ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ಆಲೋಚನೆ ತಂದ ಪೀಕಲಾಟ

ಕ್ಯಾಂಪಸ್‌ ಕಲರವ
Last Updated 23 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಆಗ ತಾನೆ ಎಸ್ಸೆಸ್ಸೆಲ್ಸಿ ಮುಗಿದಿತ್ತು. ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆ. ಆದರೆ, ಮುಂದೆ ಯಾವ ವಿಷಯ ತೆಗೆದುಕೊಳ್ಳುವುದು? ಯಾವ ಕಾಲೇಜಿಗೆ ಸೇರುವುದು? ಎಂಬ ಪ್ರಶ್ನೆಗಳು ಎದುರಲ್ಲಿ ಇದ್ದವು.


ಕಾಲೇಜಿಗೆ ಸೇರುವ ಮೊದಲು ಕಾಲೇಜು ಚೆನ್ನಾಗಿರಬೇಕು, ಸಿನಿಮಾ  ಹೀರೋಗಳ ಥರ ಸ್ಟೈಲ್‌ ಮಾಡಿಕೊಂಡು ಮೆರೆಯಬೇಕೆಂಬ ಆಸೆ ಮನಸ್ಸಿನಲ್ಲಿ ಮನೆ ಮಾಡಿತ್ತು. ಇವೆಲ್ಲ ಆಸೆಗಳೊಂದಿಗೆ ಕೋಲಾರದ ಜೂನಿಯರ್‌ ಕಾಲೇಜ್‌ ಸೇರಿದ್ದೆ.

ಯಾವ ಕಡೆಯಿಂದ ನೋಡಿದರೂ ಕಾಲೇಜಿನ ಯಾವ ಲಕ್ಷಣಗಳೂ ಅಲ್ಲಿ ಕಾಣುತ್ತಿರಲಿಲ್ಲ. ಅದು ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿಹಾಕಲು ಬಳಸುತ್ತಿದ್ದ ಬಂಗಲೆ ಎಂದು ಎರಡು ತಿಂಗಳು ಕಳೆದ ಮೇಲೆ ಸಮಾಜ ಶಾಸ್ತ್ರದ ಟೀಚರ್‌ ಹೇಳಿದ್ದರು. ಅಂದಿನಿಂದ ನಾವು ಸ್ವಾತಂತ್ರ್ಯಕ್ಕಾಗಿ ಕಾಯುತ್ತಿದ್ದ ಖೈದಿಗಳೇ ಆಗಿಬಿಟ್ಟೆವು.

ಕ್ಲಾಸ್‌ರೂಂನ ಕೊನೆಯ ಬೆಂಚ್‌ನಲ್ಲಿ ಕುಳಿತು­ಕೊಳ್ಳಲು ನಮ್ಮ ನಮ್ಮಲ್ಲೇ  ಯಾವಾಗಲೂ ಪೈಪೋಟಿ ನಡೆಯುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ನಾವು ಕುಳಿತುಕೊಳ್ಳುತ್ತಿದ್ದ ಕೊನೆಯ ಬೆಂಚ್‌ನ ಬಳಿ ಇದ್ದ ಕಿಟಕಿಗಳು. ಆ ಕಿಟಕಿಗಳಿಗೂ ನಮ್ಮ ನಡುವೆ ಆಗುತ್ತಿದ್ದ ಪೈಪೋಟಿಗೂ ಸಂಬಂಧವಿತ್ತು. ಆ ಕಿಟಕಿಯಿಂದ ಪಕ್ಕದ ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯರು ಕಾಣಿಸುತ್ತಿದ್ದರು. ಪಾಠ ಬೇಜಾರಾದಾಗ ಆ ಹುಡುಗಿಯರ ಕಾಲೇಜಿನ ಆಸುಪಾಸು ಕಣ್ಣಾಡಿಸುವ ಉತ್ತಮ ಅವಕಾಶ ಅಲ್ಲಿ ಕೂತರೆ ಸಿಗುತ್ತಿತ್ತು.

ಶಿಕ್ಷಕರಿಗೆ ಕೊನೆಯ ಬೆಂಚ್‌ ವಿದ್ಯಾರ್ಥಿಗಳೆಂದರೆ ತರಲೆಗಳು ಎಂಬ ಭಾವನೆ ಇತ್ತು. ಯಾರು ತಪ್ಪು ಮಾಡಿದರೂ ಬೈಗುಳಕ್ಕೆ ಸಿಕ್ಕಿಕೊಳ್ಳುತ್ತಿದ್ದದ್ದು ನಾವೇ.

ಸಮಾಜಶಾಸ್ತ್ರ ಟೀಚರ್‌ ಶಾಂತಾ ಅವರು ಪಿಯುಸಿ­ಯಿಂದಲೇ ವಿದ್ಯಾರ್ಥಿಗಳನ್ನು ಸ್ವಯಂ ಉದ್ಯೋಗಿ­­ಗಳನ್ನಾಗಿ ಮಾಡಬೇಕು ಎಂದು ಬಹಳಷ್ಟು ಶ್ರಮ ಪಡುತ್ತಿದ್ದರು.
ಈ ಕುರಿತು ಹಲವಾರು ಬಾರಿ ವಿದ್ಯಾರ್ಥಿ­ಗ­ಳೊಂದಿಗೆ ಚರ್ಚಿಸಿ ಒಂದು ಒಂದು ಉದ್ಯಮವನ್ನು ತೆರೆದು, ನಮ್ಮನ್ನು ಉದ್ಯಮಿಗಳನ್ನಾಗಿ ಮಾಡಬೇಕು ಎಂಬುದು ಅವರ ಮಹಾದಾಸೆಯಾಗಿತ್ತು.

ಕೊನೆಯ ಬೆಂಚ್‌ಗೆ ಪೈಪೋಟಿ ನಡೆಸುತ್ತಿದ್ದ ನಮ್ಮ ಎದುರಾಳಿ ಗುಂಪಿನವರು, ನಮ್ಮನ್ನು ಟೀಚರ್‌ ಬಳಿ ಯಾವುದಾರೂ ಒಂದು ವಿಷಯದಲ್ಲಿ ಸಿಕ್ಕಿಸಬೇಕು ಎಂದು ಹಲವಾರು ಬಾರಿ ಪ್ರಯತ್ನಿಸಿ ಬೆಪ್ಪರಾಗಿದ್ದರು.

ಮೇಡಂ ಒಂದು ದಿನ ಕ್ಲಾಸ್‌ರೂಂನಲ್ಲಿ ಪಾಠ ಮುಗಿಸಿ, ಉದ್ಯಮದ ವಿಷಯವನ್ನು ಚರ್ಚಿಸಿದರು. ಉದ್ಯಮದಲ್ಲಿ ದಿನಬಳಕೆಯ ವಸ್ತುಗಳನ್ನು ಉತ್ಪಾದಿಸಿ ಲಾಭ ಗಳಿಸುವ ಕುರಿತು ಮಾತನಾಡಿ­ದರು. ಪ್ರತಿಯೊಬ್ಬ ವಿದ್ಯಾರ್ಥಿ ₨50 ರೂಪಾಯಿ ಹಾಕಿ ಉದ್ಯಮ ನೋಂದಣಿ ಮಾಡಬೇಕೆಂದು ಹೊರಟರು.

ಮೂರು ದಿನ ರಜೆ ಹಾಕಿ ಸ್ನೇಹಿತರೊಂದಿಗೆ ಪ್ರವಾಸ ಹೋಗಿದ್ದ ನಮಗೆ ಕಾಲೇಜಿಗೆ ಹಿಂತಿರು­ಗಿ­ದಾಗ ಶಾಕಿಂಗ್‌ ನ್ಯೂಸ್‌ ಕಾದಿತ್ತು. ಶಾಂತಾ ಮೇಡಂ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹಲವು ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದರು.

ಆದರೆ, ನಮ್ಮ ದುರದೃಷ್ಟಕ್ಕೆ ಮೇಡಂ ವಿರುದ್ಧ ಪ್ರಾಂಶುಪಾಲರಿಗೆ ದೂರು ನೀಡಿದ್ದು ನಾವೇ ಎಂದು ಕಾಲೇಜಿನಲ್ಲಿ ಪುಕಾರು ಎಬ್ಬಿಸಿದ್ದರು, ಕೊನೆಯ ಬೆಂಚ್‌ ವಿದ್ಯಾರ್ಥಿಗಳಾಗಿದ್ದರಿಂದ ಆರೋಪವನ್ನು ನಿರಾಕರಿಸುವಂತೆಯೂ ಇರಲಿಲ್ಲ.

ಈ ಕುರಿತು ಸಮಜಾಯಿಷಿ ನೀಡಲು ಹೋದ ನಮಗೆ ಮೇಡಂ ಮಾತನಾಡಲು ಅವಕಾಶ ನೀಡ­ಲಿಲ್ಲ. ‘ನನ್ನ ವಿದ್ಯಾರ್ಥಿಗಳು ನನ್ನ ಬೆನ್ನಿಗೆ ಚೂರಿ ಹಾಕು­ತ್ತಾರೆ’ ಎಂದು ನಾನು ಭಾವಿಸಿರಲಿಲ್ಲ ಎಂಬ ಅವರ ಮಾತನ್ನು ಇಂದಿಗೂ ನನಗೆ ಮರೆಯಲು ಸಾಧ್ಯವಿಲ್ಲ.

ಇದಾದ ಮೂರು ದಿನಕ್ಕೆ ಅವರು ಕಾಲೇಜಿಗೆ ಬರುವುದನ್ನು ನಿಲ್ಲಿಸಿದರು. ನಿಜ ಸಂಗತಿಯನ್ನು ಹೇಳಲು ಅವರ ದೂರವಾಣಿಗೆ ಸಂಪರ್ಕಿಸಿದರೂ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಕಾಲೇಜು ಹಲವು ಸಂತೋಷಗಳೊಂದಿಗೆ ಕೆಲವು ಮರೆಯ­ಲಾ­ಗದ ನೋವಿನ ಸಂದರ್ಭಗಳನ್ನೂ ನೀಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT