ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬ್ಬು ಚಿತ್ರಗಳಲ್ಲಿ ಸುಂದರ ಅಭಿವ್ಯಕ್ತಿ

Last Updated 23 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಉಬ್ಬುಚಿತ್ರದಲ್ಲಿ ವ್ಯಕ್ತಿಯ ಭಾವನೆಗಳನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸುವುದು ಸುಲಭವಲ್ಲ. ಉಬ್ಬುಚಿತ್ರ ಕಲಾವಿದ ಸೋಮಸುಂದರಂ ಅವರ ಕೈಯಲ್ಲಿ ಅರಳುವ ಪ್ರತಿಯೊಂದು ವ್ಯಕ್ತಿ ಕಲಾಕೃತಿಯಲ್ಲಿಯೂ ಭಾವನೆಗಳ ಅಭಿವ್ಯಕ್ತಿ ದಟ್ಟವಾಗಿ ಕಾಣುತ್ತದೆ.

ಯಾವುದೇ ವಯಸ್ಸಿನ ವ್ಯಕ್ತಿ ಚಿತ್ರವನ್ನಾದರೂ ಸನ್ನಿವೇಶಕ್ಕೆ ತಕ್ಕುದಾಗಿ ರೂಪಿಸುವ ಕೌಶಲ ಅವರಿಗೆ ಸಿದ್ಧಿಸಿದೆ.ನೋವು, ನಲಿವು, ಕೋಪ, ತಾಪ, ದ್ವೇಷ ಅಸೂಯೆಯ ಚಿತ್ರಣಗಳು ಮೊದಲ ನೋಟಕ್ಕೇ ದಕ್ಕುವುದು ಅವರ ನೈಪುಣ್ಯಕ್ಕೆ ಸಾಕ್ಷಿ. ಹಾಗಾಗಿಯೇ ಅವರ ಪ್ರತಿಯೊಂದು ಉಬ್ಬುಚಿತ್ರವೂ ನೋಡುಗರ ಮನ ಸೆಳೆಯುತ್ತವೆ, ಮುದವನ್ನೂ ನೀಡುತ್ತವೆ.

ಪೆನ್ಸಿಲ್‌ನಲ್ಲಿ ಗೆರೆ ಎಳೆದು ಅಳಿಸಿ ಮತ್ತೆ ಹೊಸ ರೂಪ ನೀಡುವಷ್ಟು ಸುಲಭವಲ್ಲ ಉಬ್ಬುಚಿತ್ರ. ಪ್ರತಿ ಕಲಾಕೃತಿಗೂ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ತಾಳ್ಮೆ ಕೆಟ್ಟರೆ ಕೆಲಸವಾಗದು ಎನ್ನುತ್ತಾರೆ ಸೋಮಸುಂದರಂ.

ಸುಮಾರು 2ರಿಂದ 4 ಮಿಲಿ ಮೀಟರ್‌ ದಪ್ಪದ ಐದಾರು ಅಂಗುಲದ ಸಣ್ಣ ಸಣ್ಣ ಲೋಹದ ಹಾಳೆಯನ್ನು ಉಬ್ಬುಚಿತ್ರಕ್ಕೆ ಅವರು ಬಳಸುತ್ತಾರೆ. ತಮಗೆ ಬೇಕಾದ ಚಿತ್ರವನ್ನು ಹಾಳೆಯ ಮೇಲಿಟ್ಟು ನಕಲು ಮಾಡಿಕೊಳ್ಳುತ್ತಾರೆ. ನಕಲು ಮಾಡುವುದು ಎಂದರೆ ಲೋಹದ ಹಲಗೆಯಲ್ಲಿಟ್ಟಆ ಚಿತ್ರದ ಹೊರ ಆವರಣವನ್ನು ಸೂಜಿ ಮೊನೆಯಂತಿರುವ ಉಕ್ಕಿನ ಮೊಳೆಯಿಂದ ಗುರುತಿಸುವ ನಾಜೂಕಿನ ಕೆಲಸ. ಆ ಚಿತ್ರವನ್ನು ತೆಗೆದಾಗ ಉಳಿಯುವುದೇ ಸ್ಕೆಚ್‌.

ನಂತರ, ಎಲ್ಲೆಲ್ಲಿ ಉಬ್ಬು ಭಾಗವನ್ನು ತೆಗೆಯಬೇಕೋ ಅಲ್ಲೆಲ್ಲ ಉಕ್ಕಿನ ಉಳಿಯಿಂದ ಕೆತ್ತುತ್ತಾರೆ. ಇದು ತುಂಬಾ ಕಷ್ಟಕರವಾದ ಮತ್ತಷ್ಟೇ ನಾಜೂಕಾದ ಕುಸುರಿ ಕೆಲಸ. ವಿವಿಧ ನಮೂನೆಯ ಅರಗಳಿಂದ (ಸಾಣೆ ಕೊಡುವಂತಹ ಪರಿಕರ) ಉಜ್ಜುತ್ತಲೇ ರೂಪ ಕೊಡುತ್ತಾರೆ.

‘ಕೆಲವು ಕಲಾಕೃತಿ ಸಿದ್ಧಗೊಳ್ಳಲು ತಿಂಗಳು ಹಿಡಿಯುವುದೂ ಇದೆ. ಅನವಶ್ಯಕ ಭಾಗವನ್ನು ಕೊರೆಯಲು ಮತ್ತು ಕತ್ತರಿಸಲು ಯಂತ್ರವನ್ನೂ ಬಳಸುತ್ತೇನೆ. ನಂತರದ್ದು ಉಜ್ಜಿ ಉಜ್ಜಿ ಉಬ್ಬು ತಗ್ಗಿಗೆ ಬೇಕಾದಂತೆ ನಯಗೊಳಿಸುವ ಪ್ರಕ್ರಿಯೆ. ಕೊನೆಯ ಹಂತದಲ್ಲಿ ಹೊಳಪು ನೀಡುವುದು. ಉಬ್ಬುಶಿಲ್ಪ ತಯಾರಿಸಲು ಕಲಾವಿದನಿಗೆ ಶ್ರದ್ಧೆ, ಶ್ರಮ ಜತೆಗೆ ತಾಳ್ಮೆ ಬೇಕಾಗುತ್ತದೆ.ಇಷ್ಟೂ ಹಂತಗಳನ್ನು ಸಾವಧಾನದಿಂದ ಮಾಡದಿದ್ದರೆ ಕಲಾಕೃತಿ ವಿರೂಪಗೊಳ್ಳುವ ಅಪಾಯವಿರುತ್ತದೆ' ಎನ್ನುತ್ತಾರೆ, ಸೋಮಸುಂದರಂ.

ದೇವಸ್ಥಾನ, ಗುಡಿ, ಗೋಪುರಗಳ ದ್ವಾರ, ಕಿಟಕಿಗಳಲ್ಲಿ ಮರದ ಕೆತ್ತನೆ ಮತ್ತು ದೇವರ ಕವಚಗಳಲ್ಲಿ ಹಿತ್ತಾಳೆ, ತಾಮ್ರ, ಬೆಳ್ಳಿ ಮತ್ತು ಚಿನ್ನದ ಉಬ್ಬು ಚಿತ್ರಗಳನ್ನು ಬಳಸಲಾಗುತ್ತಿತ್ತು. ಇದು ಪ್ರಾಚೀನ ಕಲೆಗಳಲ್ಲೊಂದು. ಎಷ್ಟು ವರ್ಷ ಕಳೆದರೂ ಇವು ವಿರೂಪವಾಗದೇ ಇರುವ ಕಾರಣ ನೂರಾರು ವರ್ಷ ಹಳೆಯ ಕಲಾಕೃತಿಗಳೂ ಯಥಾವತ್‌ ಉಳಿದಿರುವುದುಂಟು ಎಂದು ಅವರು ವಿವರಿಸುತ್ತಾರೆ.

ಕಸಬುದಾರಿಕೆಯಲ್ಲಿ ಇಷ್ಟೊಂದು ಪರಿಣತಿ ಪಡೆದಿರುವ ಸೋಮಸುಂದರಂ, ಈ ಕಲೆಯನ್ನುಶಾಸ್ತ್ರೀಯವಾಗಿ ಕಲಿತವರಲ್ಲ. ಬೇರೆ ಕಲಾವಿದರು ಬಿಡಿಸಿದ ಚಿತ್ರಗಳನ್ನು ನೋಡಿ ಅದರ ಬಗ್ಗೆ ಮಾಹಿತಿ ಪಡೆದು ಸ್ವಂತ ಪರಿಶ್ರಮದಿಂದ ಕಲಿತವರು.

ಸೋಮಸುಂದರಂ,ಬಿಇಎಂಎಲ್‌ ಕಾರ್ಖಾನೆಯಲ್ಲಿ ಮೆಕ್ಯಾನಿಕಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಲೇ ಚಿತ್ರಕಲೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು ಬಂದವರು. ಶಿವ–ಪಾರ್ವತಿ, ಗಣಪತಿ, ಬುದ್ಧ, ಯೇಸುಕ್ರಿಸ್ತ, ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಪ್ರಾಣಿ, ಪಕ್ಷಿ, ಮಾನವನ ನಾನಾ ಭಾವಾಭಿವ್ಯಕ್ತಿಗಳನ್ನು ಉಬ್ಬು ಚಿತ್ರದಲ್ಲಿ ಅವರು ಮೂಡಿಸಿದ್ದಾರೆ. ಈಗ ನಿವೃತ್ತರಾಗಿರುವಸೋಮಸುಂದರಂ ಹವ್ಯಾಸಕ್ಕಾಗಿ ಪೂರ್ಣಾವಧಿಯನ್ನು ಮೀಸಲಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT