ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡನ ನೆನಪು

ಕ್ಯಾಂಪಸ್‌ ಸ್ಟೋರಿ
Last Updated 4 ಜನವರಿ 2016, 19:35 IST
ಅಕ್ಷರ ಗಾತ್ರ

ಇದು ಬಿ.ಎ. ಓದುತ್ತಿದ್ದಾಗಿನ ಕತೆ. ನಿಜವಾಗಲೂ ನಡೆದ ಕತೆ. ಅನೇಕ ನಿಜದ ಕತೆಗಳು ಕಟ್ಟುಕತೆಗಳಿಗಿಂತ ಭೀಕರ ಆಗಿರುತ್ತವೆ, ಬಿಡಿ.
ಕಾಲೇಜಿನಲ್ಲಿ ನಮ್ಮದೊಂದು ಐದಾರು ಜನರ ಗ್ಯಾಂಗು. ವಿಶೇಷ ಏನಿಲ್ಲ. ಎಲ್ಲ ಕಾಲೇಜುಗಳಲ್ಲಿಯೂ ಇರುವಂಥದ್ದೇ. ಜೂನಿಯರ್‌ ಹುಡುಗಿಯರ ಚುಡಾಯಿಸುತ್ತಾ, ಅಪರೂಪಕ್ಕೆ ಕುಳಿತ ಕ್ಲಾಸಿನಲ್ಲಿ ಲೆಕ್ಚರರ್‌ ಜೀವ ಹಿಂಡುತ್ತಾ, ಆವಾಗೀವಾಗೊಮ್ಮೆ ಎಣ್ಣೆ ಪಾರ್ಟಿ ಮಾಡಿ ಆ ವಾರದ ಅವಧಿಯಲ್ಲಿ ಕೈಕೊಟ್ಟ ಹುಡುಗಿಯರ ಮನಸಾರೆ ಶಪಿಸುತ್ತಾ, ಎಕ್ಸಾಂನಲ್ಲಿ ಕಾಪಿ ಮಾಡಲೂ ಬೋರಾಗಿ ಸೆಮಿಸ್ಟರ್‌ಗೆ ಎರಡೆರಡರಂತೆ ಸಬ್ಜೆಕ್ಟುಗಳನ್ನು ಆಸ್ತಿಯಾಗಿ ಉಳಿಸಿಕೊಳ್ಳುತ್ತಾ...

ತ್ಚ್‌.. ಎಲ್ಲ ಕಾಲೇಜುಗಳಲ್ಲಿಯೂ ಇರುವಂಥದ್ದೇ ಗ್ಯಾಂಗು ಕಣ್ರೀ ಇದು. ಆದರೆ ಇಂಥ ಟಿಪಿಕಲ್‌ ಪುಂಡ ಕಿರುಬರ ನಡುವೆ ಒಂದು ಹಸುವೂ ಸೇರಿಕೊಂಡುಬಿಟ್ಟಿತ್ತು. ಅದರ ಹೆಸರು ಸೋಮನಾಥ ಗೌಡ. ನಾವಂತೂ ಯಾವತ್ತೂ ಅವನನ್ನು ಸೋಮನಾಥ ಅಂತ ಕರೆದಿದ್ದೇ ಇಲ್ಲ. ಗೌಡ ಅಂತ್ಲೇ ಫೇಮಸ್ಸು ಅವ. ಗೌಡ ಅದ್ಹೇಗೆ ನಮ್ಮ ಗುಂಪಿನಲ್ಲಿ ಸೇರಿಕೊಂಡ ಅಂತ ಯೋಚಿಸಿದ್ರೆ ನಿಜಕ್ಕೂ ಆಶ್ಚರ್ಯ ಆಗ್ತದೆ. ನಾವೆಲ್ಲ ಪ್ರತಿ ಪರೀಕ್ಷೆಯಲ್ಲಿ ಎಷ್ಟು ಗೋಲಿ ಬೀಳಬಹುದು ಅಂತ ಲೆಕ್ಕಾಚಾರ ಹಾಕ್ತಿದ್ರೆ ಈ ಪುಣ್ಯಾತ್ಮನೋ ನಾವು ಆರೂ ವಿಷಯಕ್ಕೆ ಸೇರಿ ತಗೊಂಡದ್ದಕ್ಕಿಂತ ಎರಡು ಮಾರ್ಕ್ಸ್‌ ಬರೀ ಇತಿಹಾಸವೊಂದಕ್ಕೇ ಸಂಪಾದಿಸಿ ತೆಪ್ಪಗಿರುತ್ತಿದ್ದ.

ಎಕ್ಸಾಂ ಹತ್ತಿರ ಬಂದರೆ ತನ್ನ ಪುಟ್ಟ ರೂಮಿನಲ್ಲೇ ನಮ್ಮನ್ನೆಲ್ಲ ಹಿಡಿದು ಕೂರಿಸಿ ಓದಿಸಲು ಹರಸಾಹಸ ಪಡುತ್ತಿದ್ದ. ಎಣ್ಣೆ ಪಾರ್ಟಿಯಲ್ಲಿ ನಾವೆಲ್ಲ ಕಾಂಪಿಟೇಷನ್‌ ಮೇಲೆ ಕುಡಿಯುತ್ತಿದ್ದರೆ ಈ ಮರ್ಯಾದಾ ಪುರುಷೋತ್ತಮ ಮಾತ್ರ ಬರೀ ಫಿಂಗರ್‌ ಚಿಪ್ಸ್‌ ತಿಂದು ಬೆರಳು ಚೀಪುತ್ತಾ ಕೂಡುತ್ತಿದ್ದ. ಸ್ವಾದೀನ ತಪ್ಪಿದ ನಮ್ಮನ್ನು ಜೋಪಾನವಾಗಿ ತನ್ನ ರೂಮಿನಲ್ಲಿ ಮಲಗಿಸಿಕೊಂಡು ಮರುದಿನ ಬೆಳಿಗ್ಗೆ ಬೈದು ಮನೆಗೆ ಅಟ್ಟುತ್ತಿದ್ದ. ಅವನಿಗಿರುವ ಒಂದೇ ಹುಚ್ಚು ಅಂದ್ರೆ ಬೈಕ್‌ ಓಡಿಸೋದು. ಹಳ್ಳಿಯ ಬಡ ಕುಟುಂಬದಿಂದ ಬಂದಿದ್ದ ಗೌಡನಿಗೆ ಬೈಕ್‌ ಕೊಳ್ಳುವುದು ಸಾಧ್ಯವಿರಲಿಲ್ಲ. ಆದ್ದರಿಂದ ಅವಕಾಶ ಸಿಕ್ಕಾಗೆಲ್ಲ ಸ್ನೇಹಿತರ ಬೈಕ್‌ ಓಡಿಸಿ ಆಸೆ ತೀರಿಸಿಕೊಳ್ಳುತ್ತಿದ್ದ.

ಡೈರೆಕ್ಟಾಗಿ ಹೇಳಬೇಕಂದ್ರೆ ನಮ್ಮ ಗುಂಪಿಗೆ ತಕ್ಕುದಲ್ಲವೇ ಅಲ್ಲವಾದ ಸೌಮ್ಯ ಸ್ವಭಾವದ ಶ್ರೀರಾಮಚಂದ್ರನಂತಿದ್ದ ಗೌಡ ಹತ್ತು ಹಲವು ಕಾರಣಗಳಿಗೆ ನಮಗೆಲ್ಲರಿಗೂ ಬೇಕೇ ಆಗಿದ್ದ. ಇಷ್ಟು ಬ್ಯಾಗ್ರೌಂಡ್‌. ಇನ್ನು ನೇರವಾಗಿ ಕತೆಗೆ ಬರೋಣ. ಅವತ್ತು ಬಿ.ಎ. ಐದನೇ ಸೆಮಿಸ್ಟರ್‌ ಪರೀಕ್ಷೆ ಮುಗಿದ ದಿನ. ಮಧುಲೋಕದಲ್ಲಿ ಮೈಮರೆಯಲು ಇದಕ್ಕಿಂತ ಒಳ್ಳೆಯ ಕಾರಣ ಏನು ಬೇಕು ಹೇಳಿ? ಅವತ್ತೇ ಸಂಜೆ ಊರ ಹೊರಗಿನ ಹೈವೇ ರೆಸ್ಟೊರೆಂಟ್‌ನಲ್ಲಿ ಒಳಗಿನ ಪರಮಾತ್ಮನಿಗೆ ‘ಮದ್ಯ ಪರ್ಜನ್ಯ’ ಮಾಡುವುದು ಅಂತ ನಿಕ್ಕಿಯಾಗಲು ಹೆಚ್ಚು ಸಮಯವೇನೂ ತಗುಲಲಿಲ್ಲ. ಮೂರು ಬೈಕುಗಳಲ್ಲಿ  ಆರು ಜನರ ಮೆರವಣಿಗೆ ಹೊರಟಿತು.

ಗುಂಡು ತುಂಡುಗಳ ಯಥೇಚ್ಛ ಸಮಾರಾಧನೆ ಮುಗಿಸಿ ವಾಪಸ್ಸಾಗುವಾಗ ರಾತ್ರಿ 11 ದಾಟಿತ್ತು. ನಮ್ಮ ದೇಹದ ಗಡಿಯಾರವೂ ಸಮತೋಲನದ ಗಡಿ ಮೀರುತ್ತಿತ್ತು. ಎಂದಿನಂತೆ ಇಂದೂ ಫಿಂಗರ್‌ ಚಿಪ್ಸ್‌, ಅರ್ಧ ಬಾಟಲಿ ಕೋಕ್‌ನಲ್ಲಿಯೇ ಖಾತೆ ಮುಗಿಸಿದ್ದ ಗೌಡ ಬೈಕ್‌ ಓಡಿಸುವ ಹುಕಿಯಲ್ಲಿದ್ದ. ವಿಜಯನೂ ಬೇಡ ಅನ್ನದೇ ಅವನಿಗೆ ಬೈಕ್‌ ಕೊಟ್ಟು ತಾನು ಹಿಂದೆ ಕೂತ. ಮೂರೂ ಬೈಕ್‌ಗಳು ರೇಸಿಗೆ ಬಿದ್ದು ಹೆದ್ದಾರಿಯ ಡಾಂಬರು ಕಚ್ಚಿಕೊಂಡು ಓಡತೊಡಗಿದವು.

ಗೌಡ ಇಂದು ಕೊಂಚ ಹೆಚ್ಚೇ ಉಮೇದಿಯಲ್ಲಿದ್ದಂತೆ ಜೋರಾಗಿಯೇ ಬೈಕ್‌ ಓಡಿಸುತ್ತಿದ್ದ. ಅವನಿಗೆ ಸರಿಯಾಗಿ ಬೈಕ್‌ ಓಡಿಸಲು ಬರುತ್ತಿರಲಿಲ್ಲ. ಅದಕ್ಕೇ ನಮಗೆ ಕೊಂಚ ಭಯ. ವಿಶ್ವನ ಬೈಕ್‌ ಹಿಂದೆ ಕೂತಿದ್ದ ನಾನು ಅವನ ಉಮೇದಿ ನೋಡಿ, ‘ಗೌಡಾ.. ಸ್ವಲ್ಪಾ ಹದಾ ಹೋಗಲೇ.. ನೆಗೆದುಬಿದ್ರೆ ಹೆಣ ಹೊರೋ ತ್ರಾಣಾನೂ ಇಲ್ಲ ನಮಗೆ’ ಎಂದು ಕೂಗಿದೆ. ಅದಕ್ಕೆ ಅವನು ಏನೂ ಪ್ರತಿಕ್ರಿಯಿಸದೇ ‘ಊ ಹೂ..’ ಎಂದು ಜೋರು ಕೇಕೆ ಹಾಕುತ್ತಾ ವಿಶ್ವನ ಬೈಕ್‌ ಓವರ್‌ಟೇಕ್‌ ಮಾಡಿ ಸುಯ್ಯನೆ ಮುಂದೆ ಹೋದ.

ಸ್ವಲ್ಪವೇ ದೂರದಲ್ಲಿ ಒಂದು ರೋಡ್‌ ಹಂಪ್‌ ಇತ್ತು. ಖಾಯಂ ಬೈಕ್‌ ಓಡಿಸುವ ನಮಗೆಲ್ಲ ಅಲ್ಲಿ ಹಂಪ್‌ ಇರುವುದು ಗೊತ್ತಿತ್ತು. ಆದರೆ ಗೌಡ ಅದರ ಲಕ್ಷ್ಯವೇ ಇಲ್ಲದೆ ರೇಸಿನಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿ ವೇಗವಾಗಿ ಮುನ್ನುಗ್ಗುತ್ತಲೇ ಇದ್ದ. ಅದನ್ನು ನೋಡಿ ಇನ್ನೊಂದು ಬೈಕ್‌ ಓಡಿಸುತ್ತಿದ್ದ ಶಿವು ‘ಲೇ ಗೌಡಾ ಹಂಪ್‌ ಇದೆ ನಿಧಾನ..’ ಎಂದು ಕೂಗಿದ್ದು ಸೊಯ್ಯನೆ ಬೀಸುತ್ತಿದ್ದ ಗಾಳಿ ಸದ್ದಿನಲ್ಲಿ ಛಿದ್ರವಾಗಿ ಹೋಯಿತೇ ಹೊರತು ಗೌಡನನ್ನು ತಾಕಿದಂತೆ ತೋರಲಿಲ್ಲ.  ಹಿಂದಿನ ಸೀಟಿನಲ್ಲಿ ಕೂತಿದ್ದ ವಿಜಯ್‌ ಸ್ವಸ್ಥನಾಗಿದ್ದರೆ ಗೌಡನಿಗೆ ಎಚ್ಚರಿಸುತ್ತಿದ್ದನೇನೋ. ಆದರೆ ಅಷ್ಟರಲ್ಲಿಯೇ ಗೌಡನ ಬೆನ್ನಿಗೆ ಒರಗಿದ್ದ ಅವನು ಬೇರೆಯೇ ಲೋಕದಲ್ಲಿದ್ದ.

ನೋಡನೋಡುತ್ತಿದ್ದಂತೆ ಹಂಪ್‌ ಹತ್ತಿರದಲ್ಲಿ ವೇಗವಾಗಿ ಸಾಗುತ್ತಿದ್ದ ಗೌಡನ ಬೈಕ್‌ ಕಿರ್ರನೆ ಕೂಗುತ್ತ ಕೊಂಚ ದೂರ ಸಾಗಿ ಮುಂದಿನ ಚಕ್ರ ಹಂಪ್‌ ಹತ್ತಿದ್ದೇ ಮೇಲೆದ್ದು ಮುಗ್ಗರಿಸಿ ರಸ್ತೆಯಲ್ಲಿ ಸಂಬಂಧ ಅಡ್ಡಮಲಗಿ ಅಷ್ಟು ದೂರಕ್ಕೆ ಜರಿದುಕೊಂಡು ಹೋಗಿಬಿತ್ತು. ಬೈಕ್‌ ಮುಗ್ಗರಿಸಿದಾಗಲೇ ಜಿಗಿದಿದ್ದ ವಿಜಯ್‌ ಅಷ್ಟೇನೂ ಅಪಾಯವಾಗದೇ ಪಾರಾಗಿದ್ದ. ಅಷ್ಟು ದೂರದಲ್ಲಿ ರಸ್ತೆ ಮಧ್ಯ ಬಿದ್ದಿದ್ದ ಬೈಕ್‌ ಪಕ್ಕದಲ್ಲಿ ನೆಲಕ್ಕೆ ಬಿದ್ದಿದ್ದ ಗೌಡ ಬಿದ್ದಲ್ಲೇ ಒದ್ದಾಡುತ್ತಿದ್ದ. ಅವನ ಎರಡೂ ಕಾಲುಗಳು ಬೈಕ್‌ ಕೆಳಗೆ ಸಿಲುಕಿಕೊಂಡಿದ್ದವು. ಒಂದೆರಡು ಗಳಿಗೆಯಲ್ಲಿ ನಡೆದುಹೋದ ಈ ಘಟನೆಯ ವಾಸ್ತವ ನಮ್ಮ ಅರಿವಿಗೆ ಬರಲಿಕ್ಕೆ ಒಂದಷ್ಟು ಸಮಯ ಹಿಡಿಯಿತು.

ವಿಶ್ವ ಬೈಕ್‌ ನಿಲ್ಲಿಸಿದ್ದೇ ಹಿಂದೆ ಕೂತಿದ್ದ ನಾನು ಬೈಕ್‌ನಿಂದ ನೆಗೆದು ಗೌಡ ಬಿದ್ದತ್ತ ಓಡಿದೆ. ಬೈಕ್‌ನ ಅಡಿಗೆ ಸಿಲುಕಿಕೊಂಡು ಒದ್ದಾಡುತ್ತಲೇ ಇದ್ದರೂ ಎಲ್ಲೂ ರಕ್ತ ಸೋರಿದ ಲಕ್ಷಣ ಕಾಣಿಸದೇ ಇದ್ದುದರಿಂದ ಕೊಂಚ ಸಮಾಧಾನಗೊಂಡು ರಸ್ತೆಯಲ್ಲಿ ಕುಳಿತು ‘ಗೌಡಾ...’ ಎಂದೆ. ಗೌಡ ಸುಮ್ಮನೇ ಮುಖ ಕೊಂಚ ತಿರುಗಿಸಿ ನನ್ನನ್ನೇ ಆರ್ತನಾಗಿ ನೋಡಿದ. ಅವನ ಯಾತನೆ ತುಂಬಿದ ಕಣ್ಣುಗಳಿಂದ ನೀರು ಧಾರಾಕಾರ ಹರಿಯುತ್ತಿತ್ತು. ಮೆಲ್ಲನೆ ಅವನ ತಲೆಯನ್ನು ಎತ್ತಿ ನನ್ನ ತೊಡೆಯ ಮೇಲಿರಿಸಿಕೊಂಡೆ. ಅಸಾಧ್ಯ ನೋವಿನಿಂದ ಮುಖ ಕಿವುಚಿದ. ಅವನ ತಲೆ ಹಿಡಿದ ಕೈ, ತೊಡೆ ಎಲ್ಲ ಬೆಚ್ಚಗಾದಂತಾಗಿ ಬಗ್ಗಿ ನೋಡಿದರೆ ಎದೆ ಝಲ್‌ ಎಂದು ನಿಶ್ಚೇತನಾಗಿಬಿಟ್ಟೆ.

ತಲೆಯನ್ನು ಹಿಡಿದ ಕೈ ಬೆರಳುಗಳಡಿಯಿಂದ ಸೆಲೆಯೊಡೆದು ಹರಿಯುತ್ತಿದ್ದ ರಕ್ತ ನನ್ನ ತೊಡೆಯನ್ನು ತೋಯಿಸಿ ರಸ್ತೆಗಿಳಿದಿತ್ತು. ಗೌಡ ಗಟ್ಟಿಯಾಗಿ ತುಟಿಕಚ್ಚಿದ್ದ. ಇಡೀ ಮೈ ಕಂಪಿಸಿ ಕತ್ತಲು ಕವಿದ ಕಣ್ಣಿಗೆ ಕೊನೆಯದಾಗಿ ಕಾಣಿಸಿದ್ದು ಇನ್ನೂ ತಿರುಗುತ್ತಲೇ ಇದ್ದ ಬೈಕ್‌ನ ಹಿಂದಿನ ಚಕ್ರ. ಇಂದಿಗೂ ಒಮ್ಮೊಮ್ಮೆ ಮಧ್ಯರಾತ್ರಿ ಎಚ್ಚರವಾದಾಗ ಗೌಡನ ಆ ಆರ್ತ ನೋಟ, ಬೈಕ್‌ನ ತಿರುಗು ಚಕ್ರ ಕಣ್ಣೆದುರಿಗೆ ಬಂದು ಬೆಚ್ಚುತ್ತೇನೆ. ಪ್ರಾರಂಭದಲ್ಲೇ ಹೇಳಿದೆನಲ್ಲ. ಅನೇಕ ನಿಜದ ಕತೆಗಳು ಕಟ್ಟುಕತೆಗಳಿಗಿಂತ ಭೀಕರ ಆಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT