ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಅತಿಥಿಗಳ ಹಾಡು–ಪಾಡು

Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಪೂರ್ವ ಬಯಲಿನ ಉತ್ತರ ಕರ್ನಾಟಕ ನೂರಾರು ವಿಧದ ವಲಸೆ ಹಕ್ಕಿಗಳ ಅಚ್ಚು ಮೆಚ್ಚಿನ ತಾಣ. ಇಲ್ಲಿ ಸದಾ ಬರಗಾಲವಿದ್ದರೂ ಪಶ್ಚಿಮ ಘಟ್ಟಗಳಿಂದ ಹರಿದು ಬರುವ ಜೀವ ನದಿಗಳು ಹಾಗೂ ನದಿ, ಕೆರೆ –ಕುಂಟೆಗಳು ಚಳಿಗಾಲದಲ್ಲಿ ಜೌಗು ಪ್ರದೇಶವನ್ನು ಸೃಷ್ಟಿಸುತ್ತವೆ.  ವಿಶಾಲ ಹುಲ್ಲುಗಾವಲುಗಳು, ಬಯಲು ಪ್ರದೇಶ, ಭತ್ತದ ಗದ್ದೆಗಳು, ಕೆಸರಿನ ಹೊಂಡಗಳು, ಜೌಗು, ಕುರುಚಲು ಕಾಡು, ತೋಟಗಳು ವಲಸೆ ಹಕ್ಕಿಗಳಿಗೆ ಆಹಾರ ಹಾಗೂ ಆವಾಸವನ್ನು ಒದಗಿಸುತ್ತವೆ. ಇಂಥ ಪ್ರದೇಶದಲ್ಲಿ  ವಲಸೆ ಹಕ್ಕಿಗಳ ಜೀವನದ ಒಳನೋಟದ ಕುರಿತು ಇಲ್ಲಿ ವಿವರಿಸಿದ್ದಾರೆ ಸಮದ್ ಕೊಟ್ಟೂರು.

ಇವರಿಗೆ ಪಾಸ್‌ಪೋರ್ಟ್, ವೀಸಾ ಬೇಡ. ದೂರ ದೂರದ ದೇಶಗಳಿಂದ ಗಡಿಯನ್ನು ದಾಟಿ, ನಮ್ಮ ನೆಲಕ್ಕೆ ದಾಳಿ ಇಟ್ಟು, ಎಲ್ಲಿ ಬೇಕಾದಲ್ಲಿ ನೆಲೆನಿಂತು, ಸುಖದಿಂದ ಚಳಿಗಾಲ ಕಳೆದು, ಬೇಸಿಗೆ ಕಾಲಿಡುತ್ತಿದ್ದಂತೆ ಓಡಿಹೋಗುತ್ತಾರೆ. ಅವರು ಆಡಿದ್ದೇ ಆಟ, ದಾಳಿ ಇಟ್ಟಲ್ಲೇ ಊಟ. ನಮ್ಮ ಕಾನೂನು-ಕಟ್ಟಳೆಗಳಿಗೆ ಅವರು ಕೇರೇ ಮಾಡಲ್ಲ...

ಇವೇ ವಲಸೆ ಹಕ್ಕಿಗಳು. ಬಹುತೇಕ ಹಕ್ಕಿಗಳು  ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ  ಚಳಿಗಾಲದಲ್ಲಿ ವಲಸೆ ಬರುತ್ತವೆ. ಸೆಪ್ಟೆಂಬರ್ ವೇಳೆಗೆ ಅವುಗಳಲ್ಲಿನ ಜೈವಿಕ ಗಡಿಯಾರ ಸಾಮೂಹಿಕವಾಗಿ ಜಾಗೃತಗೊಳ್ಳುತ್ತದೆ. ಆ ವೇಳೆಗೆ ಚೆನ್ನಾಗಿ ತಿಂದು ದೇಹದ ತುಂಬೆಲ್ಲಾ ಕೊಬ್ಬನ್ನು ಸಂಗ್ರಹಿಸಿಕೊಂಡು ದೂರದ ದುರ್ಗಮ ಯಾನಕ್ಕೆ ಸನ್ನದ್ಧಗೊಂಡಿರುತ್ತವೆ. ಯಾವಾಗ ಚಳಿಯ ಮೊದಲ ಮಂಜು ಬೀಳಲಾರಂಭಿಸುತ್ತದೋ ಎಲ್ಲಾ ಹಕ್ಕಿಗಳು ಸಾಮೂಹಿಕವಾಗಿ ತಮ್ಮ ಯಾನವನ್ನು ಆರಂಭಿಸುತ್ತವೆ.

ಅನುಭವಿ ಹಿರಿಯ ಹಕ್ಕಿಗಳ ಮಾರ್ಗದರ್ಶನದಲ್ಲಿ ಕಿರಿಯ ಹಕ್ಕಿಗಳು ಸಾಗುತ್ತವೆ. ಹೀಗೆ ಹಾರುವಾಗ ನದಿಗಳು, ಅಣೆಕಟ್ಟುಗಳು, ಪರ್ವತಸಾಲು, ಬೆಟ್ಟಗುಡ್ಡಗಳು, ಕಟ್ಟಡಗಳು ಮುಂತಾದ ಭೌಗೋಳಿಕ ನೆಲೆಗಳು, ಇವುಗಳಿಗೆ ಮಾರ್ಗದರ್ಶಕ. ಅಂತೆಯೇ ಜರ್ಮನಿಯ ವಿಜ್ಞಾನಿಗಳ ಪ್ರಕಾರ ಹಕ್ಕಿಗಳ ಕೊಕ್ಕಿನಲ್ಲಿರುವ ಅಯಸ್ಕಾಂತೀಯ ಶಕ್ತಿ ಭೂಮಿಯ ಅಯಸ್ಕಾಂತೀಯ ದಿಕ್ಕನ್ನು ಅನುಸರಿಸುವುದಂತೆ.  ರಾತ್ರಿ ವೇಳೆ ವಲಸೆ ಬರುವ ಹಕ್ಕಿಗಳು ನಕ್ಷತ್ರ, ಸೂರ್ಯ -ಚಂದ್ರರ ಸ್ಥಾನವನ್ನು ಗುರುತಿಸಿ ತಮ್ಮ ನೆಲೆಯನ್ನು ಕಂಡುಕೊಳ್ಳುತ್ತವೆ.

ವಲಸೆ ಎನ್ನುವುದು ಹಕ್ಕಿಗಳ ಬದುಕಿನ ಅನಿವಾರ್ಯತೆ. ಕಠಿಣ ಸವಾಲುಗಳನ್ನು ಎದುರಿಸಿ, ಸಾವಿರಾರು ಕಿಲೋ ಮೀಟರ್ ಹಾರಿ ಬರುವುದು ಸುಲಭವಲ್ಲ. ಚಳಿಗಾಲದಲ್ಲಿ ಎಲ್ಲೆಡೆ ಮಂಜು ಬಿದ್ದು ಆಹಾರ, ಆವಾಸಕ್ಕೆ ಅಸಾಧ್ಯ. ಹಾಗಾಗಿ ದಕ್ಷಿಣ ಭೂಭಾಗಕ್ಕೆ ಆಹಾರ, ವಸತಿ, ಬೆಚ್ಚನೆಯ ಪರಿಸರ, ಸುರಕ್ಷತೆ ಇತ್ಯಾದಿ ಹುಡುಕಿಕೊಂಡು ವಲಸೆ ಬರುತ್ತವೆ.  ಹೀಗೆ ದಕ್ಷಿಣ ಗೋಳಾರ್ಧದಲ್ಲಿ ಹರಡಿ ಹೋಗುವ ಹಕ್ಕಿಗಳಿಗೆ, ಉತ್ತರ ಕರ್ನಾಟಕದ ಬಯಲು ಸೀಮೆ ನೆಚ್ಚಿನ ತಾಣ.  ಇದಕ್ಕೆ ಇಲ್ಲಿನ ಭೌಗೋಳಿಕ ಸನ್ನಿವೇಶವೇ ಕಾರಣ. ಉದಾಹರಣೆಗೆ ತುಂಗಭದ್ರಾ ನದಿಗೆ ಹೊಸಪೇಟೆ ಬಳಿ 1953ರಲ್ಲಿ ಅಣೆಕಟ್ಟು ಕಟ್ಟಿದ ನಂತರ 378ಚದರ ಕಿಮೀ ವ್ಯಾಪ್ತಿಯಲ್ಲಿ ಹರಡಿ ಬೃಹತ್ ಜಲರಾಶಿ ಸೃಷ್ಟಿಯಾಯಿತು.

ಸ್ಥಳೀಯ ಜಲಪಕ್ಷಿಗಳೊಂದಿಗೆ ವಲಸೆ   ಹಕ್ಕಿಗಳನ್ನೂ ಇದು ಆಕರ್ಷಿಸಿತು. ಚಳಿಗಾಲದಲ್ಲಿ ನೀರು ಹಿಂದಕ್ಕೆ ಸರಿಯುತ್ತಾ ಹೋದಂತೆ ಕೆಸರಿನ ದಡಗಳಲ್ಲಿ ಅಪಾರ ಮೀನುಗಳು, ಮೃದ್ವಂಗಿಗಳು, ಸೀಗಡಿ, ಹುಳು-ಹುಪ್ಪಟೆ, ಪಾಚಿ ಇತ್ಯಾದಿ ಆಹಾರ ಯಥೇಚ್ಛವಾಗಿ ದೊರಕತೊಡಗಿತು. ಪುಷ್ಕಳ ಭೋಜನದೊಂದಿಗೆ, ನದಿ ಮಧ್ಯೆಯ ದ್ವೀಪಗಳು, ದಡದಲ್ಲಿರುವ ವೃಕ್ಷರಾಶಿಯಲ್ಲಿ ರಾತ್ರಿ ವಸತಿ ಜೊತೆಗೆ ಸುರಕ್ಷತೆ ಮುಂತಾದ ಕಾರಣಗಳಿಂದ ಉತ್ತರ ಕರ್ನಾಟಕದ ಜಲಾಶಯಗಳು ವಲಸೆ ಬರುವ ಜಲಹಕ್ಕಿಗಳ ಕಾಯಂ ನೆಲೆಯಾಗಿವೆ. 

ಚಳಿಗಾಲಕ್ಕೆ ವಲಸೆ ಬರುವ ಬಹುತೇಕ ಹಕ್ಕಿಗಳೆಲ್ಲ ಉತ್ತರದ ಗೋಳಾರ್ಧದ ಸೈಬೀರಿಯಾ,  ಆರ್ಕ್‌ಟಿಕ್, ಯೂರೇಷಿಯಾ  ಮುಂತಾದೆಡೆ ಬೇಸಿಗೆ ಸಂತಾನೋತ್ಪತ್ತಿಯಲ್ಲಿ ತೊಡಗಿ, ಮಳೆಗಾಲದಲ್ಲಿ ಮರಿಗಳನ್ನು ಬೆಳೆಸಿಕೊಂಡು, ಚಳಿಗಾಲದಲ್ಲಿ ವಲಸೆ ಬರುತ್ತವೆ. ಹೀಗೆ ಬರುವ ಹಕ್ಕಿಗಳಲ್ಲಿ ಸೂಜಿ ಬಾಲದ ಬಾತು, ಚಲುಕ ಬಾತು, ಕಂದು ಬಾತು, ನಾಮದ ಬಾತು, ಬಿಳಿ ಹುಬ್ಬಿನ ಬಾತು, ಮೀಸೆ ರೀವಕ್ಕಿ, ಕರಿಕೊಕ್ಕಿನ ರೀವಕ್ಕಿ, ಕಂದು ತಲೆ ಕಡಲಕ್ಕಿ, ಹೊನ್ನ ಗೊರವ,  ಗದ್ದೆಗೊರವ,  ಕರಿಬಾಲದ ಹಿನ್ನೀರ ಗೊರವ, ಚುಕ್ಕೆ ಕೆಂಪುಕಾಲು ಗೊರವ,  ಹಸಿರುಕಾಲು ಗದ್ದೆಗೊರವ, ಜೌಗು ಗದ್ದೆಗೊರವ, ಅಡವಿ ಗದ್ದೆಗೊರವ ಇನ್ನೂ ಹತ್ತು ಹಲವು.

ಗೀರು ತಲೆಯ ಹೆಬ್ಬಾತು
ಗೀರು ತಲೆಯ ಹೆಬ್ಬಾತು (ಬಾರ್-ಹೆಡೆಡ್ ಗೀಸ್) ಮಧ್ಯ ಏಷಿಯಾ ಹಾಗೂ ಮಂಗೋಲಿಯಾದಲ್ಲಿ ಬೇಸಿಗೆಯಲ್ಲಿ ಸಂತಾನೋತ್ಪತ್ತಿ ಮಾಡಿ, ಮಳೆಗಾಲದಲ್ಲಿ ಮರಿಗಳನ್ನು ಬೆಳೆಸಿಕೊಂಡು ಚಳಿಗಾಲದ ಆರಂಭದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಹೀಗೆ ಬರುವಾಗ ಹಿಮಾಲಯ ಪರ್ವತವನ್ನು ದಾಟಲು 18ಸಾವಿರದಿಂದ 26 ಸಾವಿರ ಅಡಿಗಳವರೆಗೆ ಎತ್ತರದಲ್ಲಿ ಹಾರಿ ಬರುತ್ತದೆ. ಆಮ್ಲಜನಕವು ತೀರಾ ದುರ್ಲಭವಾಗಿರುವ ಇಷ್ಟು ಎತ್ತರದಲ್ಲಿ ಬೇರೆಯಾವ ಹಕ್ಕಿಯೂ ಹಾರಲು ಅಸಾಧ್ಯ. ಅತಿ ಎತ್ತರದಲ್ಲಿ ಹಾರುವ ವಲಸೆ ಹಕ್ಕಿ ಎಂದೇ ಖ್ಯಾತಿ ಹೊಂದಿದ ಗೀರು ತಲೆಯ ಹೆಬ್ಬಾತು ದಿನಕ್ಕೆ ಒಂದರಿಂದ ಒಂದೂವರೆ ಸಾವಿರ ಕಿಲೋಮೀಟರ್ ಹಾರುತ್ತವೆ.

ಗದಗ ಜಿಲ್ಲೆಯ ಮಾಗಡಿ ಗ್ರಾಮದ ಪುಟ್ಟ  ಕೆರೆಗೆ ಪ್ರತಿವರ್ಷ 5ಸಾವಿರದಿಂದ 6ಸಾವಿರದವರೆಗೆ ಹಕ್ಕಿಗಳು ವಲಸೆ ಬರುತ್ತಿದ್ದು, ದಕ್ಷಿಣ ಭಾರತದಲ್ಲೇ ಇದು ಹೆಬ್ಬಾತುಗಳು ಅತಿಹೆಚ್ಚು ಸಂಖ್ಯೆಯಲ್ಲಿ ವಲಸೆ ಬರುವ ಸ್ಥಳವಾಗಿದೆ. ಈ ಗೀರು ತಲೆಯ ಹೆಬ್ಬಾತು, ತುಂಗಭದ್ರಾ ಅಚ್ಚುಕಟ್ಟು ಹಾಗೂ ಬಯಲು ಸೀಮೆಯ ಹೊಲಗಳಲ್ಲಿ ಬೆಳೆಯುವ ಭತ್ತ, ಗೋಧಿ, ಕಡಲೆ, ಶೇಂಗಾ ಮುಂತಾದ ಗಿಡಗಳ ಎಳೆ ಚಿಗುರನ್ನೂ, ತದನಂತರ ಬೀಜಗಳನ್ನೂ ತಿಂದು ಹಗಲೆಲ್ಲಾ ಕೆರೆ, ನದಿ ತೀರಗಳಲ್ಲಿ ವಿರಮಿಸುತ್ತದೆ. ಮಧ್ಯಪ್ರಾಚ್ಯದಿಂದ ಹಿಂಡು ಹಿಂಡಾಗಿ ವಲಸೆ ಬರುವ ನಸುಗೆಂಪು ಕಬ್ಬಕ್ಕಿ, ಕರಿತಲೆ ಕಾಳುಗುಬ್ಬಿ , ಕೆಂಪುತಲೆ ಕಾಳುಗುಬ್ಬಿ, ಕ್ರೌಂಚ ಮುಂತಾದ ಹಕ್ಕಿಗಳು ಜೋಳ, ಗೋಧಿ, ಸಜ್ಜೆ ಮುಂತಾದ ಕಾಳು, ಹಣ್ಣುಗಳು, ಮಕರಂದ ಇತ್ಯಾದಿಗಳನ್ನು ಇಷ್ಟಪಡುತ್ತವೆ.

ಈ ವರ್ಷವಂತೂ ಲಕ್ಷಗಟ್ಟಲೆ ನಸುಗೆಂಪು ಕಬ್ಬಕ್ಕಿಗಳು ಸಂಜೆ ವೇಳೆ ಅಂಕ ಸಮುದ್ರದ ಕರಿಜಾಲಿಗಿಡಗಳಲ್ಲಿ ಆಶ್ರಯ ಪಡೆದಿವೆ. ಇನ್ನು ಸಹಸ್ರಾರು ಮೈಲಿ ದೂರದಿಂದ ವಲಸೆ ಬರುವ ಪುಟಾಣಿ ಹಕ್ಕಿಗಳಾದ ಕಲ್ಲು ಚಟುವ, ಹಳದಿ ಸಿಪಿಲೆ, ಬೂದು ಸಿಪಿಲೆ, ಬಿಳಿ ಸಿಪಿಲೆಗಳನ್ನು ಹೊಲ-ಮನೆ ಮುಂದಿರುವ ಬಯಲಿನಲ್ಲಿ, ಹುಲ್ಲು ಹಾಸಿನ ಮೇಲೆ ಕಾಣಬಹುದು. ದೊಡ್ಡ ಗಾತ್ರದ ಸುಂದರ ಹಕ್ಕಿಗಳಾದ ಹೆಜಾರ್ಲೆ, ರಾಜ ಹಂಸ ಮುಂತಾದ  ಹಕ್ಕಿಗಳು ಜಲಾಶಯಗಳ ಹಿನ್ನೀರಿನಲ್ಲಿ, ನದಿ ಪಾತ್ರಗಳಲ್ಲಿ ವಿಹರಿಸುತ್ತವೆ. ನೀಲಿ ಬಾಲದ ನೊಣ ಹಿಡುಕ, ಮೂಡಣ ಚಿಟುವ, ಬಿಳಿ ಹುಬ್ಬನ ಗೊರವ ಮುಂತಾದ ಹಕ್ಕಿಗಳು ಸಂತಾನೋತ್ಪತ್ತಿಗೆ ವಲಸೆ ಬರುತ್ತವೆ.

ಸೃಷ್ಟಿ ವೈಚಿತ್ರ್ಯ ನೋಡಿ ಹೀಗಿದೆ...
ವಲಸೆ ಬರುವ ಹಕ್ಕಿಗಳನ್ನೇ ಹಿಂಬಾಲಿಸಿ ಅವುಗಳನ್ನೇ ಅವಲಂಬಿಸಿದ ಮಾಂಸಾಹಾರಿ ಹಕ್ಕಿಗಳಾದ ಜೌಗು ಸೆಳೆವ (ವೆಸ್ಟರ್ನ್ ಮಾರ್ಶ್ ಹ್ಯಾರಿಯರ್), ಪಟ್ಟೆರೆಕ್ಕೆಯ ಸೆಳೆವ (ಮೊಂಟೆಗ್ಯು ಹ್ಯಾರಿಯರ್) ಸೆಳೆವ (ಪಾಲೀಡ್ ಹ್ಯಾರಿಯರ್), ಚಾಣ (ಫಾಲ್ಕನ್), ಕಿರುಚಾಣ (ಕೆಸ್ಟ್ರೆಲ್), ಬಿಜ್ಜು (ಹಾಕ್) ಬರುತ್ತವೆ. ಹತ್ತು ಸಾವಿರ ಕಿ.ಮೀಗೂ ಹೆಚ್ಚು ದೂರದಿಂದ ಹಾರಿ ಬರುವ ವಲಸೆ ಹಕ್ಕಿಗಳು ಪ್ರತಿವರ್ಷ  ಅದೇ ನಿರ್ದಿಷ್ಟ ಸ್ಥಳಕ್ಕೇ ಬಂದು ನೆಲೆಯೂರುವುದು ಒಂದು ಸೋಜಿಗದ ಸಂಗತಿ. ಅವುಗಳಿಗೆ ಅಸಾಧಾರಣ ದೃಷ್ಟಿ ಸಾಮರ್ಥ್ಯ, ದೂರ ಯಾನಕ್ಕೆ ನೆರವಾಗುವ ವಿಶೇಷ ಜ್ಞಾನೇಂದ್ರಿಯಗಳು ಇವೆ. ಅವು ತಮ್ಮ ಕಾಯಂ ನೆಲೆಯನ್ನು ಕಂಡುಕೊಳ್ಳಲು ಭೌಗೋಳಿಕ ಗುರುತು, ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶ, ಸಮುದ್ರ-ತೀರ, ಜಲಾಶಯಗಳು, ಬೃಹತ್ ಕಟ್ಟಡ ಇತ್ಯಾದಿಗಳನ್ನು ಆಧಾರವಾಗಿಟ್ಟುಕೊಳ್ಳುತ್ತವೆ.

ಕೆಲವು ಹಕ್ಕಿಗಳು ರಾತ್ರಿವೇಳೆ ಮಾತ್ರ ವಲಸೆ ಹೊರಡುತ್ತವೆ, ಆಗ ಸೂರ್ಯ ಚಂದ್ರ, ನಕ್ಷತ್ರಗಳ ಸ್ಥಾನವನ್ನು ಅನುಸರಿಸಿ ಹೋಗುತ್ತವೆ. ತುಂಗಭದ್ರಾ ಜಲಾಶಯದಲ್ಲಿ ಅಪರೂಪದ ಸ್ಥಳೀಯ ಹಕ್ಕಿಗಳಾದ ದಾಸ ಕೊಕ್ಕರೆ, ಬಾಯ್ಕಳಕ,  ಬಿಳಿಕತ್ತಿನ ಕೊಕ್ಕರೆ, ಶಿಖೆ ಬಾತು ಮುಂತಾದ ನೂರಾರು ಪ್ರಬೇಧದ ಸ್ಥಳೀಯ ಜಲ ಹಕ್ಕಿಗಳನ್ನು ನೋಡಬಹುದು.  ಅಲ್ಲದೇ ಇಲ್ಲಿ 10 ಸಾವಿರಕ್ಕೂ ಹೆಚ್ಚು ಸೂಜಿ ಬಾಲದ ಬಾತು ಹಾಗೂ ಇತರೆ ಪ್ರಬೇಧದ ಹಕ್ಕಿಗಳು ಠಿಕಾಣಿ ಹೂಡುತ್ತವೆ. ಈ ಎಲ್ಲಾ ಕಾರಣಗಳಿಂದ ತುಂಗಭದ್ರಾ ಜಲಾಶಯವನ್ನು ಪ್ರಮುಖ ಪಕ್ಷಿ ನೆಲೆಯನ್ನಾಗಿಸಲು ಸಲ್ಲಿಸಿದ ಪ್ರಸ್ತಾವ ಅಂಗೀಕಾರವಾಗಿದೆ.

ಹಕ್ಕಿಗಳು ಸುರಕ್ಷವೇ?
ಎಲ್ಲಾ ವಲಸೆ ಹಕ್ಕಿಗಳಿಗೆ ಸಂಪೂರ್ಣ ಸುರಕ್ಷತೆ ಇಲ್ಲ ಎನ್ನುವುದೇ ಬೇಸರದ ಸಂಗತಿ. ಕೆಲವು ಸ್ಥಳೀಯರು ವಲಸೆ ಬಂದ ಹಕ್ಕಿಗಳನ್ನು ಮತ್ತು ಬಾತುಗಳನ್ನು ಬೇಟೆಯಾಡಿ ಮಾರುತ್ತಾರೆ. ಇದನ್ನು ಮನಗಂಡ ಸ್ಥಳೀಯ ಹೊಸಪೇಟೆಯ ವನ್ಯಜೀವಿ ಮತ್ತು ನಿಸರ್ಗಪರ ಸಂಸ್ಥೆ (ಸ್ವಾನ್)ಯು ಜಲಾಶಯದ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಅರಿವು ಮೂಡಿಸುತ್ತಿರುವುದರ ಫಲವಾಗಿ ಹಕ್ಕಿ ಬೇಟೆ ಹತೋಟಿಗೆ ಬರುತ್ತಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಪಕ್ಷಿ ವೀಕ್ಷಕರಿಂದಾಗಿ ವಲಸೆ ಹಕ್ಕಿಗಳ ಮಾಹಿತಿಯೂ ಸುಲಭವಾಗಿ ದೊರಕುತ್ತಿದೆ. ಆದರೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪರಿಸರ-ಪಕ್ಷಿ ಸಂಕುಲದ ಕುರಿತು ನಿರ್ಲಕ್ಷ್ಯ ಭಾವನೆ ಇನ್ನೂ ಇದೆ. ಹಾಗಾಗಿ ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ಸಂಘದ ವತಿಯಿಂದ ಆಸಕ್ತರು ಪಕ್ಷಿ ವೀಕ್ಷಣೆ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ.

ಪ್ರಮುಖ ಪಕ್ಷಿತಾಣಗಳು
ತುಂಗಭದ್ರಾ ಜಲಾಶಯ ಹಾಗೂ ನದಿ, ಆಲಮಟ್ಟಿ-ನಾರಾಯಣಪುರ ಜಲಾಶಯ, ಕೃಷ್ಣ, ಭೀಮಾ ನದಿ ಪಾತ್ರ, ದರೋಜಿ ಕೆರೆ, ಕಮಲಾಪುರ ಕೆರೆ, ಅಲ್ಲಿಪುರ ಕೆರೆ, ಅಂಕ ಸಮುದ್ರ ಕೆರೆ (ಬಳ್ಳಾರಿ), ಮನಸಲಾಪುರ ಕೆರೆ (ರಾಯಚೂರು), ಬೋನಾಳ ಕೆರೆ (ಯಾದಗಿರಿ), ಮಾಗಡಿ-ಶೆಟ್ಟಿಹಳ್ಳಿ ಕೆರೆ (ಗದಗ), ಹೆಗ್ಗೆರೆ (ಹಾವೇರಿ), ಅತ್ತಿವೇರಿ, ಗುಡವಿ, ಘಟಪ್ರಭಾ ಪಕ್ಷಿಧಾಮಗಳು ಇತ್ಯಾದಿ. ಆದರೆ ಚಳಿಗಾಲದ ವಲಸೆ ಹಕ್ಕಿಗಳನ್ನು ನಿಮ್ಮ ಮನೆ, ಹೊಲ-ಗದ್ದೆ, ತೋಟ, ಕೆರೆ-ಕಟ್ಟೆಗಳಲ್ಲೂ ಕಾಣಬಹುದು. ಇದಕ್ಕೆ ಬೇಕಾದದ್ದು, ಒಂದು ದುರ್ಬೀನು ಮತ್ತು ಪಕ್ಷಿ ಪುಸ್ತಕ. ನೀವು ಕಂಡ ಹಕ್ಕಿಗಳ ಬಗ್ಗೆ ತಿಳಿಸಲು ಮತ್ತು ಹೆಚ್ಚಿನ ಮಾಹಿತಿಗೆ ಇ–ಮೇಲ್ ಮಾಡಿ: swan004@gmail.com

ಹಕ್ಕಿಗಳ ಮೇಲೆ ಜಾಗತಿಕ ತಾಪಮಾನದ ಪರಿಣಾಮ
ವಲಸೆ ಹಕ್ಕಿಗಳು ಜಾಗತಿಕ ತಾಪಮಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತವೆ. ವಾಸ್ತವಿಕವಾಗಿ ತಾಪಮಾನದ ಬದಲಾವಣೆಯೇ ವಲಸೆಗೆ ಪ್ರೇರಣಾ ಶಕ್ತಿ. ಆದರೆ ಮಾನವನ ವಿನಾಶಕಾರಿ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಇಂಗಾಲ ಆಮ್ಲ ಹಾಗೂ ಇತರೆ ಮಾಲಿನ್ಯದಿಂದಾಗಿ ಭೂಮಿ ಉಷ್ಣತೆಯಲ್ಲಿ ಹಾಗೂ ಮಳೆಮಾರುತಗಳಲ್ಲಿ ಏರುಪೇರಾಗುತ್ತಿದ್ದು ಹಕ್ಕಿಗಳ ವಲಸೆ ಮೇಲೂ ಪ್ರಭಾವ ಬೀರುತ್ತಿದೆ. ಆವಾಸಸ್ಥಾನ ಹಾಗೂ ವಲಸೆ ಮಾರ್ಗಗಳಲ್ಲಿ ನಿಲುಗಡೆಗಳ ನಾಶ, ಅರಣ್ಯನಾಶ, ಹೆಚ್ಚುತ್ತಿರುವ ಮರಳುಗಾಡು, ಅತಿವೃಷ್ಟಿ, ಅನಾವೃಷ್ಟಿ, ಆಹಾರ ಕೊರತೆ, ಮೇಯುವ ಮತ್ತು ರಾತ್ರಿ ತಂಗುವ ನೆಲೆಗಳಲ್ಲಿ ಸುರಕ್ಷತೆ ಇಲ್ಲದಿರುವುದು.

ಹವಾಮಾನ ಬದಲಾವಣೆಯಿಂದ ಹಕ್ಕಿಗಳ ವಲಸೆಯಲಯದಲ್ಲೂ ಬದಲಾವಣೆ ಕಂಡು ಬರುತ್ತಿದೆ. ಕಳೆದ ವರ್ಷ ಕರಿಬಾಲದ ಹಿನ್ನೀರು ಗೊರವ (ಬ್ಲಾಕ್-ಟೇಲ್ಡ್ ಗಾಡ್ವಿಟ್) ಗಳು ಸೆಪ್ಟೆಂಬರ್ ವೇಳೆಗೆ ಉತ್ತರ ಕರ್ನಾಟಕದ ಗದ್ದೆಗಳಿಗೆ ದಾಳಿ ಇಟ್ಟಿದ್ದವು. ಆದರೆ ಈ ವರ್ಷ ನವೆಂಬರ್ ಕೊನೆ ವಾರದಲ್ಲಿ ಕಡಿಮೆ ಸಂಖ್ಯೆಯಲ್ಲಿ ತುಂಗಭದ್ರಾ ಹಿನ್ನೀರಿನಲ್ಲಿ ಕಂಡು ಬಂದಿವೆ. ಬಹುಶಃ ವಲಸೆ ದಿಕ್ಕನ್ನೋ, ನೆಲೆಯನ್ನೋ ಬದಲಾಯಿಸಿರಬೇಕು. ಈ ವರ್ಷ ಕನಿಷ್ಠ ಮಳೆಯಿಂದ ಗದಗ ಜಿಲ್ಲೆಯ ಮಾಗಡಿ ಕೆರೆಯಲ್ಲಿ ಅರ್ಧದಷ್ಟು ನೀರಿದೆ. ಗೀರು ತಲೆಯ ಹೆಬ್ಬಾತುಗಳ ಅಚ್ಚುಮೆಚ್ಚಿನ ತಾಣ ಇದಾಗಿದ್ದು ಈ ಡಿಸೆಂಬರ್ ಮೊದಲ ವಾರದಲ್ಲಿ ಸುಮಾರು 4 ಸಾವಿರ ಹಕ್ಕಿಗಳಿವೆ.

ಕಳೆದ ವರ್ಷ ಇದೇ ವೇಳೆಗೆ ಸುಮಾರು 6 ಸಾವಿರ ಹಕ್ಕಿಗಳು ಇಲ್ಲಿದ್ದವು. ನವೆಂಬರ್‌ನ ಮೊದಲ ವಾರದಲ್ಲೇ ಬರುವ ಹಕ್ಕಿಗಳು ಈ ವರ್ಷ ನವೆಂಬರ್ ಅಂತ್ಯಕ್ಕೆ ಬಂದಿಳಿದಿವೆ. ಅತ್ಯಂತ ಅಪರೂಪವಾದ ಒಂದೆರಡು ಗ್ರೇಲ್ಯಾಗ್ ಗೂಸ್, ಸುಮಾರು ಎರಡು ನೂರು ಬೂದು ಕ್ರೌಂಚಗಳು ತುಂಗಭದ್ರಾ ನದಿಯಲ್ಲಿ ಇತ್ತೀಚಿಗೆ ಕಾಣಿಸುತ್ತಿವೆ. ಜಾಗತಿಕ ತಾಪಮಾನದಲ್ಲಾಗುತ್ತಿರುವ ಏರಿಕೆಯಿಂದಾಗಿ ಅನೇಕ ವಲಸೆ ಹಕ್ಕಿಗಳು ದಕ್ಷಿಣ ಭೂಭಾಗಕ್ಕೆ ಬರುತ್ತಿರುವುದು ವಿಸ್ಮಯಕಾರಿ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT