ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತೋಟಕ್ಕೆ ‘ಕಸ’ಗೊಬ್ಬರದ ಜೀವಾಮೃತ

Last Updated 13 ಸೆಪ್ಟೆಂಬರ್ 2015, 19:34 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆದ ಕಸದ ಸಮಸ್ಯೆ ಇದ್ದುದೇ. ಒಮ್ಮೆ ಸರಿಹೋಯಿತು ಎಂದುಕೊಳ್ಳುವಾಗಲೇ ಮತ್ತೆ ಎದುರಾಗುವ ನಿರಂತರ ಚಿಂತೆ ಇದೇ. ಹೀಗೆ ಮನೆಯಲ್ಲಿನ ಕಸದ ಡಬ್ಬಿಗಳೆಲ್ಲ ತುಂಬಿ ದುರ್ವಾಸನೆ ಬರಲು ಶುರುವಾದಾಗ ಕಂಡುಕೊಂಡ ಮಾರ್ಗವೇ ‘ಕಸ’ಗೊಬ್ಬರ ಎನ್ನುವ ಜೀವಾಮೃತ.

ಮನೆಯ ಕಸದ ಸಮಸ್ಯೆಗೂ ಮುಕ್ತಿ, ಕೈತೋಟಗಳಿಗೆ ಬೇಕಿರುವ  ಗೊಬ್ಬರದ ಅಗತ್ಯಕ್ಕೂ ಒಂದು ದಾರಿ ಇದು. ಅಡಿಗೆ ಮನೆ ತ್ಯಾಜ್ಯದಿಂದಲೇ ಕೈತೋಟಕ್ಕೆ ಬೇಕಿರುವ ಎಲ್ಲ ಆವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು.  ಅದರಿಂದ ಸಮೃದ್ಧ ತರಕಾರಿ, ಹೂ, ಹುಲುಸಾದ ಹುಲ್ಲುಹಾಸು ಬೆಳೆದುಕೊಳ್ಳಬಹುದು. 

ಮನೆಯ ಅಂಗಳದಲ್ಲಿರುವ ಪಾಟ್‌ಗಗಳಿಗೆ, ಕೈತೋಟದಲ್ಲಿ ಬೆಳೆದ ಬಾಳೆ, ಹೀರೆ, ಸೀಮೆಬದನೆ, ಮಲ್ಲಿಗೆ-ಪಪ್ಪಾಯಗಳಿಗೆ ಎಂಥ ಗೊಬ್ಬರ ಬಳಸಬೇಕು ಎಂಬುದೇ ಸಮಸ್ಯೆಯಾಗಿತ್ತು.  ಬೆಂಗಳೂರಿನಂಥ ನಗರದಲ್ಲಿ ಸಗಣಿ ಗೊಬ್ಬರ ಸಿಗುವುದಂತೂ ಕನಸಿನ ಮಾತೆ ಸರಿ.

ರೆಡಿಮೇಡ್ ಸಾವಯವ ಗೊಬ್ಬರ ತುಂಬ ಖರ್ಚಿನದ್ದಾಗಿದ್ದು, ಅದು ಸಿಗುವಲ್ಲಿಗೆ ಹೋಗಿ ತರುವುದು, ಉಪಯೋಗಿಸುವುದು ಎಂದರೆ ಅದೊಂದು ರಗಳೆ ಕೆಲಸವೇ ಸರಿ. ಇತ್ತ ಕೈತೋಟಕ್ಕೆ ಸಾವಯವ ಗೊಬ್ಬರದ ಕೊರತೆ-ಅತ್ತ ಮನೆಯ  ಕಸ ಮನೆಯಲ್ಲೇ ದುರ್ವಾಸನೆ ಬೀರುವ ದುರ್ದಾನು. ಇದಕ್ಕೊಂದು ದಾರಿ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯೋಗವೊಂದಕ್ಕೆ ಇಳಿದಾಗ ಈ ‘ಜೀವಾಮೃತ ಬ್ಯಾಂಕ್’ ಹುಟ್ಟಿಕೊಂಡಿತ್ತು.

ಹೀಗೆ ಮಾಡಿ
ಕೈತೋಟದ ಮೂಲೆಯೊಂದರಲ್ಲಿ ಮುಚ್ಚಳವಿರುವ ಸುಮಾರು 200 ಲೀಟರ್ ಪ್ಲಾಸ್ಟಿಕ್ ಡ್ರಂ ಅನ್ನು ಸುಮಾರು ಎರಡು ಅಡಿ ಎತ್ತರದ ಕಟ್ಟೆಯ ಮೇಲೆ ಇಡಬೇಕು.  ಈ ಕಟ್ಟೆಯನ್ನು ಸಿಮೆಂಟ್ ಬ್ಲಾಕ್‌ಗಳನ್ನು ಜೋಡಿಸಿ ಇಡುವ ಮೂಲಕ ಸುಲಭವಾಗಿ ಮಾಡಿಕೊಳ್ಳಬಹುದು. ಡ್ರಂನ ತಳಭಾಗಕ್ಕೆ ನಲ್ಲಿಯೊಂದನ್ನು ಜೋಡಿಸಬೇಕು. ಇದರಿಂದ ಒಸರುವ ‘ಜೀವಾಮೃತ’ವನ್ನು ಸಂಗ್ರಹಿಸಲು ಅದರ ಕೆಳಗೆ ಬಕೆಟು ಇರಿಸಬೇಕು.  ಈ ನಲ್ಲಿಯನ್ನು ಯಾವಾಗಲೂ ತೆರೆದಿಟ್ಟಿರಬೇಕು. ಇಷ್ಟಾದರೆ ಶೇ 90ರಷ್ಟು ತಯಾರಿ ಮುಗಿದಂತೆ. 

ಈಗ ಡ್ರಂಗೆ ಮನೆ ಮತ್ತು ತೋಟದಲ್ಲಿ ಉತ್ಪಾದನೆಯಾಗುವ ಕೊಳೆಯುವ ಕಸವನ್ನು ಹಾಕುತ್ತ ಬರಬೇಕು. (ಪ್ಲಾಸ್ಟಿಕ್, ಪೇಪರ್, ಬೆಂಡು, ಗಾಜು,ಮರದ ತುಂಡುಗಳು ಮುಂತಾದ ಕೊಳೆಯದೇ ಇರುವ ವಸ್ತುಗಳನ್ನು ಹಾಕಬಾರದು) ನಂತರ  ದಿನಬಿಟ್ಟು ದಿನ  ಡ್ರಂಗೆ ಮುಕ್ಕಾಲು ಬಕೆಟ್ ನೀರನ್ನು ಹಾಕುತ್ತ ಬರಬೇಕು.  ಹೀಗೆ ಹಾಕಿದ ನೀರು ಡ್ರಂನಲ್ಲಿರುವ ಕೊಳೆತ ಕಸದ ಮೂಲಕ ಹಾದು ಖನಿಜಯುಕ್ತ ಜೈವಿಕ ಜೀವಾಮೃತವಾಗಿ ಹೊರಬರುತ್ತದೆ. ಇದು ಕೆಳಗೆ ಇಟ್ಟಿರುವ ಬಕೆಟ್‌ನಲ್ಲಿ ಸಂಗ್ರಹಗೊಳ್ಳುತ್ತದೆ.

ಈಗ ಈ ಜೀವಾಮೃತವನ್ನು ಅವಶ್ಯಕತೆಗೆ ತಕ್ಕಂತೆ ಕೈತೋಟದಲ್ಲಿ ಬೆಳೆದ ಬೆಳೆಗಳಿಗೆ, ಹೂವಿನ ಕುಂಡಗಳಿಗೆ,ಹುಲ್ಲು ಹಾಸಿಗೆಗೆ  ಉಪಯೋಗಿಸಿದರೆ ನಳನಳಿಸುವಂತೆ ಬೆಳೆಯುವುದನ್ನು ನೋಡಬಹುದು. 4-5 ಜನರಿರುವ ಮನೆಯಲ್ಲಿ ಉತ್ಪನ್ನವಾಗುವ ಕಸದಿಂದ ಈ ಡ್ರಂ ತುಂಬಲು ಒಂದೂವರೆಯಿಂದ ಎರಡು  ವರ್ಷ ಬೇಕು. ಆಗ ಈ ಡ್ರಂನ್ನು ತಲೆ ಕೆಳಗೆ ಮಾಡಿ ಖಾಲಿ ಮಾಡಬೇಕು. ಕೊಳೆತ ಗೊಬ್ಬರವನ್ನು ಸ್ಥಳವಿದ್ದರೆ ಕೈತೋಟದ ಮೂಲೆಯಲ್ಲಿ ಗುಂಡಿ ತೆಗೆದು ಹೂಳಬಹುದು ಇಲ್ಲವೇ ಅಲ್ಲೇ ಒಂದೆಡೆ ಹರಡಿ ಒಣಗಿಸಿಕೊಂಡು ಮತ್ತೆ ತೋಟದ ತುಂಬ ಹರಡಿ ಮಣ್ಣನ್ನು ಫಲವತ್ತಾಗಿಸಿಕೊಳ್ಳಬಹುದು. 

ಅನುಕೂಲತೆಗಳು
*ಹೆಚ್ಚಿನ ಶ್ರಮ ಬೇಡುವುದಿಲ್ಲ
*ಕಸದ ಗಾಡಿಗಳಿಗೆ ಕಾಯುತ್ತ ಕೂಡುವ ತೊಂದರೆ ಇಲ್ಲ
*ಪಾಲಿಕೆ/ನಗರಸಭೆಗಳ ಮೇಲಿನ ಕಸದ  ನಿರ್ವಹಣೆಯ ಭಾರ ತಪ್ಪುವುದು
*ದಿನ ಬಿಟ್ಟು ದಿನ ಸಿಗುವ ‘ಜೀವಾಮೃತ’ ಕೈತೋಟದ ಬೆಳೆಗೆ ಬೇಕಾಗುವ ಸಸ್ಯಜನ್ಯ, ರಾಸಾಯನಿಕ ಮುಕ್ತ ಗೊಬ್ಬರದ ‘ಬ್ಯಾಂಕ್’ ನಂತೆ ಕೆಲಸ  ಮಾಡುತ್ತದೆ.
*ಇದರಲ್ಲಿ ಬೆಳೆದ ಸೊಪ್ಪು,ತರಕಾರಿ, ಪಪ್ಪಾಯ, ಬಾಳೆಹಣ್ಣುಗಳ ರುಚಿ ವಿಶಿಷ್ಟವಾಗಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT