ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮಯಕಾರಿ ಮೊರೇರ ಮನೆಗಳು

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದಿಂದ ಸುಮಾರು ನಾಲ್ಕೈದು ಕಿ.ಮೀ. ಬೆಟ್ಟ-ಗುಡ್ಡದ ದಾರಿಯಲ್ಲಿ ಸಾಗುತ್ತಿದ್ದರೆ ದೂರದೂರಕ್ಕೆ ಚಾಚಿಕೊಂಡಿರುವ ಬೃಹತ್‌ ಕಲ್ಲಿನ ಮನೆಗಳು ಸ್ವಾಗತ ಕೋರುತ್ತವೆ.

ಹತ್ತಿರ ಹೋದರೆ, ಆ ಮನೆಯೊಳಕ್ಕೆ ಅನೇಕ ಕೋನಗಳುಳ್ಳ ಕೊಠಡಿ ಮತ್ತು ಬಂಡೆಗಳ ಸೂರು ಕಾಣಿಸುವುದು. ಬೃಹತ್ ಗಾತ್ರದ ಅಗಲವಾದ ಚಪ್ಪಡಿ ಕಲ್ಲುಗಳ ಮೇಲ್ಛಾವಣಿ ಗೋಚರಿಸುವುದು. ಕೆಲವೆಡೆ ಸಂಪೂರ್ಣವಾಗಿ ಹಾಗು ಇನ್ನೂ ಕೆಲವೆಡೆ ಅರೆಬರೆ ಮುಚ್ಚಿರುವ ವೃತ್ತಾಕಾರದ ಹಾಸುಗಲ್ಲುಗಳು ಇನ್ನಷ್ಟು ಆಶ್ಚರ್ಯ ತರುವುದು.

ಇಲ್ಲಿನ ಹಳ್ಳಿಗರು ಇವುಗಳನ್ನು ‘ಮೊರೇರ ಮನೆಗಳು’ ಎಂದೇ ಕರೆಯುತ್ತಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇವುಗಳನ್ನು  ‘ಬೃಹತ್ ಶಿಲಾಸ್ಮಾರಕಗಳು’ ಎಂದು ಗುರುತಿಸಿದ್ದು, ಸಂರಕ್ಷಿತ ಪ್ರದೇಶವನ್ನಾಗಿಸಿದೆ.

ಸಂಶೋಧಕರಿಂದ ಅಧ್ಯಯನ
ಈ ಶಿಲಾ ಮನೆಗಳನ್ನು ರಚಿಸಿರುವ ವಿಧಾನ ಹಾಗೂ ಬಳಸಲಾಗಿರುವ ತಾಂತ್ರಿಕತೆ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಿಂದ ಇವು ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನವು ಎನ್ನುವ ಅಂದಾಜು ಸಿಕ್ಕಿದೆ.

ಅಗ್ನಿ ಶಿಲೆಯ ಈ ನಿರ್ಮಾಣಗಳು ಸಮಾಧಿಯ ಸ್ಮಾರಕಗಳಷ್ಟೇ ಆಗಿರದೆ ಆಗಿನ ಕಾಲದ ಜನರ ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನೂ ತಿಳಿಸುತ್ತದೆ. ನೂರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಶಿಲಾ ಸ್ಮಾರಕಗಳನ್ನು ಲೋಹಯುಗದಲ್ಲಿ ನಿರ್ಮಿಸಲಾಗಿದೆ. ಬೃಹತ್ ಶಿಲಾಸ್ಮಾರಕ ಸಂಸ್ಕೃತಿಯು ಪೂರ್ವ ಇತಿಹಾಸದ ಕಾಲದಲ್ಲೂ, ಅಂದರೆ ಕ್ರಿಸ್ತಶಕ 2 ಮತ್ತು 3ನೇ ಶತಮಾನದಲ್ಲೂ ಆಚರಣೆಯಲ್ಲಿತ್ತು. 

ಆಗಿನ ಕಾಲದಲ್ಲಿ ಜನರು ಮೂಲತಃ ಬೇಸಾಯ ಮಾಡುತ್ತಿದ್ದರು. ಬೆಳೆಯುವ ಬೆಳೆಗಳಿಗೆ ನೀರು ಸುಲಭವಾಗಿ ಸಿಗುವಂತಹ ನೀರಾವರಿ ವ್ಯವಸ್ಥೆಯನ್ನು ಮೊದಲಿಗೆ ಈ ಜನರೇ ಪ್ರಾರಂಭಿಸಿದರು.  ಈ ಬೃಹತ್ ಶಿಲಾಸ್ಮಾರಕಗಳನ್ನು ನಿರ್ಮಿಸಿದವರು ಕಲ್ಲುಗಳನ್ನು ಹಾಗೂ ತಾಮ್ರದ ಉಪಕರಣಗಳನ್ನು ಬಳಸುತ್ತಿದ್ದರು ಎನ್ನುವುದು ಸಂಶೋಧಕರ ಅನಿಸಿಕೆ.

ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಹಲವಾರು ಬೃಹತ್ ಶಿಲಾಸ್ಮಾರಕಗಳಿರುವ ಸ್ಥಳಗಳಿದ್ದು, ಇಂತಹ ಕೆಲವು ಸ್ಥಳಗಳಲ್ಲಿ ಮಾಡಿದ ಉತ್ಖನನಗಳಿಂದ ಬೃಹತ್ ಶಿಲಾ ಸಮಾಧಿಗಳ ರಚನಾಕ್ರಮ, ಕಾರ್ಯಚಟುವಟಿಕೆಗಳು, ಆಗಿನ ಕಾಲದ ವ್ಯಾಪಾರ-ವಹಿವಾಟು ಮತ್ತು ಪ್ರಾದೇಶಿಕ ವ್ಯತ್ಯಾಸಗಳು ಇತ್ಯಾದಿ ಅಂಶಗಳನ್ನು ಪ್ರಾಚ್ಯವಸ್ತು ಸಂಶೋಧಕರು ತಿಳಿದುಕೊಳ್ಳಲು ಅನುಕೂಲವಾಗಿದೆ. 

ಹಿರೇಬೆಣಕಲ್, ಪ್ರಾಚೀನ ಕಾಲದಲ್ಲೂ ಕೆಲವು ಸಮುದಾಯಗಳಿಗೆ ಆವಾಸ ಸ್ಥಾನವಾಗಿತ್ತು ಎಂಬುದಕ್ಕೆ ಪುರಾವೆಗಳು ದೊರಕಿವೆ. ಪ್ರಾಚ್ಯವಸ್ತು ಸಂಶೋಧಕರು ಈ ಸ್ಥಳದಿಂದ ಆಗಿನ ಕಾಲದ ಸಮೃದ್ಧ ಸಂಸ್ಕೃತಿಯ ಭಾಗವಾಗಿದ್ದ ಕೆಲವು ಉಪಕರಣಗಳನ್ನು, ಶಿಲಾ ಯುಗದ ಪೂರ್ವಕಾಲದಲ್ಲಿ, ಶಿಲಾಯುಗ ಹಾಗೂ ಇತಿಹಾಸ ಪೂರ್ವಕಾಲದಲ್ಲಿ ಬಳಸಲಾಗುತ್ತಿದ್ದ ಕಬ್ಬಿಣ, ಮಣ್ಣಿನ ಉಪಕರಣಗಳನ್ನು ಹೊರತೆಗೆದಿದ್ದಾರೆ.

ಶಿಲಾಯುಗಕ್ಕೂ ಹಿಂದಿನ ಕಾಲದಲ್ಲಿದ್ದ ಜನರು, ಶಿಲಾಯುಗದವರು ಹಾಗೂ ಪೂರ್ವ ಇತಿಹಾಸದ ಪ್ರಾರಂಭಿಕ ವರ್ಷಗಳಲ್ಲಿ ವಾಸಿಸುತ್ತಿದ್ದ ಜನ ಸಮುದಾಯಗಳು ಚಿತ್ರಕಲೆಯಲ್ಲಿಯೂ ನಿಪುಣರಾಗಿದ್ದರೆಂಬುದಕ್ಕೆ ಇಲ್ಲಿನ ಕಲ್ಲುಬಂಡೆಗಳ ಮೇಲೆ ಕಂಡುಬರುವ ವಿವಿಧ ಬಗೆಯ ಚಿತ್ರಗಳು ಸಾಕ್ಷಿಯಾಗಿವೆ. 

ಹಲವು ಕಲ್ಲು ಬಂಡೆಗಳ ಮೇಲೆ ಕೆಂಪು-ಹಳದಿ ಮಿಶ್ರಿತ ಬಣ್ಣದಿಂದ ರಚಿತವಾಗಿರುವ ವರ್ಣಚಿತ್ರಗಳು ಜೀವಂತಿಕೆಯನ್ನು ತೋರುತ್ತವೆ. ನೃತ್ಯ ಮಾಡುತ್ತಿರುವ, ಬೇಟೆಯಾಡುತ್ತಿರುವ, ಆಯುಧ ಪ್ರಾಣಿಗಳಾಗಿರುವ, ಮೆರವಣಿಗೆಯಲ್ಲಿ ಭಾಗವಹಿಸಿರುವ ಹಾಗೂ ಇನ್ನಿತರ ಚಟುವಟಿಕೆಗಳನ್ನು ಬಿಂಬಿಸುವ ವರ್ಣ ಚಿತ್ರಗಳು ಅದ್ಭುತ ಕಲಾಕೃತಿಗಳಾಗಿವೆ. ಅಲ್ಲದೆ ಜಿಂಕೆ, ನವಿಲು, ಗೂನುಬೆನ್ನುಳ್ಳ ಹೋರಿಗಳು, ಹಸುಗಳು ಮತ್ತು ಕುದುರೆಗಳ ಚಿತ್ರಣವೂ ಇಲ್ಲಿವೆ.

ಶಿಲಾಸ್ಮಾರಕಗಳಿರುವ ಪ್ರದೇಶದ ಹತ್ತಿರದಲ್ಲಿ ವಿಶಿಷ್ಟವಾದ ಕಲ್ಲಿನ ಮದ್ದಳೆಯೊಂದು ಸುಮಾರು 10 ಮೀ. ಎತ್ತರದ ಕಲ್ಲುಬಂಡೆಯ ಮೇಲೆ ಇದೆ.  ಸುಮಾರು 2 ಮೀಟರ್ ವ್ಯಾಸವಿರುವ ಈ ಅರ್ಧ ಗೋಳಾಕೃತಿಯ ಒರಟು ಬಂಡೆಯ ಮದ್ದಳೆ ಇದಾಗಿದೆ. ಕಲ್ಲು ಅಥವಾ ಮರದ ಸುತ್ತಿಗೆಯಿಂದ ಈ ಬಂಡೆಗೆ ಹೊಡೆದಾಗ ಬರುವ ಶಬ್ಧ ಶತ್ರುಗಳ ಆಕ್ರಮಣದ ಕುರಿತು ಜನರನ್ನು ಎಚ್ಚರಿಸಲು, ಧಾರ್ಮಿಕ ಅಥವಾ ಸಾಮಾಜಿಕ ವಿಧಿ ಆಚರಣೆಯನ್ನು ಘೋಷಿಸಲು ಈ ಮದ್ದಳೆ ಬಳಸುತ್ತಿದ್ದರೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

400ಕ್ಕೂ ಹೆಚ್ಚು ಸಮಾಧಿ ಅಥವಾ ಸ್ಮಾರಕಗಳಿರುವ ಹಿರೇಬೆಣಕಲ್ ಕರ್ನಾಟಕದಲ್ಲಿನ ಬೃಹತ್ ಶಿಲಾಸ್ಮಾರಕ ಸ್ಥಳಗಳಲ್ಲಿ ಒಂದು. ಸುಮಾರು ಮೂರು ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಇವುಗಳ ಪೈಕಿ ಈಗಾಗಲೇ ಮಾಹಿತಿಯ ಕೊರತೆ ಹಾಗೂ ಸೂಕ್ತ ರಕ್ಷಣೆಯಿಲ್ಲದೆ ಹಾಳಾಗಿ ಹೋಗುತ್ತಿವೆ.

ಇತ್ತೀಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕಾವಲುಗಾರರನ್ನು ನೇಮಿಸಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಹ ಫಲಕಗಳನ್ನು ಅಳವಡಿಸಲಾಗಿದೆ.  ಇಂತಹ ಬಹು ಅಪರೂಪದ ಪ್ರಾಚೀನ ಶಿಲಾ ಸ್ಮಾರಕಗಳ ಅಸ್ತಿತ್ವದ ಬಗ್ಗೆ ಸಂಶೋಧಕರು ಬೆಳಕು ಚೆಲ್ಲುವ ಅಗತ್ಯವಿದೆ. ಇವುಗಳ ಮಹತ್ವದ ಬಗ್ಗೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಜನರಲ್ಲಿ ಅರಿವು ಮೂಡಿಸಿ, ಸ್ಮಾರಕಗಳು ಹಾಳಾಗದಂತೆ ಸಂರಕ್ಷಿಸುವ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT