ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಲಯದ ‘ಕಲಾರಾಧನೆ’

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ನಾಡಿಗಾಗಿ ಹೋರಾಡಿದ ಮಹನೀಯರ ವೀರಗಲ್ಲು, ಜಾನಪದ ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಬಿಂಬಿಸುವ ಚಿತ್ತಾರಗಳು, ಗ್ರಾಮೀಣ ಕೃಷಿ ಸಲಕರಣೆಗಳು,   ಹಿಂದಿನ ಕಾಲದಲ್ಲಿ ಪೂಜಿಸಲಾಗುತ್ತಿದ್ದ ವಿವಿಧ ದೇವತೆಗಳ ಶಿಲಾಮೂರ್ತಿಗಳು... ಇವೆಲ್ಲವನ್ನೂ ನೋಡುತ್ತಿದ್ದರೆ ಬೇರೆಯದ್ದೇ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ.

ಈ ದೃಶ್ಯ ಕಾಣಸಿಗುವುದು ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ. ಸುಂದರ ಕುಸುರಿಯ ಶಿಲ್ಪಕಲೆ, ಹಿಂದಿನ ಕಾಲದ ಆಹಾರ ವಿಹಾರ, ಆಚಾರ ವಿಚಾರ, ನಂಬಿಕೆ ನಡವಳಿಕೆಗಳ ಪ್ರತಿಬಿಂಬಗಳನ್ನೆಲ್ಲ ಈ ‘ಕಲಾರಾಧನೆ’ಯಲ್ಲಿ ಕಾಣಬಹುದು.

ವಿಶ್ವವಿದ್ಯಾಲಯದ ಪ್ರವೇಶದ್ವಾರದಿಂದ ಮುಂದೆ ಸಾಗಿದರೆ  ಈ ಬಯಲು ಮ್ಯೂಸಿಯಂ ಕೈಬೀಸಿ ಕರೆಯುತ್ತದೆ. ಕುಲಪತಿಗಳ ಕಾರ್ಯಾಲಯದ ಕಡೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿರುವ ಈ ‘ಕಲಾರಾಧನೆ’ ಹಾಗೂ ವಿಶ್ವವಿದ್ಯಾನಿಲಯದ ಜ್ಞಾನತರಂಗ ಕಟ್ಟಡದ ಮುಂದಿರುವ ಶಿಲಾಕೃತಿಗಳ ತೆರೆದ ವಸ್ತುಸಂಗ್ರಹಾಲಯ ಅದ್ಭುತವಾಗಿದೆ.  ಇಲ್ಲಿನ ಶಿಲ್ಪಕಲೆಗಳು ನೋಡುಗರ ಮನತಣಿಸುವುದಷ್ಟೇ ಅಲ್ಲದೆ, ಇತಿಹಾಸದ ವಿದ್ಯಾರ್ಥಿಗಳಿಗೆ ಸಂಶೋಧನೆ ಸಾಧನಗಳಾಗಿವೆ.

ಸಂಪತ್ತಿನ ಸಂಕೇತವಾಗಿದ್ದ ತುರುಗಳ ರಕ್ಷಣೆಗಾಗಿ ಪರ ಊರಿನವರ ಜೊತೆ ಕಾದಾಡುವ ದೃಶ್ಯ ತುರುಗೊಳ್ ವೀರಗಲ್ಲು ಇಲ್ಲಿದೆ. ಇದನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನೆಲ್ಲುಕುದುರೆಯಿಂದ ಸಂಗ್ರಹಿಸಲಾಗಿದೆ. ಹೊಯ್ಸಳರ ಸುಂದರ ಕೆತ್ತನೆ ಇದರಲ್ಲಿದೆ. ಇನ್ನೊಂದು ಬದಿಯಲ್ಲಿ ಅಪ್ರಕಟಿತ ಕಲ್ಯಾಣದ ಚಾಲುಕ್ಯರ ಶಾಸನಶಿಲ್ಪವಿದೆ.

ಅರಸೀಕೆರೆ ತಾಲ್ಲೂಕಿನ ಬಾಣಾವರದಿಂದ ಬಾಣವೇಶ್ವರನ ದೇವಾಲಯದ ಬಿತ್ತಿ ಶಿಲ್ಪಗಳನ್ನೂ ಇಲ್ಲಿರಿಸಲಾಗಿದೆ. ದವಸ ಧಾನ್ಯಗಳನ್ನು ಬೇರ್ಪಡಿಸುವ ರೋಣದಕಲ್ಲನ್ನು ಬಳ್ಳಗೆರೆ ಗ್ರಾಮದಿಂದ, ಧಾನ್ಯಗಳನ್ನು ಸಂಗ್ರಹಿಸಿಡುವ ವಾಡೆಯನ್ನು ಗುಬ್ಬಿ ತಾಲ್ಲೂಕಿನ ದೊಡ್ಡನೆಟ್ಟಕುಂಟೆಯಿಂದ ತರಿಸಿಕೊಂಡು ಅವಕ್ಕೂ ಸ್ಥಳ ನೀಡಲಾಗಿದೆ.

ತುಮಕೂರು ತಾಲ್ಲೂಕಿನ ದುರ್ಗದಹಳ್ಳಿಯಿಂದ ತರಲಾಗಿರುವ ಕಾಳಿಕಾದೇವಿಯ ವಿಗ್ರಹ, ಗುಬ್ಬಿ ತಾಲ್ಲೂಕಿನ ಚೇಳೂರಿನಿಂದ ತರಲಾಗಿರುವ ಇಮ್ಮಡಿ ವೀರಬಲ್ಲಾಳನ ಶಾಸನ...  ಹೀಗೆ ಹತ್ತಾರು ಬಗೆಯ ಕಲಾವೈಭವವನ್ನು ಇಲ್ಲಿ ಕಾಣಬಹುದು. ಕರ್ನಾಟಕ ಸರ್ಕಾರ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಮಂಜೂರು ಮಾಡಿದ ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿಯಲ್ಲಿ ಈ ‘ಕಲಾರಾಧನೆ’ ಸ್ಥಾಪನೆಯಾಗಿದೆ. ಈ ವೈವಿಧ್ಯಮಯ ವಸ್ತು ಸಂಗ್ರಹಣೆಗೆ ಕಾರಣರಾದವರು ಹಿಂದಿನ ಕುಲಪತಿಗಳಾದ ಡಾ. ಎಸ್. ಸಿ. ಶರ್ಮಾ.

‘ಈ ವಸ್ತುಸಂಗ್ರಹಾಲಯ ಜ್ಞಾನದ ಕಣಜವೇ ಆಗಿದೆ. ಇಲ್ಲಿನ ಪ್ರತಿಯೊಂದು ಶಿಲ್ಪಕಲೆಯೂ ತನ್ನದೇ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿದೆ’ ಎನ್ನುತ್ತಾರೆ ತೆರೆದ ವಸ್ತುಸಂಗ್ರಹಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ. ಎಂ. ಕೊಟ್ರೇಶ್.

ಭಿನ್ನ ವಿಭಿನ್ನ ಸಂಸ್ಕೃತಿ, ಜೀವನ ಶೈಲಿ, ಆಚರಣೆ, ಶಿಲ್ಪಕಲೆ, ಧಾರ್ಮಿಕ ಮತ್ತು ಆಡಳಿತಾತ್ಮಕ ವಿಚಾರಗಳ ಪ್ರತಿರೂಪವಾಗಿರುವ ಇಂತಹ ಶಿಲ್ಪಕಲೆಗಳನ್ನು ಮತ್ತಷ್ಟು ಸಂಗ್ರಹಿಸಿ, ಸಂರಕ್ಷಿಸುವ ಉದ್ದೇಶದೊಂದಿಗೆ ಕಲಾರಾಧನೆ ಮುಂದುವರೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT