕಾವಲುಗಾರರ ಗೃಹ, ಶತ್ರುಗಳ ಸುಳಿವು ಅರಿಯಲು ಕೊರೆದಿರುವ ರಂಧ್ರ...

ಹೀಗೆ ರಾಜಮಹಾರಾಜರ ಕಾಲ ಯುದ್ಧಕೌಶಲ್ಯದ ಸಂಪೂರ್ಣ ಚಿತ್ರಣವೇ ಇಲ್ಲಿದೆ.ಇಂಥ ಒಂದು ಅಪೂರ್ವ ಕೋಟೆಗೆ ತಳಪಾಯ ಹಾಕಿದ ಕೀರ್ತಿ ವಿಜಯನಗರದ ಒಂದನೇ ದೇವರಾಯನ ಸಾಮಂತನಾದ ಗೋಪರಾಜನದ್ದು. ಈತ ಕೋಟೆಯನ್ನು 1405ರಲ್ಲಿ ಕಟ್ಟಲು ಪ್ರಾರಂಭಿಸಿದ್ದರೂ ಅಂದು ಆಳ್ವಿಕೆ ನಡೆಸುತ್ತಿದ್ದ ಪ್ರೌಢದೇವರಾಯನ ಆಜ್ಞೆಯಂತೆ ಅದನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು.

ಪೆನುಗೊಂಡೆಯ ವೆಂಕಟಪತಿ ಮಹಾರಾಜರು ಕೋಟೆ ಪೂರ್ತಿಗೊಳಿಸುವಂತೆ ಬಾಲಪ್ಪನಾಯಕ ಎಂಬುವವನಿಗೆ ಆದೇಶಿಸಿದರು. ಅದರಂತೆ 1585ರಲ್ಲಿ ಕೋಟೆಯ ನಿರ್ಮಾಣ ಮುಂದುವರಿಯಿತು. ನಂತರದ ದಿನಗಳಲ್ಲಿ ಈ ಕೋಟೆಯನ್ನು ಹೈದರಾಲಿ ವಶಪಡಿಸಿಕೊಂಡ. ಅವನ ಕಾಲದಲ್ಲಿ ಕೋಟೆಗೆ ಮರುಜೀವ ಬಂದಿತು, ಅದು ನವೀಕರಣಗೊಂಡಿತು.

ಹೀಗಿದೆ ಚಿತ್ರಣ

ಬೆಟ್ಟದ ಮೇಲೇರುವಾಗ ತಪ್ಪಲಿನಲ್ಲಿ ಕಮ್ಮೋರ ಮಂಟಪವೆಂಬ ಕಟ್ಟಡವಿದೆ. ಬಾಗಿಲುಗಳ ಮೇಲೆ ಗಾರೆಗಳಿಂದ ಕೆತ್ತಿರುವ ಸುಂದರ ಚಿತ್ರಗಳು ಮನಸೂರೆಗೊಳ್ಳುತ್ತವೆ. ಕೋಟೆಯ ಗೋಡೆಯ ಮೇಲ್ಭಾಗದಲ್ಲಿ ಸೈನಿಕರು ಓಡಾಡಲು ಹಾಗೂ ಕಾವಲುಗಾರರು ಇರಲು ಅನುಕೂಲವಾಗುವಂತೆ ನಿರ್ಮಿಸಿರುವ ತಾಣ ಅಚ್ಚರಿ ಮೂಡಿಸುತ್ತದೆ. ಶತ್ರುಗಳ ಸುಳಿವ ಗೊತ್ತಾಗುವಂತೆ ಬತೇರಿಗಳಲ್ಲಿ ಕೊರೆಯಲಾದ ರಂಧ್ರ ರಾಜಮಹಾರಾಜರ ಕೌಶಲ್ಯಕ್ಕೆ ಹಿಡಿದ ಕನ್ನಡಿ.

ಈ ರಂಧ್ರದಲ್ಲಿ ಫಿರಂಗಿಯನ್ನಿಟ್ಟು ಶತ್ರು ನಿರ್ನಾಮ ಮಾಡಲಾಗುತ್ತಿತ್ತು. ಇಲ್ಲಿಯೇ ಪಾಳೆಯಗಾರರಿಗೆ ಸಂಬಂಧಿಸಿದ ನೆಲಮಾಳಿಗೆಯಿದೆ. ಕೆಳಗಿಳಿಯಲು ಅದ್ಭುತವಾದ ಮೆಟ್ಟಿಲುಗಳನ್ನೂ ಕಟ್ಟಲಾಗಿದೆ. ಗೋಡೆಯಲ್ಲಿ ಯುದ್ಧ ವರ್ಣನೆಯ ಚಿತ್ರಗಳನ್ನು ಕೆತ್ತಲಾಗಿದೆ. ಈ ನೆಲಮಾಳಿಗೆಯು ಈಗಲೂ ಭದ್ರವಾಗಿರುವುದನ್ನು ನೋಡಬಹುದು.

  ಇದೇ ಪ್ರದೇಶದಲ್ಲಿ ಧಾನ್ಯಗಳ ಕಣಜ, ನಾಶವಾಗಿರುವ ದೇವಾಲಯ, ಶಿಥಿಲವಾಗದೆ ಉಳಿದಿರುವ ಮಸೀದಿ, ಕಾವಲುಗಾರರ ಗೃಹಗಳು, ಕಳ್ಳರನ್ನ ಬೀಳಿಸುವ ಜಾಗ, ಕಳ್ಳರ ಜರುಗು ಮುಂತಾದುವುಗಳನ್ನು ಕಾಣಬಹುದಾಗಿದೆ. ಪಾಳೆಯಗಾರರು ರಕ್ಷಣೆಯ ದೃಷ್ಟಿಯಿಂದ ಕೋಟೆ ಕೊತ್ತಲಗಳನ್ನು ಬೆಟ್ಟ ಗುಡ್ಡದಲ್ಲಿಯೇ ನಿರ್ಮಿಸಿರುವುದು ಕಂಡು ಬರುತ್ತದೆ.

ಈ ಬೆಟ್ಟದ ತುದಿಯ ಭಾಗವು ಬಹಳ ವಿಶಾಲವಾಗಿದ್ದು ಇದೇ ಪ್ರದೇಶದಲ್ಲಿ ಬೃಹತ್ ಆಕಾರದ ಮೆಟ್ಟಿಲುಳ್ಳ ಒಂದು ದೊಣೆಯಿದೆ. ಇದರಲ್ಲಿ ನೀರು ರುಚಿಯಾಗಿಯೂ, ತಿಳಿಯಾಗಿಯೂ ಇದೆ. ಇದಕ್ಕೆ `ಭೀಮದೊಣೆ' ಎಂದು ಹೆಸರು. ಕೋಟೆಯ ಮುಖ್ಯದ್ವಾರ ಭದ್ರವಾಗಿಯೇ ಇವೆ. ಇಲ್ಲಿಂದ ಮೇಲೆ ಹೋಗಲು ಮೆಟ್ಟಿಲುಗಳ ವ್ಯವಸ್ಥೆಯಿದೆ. ಗ್ರಾಮದಲ್ಲಿರುವ ಕೋಟೆಗೆ ಸುಂದರವಾದ ಮೂರು ಊರು ಬಾಗಿಲುಗಳಿವೆ. ಇವುಗಳಿಗೆ ಪೆನುಗೊಂಡೆಯ ಬಾಗಿಲು, ಮಧುಗಿರಿ ಬಾಗಿಲು, ನಿಡುಗಲ್ಲು ಬಾಗಿಲು ಎಂಬ ಹೆಸರು.

ಅವಸಾನದತ್ತ...

ಇಂಥ ಅಭೂತಪೂರ್ವ ಕೋಟೆ ಈಗ ಶಿಥಿಲಗೊಂಡು ತನ್ನತನವನ್ನು ಕಳೆದುಕೊಳ್ಳುತ್ತಿದೆ. ಶತಮಾನಗಳ ಹಿಂದಿನ ಚಿತ್ರಣವನ್ನು ಮುಂದಿನ ಪೀಳಿಗೆಗೆ ಸಾರಬೇಕಿರುವ ಕೋಟೆಯ ಒಂದೊಂದು ಕಲ್ಲುಗಳು ಜೀವಂತಿಕೆ ಕಳೆದುಕೊಳ್ಳುತ್ತಿವೆ. ರಾಜಮಹಾರಾಜರ ಆಳ್ವಿಕೆಯ ಮೇಲೆ ಬೆಳಕು ಚೆಲ್ಲಬೇಕಿರುವ, ಅಧ್ಯಯನಕಾರರಿಗೆ ಇತಿಹಾಸದ ಸಾರವನ್ನೇ ಉಣಬಡಿಸಬೇಕಿರುವ ಈ ಕೋಟೆ ಈಗ ಹೆಚ್ಚಿನವರ ಗಮನಕ್ಕೆ ಬಾರದೇ ಮೌನತಾಳಿ ಕುಳಿತಿದೆ.

ಇಲ್ಲಿ ದೊಡ್ಡ ಮಂಟಪಗಳಿದ್ದು, ಆ ಮಂಟಪಗಳನ್ನು ಕಿಡಿಗೇಡಿಗಳು ಇಸ್ಪೀಟು ಆಡುವ ತಾಣವಾಗಿಸಿಕೊಂಡಿದ್ದಾರೆ. ಕಲೆ -ಸಂಸ್ಕೃತಿಯ ಕುರುಹುಗಳು ನಾಶವಾಗುತ್ತಿರುವುದಲ್ಲದೆ, ಈ ಪ್ರದೇಶವು ಅನೈತಿಕ ಚಟುವಟಿಕೆಗಳು ನಡೆಯುವ ತಾಣವಾಗಿ ಪರಿವರ್ತನೆಗೊಂಡಿದೆ.
ಕೊರತೆಯ ನಡುವೆಯೂ ಮನಸೂರೆಗೊಳ್ಳುತ್ತಿರುವ ಐತಿಹಾಸಿಕ ಮಹತ್ವವುಳ್ಳ ಈ ಕೋಟೆಯ ಬಗ್ಗೆ ಸರ್ಕಾರಕ್ಕೆ ಮಾತ್ರವಲ್ಲದೇ ನಾಗರಿಕರಿಗೂ ಕಾಳಜಿಯಿಲ್ಲದಿರುವುದು ದುಃಖಕರ ಸಂಗತಿ.

ಹೀಗೇ ಮುಂದುವರಿದರೆ, ನಮ್ಮೂರಿನ ಇತಿಹಾಸವನ್ನು ಪುಸ್ತಕಗಳಲ್ಲಿ ಓದಬಹುದು ಅಷ್ಟೆ. ಈ ಕೋಟೆಯ ಅಸ್ತಿತ್ವ ಸ್ಮೃತಿಪಟಲದಿಂದ ಜಾರುವ ಮುನ್ನವೇ ಸರ್ಕಾರ ಇತ್ತ ಕಡೆ ಗಮನಹರಿಸಿ ಈ ಪ್ರದೇಶವನ್ನು ಪ್ರವಾಸಿತಾಣವಾಗಿಸಿದರೆ ಈ ಪ್ರದೇಶವು ಅಭಿವೃದ್ಧಿ ಹೊಂದುತ್ತದೆ; ಇತಿಹಾಸವು ಶಾಶ್ವತವಾಗಿ ಉಳಿಯುತ್ತದೆ.
-ನವೀನ್ ಕುಮಾರ್ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT