ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ರಂಗ ಸಿಂಚನ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಸಿಂಚನ ಆಪ್ತ ರಂಗ’ ಇದು ಹಿರಿಯ ರಂಗಕರ್ಮಿ ಎಂ.ಸಿ. ಆನಂದ ಅವರ ಕನಸಿನ ಕೂಸಷ್ಟೇ ಅಲ್ಲ, ಬದುಕಿನ ಭಾಗವೂ ಹೌದು. ಸಿಂಚನದ ನೆಲೆ, ನೆಲ ಎಲ್ಲವೂ ಆನಂದ ಅವರ ಮನೆಯೇ. ಕಳೆದ ಐದು ದಶಕಗಳಿಂದಲೂ ‘ಸಮುದಾಯ’, ‘ಕನ್ನಡ ಸಾಹಿತ್ಯ ರಂಗ’ ಸೇರಿದಂತೆ ಹಲವು ರಂಗತಂಡಗಳಲ್ಲಿ ಕೆಲಸ ಮಾಡಿದ ಅನುಭವ ಎಂ.ಸಿ. ಆನಂದ ಅವರದ್ದು.

ಎಪ್ಪತ್ತರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ನಡೆದ ರಂಗೋತ್ಸವ ರಂಗಭೂಮಿ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಘಟನೆ. ಈ ರಂಗೋತ್ಸವದಲ್ಲಿ ಲಂಕೇಶ್‌ ಬರೆದು ಬಿ.ವಿ.ಕಾರಂತ ನಿರ್ದೇಶಿಸಿದ್ದ ‘ಸಂಕ್ರಾಂತಿ’ ನಾಟಕದಲ್ಲಿ ಆನಂದ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ದೊರೆತ ಬಿ.ವಿ. ಕಾರಂತರ ಒಡನಾಟ ಅವರಿಗೆ ರಂಗಭೂಮಿಯ ಬಗ್ಗೆ ಹೊಸ ಹೊಸ ನೋಟಗಳನ್ನು ಕೊಟ್ಟಿತು.

‘ರಂಗಭೂಮಿ ಪ್ರೇಕ್ಷಕರ ಬಳಿಗೆ ತೆರೆಳಬೇಕು. ಬಡಾವಣೆ ರಂಗಭೂಮಿಗಳು ಅಭಿವೃದ್ದಿ ಹೊಂದಬೇಕು. ಆಗ ಮಾತ್ರ ರಂಗಭೂಮಿ ಬದುಕಲು ಸಾಧ್ಯ ಎಂದು ಬಿ.ವಿ. ಕಾರಂತರು ಯಾವತ್ತೂ ಹೇಳುತ್ತಿದ್ದರು. ಅವರ ಮಾತು ನನ್ನ ಮನಸ್ಸಿನಲ್ಲಿತ್ತು. ಆದರೆ ಕಾರ್ಯರೂಪಕ್ಕೆ ಬರಲು 2004ರವರೆಗೆ ಕಾಯಬೇಕಾಯಿತು’ ಎಂದು ಸಿಂಚನ ಆಪ್ತರಂಗದ ಹುಟ್ಟಿನ ಹಿಂದಿನ ಪ್ರೇರಣೆಯನ್ನು ವಿವರಿಸುತ್ತಾರೆ ಆನಂದ್‌.

ನೆಲಮನೆಯೇ ರಂಗಮಂದಿರ!
ಎಂ.ಸಿ. ಆನಂದ ತಮ್ಮ ಮನೆಯ ನೆಲಮನೆಯನ್ನೇ ಸಿಂಚನ ರಂಗಮಂದಿರವನ್ನಾಗಿ ರೂಪಿಸಿದ್ದಾರೆ. ಇದರ ಹಿಂದೆಯೂ ಒಂದು ಕತೆಯಿದೆ.

‘ರಂಗಭೂಮಿ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಎಲ್‌. ಕೃಷ್ಣಪ್ಪ ವೃತ್ತಿಯಲ್ಲಿ ಕಟ್ಟಡ ಕಾಂಟ್ರಾಕ್ಟರ್‌. ನನ್ನ ಮನೆಯನ್ನು ಕಟ್ಟಿದ್ದೂ ಅವರೇ. 2004ರಲ್ಲಿ ನನ್ನ ಮನೆಯನ್ನು ಕಟ್ಟುವಾಗ ಅವರು ರಂಗಭೂಮಿ ಚಟುವಟಿಕೆಗಳನ್ನು ನಡೆಸಲು ಒಂದು ಆಪ್ತ ಸ್ಥಳವನ್ನು ನಿರ್ಮಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು. ನಾವಿಬ್ಬರೂ ಕೂತು ಚರ್ಚಿಸಿ ಅದು ನನ್ನ ಮನೆಯಲ್ಲಿಯೇ ಯಾಕೆ ಆಗಬಾರದು ಎಂದು ಯೋಚಿಸಿದೆವು. ಕೃಷ್ಣಪ್ಪ ನನ್ನ ಮನೆಯ ತಳಪಾಯವನ್ನು ರಂಗಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತಹ ಒಂದು ಚಿಕ್ಕ ಸಭಾಂಗಣವನ್ನಾಗಿ ರೂಪಿಸಿದರು. ಸುಮಾರು 200ರಿಂದ 250 ಜನ ಕುಳಿತುಕೊಳ್ಳಲು ಅವಕಾಶವಿರುವ ಈ ಸಭಾಂಗಣ ಸಿಂಚನ ಆಪ್ತರಂಗದ ವೇದಿಕೆಯಾಯ್ತು’ ಎಂದು ವಿವರಿಸುತ್ತಾರೆ. 2005ರಲ್ಲಿ ನಿವೃತ್ತರಾದ ಆನಂದ್‌ ಬೇರೆ ರಂಗಚಟುವಟಿಕೆಗಳ ಜತೆಗೆ ಸಿಂಚನವನ್ನು ತಮ್ಮ ಬದುಕಿನ ಭಾಗವಾಗಿ ಬೆಳೆಸಿಕೊಂಡು ಬಂದರು.

ಮೊದಲ ನಾಟಕ
ಸಿಂಚನ ಆಪ್ತರಂಗದ ಮೊದಲ ಪ್ರಯೋಗ ‘ಸಂತೆಯೊಳ ಗೊಂದು ಮನೆಯ ಮಾಡಿ’. ಆಧುನಿಕ ಬದುಕಿನ ಧಾವಂತ ಗಳು, ಜಾಗತೀಕರಣ, ಬದಲಾದ ಜೀವನಕ್ರಮ, ಮೌಲ್ಯಗಳು ಹೀಗೆ ಇಂದಿನ ನಗರ ಬದುಕನ್ನು ಪ್ರತಿಬಿಂಬಿಸುವ ಈ ನಾಟಕವನ್ನು ಎಂ.ಸಿ. ಆನಂದ್ ಅವರೇ ಬರೆದು ನಿರ್ದೇಶಿಸಿ ದ್ದಾರೆ. ಇದರಲ್ಲಿ ಹರಿಕೃಷ್ಣ ಮತ್ತು ಮಂಗಳಾ ಎನ್‌. ಮತ್ತು ಸಂಚಾರಿ ವಿಜಯ್‌ ಮುಖ್ಯ ಭೂಮಿಕೆಯಲ್ಲಿದ್ದರು. ಈ ನಾಟಕಕ್ಕೆ ದೊರೆತ ಜನ ಬೆಂಬಲ ಆನಂದ್‌ ಅವರಿಗೆ ಆತ್ಮವಿಶ್ವಾಸವಷ್ಟೇ ಅಲ್ಲದೇ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಲು ಉತ್ಸಾಹವನ್ನೂ ನೀಡಿತು.

ನಂತರದ ದಿನಗಳಲ್ಲಿ ಎಂ.ಸಿ. ಆನಂದ್‌ ಸಂತೆಯೊಳಗೊಂದು ಮನೆಯ ಮಾಡಿ ನಾಟಕದ ಮುಂದುವರಿದ ಭಾಗವನ್ನಾಗಿ ‘ಋಣವೆಂಬ ಸೂತಕವು’ ಎಂಬ ನಾಟಕ ರಚಿಸಿ ನಿರ್ದೇಶಿಸಿದರು. ಶಿವರಾಂ, ಭಾರ್ಗವಿ ನಾರಾಯಣ, ಅಭಿರುಚಿ ಚಂದ್ರು, ಶ್ವೇತಾ ಸೇರಿದಂತೆ ಹಲವಾರು ಪ್ರಮುಖ ಕಲಾವಿದರು ನಟಿಸಿದ್ದ ಈ ನಾಟಕಕ್ಕೂ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಇದೇ ಹುಮ್ಮಸ್ಸಿನಲ್ಲಿ ಗೊಗೊಯ್‌ ನಾಟಕವನ್ನು ‘ಬಂದವರಾರು?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದು ನಿರ್ದೇಶಿಸಿದರು.
ಹೀಗೆ ಸಿಂಚನದ ರಂಗಪಯಣ ಹಂತಹಂತವಾಗಿ ಮುಂದುವರಿಯುತ್ತಲೇ ಹೋಯಿತು. ಮೊದಲ ಎರಡು ವರ್ಷಗಳ ಕಾಲ ಸಿಂಚನ ಆಪ್ತರಂಗದ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿತ್ತು. ನಂತರ ಜನರೇ ಶುಲ್ಕವನ್ನು ನಿಗದಿಪಡಿಸಿ ಎಂದು ಒತ್ತಾಯಿಸಿದರು. ಆರಂಭದಲ್ಲಿ ₨ 10 ನಿಗದಿಪಡಿಸಲಾಗಿತ್ತು. ಈಗ ₨ 50 ತೆಗೆದುಕೊಳ್ಳಲಾಗುತ್ತದೆ.

ಹಲವು ಕಲಾಪ್ರಕಾರಗಳಿಗೆ ಆದ್ಯತೆ
‘ಸಿಂಚನ ಆಪ್ತರಂಗ’ ಕಿರು ಸಭಾಂಗಣ ಕೇವಲ ತನ್ನ ತಂಡದ ನಾಟಕಗಳಿಗಷ್ಟೇ ಮೀಸಲಾಗಿಲ್ಲ. ಬೇರೆ ತಂಡಗಳೂ ಇಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಉಳಿದ ತಂಡಗಳ ‘ಟಿಪಿಕಲ್‌ ಕೈಲಾಸಂ’  ‘ಮಲ್ಲಿನಾಥ ಧ್ಯಾನ’ ಹೀಗೆ ಅನೇಕ ನಾಟಕಗಳು ಇಲ್ಲಿ ಪ್ರದರ್ಶಿತಗೊಂಡಿವೆ.

ಬರೀ ನಾಟಕಗಳಷ್ಟೇ ಅಲ್ಲದೇ ಯಕ್ಷಗಾನ, ತಾಳಮದ್ದಲೆ, ಸಂಗೀತ ಕಾರ್ಯಕ್ರಮಗಳು, ಛಾಯಾಚಿತ್ರ ಪ್ರದರ್ಶನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಿಂಚನದ ವೈಶಿಷ್ಟ್ಯ.

ಇತರೆ ಚಟುವಟಿಕೆಗಳು
ಸಿಂಚನ ಕೇವಲ ಕಾರ್ಯಕ್ರಮಗಳ ಆಯೋಜನೆಗಷ್ಟೇ ಸೀಮಿತಗೊಂಡಿಲ್ಲ. ಬದಲಿಗೆ ಆಗಾಗ ಒಂದರಿಂದ ಒಂದೂವರೆ ತಿಂಗಳ ಅವಧಿಯ ನಟನಾ ಕಾರ್ಯಾಗಾರವನ್ನು ಏರ್ಪಡಿಸುವ ಪರಿಪಾಠ ಇರಿಸಿಕೊಂಡಿದೆ. ಶಿಬಿರದ ಕೊನೆಯಲ್ಲಿ ಶಿಬಿರಾರ್ಥಿಗಳಿಂದ ಒಂದು ನಾಟಕವನ್ನೂ ಮಾಡಿಸಲಾಗುತ್ತದೆ. ಅಲ್ಲದೇ ಎಂ.ಸಿ. ಆನಂದ ಅವರ ಮಗನಾದ ಎಂ.ಸಿ. ಚೇತನ್‌ ನಿರಂತರವಾಗಿ ಚಿತ್ರಕಲೆಯ ಕುರಿತ ಕಾರ್ಯಾಗಾರ, ಪ್ರದರ್ಶನಗಳನ್ನು ನಡೆಸುತ್ತಾರೆ. ಅಲ್ಲದೇ ಪ್ರತಿದಿನ ಚಿತ್ರಕಲಾ ತರಗತಿಗಳೂ ನಡೆಯುತ್ತವೆ.

‘ಇಂತಹ ಆಪ್ತರಂಗಕ್ಕೆ ದೊಡ್ಡ ಮಟ್ಟದ ಸಿದ್ಧತೆಯೇನೂ ಬೇಕಾಗಿಲ್ಲ. ಆದರೆ ಅದನ್ನು ರೂಪಿಸುವ ಮನಸ್ಥಿತಿ ಮತ್ತು ರಂಗಪ್ರೀತಿ ಬೇಕು. ರಂಗಭೂಮಿ ಎನ್ನುವುದು ನಿಮ್ಮ ಬದುಕಿನ ಭಾಗವಾದಾಗ ಮಾತ್ರ ಇಂಥ ಆಪ್ತರಂಗಗಳು ಬಹುಕಾಲ ಉಳಿಯಲು ಸಾಧ್ಯ’ ಎನ್ನುವ ಎಂ.ಸಿ. ಆನಂದ್‌, ಬಡಾವಣೆ ರಂಗಭೂಮಿಯ ಜವಾಬ್ದಾರಿ ಮತ್ತು ಅವಶ್ಯಕತೆ ಎರಡಕ್ಕೂ ನಿದರ್ಶನದಂತೆ ಕಾಣುತ್ತಾರೆ. 

ವಿಕೇಂದ್ರೀಕರಣದಲ್ಲಿ ಕಲೆಯ ಉಳಿವಿದೆ
ಸಿಂಚನ ಆಪ್ತರಂಗದ ಮುಂದಿನ ದಿನಗಳ ಬಗ್ಗೆ ಹೇಳಿ.

ನನಗೀಗ ಎಪ್ಪತ್ತು ವರ್ಷ ಆಗ್ತಾ ಬಂತು. ಆದರೆ ನನಗೆಂದೂ ರಂಗಭೂಮಿಯ ಕೆಲಸಗಳು ಆಯಾಸ ಹುಟ್ಟಿಸಿಲ್ಲ. (ಜೋರಾಗಿ ನಕ್ಕು) ನಾನು ನೂರೈವತ್ತು ವರ್ಷ ಬದುಕ್ತೀನಿ.

‘ಸಿಂಚನ ಆಪ್ತರಂಗ’ ಒಂದು ಸಣ್ಣ ಸಂಘಟನೆ. ಇದರ ಎಲ್ಲ ಕೆಲಸಗಳಿಗೂ ನಾನೇ ಓಡಾಡಬೇಕು. ನನ್ನ ನಂತರ ಸಿಂಚನ ಏನಾಗುವುದೋ ಗೊತ್ತಿಲ್ಲ.. ಆದರೆ ನನ್ನ ಮಗ ಚೇತನ್‌ ಚಿತ್ರ ಕಲಾವಿದ. ಅವನು ಚಿತ್ರಕಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಿರುತ್ತಾನೆ. ಆದರೆ ಸಿಂಚನದ ರಂಗಭೂಮಿ ಚಟುವಟಿಕೆಗಳ ಹೊಣೆಗಾರಿಕೆಯೆಲ್ಲವೂ ನನ್ನದೇ.|

ಇದೆಲ್ಲದರ ನಡುವೆಯೂ ಸಿಂಚನ ಆಪ್ತರಂಗವಾಗಿ ಏನೇನು ಚಟುವಟಿಕೆಗಳನ್ನು ನಡೆಸಬೇಕೋ ನನ್ನ ನಂತರವೂ ನಡೆಯುತ್ತವೆ ಎಂಬ ನಂಬಿಕೆ ನನ್ನದು. ಮುಂದೆಯೂ ಇದು ಸರಳ ಪ್ರಯೋಗಗಳಿಗೆ ವೇದಿಕೆಯಾಗಬೇಕು. ಪರ್ಮಾರ್ಮೆನ್ಸ್‌ಗೆ ಪ್ರಾಮುಖ್ಯ ನೀಡುವ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂಬುದು ನನ್ನ ಆಸೆ.

ಆಪ್ತರಂಗ ಅಥವಾ ಬಡಾವಣೆ ರಂಗಭೂಮಿಯ ಮಹತ್ವವೇನು?
ಕಲೆ ಕೇಂದ್ರೀಕೃತವಾದಂತೆ ಭ್ರಷ್ಟವಾಗುತ್ತ ಹೋಗುತ್ತದೆ. ಜನರಿಂದ ದೂರವಾಗುತ್ತದೆ. ಸ್ಥಳೀಯ ಸಾಂಸ್ಕೃತಿಕ ಚಟುವಟಿಕೆಗಳ ವಿಕೇಂದ್ರೀಕರಣದಲ್ಲಿಯೇ ಕಲೆಯ ಉಳಿವಿದೆ. ಬಡಾವಣಾ ರಂಗಭೂಮಿ ಅಥವಾ ಆಪ್ತರಂಗಗಳು ಇಂತಹ ವಿಕೇಂದ್ರೀಕರಣದ ಸಾಧನಗಳಾಗಿವೆ. ಅದಕ್ಕೇ ಅವುಗಳು ಮುಖ್ಯ.
ಕಲೆಯನ್ನು ಜನರಿದ್ದಲ್ಲಿಗೇ ತೆಗೆದುಕೊಂಡು ಹೋಗಬೇಕು. ಬಿ.ವಿ. ಕಾರಂತರು ಹೇಳಿದ್ದೂ ಅದನ್ನೇ. ಸಣ್ಣ ರಂಗಮಂದಿರಗಳು ಹೆಚ್ಚುತ್ತ ಹೋದಂತೆ ರಂಗಭೂಮಿಯೂ ಬೆಳೆಯುತ್ತದೆ.

ಇಂದಿನ ಹುಡುಗರ ಬಗ್ಗೆ, ರಂಗಭೂಮಿಯ ಭವಿಷ್ಯದ ಬಗ್ಗೆ ಏನನ್ನಿಸುತ್ತದೆ?
ಹೊಸ ಹುಡುಗರಲ್ಲಿ ರಂಗಭೂಮಿ ಕಡೆಗೆ ಆಸಕ್ತಿ ಇದೆ. ಅಚ್ಚರಿ ಏನೆಂದರೆ ನಾವೆಲ್ಲರೂ ಮೆಕ್ಯಾನಿಕಲ್‌ ಬದುಕು ಎಂದು ಕರೆಯುವ ಐಟಿ , ಕಾಲ್‌ ಸೆಂಟರ್‌ ವೃತ್ತಿಯಲ್ಲಿರುವ ಹುಡುಗರೇ ಹೆಚ್ಚಾಗಿ ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರಂಗಭೂಮಿಯ ಭವಿಷ್ಯ ಇರುವುದು ಅವರಲ್ಲಿಯೇ ಅನಿಸುತ್ತದೆ. ಅವರಿಗೆ ಹಿರಿಯರು ತಕ್ಕ ಮಾರ್ಗದರ್ಶನ ನೀಡಬೇಕು.

ಜನರಿಗಂತೂ ರಂಗಭೂಮಿಯ ಬಗ್ಗೆ ಆಸಕ್ತಿ ಇದ್ದೇ ಇದೆ. ಟಿ.ವಿ.ಗಿಂತ ಭಿನ್ನವಾಗಿ, ರಿಮೋಟ್‌ಗಿಂತ ಸ್ವಲ್ಪ ದೂರ ಇರುವಂತೆ ಕಲೆಯನ್ನು ಪ್ರಸ್ತುತಪಡಿಸಿದರೆ ಖಂಡಿತ ಜನರು ಬಂದು ನೋಡುತ್ತಾರೆ. ರಂಗಭೂಮಿ ಪೀಳಿಗೆಗಳ ನಡುವಿನ ಅಂತರವನ್ನು ಮೀರಿ ಜನರನ್ನು ಆಕರ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT