ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಲೀಲೆ ವಿಧವಿಧ ನಾದದಲೆ

Last Updated 20 ಫೆಬ್ರುವರಿ 2016, 13:05 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಗಣೇಶ ಹಬ್ಬ ಎಂದರೆ ಹಾಡು, ಕುಣಿತ, ನೃತ್ಯ, ನಗೆಕೂಟಗಳ ಒಂದು ಭರಪೂರ ಉತ್ಸವ. ಈ ಹಬ್ಬಕ್ಕೆಂದೇ ಮೈಕೊಡವಿಕೊಂಡು ಎದ್ದೇಳುವ ವಾದ್ಯತಂಡಗಳು ವರ್ಷಕ್ಕಾಗುವಷ್ಟು ದುಡಿದುಕೊಂಡು ಸಂಭ್ರಮಿಸುವ ಗಳಿಗೆಯದು...

ಬೆಂಗಳೂರಿನಲ್ಲಿ ಗಣೇಶನ ಹಬ್ಬ ಎಂದರೆ ಅದು ಬರೋಬ್ಬರಿ ಒಂದೂವರೆ ತಿಂಗಳು ನಡೆಯುವ ಸಾಂಸ್ಕೃತಿಕ ಉತ್ಸವ. ವಿಘ್ನೇಶನ ಹೆಸರಿನಲ್ಲಿ ಸೆಪ್ಟೆಂಬರ್‌ ಎರಡನೇ ವಾರದಿಂದ ಅಕ್ಟೋಬರ್‌ ಕೊನೆಯವರೆಗೂ  ಆರ್ಕೆಸ್ಟ್ರಾ, ಅನ್ನಸಂತರ್ಪಣೆ, ನಗೆ ಹಬ್ಬ, ನೃತ್ಯ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. 

ಬಹುತೇಕ ಕಡೆ ಗಣೇಶ ವಿಸರ್ಜನೆ ಮಾಡಿ ಹಬ್ಬ ಮುಗಿಸುವ ವೇಳೆ, ಕೆಲವು ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಠಾಪನೆ ಆರಂಭವಾಗುತ್ತದೆ. ಮೂರು, ಐದು, ಏಳು,  ಒಂಬತ್ತು ದಿನಗಳ ಗಣೇಶ ವಿಸರ್ಜನೆಗಳೆಲ್ಲಾ ಮುಗಿದು, ಹಬ್ಬದ ಅಬ್ಬರ ಸ್ವಲ್ಪ ಕಡಿಮೆಯಾದಾಗ ಹೀಗೆ ಗಣೇಶನನ್ನು ಕೂರಿಸುವುದಕ್ಕೂ ಕಾರಣ ಇದೆ. ಆ ವೇಳೆಗೆ ಪೆಂಡಾಲ್‌ ಬಾಡಿಗೆ ದರ ಕಡಿಮೆಯಾಗಿರುತ್ತದೆ. ಆರ್ಕೆಸ್ಟ್ರಾ ತಂಡಗಳು ಸುಲಭವಾಗಿ ಸಿಗುತ್ತವೆ.

ಹೀಗೆ ಹಬ್ಬ ಮುಗಿದ ಮೇಲೆ ಪ್ರತಿಷ್ಠಾಪನೆಗೊಳ್ಳುವ ಗಣೇಶ ಅಕ್ಟೋಬರ್‌ ಕೊನೆಯವರೆಗೂ ಇದ್ದು, ನಗರವಾಸಿಗಳಿಗೆ ಭರಪೂರ ಮನರಂಜನೆ ನೀಡಿ ವಿದಾಯ ಹೇಳುತ್ತಾನೆ. ಬಹುಭಾಷಿಕರ ಸಂಗಮವಾದ ಬೆಂಗಳೂರಿನಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳು ಕೂಡ ಭಾಷಾ ವೈವಿಧ್ಯದಿಂದ ಗಮನ ಸೆಳೆಯುತ್ತವೆ.  ಕೊನೆಯಲ್ಲಿ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆ ನಗರದ ಬಹು ಸಂಸ್ಕೃತಿಯ ಶ್ರೀಮಂತಿಕೆಗೆ ಕನ್ನಡಿ  ಹಿಡಿಯುತ್ತದೆ.

ಗಣೇಶ ಮೆರವಣಿಗೆಯಲ್ಲಿ ಕೇರಳದ ಚೆಂಡೆ ವಾದ್ಯವನ್ನು ಆಲಿಸಬಹುದು.  ತಮಿಳುನಾಡಿನ  ವಾನಂಬಾಡಿ ತಮಟೆ ಸದ್ದಿಗೆ ಹೆಜ್ಜೆ ಹಾಕಬಹುದು. ವಿಜಾಪುರದ ಕೀಲುಕುದುರೆ ನಾಟ್ಯಕ್ಕೆ ಕಾಲು ಕುಣಿಸಬಹುದು,  ಡೋಲು ಕುಣಿತ, ಹುಲಿ ಕುಣಿತ, ಬೊಂಬೆಯಾಟ, ಕೋಲಾಟ ತಂಡಗಳ ಜತೆಗೆ ಪೈಪೋಟಿಗೆ ಇಳಿಯಬಹುದು. ಬೇಸರವಾದರೆ ಶ್ರೀರಾಂಪುರದ ಪಕ್ಕಾ ಲೋಕಲ್‌ ಅಣ್ಣಮ್ಮನ ತಮಟೆ ವಾದ್ಯಕ್ಕೆ, ಟಪ್ಪಾಂಗುಚ್ಚಿ ಹಾಡಿಗೆ ಮನಸೋಇಚ್ಛೆ ಕುಣಿಯಬಹುದು. ಸ್ವಲ್ಪ ಸ್ಟ್ಯಾಂಡರ್ಡ್‌ ಎನಿಸುವ  ಸಂಚಾರಿ ಮ್ಯೂಸಿಕ್‌ ಬ್ಯಾಂಡ್‌ನ ಸಂಗೀತವನ್ನು  ಕಿವಿತುಂಬಿಸಿಕೊಳ್ಳಬಹುದು. ಒಟ್ಟಿನಲ್ಲಿ ವಿಸರ್ಜನೆ ಮೆರವಣಿಗೆ ವೇಳೆ ವಾದ್ಯಗಳೆಲ್ಲಾ ಮುಗಿಲುಮುಟ್ಟಿ ಇಡೀ ಬೆಂಗಳೂರೇ ನಾದ ಸರೋವರದಲ್ಲಿ  ಮುಳುಗಿ ನಿಂತಂತೆ ಕಾಣುತ್ತದೆ. 

ಅಣ್ಣಮ್ಮನ ತಮಟೆ: ಶ್ರೀರಾಂಪುರದ ಅಣ್ಣಮ್ಮನ ತಮಟೆ ವಾದ್ಯ ಗಣೇಶ  ವಿಸರ್ಜನಾ ಮೆರವಣಿಯಲ್ಲಿ ಬಹು ಬೇಡಿಕೆ ಇರುವ  ‘ಲೋಕಲ್‌ ಐಟಂ’. ‘ನಗರದ ನರ ನಾಡಿಯನ್ನೂ ತಮಟೆ ಸದ್ದು ಆವರಿಸಿಕೊಳ್ಳುವುದಿದೆ’ ಎನ್ನುತ್ತಾರೆ  ಶ್ರೀರಾಂಪುರದಲ್ಲಿರುವ ತಮಟೆ ತಂಡದ ಹಿರಿಯ ಸದಸ್ಯರಾದ ರಾಜನ್‌. ‘ಉಳಿದ ಸಮಯದಲ್ಲಿ ತಮಟೆ ಟೀಮ್‌ಗೆ ಹೆಚ್ಚೇನೂ ಬೇಡಿಕೆ ಇರುವುದಿಲ್ಲ. ತಂಡಕ್ಕೆ ಸಂಪಾದನೆ ಏನಿದ್ದರೂ ಗಣೇಶನ ಹಬ್ಬದ ಸಂದರ್ಭದಲ್ಲಿ.  12 ಮಂದಿ ಇರುವ ತಂಡ ಒಂದು ಮೆರವಣಿಗೆ ಹೋದರೆ ₹15 ಸಾವಿರದ ತನಕ ಸಂಭಾವನೆ ಸಿಗುತ್ತದೆ. ಒಟ್ಟಾರೆ ಸೀಸನ್‌ನಲ್ಲಿ 15ರಿಂದ 20 ಕಾರ್ಯಕ್ರಮಗಳು ಸಿಗುತ್ತವೆ. ಕೈಗೆ ನಾಲ್ಕು ಕಾಸು ಬರುತ್ತದೆ’ ಎನ್ನುತ್ತಾರೆ ಅವರು. 

ಕೇರಳದ ಚೆಂಡೆ: ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಲ್ಲಿ ಚೆಂಡೆ  ಬಾರಿಸುವ ಕೇರಳದ ಹಲವು ತಂಡಗಳಿವೆ. ಗಣೇಶನ ಹಬ್ಬ ಬಂದರೆ ಈ ತಂಡಗಳು ಅಯ್ಯಪ್ಪನ ಸನ್ನಿಧಿಯಿಂದ ವಿನಾಯಕನ ಸನ್ನಿಧಿಗೆ ಸ್ಥಳಾಂತರಗೊಳ್ಳುತ್ತವೆ.  ಇತ್ತೀಚಿನ ವರ್ಷಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಚೆಂಡೆ ವಾದ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ‘ಒಂದು ಮೆರವಣಿಗೆಗೆ 20 ಸಾವಿರ ರೂಪಾಯಿವರೆಗೆ ಚಾರ್ಜ್‌ ಮಾಡುತ್ತೇವೆ. 9 ಸದಸ್ಯರಿರುವ ನಮ್ಮ ತಂಡ ಈ ಸೀಸನ್‌ನಲ್ಲಿ 10ರಿಂದ 15 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ’ ಎನ್ನುತ್ತಾರೆ ಚೆಂಡೆ ವಾದಕರಾದ ಕರಣ್‌ ನಾಯರ್‌.

ವಿಜಯಪುರದ ಕೀಲುಕುದುರೆ: ಗಣೇಶನ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ವಿಜಾಪುರದ ಕೀಲು ಕುದುರೆ ಕುಣಿಯುತ್ತದೆ.  ‘ಪ್ರತಿ ಮೆರವಣಿಗೆಗೆ 8ರಿಂದ 10 ಸಾವಿರ ರೂಪಾಯಿ ಚಾರ್ಜ್‌ ಮಾಡುತ್ತೇವೆ. ಕೆಲವರು ಅಷ್ಟು ಕೊಡಲು ಆಗುವುದಿಲ್ಲ ಎಂದು ಚೌಕಾಸಿಗೆ ಇಳಿಯುತ್ತಾರೆ. ಇನ್ನು ಕೆಲವರು ಹೇಳಿದಷ್ಟು ಹಣ ಕೊಡುವುದಿಲ್ಲ. ಮೂರು ಗಂಟೆ ಎಂದು ಕರೆಯಿಸಿಕೊಂಡು, ನಾಲ್ಕು ಗಂಟೆ ಕಳೆದರೂ ಮೆರವಣಿಗೆಯನ್ನೇ ಆರಂಭಿಸಿರುವುದಿಲ್ಲ. ಕಷ್ಟವೇ ಹೆಚ್ಚಿದ್ದರೂ ಒಂದಿಷ್ಟು ಸಂಪಾದನೆ ಆಗುತ್ತದೆ ಎಂಬ ಕಾರಣಕ್ಕೆ ಈ ಅವಧಿಯಲ್ಲಿ ವಿಜಾಪುರದಿಂದ ಇಲ್ಲಿಗೆ ಬರುತ್ತೇವೆ’ ಎನ್ನುತ್ತಾರೆ ಕೀಲುಕುದುರೆ ಕಲಾವಿದ ಬಸವರಾಜು.

ವಾನಂಬಾಡಿ ತಮಟೆ ವಾದ್ಯ: ತಮಿಳುನಾಡಿನ  ವಾನಂಬಾಡಿ ಹಳ್ಳಿಗೂ ಬೆಂಗಳೂರಿಗೂ ಎತ್ತಣಿಂದೆತ್ತ ಸಂಬಂಧ ಎನ್ನುತ್ತೀರಾ? ಗಣೇಶನ ಹಬ್ಬದಲ್ಲಿ ಬೆಂಗಳೂರಿನ ಬಡಾವಣೆಗಳಲ್ಲಿ  ಈ ಹಳ್ಳಿ ಕಲಾವಿದರ ತಮಟೆ ಸದ್ದು ಕೇಳುತ್ತದೆ.  ಕಪ್ಪೆ ಚರ್ಮದಿಂದ ಮಾಡಿದ ಈ ತಮಟೆ ಹೊಮ್ಮಿಸುವ ವಾದ್ಯಕ್ಕೆ ವಯೋವೃದ್ಧರಲ್ಲೂ ಹರೆಯ ಉಕ್ಕುತ್ತದೆ! ‘ಕು(ಡಿ)ಣಿ ದು ನಲಿದಾಡುವ ಹುಡುಗರಿಗೆ ವಾನಂಬಾಡಿ ವಾದ್ಯ ಹೇಳಿ ಮಾಡಿಸಿದ್ದು ಎನ್ನುತ್ತಾರೆ ಯಶವಂತಪುರದ ‘ಫ್ರೆಂಡ್ಸ್‌ ಅಸೋಸಿಯೆಷನ್’ ತಂಡದವರು.

‘ಸದ್ಯ ಬೆಂಗಳೂರಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಐಟಂ ಇದು. ಪ್ರತಿ ಕಾರ್ಯಕ್ರಮಕ್ಕೆ 30 ಸಾವಿರ ರೂಪಾಯಿವರೆಗೆ ಸಂಭಾವನೆ ಪಡೆಯುತ್ತೇವೆ. ತಮಟೆ ಬಾರಿಸುವುದು ಮಾತ್ರವಲ್ಲ, ಹಾಡಿಗೆ ತಕ್ಕಂತೆ ಕುಣಿಯಲೂ ಬೇಕು.  ನಮ್ಮ ಕುಲ ಕಸುಬೇ ಇದು. ತಮಟೆ ಸದ್ದಿಗೆ ಜನ ಹೆಜ್ಜೆ ಹಾಕಿದರೆ ನಮ್ಮ ಹೊಟ್ಟೆ ತುಂಬುತ್ತದೆ. ಹಬ್ಬ ಮುಗಿದ ನಂತರ ಅಕ್ಟೋಬರ್‌ ಕೊನೆಯಲ್ಲಿ ಊರಿಗೆ ಮರಳುತ್ತೇವೆ’ ಎನ್ನುತ್ತಾರೆ ಕಲಾವಿದ ನರೇಂದ್ರನ್‌.

ಡೋಲು ಕುಣಿತ: ಮಲೆನಾಡಿನ ಡೋಲು ಕೂಡ ನಗರದ ಗಣೇಶೋತ್ಸವದ ಆಕರ್ಷಣೆ.  “ನಮ್ಮದು 9 ಮಂದಿ ಇರುವ ತಂಡ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದೇವೆ. ಬೆಂಗಳೂರಿನಲ್ಲಿ  ಕಾರ್ಯಕ್ರಮಕ್ಕೆ ಕಲಾವಿದರನ್ನು ಪೂರೈಸುವ ಏಜೆಂಟರಿದ್ದಾರೆ. ಅವರ ಮೂಲಕ ಬಂದಿದ್ದೇವೆ. ಒಂದು ಕಾರ್ಯಕ್ರಮಕ್ಕೆ 12 ಸಾವಿರ ರೂಪಾಯಿ ಕೊಡುತ್ತಾರೆ. ನಾಲ್ಕು ವಾರ ಇಲ್ಲಿದ್ದರೆ 15ರಿಂದ 20 ಕಾರ್ಯಕ್ರಮಗಳು ಸಿಗುತ್ತವೆ’ ಎನ್ನುತ್ತಾರೆ ಹಿರಿಯ ಕಲಾವಿದ ದೀಪಕ್‌ ಗೌಡ.

ಹುಲಿ ವೇಷ:  ದೇಹಪೂರ್ತಿ ಕಪ್ಪು ಹಳದಿ ಪಟ್ಟಿ ಬಳಿದುಕೊಂಡ ಹುಲಿ ವೇಷಧಾರಿಗಳು ಗಣೇಶ ಮೆರವಣಿಗೆ ವೇಳೆ ಮಕ್ಕಳ ಆಕರ್ಷಣೆಯ ಕೇಂದ್ರವಾಗುತ್ತಾರೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುವ ಹೆಚ್ಚಿನ ಹುಲಿ ವೇಷಧಾರಿಗಳು ದಕ್ಷಿಣ ಕನ್ನಡ, ಕರಾವಳಿ ಭಾಗದವರು. ಅವರು ಹೀಗೆನ್ನುತ್ತಾರೆ: ‘ಪ್ರತಿ ವರ್ಷ ಚೌತಿ ಸಂದರ್ಭದಲ್ಲಿ ಬೆಂಗಳೂರಿಗೆ ಬರುವುದು ವಾಡಿಕೆ. ನಮ್ಮದು 6 ಮಂದಿ ತಂಡ. ಪ್ರತಿ ಕಾರ್ಯಕ್ರಮಕ್ಕೆ 8ರಿಂದ 10 ಸಾವಿರ ರೂಪಾಯಿ ಪಡೆಯುತ್ತೇವೆ.  ಉಳಿದ ಸೀಸನ್‌ನಲ್ಲಿ 5ರಿಂದ 6 ಸಾವಿರ ರೂಪಾಯಿ ಸಂಭಾವನೆ ಇರುತ್ತದೆ.

ಬೊಂಬೆಯಾಟ: ‘ಬೊಂಬೆಯಾಟ ನಮ್ಮ ಕುಲಕಸುಬು. ವರ್ಷ ಪೂರ್ತಿ ಹೀಗೆ ವೇಷ ಹಾಕಿಕೊಂಡು ಊರೂರು ಸುತ್ತುತ್ತಿರುತ್ತೇವೆ. ಎಲ್ಲಿ ಜಾತ್ರೆ, ಹಬ್ಬ, ಇರುತ್ತದೋ ಅಲ್ಲಿ ನಾವಿರುತ್ತೇವೆ. ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ 12 ಸಾವಿರದವರೆಗೆ ಚಾರ್ಜ್‌ ಮಾಡುತ್ತೇವೆ. ನಮಗೆ ವರ್ಷದ ಎಲ್ಲ ಕಾಲವೂ ಸೀಸನ್. ಹೀಗಾಗಿ ಸಂಭಾವನೆ ವಿಚಾರದಲ್ಲಿ ರಾಜಿಯಿಲ್ಲ’– ಇದು ಬೊಂಬೆಯಾಟದ ಕಲಾವಿದರ ಅಭಿಪ್ರಾಯ. 

ಕೋಲಾಟ: ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿನ ಹಳ್ಳಿಯೊಂದರಿಂದ ಬಂದ ಕೋಲಾಟ ಕಲಾವಿದರು ಬೆಂಗಳೂರಿನ ಯಶವಂತಪುರ ಸರ್ಕಲ್‌ನಲ್ಲಿ ‘ಕೋಲು ಕೋಲಣ್ಣಾ ಕೋಲೇ...’ ಎಂದು ಹಾಡುತ್ತಾ ನರ್ತಿಸುತ್ತಿದ್ದರು. ಕೋಲಾಟದ ಮೂಲಕವೇ ಜನಪದ ಕತೆಯೊಂದನ್ನು ಹೇಳಲು ಪ್ರಯತ್ನಿಸುತ್ತಿದ್ದರು. ಮುಂದೆ ಗಣೇಶ ಮೆರವಣಿಗೆ ಹೋಗುತ್ತಿತ್ತು. ‘ನಾವು 12 ಮಂದಿ ಇದ್ದೇವೆ. ಕೋಲಾಟದ ಮೂಲಕ ಜನರನ್ನು ರಂಜಿಸುವುದು ಹಾಗೂ ಜನಪದ ಕಲೆಯ ಬಗ್ಗೆ ತಿಳಿಸುವುದು ನಮ್ಮ ಕೆಲಸ. ಮಳೆ–ಬೆಳೆ, ಕಷ್ಟ–ಸುಖ, ತಮಾಷೆ ಎಲ್ಲವನ್ನೂ ಈ ಕಲೆ ಒಳಗೊಂಡಿದೆ’ ಎಂದರು ತಂಡದ ಸದಸ್ಯರಲ್ಲಿ ಒಬ್ಬರಾದ ನಾಗೇಶ್‌ ಕುಮಾರ್‌.

ನಗರದ ಗಣೇಶೋತ್ಸವ ಹೀಗೆ ಸಾಂಸ್ಕೃತಿಕ ವೈವಿಧ್ಯದ ಚಪ್ಪರವೂ ಆಗುವ ಪ್ರಕ್ರಿಯೆ ನಿಜಕ್ಕೂ ಅಸಕ್ತಿಕರವಾದುದು. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT