ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ, ಪುರಾಣದ ಕಿಟಕಿ

ಅಂಕದ ಪರದೆ
Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ’ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ಹುಟ್ಟಿದ್ದು. ಪೌರಾಣಿಕ, ಐತಿಹಾಸಿಕ ವಸ್ತುಗಳನ್ನು ರಂಗರೂಪಕ್ಕೆ ತರುವ ಉದ್ದೇಶವುಳ್ಳ ಈ ತಂಡದ ನಾಟಕಗಳನ್ನು ಪ್ರೇಕ್ಷಕರು ಉಚಿತವಾಗಿ ನೋಡಬಹುದು.

ಕನ್ನಡ ನಾಡು–ನುಡಿ, ಕಲೆ–ಸಂಸ್ಕೃತಿ, ಇತಿಹಾಸ, ಪರಂಪರೆಗಳ ಸಂರಕ್ಷಣೆಯ ಜೊತೆಗೆ ಸನ್ನಡತೆ, ಸತ್ಸಂಪ್ರದಾಯ, ಸಾಮರಸ್ಯ ಬೆಳಸುವುದನ್ನು ಧ್ಯೇಯೋದ್ದೇಶ­ವಾಗಿಟ್ಟುಕೊಂಡು 1985ರಲ್ಲಿ ಪ್ರಾರಂಭ­ವಾದದ್ದು ‘ನಾಟ್ಯ ಸರಸ್ವತಿ ಶಾಂತಲಾ ಕನ್ನಡ   ಕಲಾ ಸಂಘ’.
ಕಳೆದ 30 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಈ ಕಲಾ ಸಂಘ ಇದುವರೆಗೆ ನೂರಕ್ಕೂ ಹೆಚ್ಚು ಕಲಾವಿದರನ್ನು ಹುಟ್ಟುಹಾಕಿ, ಸಣ್ಣ ಮತ್ತು ದೊಡ್ಡ ಪರದೆಗೆ ನೀಡಿದೆ. ತಂಡ ಸ್ಥಾಪನೆಗೂ ಮೊದಲು ಸ್ನೇಹಿತರ ಜೊತೆಗೂಡಿ ನಾಟಕ ನಿರ್ದೇಶನ ಮಾಡುತ್ತಿದ್ದ ಆಂಜನೇಯ ಅವರ ರಂಗಪ್ರೀತಿಯಿಂದ ಹುಟ್ಟಿಕೊಂಡ ತಂಡ ಇದು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸೊಸೆ ಕುರಿತು ‘ಬೆಂಗಳೂರು ಭಾಗ್ಯಲಕ್ಷ್ಮಿ’ ನಾಟಕ ರಚಿಸಿ ಪ್ರದರ್ಶಿಸುವುದರ ಮೂಲಕ ಈ ತಂಡದ ರಂಗಚಲನೆ ಆರಂಭವಾಯಿತು.

ಆಂಜನೇಯ ಅವರ ಮುಂದಾಳತ್ವದಲ್ಲಿ ಸಂಘ ಎರಡು ದಶಕಗಳ ಹೋರಾಟ ನಡೆಸಿತು. ಅದರ ಫಲವಾಗಿ 1537ರಿಂದ ಯಾರ ಗಮನಕ್ಕೂ ಬಾರದೆ,    ಇತಿಹಾಸದಿಂದ ಕಣ್ಮರೆ­ಯಾ­ಗಿದ್ದ ಕೆಂಪೇಗೌಡರ ಸೊಸೆ   ಲಕ್ಷ್ಮೀ­ದೇವಿಯ ಸಮಾಧಿ ಇಂದು ಬಿಬಿಎಂಪಿ­ಯಿಂದ ಸಂರಕ್ಷಣೆಗೆ ಒಳಪಟ್ಟಿದೆ-. ಇದರ ಜೊತೆಗೆ ಕೆಂಪೇಗೌಡ  ಮತ್ತು ಅವರ ಪೂರ್ವಿಕರನ್ನೊಳಗೊಂಡ ಸಮಗ್ರ ಇತಿಹಾಸ­­ವನ್ನು ನೃತೃರೂಪಕಕ್ಕೆ ಅಳವಡಿಸಿ ಪ್ರದರ್ಶಿಸಿದ್ದಾರೆ. ಇದಾದ ನಂತರ ಹಲವು ಯಶಸ್ವಿ ನಾಟಕಗಳನ್ನು ತಂಡ ಪ್ರದರ್ಶಿಸಿದೆ. ತಂಡದ ಸದಸ್ಯರು ತಂಡದಲ್ಲಿ 25 ಜನ ಸದಸ್ಯರಿದ್ದು, ಸುಮಾರು 200ಕ್ಕೂ ಹೆಚ್ಚು  ಕಲಾವಿದರು ಹಾಗೂ 30 ನಿರ್ದೇಶಕರು ಸಕ್ರಿಯ ಕಾರ್ಯಕರ್ತರಾಗಿದ್ದಾರೆ.    ಸಿನಿಮಾ ನಿರ್ದೆಶಕರು, ಧಾರಾವಾಹಿ ಕಲಾವಿದರು, ನೃತ್ಯ ಸಂಯೋಜಕರು, ಮಾಧ್ಯಮದವರು, ಸರ್ಕಾರಿ ಉದ್ಯೋಗಿಗಳು, ಪೂರ್ಣಾವಧಿ ಕಲಾವಿದರು, ವಿದ್ಯಾರ್ಥಿಗಳು ಕೂಡ ತೊಡಗಿಕೊಂಡಿದ್ದಾರೆ.

ಪ್ರಮುಖ ನಾಟಕಗಳು
* ರಾಷ್ಟ್ರಕವಿ ಕುವೆಂಪು ಅವರ ‘ಕಾನೀನ’ – 10 ಪ್ರದರ್ಶನ
* ಆಂಜನೇಯ ಅವರ ‘ನಾಡಪ್ರಭು ಕೆಂಪೇಗೌಡ’ – 99 ಪ್ರದರ್ಶನ
* ಟಿ.ಪಿ. ಕೈಲಾಸಂ ಅವರ ‘ಸೀಕರ್ಣೆ ಸಾವಿತ್ರಿ’ – 15 ಪ್ರದರ್ಶನಗಳು
* ಜಯಂತ್‌ ಕಾಯ್ಕಿಣಿ ಅವರ ‘ಸೇವಂತಿ ಪ್ರಸಂಗ’ – 16 ಪ್ರದರ್ಶನಗಳು
* ಯು. ಗೋವಿಂದೇಗೌಡರ ‘ಹರಿಕಥೆ’ – 99 ಪ್ರದರ್ಶನಗಳು
* ಮಹಾಕವಿ ಭಾಸರ ‘ದೂತ ಘಟೋತ್ಕಚ’ – 12 ಪ್ರದರ್ಶನಗಳು
* ಬಿ. ಪುಟ್ಟಸ್ವಾಮಯ್ಯನವರ ‘ಕುರುಕ್ಷೇತ್ರ’ – 20 ಪ್ರದರ್ಶನಗಳು
* ಆಂಜನೇಯ ಅವರ ’ಸಾಮ್ರಾಟ್‌ ಶ್ರೀಪುರುಷ’ – 16 ಪ್ರದರ್ಶನಗಳು
* ಯು. ಗೋವಿಂದೇಗೌಡರ ‘ಪಳೆಂಕರು’ – 48 ಪ್ರದರ್ಶನಗಳು
* ಆಂಜನೇಯ ಅವರ ‘ಕೆಂಪೇಗೌಡ ನೃತ್ಯರೂಪಕ’ – 56 ಪ್ರದರ್ಶನ

ನಾಟಕಗಳ ಆಯ್ಕೆ
‘ನಾವು ಪ್ರದರ್ಶಿಸುವ ಪ್ರತಿಯೊಂದು ನಾಟಕ ಮನರಂಜನೆಯಿಂದ ಕೂಡಿದ್ದು, ಜನರನ್ನು ರಂಜಿಸುವುದರ ಜೊತೆಗೆ ಪರಿಣಾಮಕಾರಿ ಸಂದೇಶ ಹೊಂದಿರಬೇಕು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಹಾಸ್ಯ, ಗಂಭೀರ ಮತ್ತು ಮಕ್ಕಳ ನಾಟಕಗಳನ್ನು ನಾವು ರಚಿಸಿ, ಪ್ರದರ್ಶಿಸುತ್ತೇವೆ‘ ಎನ್ನುತ್ತಾರೆ ಕಾರ್ಯದರ್ಶಿ ಆಂಜನೇಯ.

ತಾಲೀಮು
ನಾಟಕಗಳ ಪ್ರದರ್ಶನ ಇರುವ ವೇಳೆ ಪ್ರತಿದಿನ ಸಂಜೆ  ಅಭ್ಯಾಸ ನಡೆಸುತ್ತಾರೆ. ಉಳಿದಂತೆ ಸಾಧ್ಯವಾಗುವವರು ಅಭ್ಯಾಸ ಸಭಾಂಗಣಕ್ಕೆ ಬಂದು, ಸಾಣೆಗೆ    ಒಡ್ಡಿಕೊಳ್ಳುತ್ತಾರೆ. ‘ಇಲ್ಲಿ ನಟನೆ, ನಿರ್ದೇಶನ, ನೃತ್ಯದ ತರಬೇತಿ ನೀಡಲಾಗುವುದು. ಯಾರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಕಲಿಯುವ ಅವಕಾಶವಿದೆ. ಆದರೆ ಶಿಸ್ತನ್ನು ಪಾಲಿಸಬೇಕು’ ಎನ್ನುತ್ತಾರೆ ಮುಖ್ಯ    ಕಾರ್ಯದರ್ಶಿ ಬಿ.ಎ. ಧನ್ವಂತ್ರಿ ಅವರು.

ರಂಗದಿಂದಾಚೆಗೆ...
ಕಣ್ಮರೆಯಾಗುತ್ತಿರುವ ಐತಿಹಾಸಿಕ ನಾಟಕ ಪ್ರಯೋಗಗಳ ಪುನರುತ್ಥಾನದ ಉದ್ದೇಶಕ್ಕಾಗಿ ಐದು ದಿನಗಳ ನಾಟಕೋತ್ಸವ ಮತ್ತು ಐತಿಹಾಸಿಕ ರಂಗ ಪರಿಕರ ಹಾಗೂ ವಸ್ತ್ರಗಳ ಪ್ರದರ್ಶನವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ಏರ್ಪಡಿಸಿದ ಹೆಗ್ಗಳಿಕೆ ಈ ತಂಡದ್ದು. ಈ ತಂಡದಲ್ಲಿ ನಾಟಕಗಳ ಅಭ್ಯಾಸ ಅಥವಾ ಅದಕ್ಕೆ ಸಂಬಂಧಪಟ್ಟಂತಹ ವಿಚಾರ ಮತ್ತು ಕಾರ್ಯಕ್ರಮಗಳು ಮಾತ್ರವಲ್ಲದೆ, ರಾಷ್ಟ್ರೀಯ ಹಬ್ಬಗಳು ಹಾಗೂ ಇತರ ಸಾಮಾಜಿಕ ಆಚರಣೆಗಳಾದ ನಮ್ಮ ಭಾರತೀಯ ಹಬ್ಬಗಳನ್ನು ಎಲ್ಲರೂ ಸೇರಿ ಒಂದೇ ಕುಟುಂಬ ಎಂಬಂತೆ ಆಚರಿಸಲಾಗುವುದು.

ಆದಾಯದ ಮೂಲ
‘ನಿಯಮಿತ ಆದಾಯ ಇಲ್ಲ. ಸದ್ಯಕ್ಕೆ ನನಗೆ ಬರುವ ಸಂಬಳದಲ್ಲೇ ತಂಡ ನಡೆಸಲಾಗುತ್ತಿದೆ. ಇದು ಬಿಟ್ಟರೆ  ಸಂಸ್ಕೃತಿ ಇಲಾಖೆಯ ಸಹಕಾರ ಇದೆಯಷ್ಟೆ. ಪ್ರಾರಂಭದ ದಿನಗಳಲ್ಲಿ ಸಂಘ ನಡೆಸಲು ಬಹಳ ಕಷ್ಟವಾಗುತ್ತಿತ್ತು. ಈಗೀಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ನಮ್ಮಲ್ಲಿ ನಾಟಕ ಪ್ರದರ್ಶನ ಇರುವ ದಿನ ಕಲಾವಿದರ ಜೊತೆ ಅವರ ಮನೆಯವರು ಬಂದಿರುತ್ತಾರೆ, ಪ್ರೇಕ್ಷಕರೂ ಇರುತ್ತಾರೆ. ನಾಟಕ ಮುಗಿದ ಮೇಲೆ ಎಲ್ಲರಿಗೂ ಉಪಹಾರ ಅಥವಾ ಊಟದ ವ್ಯವಸ್ಥೆ ಮಾಡಿರುತ್ತೇವೆ. ಏಕೆಂದರೆ ಬಹಳ ದೂರದಿಂದ ಎಲ್ಲಾ ಕಲಾವಿದರು, ಪ್ರೇಕ್ಷಕರು ಬಂದಿರುತ್ತಾರೆ. ಅವರಿಗೆಲ್ಲ ತೊಂದರೆ ಆಗಬಾರದು. ಸಂಘ ಕಟ್ಟುವ ಮೊದಲು ಊಟ–ತಿಂಡಿ, ಬಸ್ಸಿಗೆ ಕಾಸು ಇಲ್ಲದೆ ನಾವು ಪಟ್ಟ ಪಾಡು ನಮಗೆ ಇನ್ನೂ ನೆನಪಿದೆ. ಈಗಿನ ಕಲಾವಿದರಿಗೆ ಹೀಗಾಗಬಾರದಲ್ಲವೇ’ ಎಂದು ಆಂಜನೇಯ ತಮ್ಮ ಉದ್ದೇಶವನ್ನು ತಿಳಿಸುತ್ತಾರೆ. 

ಕನ್ನಡ ಪ್ರೀತಿಯಿಂದ ಸಂಘದ ಹುಟ್ಟು
ರಂಗಭೂಮಿಯಲ್ಲಿ ಆಸಕ್ತಿ ಬರಲು ಕಾರಣ?

ಚಿಕ್ಕಂದಿನಿಂದಲೂ ನನಗೆ ಪುರಾಣ, ಇತಿಹಾಸದಲ್ಲಿ ಬಹಳ ಆಸಕ್ತಿ. ಆದರೆ ಅಭಿನಯಿಸುವುದು ಇಷ್ಟವಿರಲಿಲ್ಲ. ಮೊದಲ ಬಾರಿಗೆ ಬಿ.ವಿ. ಲಕ್ಷ್ಮಣ್‌ ಒತ್ತಡಕ್ಕೆ ಮಣಿದು ಒಂದು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದೆ. ನಂತರದ ದಿನಗಳಲ್ಲಿ ಕಂಪನಿ ನಾಟಕಗಳಲ್ಲೂ ನನಗೇ ಹೀರೋ ಪಾತ್ರ ಸಿಗುತ್ತಿತ್ತು. ಏಕೆಂದರೆ, ಪೇಮೆಂಟ್‌ ಕೇಳ್ತಾ ಇರಲಿಲ್ಲ.

ತಂಡದ ಆರಂಭದ ಬಗ್ಗೆ...
ಮೊದಲು ನಾನು ರಂಗಭೂಮಿಗೆ ಬರಬೇಕು ಅಂತ ಸಂಘ ಕಟ್ಟಲಿಲ್ಲ. ನನಗೆ ಕನ್ನಡದ ಮೇಲೆ ಬಹಳ ಪ್ರೇಮ. ಕನ್ನಡ ಪರ ಹೋರಾಟಕ್ಕಾಗಿ ಸಂಘ ಕಟ್ಟಿದೆ. ನಂತರ ಚಳವಳಿಗಳಿಗಿಂತ ನಾಟಕ ಬಹಳ ಪ್ರಭಾವಶಾಲಿ ಅನ್ನಿಸಿ ರಂಗಭೂಮಿಗೆ ದುಮುಕಿದೆ.

ಪ್ರವೇಶ ಶುಲ್ಕ ಏಕೆ ಇಲ್ಲ?
ನಾವು ಇರುವುದೇ ರಂಗಭೂಮಿಯನ್ನು ಬೆಳೆಸಲು. ಅಂಥದ್ದರಲ್ಲಿ ಪ್ರವೇಶ ಶುಲ್ಕ ಇಟ್ಟರೆ ಸಾಮಾನ್ಯ ಜನರು ಬರುವುದು ಕಷ್ಟ.

ಸಂಘದ ಹೆಸರಿನ ಹಿನ್ನೆಲೆ ಏನು?
ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಸಂಸ್ಕೃತಿಯ ಪ್ರತೀಕ. ಅವರಿಂದ ಬಹಳ ಪ್ರಭಾವಿತನಾಗಿದ್ದೇನೆ. ಸಂಘ ಸ್ಥಾಪನೆ ಆದ ನಂತರವೇ ಮಗಳು ಹುಟ್ಟಿದ್ದು. ಅವಳಿಗೂ ಶಾಂತಲಾ ಎಂದೇ ಹೆಸರಿಟ್ಟಿದ್ದೇನೆ.

ಇಂದಿನ ರಂಗಭೂಮಿಯ ಸವಾಲು­ಗಳೇನು?
ಇಂದು ಸವಾಲುಗಳು ಕಡಿಮೆ. ನಮಗೆ ಎಲ್ಲಾ ರೀತಿಯ ಸೌಲಭ್ಯಗಳು ಕೈಗೆಟುಕುವಷ್ಟು ಸಮಾಜ ಬೆಳೆದಿದೆ. ಹಾಗಾಗಿ ಇಂದು ಸವಾಲುಗಳು ಕಡಿಮೆ ಎಂದೇ ಹೇಳಬಹುದು. ಆದರೆ ರಂಗಭೂಮಿಗೆ ಪೂರಕವಾಗುವಂತಹ ಸಂಗೀತ, ಸಾಹಿತ್ಯ ಅಭ್ಯಾಸ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ನಾಟಕಗಳ ರಚನೆಯೂ ಕಡಿಮೆಯಾಗಿದೆ.

ಮುಂದಿನ ಗುರಿಗಳೇನು?
ಸಂಘದಿಂದ ತರಬೇತಿ ಕೇಂದ್ರವೊಂದನ್ನು ತೆರೆಯಬೇಕು. ಇದರ ಜೊತೆಗೆ ಒಂದು ಸಣ್ಣ ಥಿಯೇಟರ್‌ ನಿರ್ಮಿಸಬೇಕು ಎಂಬ ಆಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT