ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಕೋಟೆಯೊಳಗೆ ಕನ್ನಡ ಪತ್ರಕರ್ತನಾದಾಗ

ಕ್ಯಾಂಪಸ್ ಕಲರವ
Last Updated 22 ಫೆಬ್ರುವರಿ 2016, 19:58 IST
ಅಕ್ಷರ ಗಾತ್ರ

ನನಗೆ ಮೊದಲಿನಿಂದಲೂ ಮನೋವಿಜ್ಞಾನದಲ್ಲಿ ಆಸಕ್ತಿ ಇತ್ತು. ಅದ್ದರಿಂದ ಡಿಗ್ರಿಯಲ್ಲಿ ಐಚ್ಛಿಕ ವಿಷಯವಾಗಿ ಮನೋವಿಜ್ಞಾನವನ್ನು ಆರಿಸಿಕೊಂಡೆ. ಉಳಿದಂತೆ ಐಚ್ಛಿಕ ಕನ್ನಡ ಮತ್ತು ಪತ್ರಿಕೋದ್ಯಮ ವಿಷಯಗಳಿದ್ದವು. ಆದರೆ ನನ್ನ ಚಿತ್ತವನ್ನು ಪತ್ರಿಕೋದ್ಯಮದತ್ತ ಯಾವ ಸಂಗತಿ ಸೆಳೆಯಿತು ಎಂಬುದು ಇಂದಿಗೂ ತಿಳಿಯುತ್ತಿಲ್ಲ. 

ಡಿಗ್ರಿಯಲ್ಲಿ ಐಚ್ಛಿಕ ಕನ್ನಡ ಮತ್ತು ಸಾಮಾನ್ಯ ಕನ್ನಡ ವಿಷಯಗಳನ್ನು ಹೊರತುಪಡಿಸಿ ಎಲ್ಲವೂ ಇಂಗ್ಲಿಷ್‌ ಮಯವಾಗಿದ್ದವು. ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಆದರೆ ನನಗೆ ಇಂಗ್ಲೀಷ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ಭಾಷಾಂತರಿಸುವ ಸಾಮರ್ಥ್ಯ ತಕ್ಕಮಟ್ಟಿಗೆ ಇತ್ತು. ಮನೋವಿಜ್ಞಾನ, ಪತ್ರಿಕೋದ್ಯಮದಲ್ಲಿ ಅಷ್ಟಾಗಿ ಕನ್ನಡ ಪುಸ್ತಕಗಳಿರಲಿಲ್ಲ. ಸಿಲೆಬಸ್ ಪ್ರಕಾರ ನಾವೇ ಹುಡುಕಬೇಕಾಗಿತ್ತು. ನಾನು ಅವುಗಳನ್ನು ಭಾಷಾಂತರ ಮಾಡಿ ಕನ್ನಡದಲ್ಲಿ ಓದಿಕೊಳ್ಳುತ್ತಿದ್ದೆ.

ಮೊದಲು ಇದು ಕಷ್ಟವಾತಗುತ್ತಿತ್ತು. ನಂತರ ಅದೇ ಅಭ್ಯಾಸವಾಯಿತು. ನಮ್ಮ ಒತ್ತಾಯದ ಮೇರೆಗೆ ನಮ್ಮ ಮೇಡಂ ಕನ್ನಡದಲ್ಲಿ ಹೇಳುತ್ತಿದ್ದರು. ನಾನು ಕಾಲೇಜಿನಲ್ಲಿ ವಾರ್ಷಿಕ ಪತ್ರಿಕೆಗೆ ಕಥೆ, ಲೇಖನಗಳನ್ನು ಬರೆಯುತ್ತಿದ್ದೆ. ನನ್ನ ಆಸಕ್ತಿಯನ್ನು ಗಮನಿಸಿದ ಮೇಡಂ ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತಿದ್ದರು.

ಕಾಲೇಜಿನಲ್ಲಿ ಯವುದೇ ಸಭೆ, ಸಮಾರಂಭ ನಡೆದರೂ ನನ್ನನ್ನು ವರದಿಗರನಾಗಿ ಕಳುಹಿಸುತ್ತಿದ್ದರು. ನಾನು ಬರೆದ ವರದಿಗಳನ್ನು ಪರಿಶೀಲಿಸಿ ತಪ್ಪುಗಳನ್ನು ತಿದ್ದುತ್ತಿದ್ದರು. ಅಗಲೇ ನನಗೆ ವರದಿಗಾರನಾಗುವ ಬಯಕೆ ಮೂಡಿರಬೇಕು. ಒಮ್ಮೆ ನಮಗೆ ಅಂತರ ಕಾಲೇಜು ಸ್ಪರ್ಧೆಯ ಆಹ್ವಾನ ಬಂದಿತು. ಅದರಲ್ಲಿ ವರದಿಗಾರಿಕೆ ಮತ್ತು ಇತರ ಸ್ಪರ್ಧೆಗಳಿದ್ದವು. ನಾನು ವರದಿಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಇತರೆ ಸ್ನೇಹಿತರೊಡನೆ ಸ್ಪರ್ಧೆ ಏರ್ಪಡಿಸಿದ್ದ ಪ್ರೆಸಿಡೆನ್ಸಿ ಕಾಲೇಜಿಗೆ ಕಾಲಿಟ್ಟೆವು.

ಹೆಸರು ನೋಂದಾಯಿಸಿ ಒಳಗೆ ಹೋಗುತ್ತಿದ್ದಂತೆ ಏನೊ ಒಂದು ರೀತಿಯ ಆತಂಕವಾಯಿತು. ಅಲ್ಲಿ ಎಲ್ಲವೂ ಇಂಗ್ಲೀಷಿನಲ್ಲಿ ನಡೆಯುತ್ತಿತ್ತು. ಎಲ್ಲರೂ ಇಂಗ್ಲಿಷ್‌ನಲ್ಲಿ ಪರಿಣತರು, ಇವರುಗಳ ಮಧ್ಯೆ ಕನ್ನಡದಲ್ಲಿ ಬರೆದು ಬಹುಮಾನ ಪಡೆಯುವುದು ಕನಸಿನ ಮಾತು ಎಂದುಕೊಂಡೆ. ಆದದ್ದು ಅಗಲಿ ಎಂದು ನಿರ್ಧರಿಸಿದೆ. ವರದಿಗಾರಿಕೆ ಸ್ಪರ್ಧೆಗೆ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವನ್ನು ವರದಿ ಮಾಡಿ ನೀಡುವಂತೆ ಹೇಳಿದರು.

ಸಮಾರಂಭ ಪ್ರಾರಂಭವಾಯಿತು. ಸಮಾರಂಭದಲ್ಲಿದವರೆಲ್ಲ ಕನ್ನಡದ ಹೆಸರಾಂತ ನಟ, ನಿರ್ದೇಶಕರು. ಆದರೆ ಯಾರೂ ಕನ್ನಡದಲ್ಲಿ ಮಾತನಾಡಲಿಲ್ಲ. ಸಮರಂಭದಲ್ಲೂ ಇಂಗ್ಲಿಷ್ ಹಾಸು ಹೊಕ್ಕಾಗಿತ್ತು.   ಹಾಗೂ ಹೀಗೂ ಬರೆದು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ವರದಿ ತಯಾರಿಸಿ ನೀಡಿದೆ.

ಸಂಜೆಯಾಯಿತು, ಸ್ಪರ್ಧೆಗಳಿಗೆ ಪ್ರಶಸ್ತಿ ನೀಡಲು ವೇದಿಕೆಯೂ ಸಜ್ಜಾಯಿತು. ಒಂದೊಂದೆ ಸ್ಪರ್ಧೆಗಳನ್ನು ಹೆಸರಿಸಿ ವಿಜೇತರನ್ನು ಕರೆಯಲಾರಂಭಿಸಿದರು. ಮನಸ್ಸಿನಲ್ಲಿ ಒಂದು ರೀತಿಯ ತುಮುಲ ಆರಂಭವಾಯಿತು.

ವರದಿಗಾರಿಕೆಯಲ್ಲಿ ಪ್ರಥಮ ಬಹುಮಾನ ಶಿವರಾಜ್ ಎಂದು ಕರೆದೊಡನೆ ಆತಂಕ, ಭಯ, ಅಶ್ಚರ್ಯ ಎಲ್ಲ ಒಟ್ಟಿಗೆ ಶುರುವಾದವು. ವೇದಿಕೆಗೆ ಹೋಗಿ ಬಹುಮಾನ ಪಡೆದಾಗ ಹೇಳಲಾಗದ ಖುಷಿಯ ಅನುಭವಾಯಿತು. ನನ್ನೊಡನೆ ಬಂದಿದ್ದ ಶ್ವೇತ, ಮಂಜುನಾಥ ಮತ್ತು ಇತರರು ನನಗಿಂತ ಹೆಚ್ಚು ಸಂತೋಷಪಟ್ಟರು. ಆಗ ನಿರ್ಧರಿಸಿದೆ ಪತ್ರಕರ್ತನಾಗಿ ಏನಾದರೂ ಸಾಧಿಸಬೇಕು ಎಂದು. ಇಂದಿಗೂ ಆ ಕ್ಷಣಗಳು ನೆನಪಾದಾಗ  ರೋಮಾಂಚನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT