ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯರ ಕ್ರಿಕೆಟ್‌

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಳಿ ವಯಸ್ಸಿನಲ್ಲಿ ಊರುಗೋಲು ಹಿಡಿದು ನಡೆಯಬೇಕಾದ ಅಜ್ಜಿಯರು ಕ್ರಿಕೆಟ್‌ ಬ್ಯಾಟು ಹಿಡಿದು ಮೈದಾನದಕ್ಕೆ ಲಗ್ಗೆ ಇಟ್ಟರೆ ಹೇಗಿರುತ್ತೆ!

ರಾಮ...ಕೃಷ್ಣ... ಎಂದು ಜಪ ಮಾಡಬೇಕಾದವರಿಗೆ ಮೈದಾನದಲ್ಲಿ ಏನು ಕೆಲಸ ಎಂದು ಆಶ್ಚರ್ಯ ಪಡಬೇಡಿ. ಈ ಸೂಪರ್‌ ಅಜ್ಜಿಯರು ಕ್ರೀಸ್‌ಗೆ ಬಂದು ಯುವಕರೂ ನಾಚುವ ರೀತಿ ಬ್ಯಾಟ್‌ ಬೀಸಲಿದ್ದಾರೆ.
ಹರೆಯದ ಹುಡುಗಿಯರು ಕ್ರಿಕೆಟ್‌ ಆಡಿದರೆ ಕ್ರೀಡಾಂಗಣ ಭರ್ತಿಯಾಗುತ್ತದೆ. ಅಜ್ಜಿಯರು ಬ್ಯಾಟ್‌ ಹಿಡಿದರೆ ಯಾರು ನೋಡುತ್ತಾರೆ ಎಂದು ಮೂಗು ಮುರಿಯಬೇಡಿ. 2008ರಲ್ಲಿ ನಡೆದಿದ್ದ ಪಂದ್ಯದಲ್ಲಿ ಈ ಅಜ್ಜಿಯರು ಕ್ರಿಕೆಟ್‌ ಆಡಿ ಭೇಷ್‌ ಎನಿಸಿಕೊಂಡಿದ್ದಾರೆ. ಅಲ್ಲದೇ, ಆ ಪಂದ್ಯ ಲಿಮ್ಕಾ ದಾಖಲೆಗೆ ಸೇರಿದೆ.

ಸ್ಫೂರ್ತಿ ಮಹಿಳಾ ಸಮಾಜ ಮತ್ತು ಕೀರ್ತಿ ಮಹಿಳಾ ಸಮಾಜ ಇದೇ ಶನಿವಾರ ಆಯೋಜಿಸಿರುವ ಕ್ರಿಕೆಟ್‌ ಪಂದ್ಯದಲ್ಲಿ ಈ ಅಜ್ಜಿಯರು ಪಕ್ಕಾ ಕ್ರಿಕೆಟಿಗರ ರೀತಿ ಪ್ಯಾಡ್‌ ಕಟ್ಟಿ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ.
ಪಂದ್ಯಕ್ಕೆ ಅಜ್ಜಿಯರು ಹಾಗೂ ಅಮ್ಮಂದಿರ ಕ್ರಿಕೆಟ್‌ ಎಂದೇ ಹೆಸರಿಡಲಾಗಿದೆ. 58ರಿಂದ 76 ವರ್ಷದ ಅಜ್ಜಿಯರು, 30ರಿಂದ 50 ವರ್ಷದ ಅಮ್ಮಂದಿರು ಕ್ರಿಕೆಟ್‌ ಆಡಲಿದ್ದಾರೆ.

‘2008ರಲ್ಲಿ ಮೊದಲ ಬಾರಿಗೆ ಅಜ್ಜಿಯರ ಮತ್ತು ಅಮ್ಮಂದಿರ ಪಂದ್ಯ ಏರ್ಪಡಿಸಲಾಗಿತ್ತು. ಈಗ ‘ಸ್ಫೂರ್ತಿ’ಯ ರಜತ ಮಹೋತ್ಸವ ಹಾಗೂ ‘ಕೀರ್ತಿ’ಯ 9ನೇ ವಾರ್ಷಿಕೋತ್ಸವದ ಅಂಗವಾಗಿ ಎರಡನೇ ಬಾರಿಗೆ ಪಂದ್ಯ ಏರ್ಪಡಿಸಲಾಗುತ್ತಿದೆ’ ಎಂದು ಸ್ಫೂರ್ತಿ ಮಹಿಳಾ ಸಮಾಜದ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಹೇಳಿದರು.

ಹಿಂದಿನ ಪಂದ್ಯಕ್ಕೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರತಿದಿನ ಸೌಟು ಹಿಡಿಯುವ ಕೈಗಳು ಬ್ಯಾಟ್‌ ಹಿಡಿದು ಮೈದಾನಕ್ಕಿಳಿಯುವುದನ್ನು ನೋಡುವುದೇ ರೋಚಕ ಅನುಭವ ಎಂದು ಅವರು ಹಿಂದಿನ ಪಂದ್ಯವನ್ನು ನೆನಪಿಸಿಕೊಂಡರು.

ಸ್ಫೂರ್ತಿ ಮತ್ತು ಕೀರ್ತಿ ಮಹಿಳಾ ಸಮಾಜಗಳು ಪ್ರತಿವರ್ಷ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಲವು ರೀತಿಯ ಕ್ರೀಡೆಗಳನ್ನು ಆಯೋಜಿಸುತ್ತಿವೆ. ಅದರಲ್ಲಿ ದೇಶೀಯ ಕ್ರೀಡೆಗಳಿಗೆ ಹೆಚ್ಚಿನ  ಮಹತ್ವ ನೀಡಲಾಗುತ್ತದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಆರು ವರ್ಷಗಳ ನಂತರ ಮತ್ತೆ ಕ್ರಿಕೆಟ್‌ ಪಂದ್ಯ ಆಯೋಜಿಸಲಾಗಿದೆ ಎಂದು ಹೇಳಿದರು.

ಪಂದ್ಯದಲ್ಲಿ ಅಜ್ಜಿಯರ ಎರಡು ತಂಡಗಳು ಹಾಗೂ ಅಮ್ಮಂದಿರ ಎರಡು ತಂಡಗಳು ಭಾಗವಹಿಸುತ್ತಿವೆ. ಒಂದು ತಂಡ ‘ಸ್ಫೂರ್ತಿ’ಯನ್ನು ಪ್ರತಿನಿಧಿಸಿದರೆ, ಮತ್ತೊಂದು ತಂಡ ‘ಕೀರ್ತಿ’ಯನ್ನು ಪ್ರತಿನಿಧಿಸುತ್ತದೆ.
ಅಜ್ಜಿಯರ ಪಂದ್ಯಕ್ಕೆ ತಲಾ 12 ಓವರ್‌ ಮತ್ತು ಅಮ್ಮಂದಿರ ಪಂದ್ಯಕ್ಕೆ ತಲಾ 16 ಓವರ್‌ಗಳನ್ನು ನಿಗದಿಪಡಿಸಲಾಗಿದೆ. ಬಸವನಗುಡಿಯ ಕೋಹಿನೂರ್‌ ಮೈದಾನದಲ್ಲಿ (ರಾಮಕೃಷ್ಣ ಆಶ್ರಮದ ಹಿಂಭಾಗ) ಈ ರೋಚಕ ಪಂದ್ಯ ನಡೆಯಲಿದೆ.

ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಹೆಚ್ಚು ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಹಿಂದಿನ ಪಂದ್ಯದಲ್ಲೂ ಕ್ರಿಕೆಟ್‌ ಆಡಿದ್ದೇನೆ. ಈ ಬಾರಿಯೂ ಆಡಲೂ ಕಾತರದಿಂದ ಕಾಯುತ್ತಿದ್ದೇನೆ.
                                                –ಗೀತಾ ಅಶೋಕ್‌, ಅಮ್ಮಂದಿರ ತಂಡದ ನಾಯಕಿ

ಸಾಧನೆಗೆ ವಯಸ್ಸು ಅಡ್ಡಿಯಲ್ಲ
ಈ ವಯಸ್ಸಿನಲ್ಲಿ ನಾವು ಕ್ರಿಕೆಟ್‌ ಆಡುತ್ತಿರುವುದನ್ನು ನೋಡಿ ಕೆಲವರು ಲೇವಡಿ ಮಾಡುತ್ತಾರೆ. ಆದರೆ, ನಮ್ಮ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಮನಸ್ಸಿಗಲ್ಲ. ಸಾಧಿಸುವ ಶ್ರದ್ಧೆ ಇದ್ದರೆ ಸಾಕು ಎಂತಹ ವಯಸ್ಸಿನಲ್ಲಿ ಬೇಕಾದರೂ ಸಾಧನೆ ಮಾಡಬಹುದು. ಸಾಧೆನೆಗೆ ವಯಸ್ಸು ಯಾವತ್ತೂ ಅಡ್ಡಿಯಾಗ ಲಾರದು.                                              –ಇಂದಿರಾ ರಮೇಶ್‌ (60), ಅಜ್ಜಿಯರ ತಂಡದ ನಾಯಕಿ

ಸ್ಫೂರ್ತಿ ಮಹಿಳಾ ಸಮಾಜ, ಕೀರ್ತಿ ಮಹಿಳಾ ಸಮಾಜ: ಕೊಹಿನೂರು ಆಟದ ಮೈದಾನ ಬಸವನಗುಡಿ. ಸ್ಫೂರ್ತಿಯ ರಜತ ಮಹೋತ್ಸವ–ಕೀರ್ತಿಯ 9ನೇ ವಾರ್ಷಿಕೋತ್ಸವ ಅಜ್ಜಿಯರು ಹಾಗೂ ಅಮ್ಮಂದಿರ ಕ್ರಿಕೆಟ್ ಪಂದ್ಯಾವಳಿ.
ಉದ್ಘಾಟನೆ–ಸಚಿವ ಅನಂತ್ ಕುಮಾರ್, ಬೆಳ್ಳಿ ಹಬ್ಬದ ಚಾಲನೆ–ಶುಭ ಹಾರೈಕೆ–ಸಚಿವ ಆರ್.ರಾಮಲಿಂಗಾರೆಡ್ಡಿ, ಕ್ರೀಡಾಚಾಲನೆ–ಮೇಯರ್ ಎನ್.ಶಾಂತಕುಮಾರಿ, ಸಚಿವ ಅಭಯ ಚಂದ್ರಜೈನ್. ಅಧ್ಯಕ್ಷತೆ–ಶಾಸಕ ಆರ್.ವಿ.ದೇವರಾಜ್, ಅತಿಥಿಗಳು–ಶಾಸಕ ಎಂ.ಕೃಷ್ಣಪ್ಪ, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಅದಮ್ಯಚೇತನ ಅಧ್ಯಕ್ಷರಾದ ತೇಜಸ್ವಿನಿ ಅನಂತ್ ಕುಮಾರ್.  ಬೆಳಿಗ್ಗೆ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT