ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಗುಂಡಿ ಜಲಧಾರೆ!

Last Updated 17 ಜುಲೈ 2018, 12:24 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯ ಜಲಪಾತಗಳಿವೆ . ಇವುಗಳ ಪೈಕಿ ಅಜ್ಜಿಗುಂಡಿ ಜಲಧಾರೆಯೂ ಒಂದು .

ಇದು ಯಲ್ಲಾಪುರ ತಾಲೂಕಿನಲ್ಲಿದೆ . ತಾಲೂಕು ಕೇಂದ್ರದಿಂದ ಇಡಗುಂಡಿ - ವಜ್ರಳ್ಳಿ ಮಾರ್ಗದಲ್ಲಿ ಹೋಗಬೇಕು . ಅಂದರೆ ಷಹರದಿಂದ ಸುಮಾರು ೨೦ ಕಿ . ಮೀ . ದೂರ ಕ್ರಮಿಸಿದಾಗ ( ವಜ್ರಳ್ಳಿಯಿಂದ ಸ್ವಲ್ಪ ಹಿಂದೆಯೇ ) ಬೀಗಾರ್ ಕತ್ರಿ ಸಿಗುತ್ತದೆ . ಅಲ್ಲಿಂದ ಬಲಭಾಗದ ಟಾರ್ ರಸ್ತೆಯಲ್ಲಿ ಸುಮಾರು ಒಂದು ಕಿ . ಮೀ . ಸಾಗಿದಾಗ ‘ಅಜ್ಜಿಗುಂಡಿ ಜಲಪಾತಕ್ಕೆ ಹೋಗುವ ಮಾರ್ಗ’ ಎಂದು ಸೂಚಿಸುವ ನಾಮಫಲಕವಿದೆ . ಅಲ್ಲಿಂದ ಎಡ ಭಾಗದ ಕಚ್ಚಾ ರಸ್ತೆಯ ಮೂಲಕ ಅನತಿ ದೂರ ಸಾಗಿ ; ಪುನಃ ಬಲ ಭಾಗದ ರಸ್ತೆಯಲ್ಲಿ ಅರ್ಧ ಕಿ . ಮೀ . ಹೋಗಬೇಕು . ಈ ರಸ್ತೆಯು ಅಲ್ಲಿಯೇ ಕೊನೆಗೊಳ್ಳುತ್ತದೆ . ಅಲ್ಲೇ ಎರಡು ಮನೆಗಳು , ಸುತ್ತಮುತ್ತ ಸಮೃದ್ಧವಾದ ಅಡಿಕೆ , ತೆಂಗಿನ ತೋಟಗಳು ಕಾಣಸಿಗುತ್ತವೆ . ಇಲ್ಲಿಯವರೆಗೆ ದ್ವಿಚಕ್ರ ವಾಹನ ಅಥವಾ ದೊಡ್ಡ ವಾಹನವನ್ನು ತರಬಹುದು . ಅಲ್ಲಿಂದ ಎಡ ಭಾಗದ ಕಾಲು ದಾರಿಯಲ್ಲಿ , ಸುಮಾರು ಒಂದು ಪರ್ಲಾಂಗ ದೂರದವರೆಗೆ ಪಾದಯಾತ್ರೆ ಮಾಡುವುದು ಅನಿವಾರ್ಯ .

ಆ ಕಾಲ್ದಾರಿಯಲ್ಲಿ ಹೋಗುವಾಗ ಅಕ್ಕ ಪಕ್ಕದಲ್ಲಿ ತರತರದ ಬಣ್ಣದ ಗಿಡಗಳಿವೆ ! ಸಾಲು ಸಾಲು ಅಡಿಕೆ ಮರಗಳನ್ನು ನೋಡುತ್ತಾ ಸಾಗುತ್ತಿದ್ದಂತೆಯೇ ಭೋರ್ಗರೆಯುವ ಜಲಪಾತದ ಸದ್ದು ಕೇಳಿಸುತ್ತದೆ . ಇಲ್ಲೇ ಹತ್ತಿರಲದಲ್ಲಿ ಜಲಧಾರೆ ಇರಬಹುದು ಎಂದು ಅನ್ನಿಸುವುದು ನಿಜ . ಆದರೆ ಜಲಪಾತವೇನೂ ಅಲ್ಲಿಂದ ನೋಡಲು ಸಿಗುವುದಿಲ್ಲ .

ಅಡಿಕೆ ತೋಟದ ಆ ಕಾಲು ದಾರಿಯಲ್ಲಿಯೇ ಸಾಗಿದಾಗ , ಕೃಷಿಕರೊಬ್ಬರಿಗೆ ಸೇರಿದ ಮನೆ ಎದುರಾಗುತ್ತದೆ . ಅವರ ಪುಟ್ಟ ಅಂಗಳವನ್ನು ದಾಟಿ , ಅನತಿ ದೂರ ಹೆಜ್ಜೆ ಹಾಕಿದರೆ ತಳಕೆಬೈಲ್ ಅಂಬಾಳ ಎಂಬ ಪುಟ್ಟ ಹಳ್ಳ ಸಿಗುತ್ತದೆ . ಈ ಹಳ್ಳವೇ ಜಲಧಾರೆಯಾಗಿ ಮೂರು ಹಂತದಲ್ಲಿ ಧುಮುಕುತ್ತವೆ . ಈ ಜಲಪಾತವನ್ನು ಅಲ್ಲಿನ ಅಡಿಕೆ ತೋಟ ; ದಿಂಬದ ಮೇಲಿಂದ ನಿಂತು ವೀಕ್ಷಿಸಬಹುದು . ತುಸು ಪ್ರಯಾಸಪಟ್ಟು ಕೆಳಗಿಳಿದರೆ ಹಾಲ್ನೊರೆಯಾಗಿ , ವಿಶಾಲವಾಗಿ ಹರಡಿ ಭೋರ್ಗರೆಯುತ್ತಿರುವ ಈ ಜಲಧಾರೆಯ ವೈಭವ , ಸೊಬಗನ್ನು ಅತಿ ಸಮೀಪದಿಂದ ಆಸ್ವಾದಿಸಿ ಕಣ್ತುಂಬಿಕೊಳ್ಳಬಹುದು .

ಸುಮಾರು ೫೦ ಅಡಿ ಎತ್ತರದಿಂದ ಧುಮುಕುವ ಈ ಅಜ್ಜಿಗುಂಡಿ ಜಲಪಾತವು ನಿಸರ್ಗದ ಮಧ್ಯೆ ಅವಿತುಕೊಂಡಿದೆ . ಇಲ್ಲಿ ‘ಅಜ್ಜಿಗುಂಡಿ ಡಾಟ್ ಕಾಮ್‌’ ಎಂಬ ನಾಟಕ ಪ್ರದರ್ಶನಗೊಂಡು , ಲಿಮ್ಕಾ ದಾಖಲೆ ಆಗಿರುವುದು ಈ ಜಲಪಾತದ ಹೆಗ್ಗಳಿಕೆ . ಒಂದೆಡೆಗೆ ಅಡಿಕೆ ತೋಟದ ಸೊಬಗು , ಮತ್ತೊಂದೆಡೆ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಸೌಂದರ್ಯ ಇವೆರಡರ ಮಧ್ಯೆ ಶುಭ್ರವಾಗಿ ಹರಿಯುತ್ತಿದೆ ಜಲಧಾರೆ .

ಸುಧಾ: ಜೂನ್ 12, 2018ರ ಸಂಚಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT