ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದಸ್ವರ ಪರಂಪರೆ ಬೆಳೆಸಿದ ಸಾಧಕಿ ಧನಲಕ್ಷ್ಮಮ್ಮ

ನಾದಲೋಕ
Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನಾದಸ್ವರ ವಾದನ ಹೆಣ್ಣು ಮಕ್ಕಳಿಗಲ್ಲ ಎಂಬ ಕಾಲಘಟ್ಟದಲ್ಲಿ ನಮ್ಮ ತಂದೆ ಆಸಕ್ತಿ ವಹಿಸಿ ಮಗಳಿಗೆ ವಾದನ ಕಲಿಸುತ್ತಾರೆ. ಮಗಳು ಕನ್ನಡ ನಾಡಿನ ತುಂಬಾ ನೂರಾರು ಕಾರ್ಯಕ್ರಮಗಳನ್ನು ನೀಡಿ ತಮ್ಮ ವಂಶದ ಪರಂಪರೆಯ ಕೊಂಡಿಯಾಗುತ್ತಾರೆ. 
 
ಹಿರಿಯ ಕಲಾವಿದೆ ರಾಜಾಜಿನಗರದ ಧನಲಕ್ಷ್ಮಮ್ಮ ಅವರು ನಾದಸ್ವರ ವಾದನ  ತಮಗೆ ಒಲಿದ ಬಗೆಯನ್ನು ಖುದ್ದಾಗಿ ವಿವರಿಸಿದ್ದಾರೆ... 
 
‘ನಾನು ಕಲಿಯಲು ಆರಂಭಿಸಿದ್ದು 10ನೇ ವಯಸ್ಸಿನಲ್ಲಿ. 45 ವರ್ಷಗಳಿಂದ ನಾದಸ್ವರ ಕಾರ್ಯಕ್ರಮ ಕೊಡುತ್ತಿದ್ದೇನೆ.  ಈಗ ನನಗೆ 62 ವರ್ಷ.   ನಾದಸ್ವರ ನುಡಿಸುವುದನ್ನು ಕಲಿಯಲು, ಕಾರ್ಯಕ್ರಮ ನೀಡಲು ಪ್ರೋತ್ಸಾಹಿಸಿದವರು ನನ್ನ ತಂದೆ ಮುನಿಸ್ವಾಮಪ್ಪನವರು. ನಾದಸ್ವರ ಕಲಾವಿದರ ಪರಂಪರೆ ನಮ್ಮದು. 
 
‘ಅಪ್ಪ-ಅಮ್ಮನಿಗೆ ನಾವು ಆರು ಜನ ಮಕ್ಕಳು. ನಾಲ್ವರು ಹೆಣ್ಣುಮಕ್ಕಳು, ಇಬ್ಬರು ತಮ್ಮಂದಿರು. ಅಪ್ಪನಿಗೆ ಆರು ಮಂದಿ ಮಕ್ಕಳಲ್ಲಿ ಒಬ್ಬರಾದರೂ ಪರಂಪರೆ ಮುಂದುವರಿಸಬೇಕೆಂಬ ಆಶಯವಿತ್ತು.  ಮನೆಯಲ್ಲಿ ಯಾರೂ ಕಲಿಯಲಿಲ್ಲ. ಹೆಣ್ಣು ಮಕ್ಕಳು ನಾದಸ್ವರ ನುಡಿಸುವಂತಿಲ್ಲ ಎಂಬ ವಾತಾವರಣವಿದ್ದ ಕಾಲದಲ್ಲಿ ಅಪ್ಪ ಈ ಕಲೆಯನ್ನು ನನಗೆ ಕಲಿಸಿಕೊಟ್ಟರು. 
 
‘ನಾನು ಚಿಕ್ಕವಳಿದ್ದಾಗ ಅಮ್ಮನ ಆರೋಗ್ಯ ಚೆನ್ನಾಗಿರಲಿಲ್ಲ. ಅವಳನ್ನು ನೋಡಿಕೊಳ್ಳಲು,  ಐದನೇ ತರಗತಿಗೆ ಓದು ನಿಲ್ಲಿಸಬೇಕಾಯಿತು. ಅಕ್ಕಂದಿರು ಹೈಸ್ಕೂಲು ಓದುತ್ತಿದ್ದರು. ಅಪ್ಪ ನಾದಸ್ವರ ಕಲಿಸಲು ಆರಂಭಿಸಿದಾಗ, ಆಗಿನ ಸಾಮಾಜಿಕ ಪರಿಸರದ ಕಾರಣ ಅಮ್ಮ ವಿರೋಧಿಸಿದರು. ಅದಕ್ಕೆ ಅಪ್ಪ, ‘ಧನಲಕ್ಷ್ಮಿಗೆ ಶಾಲಾ ಓದು ಸಿಗಲಿಲ್ಲ, ನಾದಸ್ವರ ಕಲಿತುಕೊಳ್ಳಲಿ’ ಎಂದು ಖಡಾಖಂಡಿತವಾಗಿ ಹೇಳಿದರು. ನಾದಸ್ವರ ವಾದಕ ರಾಮಕೃಷ್ಣಪ್ಪ ಅವರ ಜೊತೆ ಮದುವೆ ಮಾಡಿದರು ಅಪ್ಪ.  ಮದುವೆ ಬಳಿಕ ಕಲಾಸೇವೆ ಮುಂದುವರಿಸಲು ಅತ್ತೆ, ಮಾವ, ಪತಿ ಪ್ರೋತ್ಸಾಹ ಕೊಟ್ಟರು. ಪತಿಯ ಜೊತೆ ಕಛೇರಿ ಕೊಡುತ್ತಿದ್ದೆ.
 
ಸಾಧಿಸುವ ಛಲ ಮುಖ್ಯ
‘ಸಾಧನೆ ಇದ್ದರೆ ಯಾವ ತೊಂದರೆಯೂ ಬಾಧಿಸದು. ಮೂರರಿಂದ ನಾಲ್ಕು ಗಂಟೆ ತನಕ ಕುಳಿತು ಕಛೇರಿ ಕೊಡುತ್ತೇನೆ. ಆರಂಭದಲ್ಲಿ ಕಛೇರಿ ನೀಡಲು ಹೋದಾಗ ವೇದಿಕೆಯಲ್ಲಿ ಗಂಡಸು ಕಲಾವಿದರ ನಡುವೆ ಇವಳೊಬ್ಬಳೇ ಹೆಣ್ಣು ಮಗಳು ಎಂದು ಹುಬ್ಬೇರಿಸುತ್ತಿದ್ದರು. ನನ್ನ ಲಕ್ಷ್ಯ ಅತ್ತ ಇರುತ್ತಿರಲಿಲ್ಲ. ರಾಗ, ಕೀರ್ತನೆಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂಬ ಗುರಿ ಮಾತ್ರ ನನ್ನದಾಗಿತ್ತು. ಕ್ರಮೇಣ ನಾದಸ್ವರ ಕಲಾವಿದೆಯರ ಸಂಖ್ಯೆ ಹೆಚ್ಚಿತು. ಆಗ ನೋಡುವವರ ದೃಷ್ಟಿಕೋನವೂ ಬದಲಾಯಿತು. 
 
‘ಕರ್ನಾಟಕ ಸಂಗೀತದ 10 ರಾಗ, 50 ಕೀರ್ತನೆಗಳನ್ನು ನುಡಿಸಬಲ್ಲೆ. ದೇವಕಾರ್ಯ, ಮದುವೆ, ಉಪನಯನ, ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನನಗೆ ಒಳ್ಳೆಯ ಅವಕಾಶ ಸಿಗುತ್ತದೆ. ಹಿಮಾಲಯದ ವೈಷ್ಣೋದೇವಿ ಸನ್ನಿಧಿಯಲ್ಲೂ ನಾಗಸ್ವರ ಕಛೇರಿ ನೀಡಿದ್ದೇನೆ. ಜೇಸುದಾಸ್ ಅವರ ಕಾರ್ಯಕ್ರಮವೊಂದರಲ್ಲಿ ನಾದಸ್ವರ ವಾದನ ಸ್ವಾಗತ ತಂಡದಲ್ಲಿದ್ದೆ. ಶಿವಾಜಿ ಗಣೇಶನ್, ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಎದುರು ಹಲವು ಬಾರಿ ನಾದಸ್ವರ ವಾದನ ನಡೆಸಿಕೊಟ್ಟಿದ್ದೇನೆ’.
 
**
ರಾಷ್ಟ್ರಪತಿಗಳಿಂದ ಶ್ಲಾಘನೆ
ಪ್ರತಿಭಾ ಪಾಟೀಲ್‌ ಮತ್ತು ಎ.ಪಿ.ಜೆ ಅಬ್ದುಲ್ ಕಲಾಂ  ಅವರು ರಾಷ್ಟ್ರಪತಿಗಳಾಗಿದ್ದ ವೇಳೆ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಅವರ ಎದುರು ನಡೆದ  ಮಹಿಳಾ ಸಂಗೀತ ಕಛೇರಿಯಲ್ಲಿ ನನ್ನ ನಾದಸ್ವರ ವಾದನವಿತ್ತು. ಅವರು ‘ಮಹಿಳೆಯ ನಾದಸ್ವರ ಸಾಧನೆ ಖುಷಿ ತಂದಿದೆ’ ಎಂದು ಶ್ಲಾಘಿಸಿದ್ದರು ಎಂದು ನೆನೆದು ಪುಳಕಗೊಳ್ಳುತ್ತಾರೆ, ಧನಲಕ್ಷ್ಮಮ್ಮ.
 
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಗಳ ಮದುವೆ ಸಂದರ್ಭ ಏರ್ಪಡಿಸಲಾದ ‘ನವಕನ್ಯೆಯರು’ ವಿಶೇಷ ಕಛೇರಿಯಲ್ಲಿ ತಮ್ಮ ಮಗಳೊಂದಿಗೆ ನೀಡಿದ ಕಛೇರಿ, ಪುಟ್ಟಪರ್ತಿಯಲ್ಲಿ ಸಾಯಿಬಾಬಾ ಅವರ ಸಮ್ಮುಖದಲ್ಲಿನ ಕಛೇರಿ ಅವಿಸ್ಮರಣೀಯ ಎನ್ನುತ್ತಾರೆ ಅವರು. 
 
**
ಚಲನಚಿತ್ರಗಳಲ್ಲಿ ಸಿಕ್ಕಿದ ಮನ್ನಣೆ
ಗಜಪತಿ ಗರ್ವಭಂಗ, ಮೃತ್ಯುಂಜಯ, ಅನುರಾಗ ಸಂಗಮ, ಬಾ ನಲ್ಲೆ ಮಧುಚಂದ್ರಕೆ, ಅರಸು ಮತ್ತು ಶಂಕರ್‌ನಾಗ್ ಅವರ ಚಿತ್ರವೊಂದರಲ್ಲಿ ಕಛೇರಿ ನಡೆಸಿಕೊಟ್ಟಿದ್ದೇನೆ. ಮಗಳು ಆರ್‌. ಪ್ರಭಾವತಿ ಪಳನಿವೇಲು, ಮಗ ಆರ್. ಮಂಜುನಾಥ, ಸೊಸೆ ಪ್ರಮೀಳಾ ನಾದಸ್ವರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂಬುದು ನನಗೆ ಹೆಮ್ಮೆ ಎನ್ನುತ್ತಾರೆ ಧನಲಕ್ಷ್ಮಿ.
 
**
ನಾದಸ್ವರ ವಾದನದಿಂದ ನನ್ನ ಆರೋಗ್ಯಕ್ಕೆ ತೊಂದರೆಯಾಗಿಲ್ಲ. ಆಲಸ್ಯ, ಜ್ವರ ಬಂದಾಗ ಅರ್ಧ ಗಂಟೆ ಕುಳಿತು ನಾದಸ್ವರ ವಾದನ ಮಾಡಿದರೆ, ಶರೀರ ಹಗುರವಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ.
ಧನಲಕ್ಷ್ಮಮ್ಮ ರಾಮಕೃಷ್ಣಪ್ಪ,
ನಾದಸ್ವರ ವಾದಕಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT