ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಕಾಳಗ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ಅಂದು ಭಾನುವಾರ ಮುಂಜಾನೆ 8.30 ರ ಸಮಯ. ಕೆಲವರು ಹಾಸಿಗೆ ಬಿಟ್ಟು ಎದ್ದಿರಲಿಲ್ಲ, ಇನ್ನು ಕೆಲವರು ಟಿ.ವಿ.ಮುಂದೆ ಠಿಕಾಣಿ ಹೂಡಿದ್ದರು.  ಇದ್ದಕ್ಕಿದ್ದಂತೆ ಹೊರಗೆ ಪಕ್ಷಿಗಳ ಕೂಗು, ನಾಯಿಗಳ ಬೊಗಳುವಿಕೆ.

ಹಂದಿಗಳು ಸಾಕಷ್ಟು ಸಂಸಾರ ಹೂಡಿರುವ ನಮ್ಮ ಓಣಿಯಲ್ಲಿ ನಾಯಿ-ಹಂದಿ ‘ಯುದ್ಧ’ ಮಾಮೂಲು. ಅದಕ್ಕಾಗಿ ನಾಯಿ ಬೊಗಳುವುದನ್ನು ಅಷ್ಟಾಗಿ ಸೀರಿಯಸ್‌ ಆಗಿ ತೆಗೆದುಕೊಳ್ಳಲಿಲ್ಲ. ಆದರೆ ನಾಯಿಗಳ ಕೂಗು ಮನೆಗೆ ಅತ್ಯಂತ ಸಮೀಪವಾಗತೊಡಗಿತು. ಹೊರಗೆ ಹೋಗಿ ನೋಡಿದೆ.

ನಮ್ಮ ಪಕ್ಕದ ಮನೆಯವರು ಸಾಕಿರುವ ಸ್ಕೂಬಿ ಮತ್ತು ರಾಜ ಇಬ್ಬರೂ ಏನನ್ನೋ ನೋಡಿ  ಜೋರಾಗಿ ಬೊಗಳುತ್ತಿದ್ದವು. ಅಲ್ಲಿ ಹಂದಿ ಇರಲಿಲ್ಲ, ಬದಲಿಗೆ ಕಪ್ಪು ಮುಸುಡಿಯ ಕೋತಿ ಇತ್ತು. ಬಿಸಿಲ ಧಗೆ ತಾಳಲಾರದ ಆ ವಾನರ ನೀರಿನ ಹುಡುಕಾಟ ನಡೆಸುತ್ತಾ ನಮ್ಮ ಮನೆಯವರೆಗೂ ಬಂದಿತ್ತು.

ಮನೆಯ ಎದುರುಗಡೆ ಇರುವ ನೀರಿನ ಸಣ್ಣ ಸಿಂಟೆಕ್ಸ್ ಮೇಲೆ ಅದರ ಕಣ್ಣು ಬಿದ್ದಿತ್ತು. ನೀರೇನೋ ಸಿಕ್ಕಿತ್ತು, ಆದರೆ ಹತ್ತಿರ ಹೋಗಲು ನಾಯಿಗಳು ಕೊಡುತ್ತಿರಲಿಲ್ಲ. ಕೋತಿ ತನ್ನೆಲ್ಲ ಬುದ್ಧಿ ಉಪಯೋಗಿಸಿದರೂ ಹ್ಞೂಂ... ಹ್ಞೂಂ... ಟ್ಯಾಂಕಿನ ಬಳಿ ಬರಲು ಅದಕ್ಕಾಗಲಿಲ್ಲ. ನಾಯಿ-ಕೋತಿ ‘ಸಮರ’ ವಿಚಿತ್ರ ಎನಿಸಿತು. ಕೂಡಲೇ ಕ್ಯಾಮೆರಾ ತೆಗೆದು ಇದನ್ನು ಕ್ಲಿಕ್ಕಿಸತೊಡಗಿದೆ.

ಕೋತಿ ಟ್ಯಾಂಕಿನ ಬಳಿ ಬರುವುದು, ನಾಯಿ ‘ಬೌ... ಬೌ...’ ಎನ್ನುವುದು ನಡೆದೇ ಇತ್ತು. ಕಣ್ಣೆದುರಿಗೆ ಇರುವ ನೀರು ಕುಡಿಯಲಾಗದ ಸಂಕಟ ಕೋತಿಗೆ, ಅದನ್ನು ಹತ್ತಿರ ಸುಳಿಯದಂತೆ ಮಾಡುವ ಛಲ ನಾಯಿಗೆ. ಯಾರು ಗೆಲುವರೋ ಎಂಬ ಕುತೂಹಲ ನಮಗೆ... ಅಷ್ಟೊತ್ತಿಗೇ ನೆರೆಮನೆಯವರೆಲ್ಲ ಅಲ್ಲಿ ಸೇರಿದರು. ಮಕ್ಕಳಿಗಂತೂ ಈ ಆಟ ನೋಡಿ ಖುಷಿಯೋ ಖುಷಿ. ಒಟ್ಟಿನಲ್ಲಿ ಇದು ಸುಮಾರು ಅರ್ಧ ಗಂಟೆ ನಡೆಯಿತು.

ಕೋತಿ ಜಾಣ್ಮೆ
ನೀರು ತನಗೆ ಕುಡಿಯಲು ಸಿಗದು ಎಂದು ತಿಳಿದ ಕೋತಿ ಬುದ್ಧಿ ಉಪಯೋಗಿಸಿಯೇ ಬಿಟ್ಟಿತು. ಬಹು ಜಾಣ್ಮೆಯಿಂದ ಎರಡು ನಾಯಿಗಳನ್ನು ನೀರಿರುವ ಜಾಗದಿಂದ ಸ್ವಲ್ಪ ದೂರ ಕರೆದೊಯ್ಯಿತು. ಅದು ಅತ್ತ ಹೋದ ಮೇಲೆ ಅದರ ಕಣ್ಣಿಗೆ ಬೀಳದಂತೆ ಟ್ಯಾಂಕ್‌ ಬಳಿ ಬಂತು. ಆದರೆ ಕೋತಿಬುದ್ಧಿ ನಾಯಿಬುದ್ಧಿ ಮುಂದೆ ಟುಸ್ಸಾಯಿತು.

ಕೋತಿ ನಿರಾಸೆಯಾಗಲಿಲ್ಲ. ಅದರ ದಾಹ ಅಷ್ಟು ಹೆಚ್ಚಿತ್ತೆಂದು ಕಾಣುತ್ತದೆ. ಹೇಗಾದರೂ ಮಾಡಿ ಗುಟುಕು ನೀರಾದರೂ ಗಂಟಲು ಸೇರಲೇಬೇಕೆಂದು ಪಣ ತೊಟ್ಟಂತಿತ್ತು ಅದು. ಆದ್ದರಿಂದ ಇನ್ನಷ್ಟು ದೂರ ನಾಯಿಗಳನ್ನು ಕರೆಯೊಯ್ದು ಅದೇನು ‘ಜಾದು’ ಮಾಡಿತೋ ಗೊತ್ತಿಲ್ಲ.

ಛಂಗನೆ ಹಾರಿ ಬಂದು ನಾಯಿ ಇತ್ತ ಬರುವ ಮೊದಲೇ ನೀರು ಕುಡಿದು ದಾಹ ತೀರಿಸಿಕೊಂಡು ಅದೇ ವೇಗದಲ್ಲಿ ಮಂಗಮಾಯವಾಯಿತು. ಅದು ಹೋದ ಜಾಗ ನೋಡಿ ಬೊಗಳುವುದಷ್ಟೇ ನಾಯಿ ಪಾಲಿಗೆ ಉಳಿಯಿತು!
ಇದು ನಮಗೆಲ್ಲರಿಗೂ ಮನರಂಜನೆ ಆಯಿತು ನಿಜ. ಆದರೆ ಅದರ ಹಿಂದಿರುವ ಗೂಡಾರ್ಥ ಎಷ್ಟು ಜನರಿಗೆ ತಿಳಿಯಿತೋ ಗೊತ್ತಿಲ್ಲ. ಮರಗಳ ಜಾಗದಲ್ಲಿ ಕಟ್ಟಡಗಳೇ ಎಲ್ಲೆಡೆ.

ಈಗ ಬೇರೆ ಬಿಸಿಲ ಝಳ. ಪ್ರಾಣಿ ಪಕ್ಷಿಗಳು ಗುಟುಕು ನೀರಿಗೂ ಪರದಾಡುವ ಸ್ಥಿತಿ. ಆದ್ದರಿಂದ ಕೊನೆಯ ಪಕ್ಷ ಬೇಸಿಗೆಯ ಕಾಲದಲ್ಲಿಯಾದರೂ ಮನೆಯ ಮುಂದೆ ಒಂದಿಷ್ಟು ನೀರನ್ನು ಇಟ್ಟರೆ ಪ್ರಾಣಿ ಪಕ್ಷಿಗಳು ಬಂದು ಕುಡಿಯಲು ಸಾಧ್ಯ ಅಲ್ಲವೇ? ನಮ್ಮ ಅಲ್ಪ ಸಹಾಯದಿಂದ ಅವುಗಳ ಜೀವ ಉಳಿಸಿದ ಪುಣ್ಯ ನಮಗೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT