ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಚೈತನ್ಯದ ರಂಗತಂಡ ‘ಪ್ರವರ’

ಅಂಕದ ಪರದೆ
Last Updated 3 ಮೇ 2015, 15:34 IST
ಅಕ್ಷರ ಗಾತ್ರ

ನಾಟಕಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡ ಗೆಳೆಯರ ತಂಡ ‘ಪ್ರವರ’ ಎಂಬ ನಾಟಕ ತಂಡವೊಂದರ ಹುಟ್ಟಿಗೆ ಕಾರಣವಾಗಿದೆ. ಸಾಮಾಜಿಕ ಕಾಳಜಿ ಇರುವ ಹಾಗೂ ಉತ್ತಮ ಸಂದೇಶ ನೀಡುವಂಥ ನಾಟಕಗಳನ್ನು ಮಾಡಬೇಕು ಎಂಬ ಬದ್ಧತೆ ಹೊಂದಿರುವ ತಂಡದ ಬಗ್ಗೆ ಈಶ ಪ್ರಸನ್ನ ಸಂಗ್ರಹಿಸಿದ ಮಾಹಿತಿ ಇಲ್ಲಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ   ರಂಗತಂಡಗಳಲ್ಲಿ ‘ಪ್ರವರ ಆರ್ಟ್ ಸ್ಟುಡಿಯೊ’ ಕೂಡ ಒಂದು. ನಿರ್ದೇಶಕ ಹನುರಾಮ ಸಂಜೀವ್, ವೆಂಕಟೇಶ ಭಾರದ್ವಾಜ್, ಸಂದೀಪ್ ಪ್ರಭಾಕರ್, ರಕ್ಷಿತ್ ಯೋಗೀಶ್, ತೇಜಸ್ವಿನಿ ರಮೇಶ್, ಶಾಂಭವಿ ಕಾಶೀನಾಥ್‌ ಈ ಮಿತ್ರರೆಲ್ಲ ಕೂಡಿಕೊಂಡು ಕಟ್ಟಿದ ರಂಗತಂಡ ಇದು. ಇವರು ಮೊದಲು ಇನ್ಫೊಸಿಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಉದ್ಯೋಗಿಗಳಾಗಿದ್ದವರು. ಮಾಲತೇಶ್ ಬಡಿಗೇರ್ ಹಾಗೂ ಎಂ.ಎಸ್. ನರಸಿಂಹ ಮೂರ್ತಿ ಈ ತಂಡದ ಮಾರ್ಗದರ್ಶಕರಾಗಿದ್ದಾರೆ.

ಹನುರಾಮ ಸಂಜೀವ್ ರಾಮನಗರ ಜಿಲ್ಲೆಯ ಕೋಮನಹಳ್ಳಿ ಮೂಲದವರು. ಬೆಂಗಳೂರಿನ ಎಸ್‌ಜೆಬಿಐಟಿ ಕಾಲೇಜ್‌ನಲ್ಲಿ ಎಂಜಿನಿಯರ್ ಶಿಕ್ಷಣ ಪೂರೈಸಿದ ಅವರು ವಿದ್ಯಾರ್ಥಿಯಾಗಿದ್ದಾಗ ಕನ್ನಡ ಪ್ರಾಧ್ಯಾಪಕ ವಿಶ್ವನಾಥ್ ಅವರ ಪ್ರೇರಣೆಯಿಂದ ರಂಗಭೂಮಿ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡರು. ಆ ನಂತರ 2008ರಲ್ಲಿ ರಂಗಶಂಕರದ ಬಾಲು ನಾಗೇಂದ್ರ ಅವರ ಮುಖಾಂತರ ‘ಪೋಲಿಕಿಟ್ಟಿ’ ನಾಟಕದಲ್ಲಿ ಬಣ್ಣ ಹಚ್ಚಿದರು.  

‘ಪದವಿ ಪರೀಕ್ಷೆ ಬರೆಯುವ ದಿನವೇ ಮೈಸೂರಿನ ರಂಗಾಯಣದಲ್ಲಿ ಟಿ.ಪಿ ಕೈಲಾಸಂ ರಚಿಸಿದ ಅಭಿಷೇಕ್‌ ಅಯ್ಯಂಗಾರ್‌ ನಿರ್ದೇಶನದ ‘ಪೋಲಿಕಿಟ್ಟಿ’ ನಾಟಕದಲ್ಲಿ ‘ಮಗು’ ಹೆಸರಿನ ಪಾತ್ರ ಮಾಡಲು ತೆರಳಬೇಕಿತ್ತು. ಒಂದೇ ಉಸಿರಿನಲ್ಲಿ ಪರೀಕ್ಷೆ ಬರೆದು ಅವಸರದಲ್ಲಿ ರಂಗಾಯಣಕ್ಕೆ ಆ ಪಾತ್ರ ಮಾಡಲು ತೆರಳಿದ್ದೆ’ ಎಂದು ನೆನೆಯುತ್ತಾರೆ ಹನುರಾಮ ಸಂಜೀವ್. 

ನಂತರ ‘ಮಾಲ್ಗುಡಿ ಡೇಸ್, ‘ತತ್ಸನ ಮೋಹ’, ‘ನಮ್ಮ ಮೆಟ್ರೊ’ ನಾಟಕಗಳಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದಾರೆ ಸಂಜೀವ್‌. ಈ ನಾಟಕ ಹಲವು ನಗರಗಳಲ್ಲಿ ಉತ್ತಮ ಪ್ರದರ್ಶನ ಕಂಡು ಹನುರಾಮ ಅವರಿಗೆ ಹೆಸರು ತಂದುಕೊಟ್ಟವು. ನಾಟಕದಲ್ಲಿ ಪಾತ್ರ ಮಾಡುವುದರ ಜೊತೆಗೆ ರಂಗವಿನ್ಯಾಸ, ಬೆಳಕಿನ ತಂತ್ರ, ಪ್ರಸಾಧನ ಕಲೆಯ ಪಟ್ಟುಗಳನ್ನು ಅರಿತಿದ್ದು ಮುಂದೆ ರಂಗತಂಡ ಕಟ್ಟುವಲ್ಲಿ ನೆರವಾಯಿತು. 2011ರಲ್ಲಿ ಹನುರಾಮ ಸಂಜೀವ್‌ ಮೊದಲ ಬಾರಿಗೆ ನಿರ್ದೇಶಿಸಿದ್ದ ‘ನನ್ನವಳ ಕಾಗದ’ ನಾಟಕ ರಾಜ್ಯದ ವಿವಿಧ ನಗರಗಳಲ್ಲಿ 73 ಪ್ರದರ್ಶನಗಳನ್ನು ಕಂಡಿತ್ತು.

ಪ್ರವರದ ಹುಟ್ಟು
ಪ್ರವರ ಅಂದರೆ ‘ಅತ್ಯುತ್ತಮವಾದದ್ದು’ ಎಂಬ ಅರ್ಥವಿದೆ ಇದನ್ನು ನಾಟಕ ಕಲೆಯ ಮೂಲಕ ಸಾಬೀತು ಮಾಡಲು ಈ ರಂಗ ತಂಡ ಹೊರಟಿದೆ. ಡಾ. ಸೋಹನ್‌ ರಾಘವೇಂದ್ರ ಅವರ ಸೂಚನೆ ಮೇರೆಗೆ ತಂಡಕ್ಕೆ ಪ್ರವರ ಎಂದು ಹೆಸರಿಟ್ಟ ತಂಡ 2013ರಲ್ಲಿ ಮೊದಲ ನಾಟಕ ಪ್ರದರ್ಶನವನ್ನು ನೀಡಿತ್ತು.

ಪ್ರವರದ ಹೆಜ್ಜೆ ಗುರುತು
ಈ ರಂಗತಂಡದ ಮೊದಲ ನಾಟಕ ಎಂ. ಎಸ್ ನರಸಿಂಹಮೂರ್ತಿ ಅವರ ‘ಕನ್ಯಾಕಪಟ’. ಇದನ್ನು ಹನುರಾಮ ಅವರು ನಿರ್ದೇಶಿಸಿದ್ದಾರೆ. ಪ್ರೇಕ್ಷಕರಿಂದ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಈ ತಂಡದ ಎರಡನೇ ನಾಟಕ ‘ಜಸ್ಟ್ ಅಜ್ಜೆಸ್ಟ್’ ಕೂಡ  ಅದೇ ಉತ್ಸಾಹದಲ್ಲಿ ಮೂಡಿಬಂದಿತು.

ಸಮಾಜದಲ್ಲಿ ಹೆಣ್ಣಿನ ಶೋಷಣೆ, ಸಮಾಜ ಪರಿವರ್ತನೆಯ ಕಥೆಯನ್ನು ಒಳಗೊಂಡ ‘ಮೀಲ್‌ ಕೂಪನ್’ ನಾಟಕ ಪ್ರದರ್ಶನದ ನಂತರ ಪ್ರವರ ರಂಗತಂಡ ಅಪಾರ ಜನಮನ್ನಣೆ ಗಳಿಸಿತು. ‘ಈ ನಾಟಕವು ವಿಶೇಷವಾಗಿ ಮಹಿಳೆಯರ ಮನಸ್ಸಿಗೆ ಹತ್ತಿರವಾಗಿದೆ’ ಎನ್ನುತ್ತಾರೆ ಇದನ್ನು ರಚಿಸಿ, ನಿರ್ದೇಶಿಸಿದ ಹನುರಾಮ ಸಂಜೀವ್.

ಅರೆಕಾಲಿಕ ನಿರ್ದೇಶಕ ಶ್ರೀಹರ್ಷ ಅವರ ‘ಬ್ಲಾಕ್ ಅಂಡ್ ವೈಟ್’, ಸಾಮಾಜಿಕ ಸಮಸ್ಯೆ ಕುರಿತ ‘ದಿ ಎಂಡ್’ ಎಂಬ ಇಂಗ್ಲಿಷ್ ನಾಟಕ, ರಾಜಕೀಯ ವಿಷಯ ಆಧಾರಿತ ‘ವೋಟು ರಾಂಗ್ ರೂಟು’ ಎಂಬ ನಾಟಕಗಳು ಪ್ರದರ್ಶಿತವಾದವು. ಈ ನಾಟಕವು ‘ಶಾರ್ಟ್ ಅಂಡ್ ಸ್ವೀಟ್’ ಉತ್ಸವದಲ್ಲಿ ಪ್ರದರ್ಶನ ಕಂಡಿತ್ತು. ‘ಅಮೃತ ಕಳಶ’ ಕಾದಂಬರಿ ಆಧಾರಿತ ‘ಮಾಣಿಜಂಕ್ಷನ್’ ನಾಟಕವನ್ನು ಸದ್ಯ ಪ್ರದರ್ಶಿಸುತ್ತಿರುವ ತಂಡ ದೇಶದ ಅಮೂಲ್ಯ ಸಂಪತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ನಿರೂಪಣೆಯನ್ನು ಹೊಂದಿದೆ.

ಹೊಸಬರಿಗೆ ತರಬೇತಿ
ಪ್ರವರ ರಂಗತಂಡವು ವಿದ್ಯಾರ್ಥಿಗಳು ಹಾಗೂ ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿ ಅವರಿಗೆ 6 ತಿಂಗಳ ತರಬೇತಿ ನೀಡುತ್ತಿದೆ. ತಂಡದ ಸದಸ್ಯರಲ್ಲೊಬ್ಬರಾದ ವೆಂಕಟೇಶ್ ಭಾರದ್ವಾಜ್ ಅವರ ಮನೆಯಂಗಳದಲ್ಲಿ ಹಾಗೂ ಲಿಟಲ್ ಮಿಲೇನಿಯಂ ಸ್ಕೂಲ್‌ ಆವರಣದಲ್ಲಿ ನಾಟಕಭ್ಯಾಸ ನಡೆಸುತ್ತಾರೆ.

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಂಗೀತ ಕಾರ್ಯಕ್ರಮವನ್ನೂ ನೀಡಿ ಮೆಚ್ಚುಗೆ ಗಳಿಸಿದೆ ಈ ತಂಡ. ಕಿರುಚಿತ್ರ, ಸಾಕ್ಯ್ಷಚಿತ್ರಗಳ ತಯಾರಿಸುವ ಕಾರ್ಯವನ್ನು ಪ್ರವರ ನಿರ್ವಹಿಸಿದೆ. ‘ಪ್ರವರ ತಂಡ ಕಟ್ಟುವಾಗ ನಾವು ದುಡಿದ ಸಂಬಳದ ಹಣವನ್ನು ಬಳಸಿಕೊಂಡೆವು. ಈಗ ಕೆಲವು ಪ್ರಾಯೋಜಕರು, ಕಂಪೆನಿಗಳು ಆರ್ಥಿಕ ಸಹಾಯ ಮಾಡುತ್ತಿವೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಹನುರಾಮ.

ತಂಡದ ಮಾನವೀಯ ನಡೆ
ಪ್ರವರ ತಂಡವು ನಾಟಕಗಳ ಮುಖಾಂತರ ಬಂದ ಲಾಭದ ಹಣವನ್ನು ಸ್ನೇಹಜ್ಯೋತಿ ಆಶ್ರಮದ ಅನಾಥ ಮಕ್ಕಳಿಗೆ ನೀಡುತ್ತಿದ್ದು ಮಾನವೀಯತೆ ಮೆರೆಯುತ್ತಿದೆ.

ಪ್ರಜಾವಾಣಿ ಸಂದರ್ಶನ
‘ನಾಟಕ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು’
* ನಾಟಕಗಳನ್ನು ಪ್ರದರ್ಶನಕ್ಕೆ ಆಯ್ದುಕೊಳ್ಳುವಾಗ ನಿಮ್ಮ ತಂಡದ ಮಾನದಂಡವೇನು?
ನಾವು ನಾಟಕಗಳನ್ನು ವಿಷಯ ಪರಿಕಲ್ಪನೆ ಆಧಾರದ ಮೇಲೆ ಆಯ್ದುಕೊಳ್ಳುತ್ತೇವೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಥೆಗಳಿಗೆ ಆದ್ಯತೆ. ಯಾವ ರೀತಿಯ ಕತೆ ರಚನೆ ಮಾಡಬೇಕು ಎಂದು ನಿರ್ಧರಿಸಿ ಆ ವಿಷಯ ಪರಿಣತರ ಕೈಯಿಂದ ಬರೆಸುತ್ತೇವೆ. ಉದಾ: ಹಾಸ್ಯ ನಾಟಕ ಮಾಡುತ್ತಿದ್ದರೆ ಎಂ.ಎಸ್‌ ನರಸಿಂಹಮೂರ್ತಿ ಅವರು ಬರೆಯುತ್ತಾರೆ. 

* ಇಂದಿನ ರಂಗಭೂಮಿ ಪರಿಸ್ಥಿತಿ
ಇಂದು ರಂಗಭೂಮಿಗೆ ಹೊಸಬರು ಬರುತ್ತಿರುವುದರಿಂದ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತಿವೆ. ಇದು ಒಳ್ಳೆಯ ಬೆಳವಣಿಗೆ. ನಾಟಕಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ ಹಾಗೂ ನಗರದಲ್ಲಿ ನಾಟಕಗಳನ್ನು ಪರದರ್ಶಿಸಲು ಬೇಕಿರುವ ರಂಗಮಂದಿರಗಳ ಕೊರತೆ ಕಾಡುತ್ತಿದೆ.

* ರಂಗಭೂಮಿಗೆ ಆಸಕ್ತ ಯುವಕರು ಬರುತ್ತಿದ್ದಾರೆಯೇ ಮತ್ತು ಬರುವವರು ಹೇಗಿರಬೇಕು?
ರಂಗಭೂಮಿ ಬಗ್ಗೆ ಪ್ರೀತಿ ಇರಿಸಿಕೊಂಡ ಯುವಕರು ಹೆಚ್ಚು ಬರುತ್ತಿದ್ದಾರೆ. ಆದರೆ, ಅದು ಒಂದು ಅಥವಾ ಎರಡು ನಾಟಕಕ್ಕೆ ಮಾತ್ರವೇ ಸೀಮಿತವಾಗಿರದೆ ಅದನ್ನು ಮುಂದುವರಿಸಿಕೊಂಡು ಹೋಗುವ ಮನೋಭಾವ ಬೆಳೆಸಿಕೊಂಡರೆ ಒಳ್ಳೆಯದು. ನಾಟಕದಲ್ಲಿ ಪಾತ್ರ ಮಾಡುವವರು ಹೆಚ್ಚು ಶ್ರದ್ಧೆಯಿಂದ ಇರಬೇಕು. ರಂಗದ ಬಗ್ಗೆ ಗೌರವ ಇರಬೇಕು.

ನಿಮ್ಮ ರಂಗತಂಡದಿಂದ ಕಿರುತೆರೆ, ಸಿನಿಮಾಗೆ ಪ್ರವೇಶಿಸಿದವರು ಇದ್ದಾರೆಯೇ?
ಹೌದು. ಅನೇಕರು ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಅಂಥವರಲ್ಲಿ ಮಂಗಳ ರಘು, ಅಂಜಲಿ, ಬಿಂದು ಮಾಧವ್‌, ಅವಿನಾಶ್, ದಿವ್ಯ, ರಕ್ಷಿತ್‌  ಮುಂತಾದವರನ್ನು ಪ್ರಮುಖವಾಗಿ ಹೆಸರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT