ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲಿ ಕಲೆಯ ಬೆರಗು

ಹವ್ಯಾಸ
Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಜಯನಗರ ನಿವಾಸಿ ಬಿ.ಜಿ.ಸರೋಜಾ ರಾಜ್ ಸದಾ ಕ್ರಿಯಾಶೀಲರು. ಅಮ್ಮನಿಂದ ಬಳುವಳಿಯಾಗಿ ಬಂದ ಕರಕುಶಲ ಕಲೆಯನ್ನು ಬೆಳಗಿಸುತ್ತಿದ್ದಾರೆ. 
 
ಅವರ ಸೃಷ್ಟಿಯಲ್ಲಿ ಅರಳುವ ಕಲಾವಸ್ತುಗಳೆಲ್ಲ ಕಾಗದದ ಉತ್ಪನ್ನಗಳು ಎಂಬುದು ಖುಷಿಯ ಸಂಗತಿ. ಜೊತೆಗೆ ಸೆಣಬಿನ ಚೀಲದ ಚೌಕದ ತೂತುಗಳಲ್ಲಿ ಉಲ್ಲನ್‌ ದಾರದಿಂದ ಆನೆ, ಜಿಂಕೆ, ನಂದಿಬಟ್ಟಲ ಹೂ, ರಥ, ಹಣ್ಣುಗಳ ಕಸೂತಿ ಹೆಣೆದು ಗೋಡೆಯ ಅಲಂಕಾರದ ಮ್ಯಾಟ್‌, ಹಾಗೆಯೇ ಟೇಬಲ್‌/ಟಿಪಾಯಿ ಮ್ಯಾಟ್‌ಗಳು, ನೆಲಹಾಸುಗಳನ್ನೂ ಸುಂದರವಾಗಿ ಹೆಣೆಯುತ್ತಾರೆ. 
 
ರದ್ದಿ ಕಾಗದದ ಕಡ್ಡಿಗಳಿಂದ ಪೆನ್‌/ಸ್ಟ್ಯಾಂಡ್‌ ಮತ್ತು ಹೂದಾನಿ, ಒನ್‌ ಸೈಡ್‌ ಕಲರ್ ಪೇಪರ್‌ನಿಂದ ಒನಪಿನ  ಪುಷ್ಪಗಳು ಅರಳುತ್ತವೆ. ಇದೇ ರೀತಿಯ  ಪೇಪರ್‌ನಿಂದ ತಯಾರಾದ ಪೆನ್‌ ಸ್ಟ್ಯಾಂಡ್‌ ಅಂತೂ ವಿದೇಶಿ ಯುವತಿಯ ನಿಲುವಂಗಿಯನ್ನು ಹೋಲುತ್ತದೆ. 
 
**
ಬೆಲ್ಲದ ಅಚ್ಚಿನ ಪೊಟ್ಟಣ
ಕೆ.ಜಿ. ಕಾರ್ಡ್‌ ಪೇಪರ್‌ನಲ್ಲಿ ತಯಾರಿಸಿದ ಬೆಲ್ಲದ ಅಚ್ಚಿನ ಪೊಟ್ಟಣವಂತೂ ಮಕ್ಕಳಿಗೂ ಖುಷಿ ನೀಡುತ್ತದೆ. ಷಟ್ಕೋನ ಆಕೃತಿ ಹೊಂದಿರುವ ಇದು ತೆರೆಯುವ ರೀತಿ ಮುದ ನೀಡುವಂತದ್ದು. ಮಕ್ಕಳು ಇದರಲ್ಲಿ ತಮ್ಮ ಪುಟ್ಟ ಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಬಹುದು. 
ದಿನಪತ್ರಿಕೆಯಿಂದ ಪೆನ್‌ಸ್ಟ್ಯಾಂಡ್‌
ಸರೋಜಾ ಅವರ ರಚನೆಯ ಹಳೆಯ ದಿನಪತ್ರಿಕೆಯಿಂದ ತಯಾರಿಸುವ ಪೆನ್‌ ಸ್ಟ್ಯಾಂಡ್‌ ಮಕ್ಕಳಿಗೆ ವಿಶೇಷ ಆಕರ್ಷಣೆ ನೀಡುತ್ತದೆ.
 
ಹಳೆಪತ್ರಿಕೆಯನ್ನು ಉದ್ದನೆಯ ನಿಟ್ಟಿಂಗ್‌ ಕಡ್ಡಿ ಅಥವಾ ಪೊರಕೆ ಕಡ್ಡಿಗೆ ಸ್ವಲ್ಪ ಬಿಗಿಯಾಗಿ ಸುತ್ತುತ್ತಾರೆ. ಬಳಿಕ ತುದಿ ಹಿಡಿದುಕೊಂಡು ನಿಟ್ಟಿಂಗ್ ಕಡ್ಡಿ ಅಥವಾ ಪೊರಕೆ ಕಡ್ಡಿಯಿಂದ ಬೇರ್ಪಡಿಸುತ್ತಾರೆ. ಈಗ ಬಲಿಷ್ಠ ಕಾಗದದ ಕೊಳವೆಕಡ್ಡಿ ಲಭ್ಯವಾಗುತ್ತದೆ. ಇಂತಹುದೇ ಹತ್ತೆಂಟು ಕೊಳವೆಕಡ್ಡಿಗಳನ್ನು ಮಾಡಿಕೊಂಡ ನಂತರ ಪೆನ್‌ಸ್ಟ್ಯಾಂಡ್‌ನ ಎತ್ತರಕ್ಕೆ ಅನುಗುಣವಾಗಿ ಹೆಚ್ಚು ಕಾಗದದ ಕಡ್ಡಿಗಳನ್ನು ಬಳಸುತ್ತಾರೆ.
 
ಬಳಿಕ ಒಂದು ಹಳೆಯ ರಟ್ಟು ತೆಗೆದುಕೊಂಡು ಅದನ್ನು 8X8 ಸೆಂ.ಮೀ. ಅಳತೆಗೆ ಚೌಕವಾಗಿ ಅದನ್ನು ಕತ್ತರಿಸಿಕೊಳ್ಳುತ್ತಾರೆ. ಅದರ ನಾಲ್ಕೂ ಮೂಲೆಗೆ ಮಧ್ಯಭಾಗದ ತನಕ ಫೆವಿಕಾಲ್‌ ಮೂಲಕ ಗೆರೆ ಎಳೆದು, ಅದರ ಮೇಲೆ ಉದ್ದದ ಕಡ್ಡಿಯ ಸ್ವಲ್ಪ ಭಾಗವಿಟ್ಟು, ಬಳಿಕ ನಾಲ್ಕೂ ಮೂಲೆಗೂ ಸೇರಿಸುತ್ತ, ಬಾಗಿಸುತ್ತ, ಎತ್ತರಿಸಿದರೆ ಪೆನ್‌ಸ್ಟ್ಯಾಂಡ್‌ ಸಿದ್ಧ. 
ನಡುವೆ ಫೆವಿಕಾಲ್‌ ಹಚ್ಚುವ ಅಗತ್ಯವಿಲ್ಲ. ನೂರು ಅಗರಬತ್ತಿಯ ಕೊಳವೆ ಸಿಕ್ಕಿದರೆ ಅದರ ಸುತ್ತಲೂ ಕೊಳವೆಗಳನ್ನು ಅಂಟಿಸಿದರೆ ಸುಲಭದ ಪೆನ್‌ಸ್ಟ್ಯಾಂಡ್‌ ರಚನೆಯಾಗುತ್ತದೆ. 
 
ಇದೇ ತಂತ್ರದಲ್ಲಿ ಒನ್‌ ಸೈಡ್‌ ಕಲರ್‌ ಪೇಪರ್‌ನ ಕೊಳವೆಗಳಿಗೆ ದಾರದಿಂದ ಹೆಣೆದು ಪುಟ್ಟ ಬ್ಯಾಗ್‌ ತಯಾರಿಸಿ, ಅದಕ್ಕೆ ಎರಡೆರಡು ಬಳೆಗಳನ್ನು ಜೋಡಿಸಿ, ಒಳಗೆ ಅರಿಶಿಣ–ಕುಂಕುಮವಿಟ್ಟು ಗೃಹಪ್ರವೇಶ, ಮದುವೆ ಸಂದರ್ಭದಲ್ಲಿ ತಾಂಬೂಲದ ಜೊತೆ ಹೆಂಗೆಳೆಯರಿಗೆ ನೀಡುತ್ತಾರೆ ಸರೋಜಾ.
 
ನಲಿಯುವ ಟಿಶ್ಯೂ ಪೇಪರ್‌ ಪುಷ್ಪಗಳು
ಟಿಶ್ಯೂ ಪೇಪರ್‌ನಿಂದ ಸರೋಜಾ ಅವರು ತಯಾರಿಸುವ ಪುಷ್ಪಗಳಂತೂ ಮೃದು, ಮಂದಹಾಸ ಬೀರುವ ಸುಂದರ ಹೂವುಗಳಂತೆ ಕಂಗೊಳಿಸುತ್ತವೆ. ಸೌಂದರ್ಯದಲ್ಲಿ ನೈಜ ಹೂವಿಗೆ ಸ್ಪರ್ಧೆಯನ್ನು ಒಡ್ಡುತ್ತವೆ. 
 
ಇವುಗಳಿಗೆ ಫೆವಿಕಾಲ್‌ ಬಳಸುವುದಿಲ್ಲ. ನಮ್ಮಲ್ಲಿ ಬಿಳಿಯ ಬಣ್ಣದ ಟಿಶ್ಯೂ ಪೇಪರ್‌ ಧಾರಳವಾಗಿ ಸಿಗುತ್ತದೆ. ಬಣ್ಣಬಣ್ಣದ ಇಂತಹ ಹೂಗಳ ತಯಾರಿಕೆಗೆಂದೇ ವಿದೇಶದಲ್ಲಿರುವ ಪುತ್ರನಿಂದ ವರ್ಣಮಯ ಟಿಶ್ಯೂ ಪೇಪರ್‌ ತರಿಸಿಕೊಂಡು ಕೆಂಪು, ಹಸಿರು, ಹಳದಿ, ಕೇಸರಿ ಪುಷ್ಪಗಳನ್ನು ತಯಾರಿಸಿ, ಹಳೆಯ ದಿನಪತ್ರಿಕೆಯ ಕಾಗದದಲ್ಲಿ ತಯಾರಾದ ಹೂದಾನಿಯಲ್ಲಿಟ್ಟು, ಅಲಂಕರಿಸುತ್ತಾರೆ. 
 
ವರ್ಣಮಯ ಅಲಂಕಾರಿಕ ಕಾಗದದಿಂದ ತಯಾರಿಸುವ ದೋಣಿ, ಎರಡು ಗಾಜಿನ ಬಳೆಗಳನ್ನು ಒಂದರ ಮೇಲೆ ಒಂದನ್ನಿಟ್ಟು ಉಲ್ಲನ್‌ ದಾರದಿಂದ ಬಂಧಿಸಿ, ಅವುಗಳ ಮೇಲೆ ಮುತ್ತು, ಹರಳಿನಿಂದ ಅಲಂಕರಿಸಿದರೆ ಸಮಾರಂಭಗಳಲ್ಲಿ ಮ್ಯಾಚಿಂಗ್‌ ಸೀರೆ, ಡ್ರೆಸ್‌ಗಳಿಗೆ ಪೂರಕವಾಗಿ ಮಿಂಚಬಹುದು.
 
ತಾಯಿ ಆನೆ ಮರಿಯ ಜೊತೆ ನೀರಿನಲ್ಲಿ ಆಟವಾಡುವ ಸುಂದರ ಚಿತ್ರವನ್ನು ಸೆಣಬಿನ ಬಟ್ಟೆಯಲ್ಲಿ ಉಲ್ಲನ್‌ ಮೂಲಕ ಹೆಣೆದು ಮೊಮ್ಮಗನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಗಾಜಿನ ಫೋಟೋ ಫ್ರೇಂ ಅಳವಡಿಸಿ ಮೊಮ್ಮಗನ ಕೊಠಡಿಯಲ್ಲಿ ತೂಗು ಹಾಕಿದ್ದಾರೆ. ತಮ್ಮ  ಕರಕುಶಲ ಕಲೆಗೆ ಹೊಸ ಆಯಾಮ ನೀಡಲು ಸೊಸೆ ವಿದ್ಯಾ ಕಿರಣ್‌ ಸ್ಫೂರ್ತಿ ಎನ್ನುತ್ತಾರೆ ಸರೋಜಾ ರಾಜ್‌. 
ಸಂಪರ್ಕ ಸಂಖ್ಯೆ– 9986660336
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT