ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಬಣ್ಣಗಳ ಸುಂದರ ಕಾವ್ಯ

Last Updated 30 ಜನವರಿ 2019, 19:46 IST
ಅಕ್ಷರ ಗಾತ್ರ

ಮೂವತ್ತೆರಡು ಎಕರೆಯಲ್ಲಿ ಅಪೂರ್ವ ಬಣ್ಣಗಳ ಪುಷ್ಪಲೋಕ. ಧರೆಗಿಳಿದ ಕಾಮನಬಿಲ್ಲಿನಂತೆ ಕಾಣುವ, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಟುಲಿಪ್ ಪುಷ್ಪಗಳ ಮಹಾನ್ ಉದ್ಯಾನ. ಅದನ್ನು ಯೂರೋಪ್‌ನ ಗಾರ್ಡನ್ ಎಂದೇ ಕರೆಯುತ್ತಾರೆ. ಅದೇ ಹಾಲೆಂಡ್‌ನ ಕೂಕೆನ್‍ಹಾಫ್‌ ನಗರದಲ್ಲಿನ ‘ಟುಲಿಪ್ ಉದ್ಯಾನ’. ‌

ಉದ್ಯಾನದಲ್ಲಿ ಏಳು ದಶಲಕ್ಷಕ್ಕೂ ಹೆಚ್ಚು ಟುಲಿಪ್‌, ಡಾಫೋಡಿಲ್ಸ್, ಹ್ಯಾಸಿಂಥ್ ನಂತಹ ಹೂವಿನ ಲೋಕವೇ ಇದೆ. ಪ್ರತಿ ವರ್ಷ ಮಾರ್ಚ್ ತಿಂಗಳ ನಡುವಿನಿಂದ ಮೇ ತಿಂಗಳವರೆಗೆ ಪ್ರವೇಶಾವಕಾಶ. ಅಷ್ಟು ಅವಧಿಯಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರು ಮನಮೋಹಕ ತಾಣಕ್ಕೆ ಲಗ್ಗೆ ಇಡುತ್ತಾರೆ.

ಕಣ್ಣು ಹಾಯಿಸಿದಷ್ಟು ದೂರದಲ್ಲಿ ಮನ ತಣಿಯುವ ಈ ಉದ್ಯಾನದಲ್ಲಿ ವಿಹರಿಸಿದರೆ ಉಂಟಾಗುವ ಆಹ್ಲಾದಕರ ಅನುಭವ ಬಣ್ಣಿಸಲು ಅನನ್ಯ. ಪ್ರಕೃತಿ ಸೌಂದರ್ಯವು ಪುಷ್ಪಗಳ ಮೂಲಕ ಸೃಷ್ಟಿಯಾಗಿರುವ ಸುಂದರ ಮಹಾಕಾವ್ಯ. ಇಲ್ಲಿ ಸೌಂದರ್ಯ ಘನಿಸಿದೆ. ಭಗವಂತನಿಲ್ಲಿಹನು ಪುಷ್ಪವೇಷಿ ಎಂಬ ಕವಿವಾಣಿಯನ್ನು ನಮಗರಿಯದೇ ನಾವು ಉದ್ಗರಿಸುವಂತೆ ಮಾಡುತ್ತದೆ.

ಈ ಪುಷ್ಪಗಳ ಸೌಂದರ್ಯಕ್ಕೆ ಎಂಥವರೂ ಮೊರೆ ಹೋಗುತ್ತಾರೆ. ಬೆಡಗು ಮೈವೆತ್ತಂತ್ತಿರುವ ಇಂತಹ ಉದ್ಯಾನ ಜಗತ್ತಿನಲ್ಲಿದೇ ಎಂಬುದೇ ಆಶ್ಚರ್ಯ. ಬೆರಗು ಕಣ್ಣುಗಳಿಂದ ತುಂಬಿಕೊಂಡು ನೋಡಬೇಕಾದ ಈ ಉದ್ಯಾನ ಭೂಲೋಕದ ಮೇಲಿನ ಸ್ವರ್ಗದ ಛಾಯೆ. ನಂಬಲಸಾಧ್ಯವಾದ ರಮಣೀಯ ಪ್ರದೇಶ.

ವಿವಿಧ ಬಣ್ಣಗಳಿಂದ ಕೂಡಿದ ಟುಲಿಪ್ ಪುಷ್ಪಗಳು ಉದ್ಯಾನದ ಭವ್ಯತೆಯನ್ನೇ ಹೆಚ್ಚಿಸಿವೆ. ಅವುಗಳ ದಳಗಳು ಚೂಪಾಗಿವೆ, ಕೆಲವು ಬಟ್ಟಲಿನ ಆಕಾರದಲ್ಲಿವೆ. ಇವು ವಸಂತ ಋತುವಿನ ಆರಂಭದಲ್ಲೇ ಬಿರಿದು ಅರಳುವಂತೆ ಕಾಣುತ್ತಾ, ವಸಂತದ ಕೊನೆಯಲ್ಲಿ ಸೌಂದರ್ಯದ ಪರಾಕಾಷ್ಟೆಯನ್ನು ತಲುಪಿ ಬೇಸಿಗೆಯ ಹೊತ್ತಿಗೆ ಅದೃಶ್ಯವಾಗುತ್ತವೆ.

ಈ ಹೂವಿನ ಸಸಿಗಳನ್ನು ಸೂಕ್ತ ರೀತಿಯಲ್ಲಿ ಮಡಿ ಮಾಡಿ, ಒಪ್ಪಓರಣವಾಗಿ ಬೆಳಸಿರುವ ಪರಿಯು ವಿಶಿಷ್ಟವಾಗಿದೆ. ಒಂದೊಂದು ವರ್ಣದ ವರ್ಗೀಕರಣ, ಪುಷ್ಪಗಳ ಹಾಸು, ರೇಖೆಗಳು ಹಾಗೂ ಪಾತಿಗಳಲ್ಲಿ ಬೆಳಸಲಾಗಿದೆ. ಕೆಲವೊಂದು ಬಣ್ಣಗಳು ನದಿಯ ರೂಪವನ್ನು ಪಡೆದಿದೆ. ಕೆಲವು ಪಾತಿಗಳಲ್ಲಿ ಬೇರೆ ಬೇರೆ ಬಣ್ಣಗಳ ಸಂಯೋಗವನ್ನು ಕಾಣಬಹುದು.
ಹೂವಿನ ಗಿಡಗಳ ನಡುವೆ ಅಡ್ಡಾಡಲು ರಸ್ತೆಗಳಿವೆ. ಆ ರಸ್ತೆಯಲ್ಲಿ ಅಡ್ಡಾಡಿದಾಗ ನಮಗೆ ಆಶ್ಚರ್ಯಕರ ನೋಟವೊಂದು ಸೆಳೆಯುತ್ತಿತ್ತು. ಈ ಡಚ್ ದೇಶದ ತೋಟಗಾರಿಕಾ ಕಲೆಗಾರಿಕೆಯು ಅಚ್ಚರಿ ಹುಟ್ಟಿಸುವಂತೆ ಕಂಡುಬಂತು. ಸಂಪೂರ್ಣವಾಗಿ ಸಮಾಧಾನಗೊಳ್ಳದೆ ಇಲ್ಲಿಂದ ಯಾರೂ ಕದಲುವುದಿಲ್ಲ. ದಟ್ಟ ಮರಗಳ ಕೆಳಗೆ, ಗರಿಕೆಯ ಮಧ್ಯೆ ಕೂಡ ಕೆಂಪು, ಹಳದಿ ಹಾಗೂ ನೇರಳೆ ಬಣ್ಣಗಳ ಪುಷ್ಪಗಳು ಕಂಗೊಳಿಸುತ್ತವೆ. ಅದರ ಉದ್ಯಾನದ ಹೃದಯ ಭಾಗದಲ್ಲಿರುವ ಗಾಳಿ ಗಿರಣಿ ಯಂತ್ರವೊಂದು ಅಲ್ಲಿನ ವಿನ್ಯಾಸಕ್ಕೆ ಮೆರುಗು ನೀಡುತ್ತದೆ.

1949ರಲ್ಲಿ ಲಿಸೆಪುರದ ಮಹಾ ಪೌರರಿಂದ ಸ್ಥಾಪಿತವಾದ ಈ ಉದ್ಯಾನ ಜಗತ್ತಿನಲ್ಲೇ ಅತೀ ದೊಡ್ಡ ಉದ್ಯಾನವೆಂದು ಹೆಸರು ಪಡೆದಿದೆ. ಆ ಮೂಲಕ ಹಾಲೆಂಡ್ ದೇಶ ಪುಷ್ಪಗಳ ಅತೀ ದೊಡ್ಡ ರಫ್ತುದಾರ ದೇಶವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.

ಈ ವರ್ಷ ಮಾರ್ಚ್ 21 ರಿಂದ ಮೇ 19 ರವರೆಗೆ ಈ ಉದ್ಯಾನ ತೆರೆದಿರುತ್ತದೆ ಎಂದು ಅದರ ವೆಬ್‍ಸೈಟ್‍ನಲ್ಲಿ ತಿಳಿಸಲಾಗಿದೆ. ಯೂರೋಪ್ ಪ್ರವಾಸ ಹೊರಡುವವರು ಈ ಟುಲಿಪ್ ಉದ್ಯಾನವನ್ನು ತಪ್ಪದೇ ತಮ್ಮ ಪ್ರವಾಸದಲ್ಲಿ ಸೇರ್ಪಡೆಗೊಳಿಸಿಕೊಳ್ಳಬೇಕು. ಇಲ್ಲವೇ ನೇರವಾಗಿಯೇ ಹೋಗುವವರು ಆ್ಯಮ್‍ಸ್ಟರ್‌ಡ್ಯಾಂಗೆ ಪ್ರಯಾಣಿಸಿ ಅಲ್ಲಿಂದ ರಸ್ತೆ ಮಾರ್ಗದಲ್ಲಿ ಕ್ಯೂಕೆನ್‍ಹಾಫ್ ತಲುಪಿ ಉದ್ಯಾನಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT