ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಚಲನೆಯಲ್ಲಿ ಭವಿಷ್ಯದ ಹೊಂಗನಸು!

Last Updated 4 ಜನವರಿ 2015, 19:30 IST
ಅಕ್ಷರ ಗಾತ್ರ

ಬಾಲ್ಯದಿಂದಲೇ ನೃತ್ಯದತ್ತ ತೀವ್ರ ಒಲವು ಬೆಳೆಸಿಕೊಂಡಿದ್ದ ಹುಡುಗನೊಬ್ಬ ತನ್ನ ಓದಿಗೂ ಪೂರ್ಣವಿರಾಮ ಕೊಟ್ಟು ನೃತ್ಯ ತಂಡವೊಂದನ್ನು ಕಟ್ಟಿದ. ಆರಂಭದಲ್ಲಿ ಇದ್ದದ್ದು ನಾಲ್ಕು ಜನ. ಈಗ ಇಪ್ಪತ್ತು ಜನ ಇದ್ದಾರೆ. ಆ ತಂಡದ ಹೆಸರು ಶ್ಯಾಡೋಸ್ ಒನ್. ತಂಡ ಕಟ್ಟಿದ ರೂವಾರಿಯ ಹೆಸರು ತೇಜಸ್.

ಸಪ್ತಗಿರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂಜಿನಿಯರಿಂಗ್‌ನಲ್ಲಿರುವಾಗಲೇ ತೇಜಸ್‌ ಕಾಲು ಕ್ಲಾಸ್‌ ರೂಂನ ನಾಲ್ಕು ಗೋಡೆಯ ಮಧ್ಯೆ ನಿಲ್ಲಲಾರದೇ ಒದ್ದಾಡುತ್ತಿತ್ತು. ಹೇಗೋ ಎಂಜಿನಿಯರಿಂಗ್ ಮೊದಲನೇ ವರ್ಷ ಮುಗಿಸಿದ್ದಾಯಿತು. ಎರಡನೇ ವರ್ಷಕ್ಕೆ ಬಂದಾಗ ಮನಸ್ಸು ಯಾರ ಮಾತು ಕೇಳುವುದಕ್ಕೂ ಸಿದ್ಧವಿರಲಿಲ್ಲ. ಬದಲಿಗೆ ತೇಜಸ್‌ ಅವರೇ ಮನಸ್ಸಿನ ಮಾತಿಗೆ ಮಣಿಯಲು ನಿರ್ಧರಿಸಿದರು. ಈ ಓದು, ಎಂಜಿನಿಯರಿಂಗ್ ತಮಗಲ್ಲ ಎಂದು ಕ್ಲಾಸ್‌ ರೂಂನಿಂದ ಹೊರಗೆ ಬಂದು ಡಾನ್ಸ್‌ ಕ್ಲಾಸ್‌ನತ್ತ ಹೆಜ್ಜೆ ಹಾಕಿದರು. ಅಲ್ಲಿಂದ ಹಿಂತಿರುಗಿ ನೋಡಲಿಲ್ಲ ತೇಜಸ್.

ತಂಡ ಕಟ್ಟಿದ ಕತೆ
2003ರಲ್ಲಿ ಮಲ್ಲೇಶ್ವರ 13ನೇ ಕ್ರಾಸ್‌ನಲ್ಲಿ ತೇಜಸ್ ಶ್ಯಾಡೋಸ್ ಒನ್ ಎಂಬ ತಂಡ ಕಟ್ಟಿದರು. ಈ ತಂಡ ರೂಪಿಸುವಲ್ಲಿ ಅವರಿಗೆ ಸಾಥ್ ನೀಡಿದ್ದೂ ಅಲ್ಲದೇ ತಂಡಕ್ಕೆ ಹೆಸರಿಟ್ಟಿದ್ದು ಗೆಳೆಯ ಸ್ಫೂರ್ತಿ ಕಿರಣ್. ಯಾವಾಗಲೂ ನಂಬರ್ ಒನ್ ಆಗಿರಬೇಕು ಎಂಬ ಆಸೆಯಿಂದ ಈ ಹೆಸರನ್ನು ತಂಡಕ್ಕೆ ಇಟ್ಟರು. ಇವರಿಬ್ಬರೊಟ್ಟಿಗೆ ಬೀನ್‌ ರಾಜ್, ಅರವಿಂದ್‌ ಕಾಮತ್, ಭಾಗ್ನ, ಶ್ವೇತಾ, ಬಸೀದ್, ನವೀನ್ ಇವರೆಲ್ಲ ತಂಡದ ಆರಂಭಿಕ ಸದಸ್ಯರು.

ಎದುರಿಸಿದ ಸವಾಲುಗಳು
ಆರಂಭದ ದಿನಗಳಲ್ಲಿ ಸರಿಯಾದ ಸ್ಥಳವಕಾಶ ಇಲ್ಲದೆ ಈ ಹುಡುಗರು ಜಿಮ್‌ವೊಂದರಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದರು. ಓದನ್ನು ತೊರೆದು, ನೃತ್ಯದ ಗುಂಗಿಗೆ ಬಿದ್ದು ಎದುರಿಸಿದ ಸವಾಲುಗಳು, ಸವೆಸಿದ ಹಾದಿಯ ಕುರಿತು ತೇಜಸ್ ಹೇಳುವುದು ಹೀಗೆ:
‘ಓದು ಬಿಟ್ಟು ನೃತ್ಯ ತಂಡ ಕಟ್ಟಿದ್ದಕ್ಕೆ ನನಗೆ ಯಾವತ್ತೂ ಪಶ್ಚಾತ್ತಾಪ ಆಗಿಲ್ಲ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರಬೇಕು ಎಂಬುದು ನನ್ನ ಆಸೆ ಆಗಿತ್ತು. ಹಾಗಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಮನೆಯಲ್ಲಿ ಮೊದಲು ವಿರೋಧ ವ್ಯಕ್ತವಾದರೂ ನಂತರ ಸುಮ್ಮನಾದರು. ಅವರಿಗೆ ಮಗ ಎಂಜಿನಿಯರ್‌ ಆಗಬೇಕು ಎಂಬ ಆಸೆ ಇತ್ತು. ಆದರೆ ನನ್ನಾಸೆ ಡಾನ್ಸರ್ ಆಗುವುದಾಗಿತ್ತು’ ಎನ್ನುತ್ತಾರೆ ತೇಜಸ್.

ತೇಜಸ್ ತಮ್ಮ ಮನೆಯವರನ್ನೇನೋ ಒಪ್ಪಿಸಿ ನೃತ್ಯದತ್ತ ಹೆಜ್ಜೆ ಹಾಕಿದ್ದರು. ಆದರೆ ಇವರ ಮುಂದಿದ್ದ ಸಮಸ್ಯೆ ನೃತ್ಯಭ್ಯಾಸ ಮಾಡುವುದು ಎಲ್ಲಿ ಎಂದು. ಮತ್ತಿಕೆರೆ ಬಳಿಯ ಜಿಮ್‌ವೊಂದರಲ್ಲಿ ಗಂಟೆಗೊಂದಿಷ್ಟು ಎಂದು ಬಾಡಿಗೆ ತೆತ್ತು ದಿನವೂ ಎರಡರಿಂದ ನಾಲ್ಕು ಗಂಟೆವರೆಗೆ ಅಭ್ಯಾಸ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಬಳಸಿಕೊಂಡು ಕೆಲವು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಲು ಶುರುಮಾಡಿದರು. ಅಲ್ಲಿ ಸಿಕ್ಕ ಹಣವನ್ನೆಲ್ಲಾ ಒಗ್ಗೂಡಿಸಿಕೊಂಡು ಮಲ್ಲೇಶ್ವರ ಹದಿಮೂರನೇ ಕ್ರಾಸ್‌ನಲ್ಲಿ ‘ಶ್ಯಾಡೋಸ್ ಒನ್’ ಎಂಬ ನೃತ್ಯತಂಡ ಶುರುಮಾಡಿದರು. ಇವರ ಮೊದಲ ನೃತ್ಯ ಪ್ರದರ್ಶನಕ್ಕೆ ಸಿಕ್ಕ ಹಣ 500 ರೂಪಾಯಿ. ಆ ಹಣವನ್ನು ತೇಜಸ್ ತಂಡಕ್ಕಾಗಿ ಬಳಸಿಕೊಂಡರು. ಈಗ ಈ ತಂಡ ಒಂದು ನೃತ್ಯ ಪ್ರದರ್ಶನಕ್ಕೆ ತೆಗೆದುಕೊಳ್ಳುವ ಸಂಭಾವನೆ 40 ಸಾವಿರ ರೂಪಾಯಿ.

‘ನೃತ್ಯ ತಂಡ ಕಟ್ಟುವುದು ಅಂದುಕೊಂಡಷ್ಟು ಸುಲಭವಲ್ಲ. ಸವಾಲುಗಳನ್ನು ಸ್ವೀಕರಿಸುತ್ತಾ ಹೊಸ ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಅವುಗಳೇ ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಮನುಷ್ಯನಿಗೆ ಸಾಧಿಸುವ ಛಲವಿರಬೇಕು’ ಎನ್ನುತ್ತಾರೆ ಈ ನೃತ್ಯಪ್ರೇಮಿ.

ಖುಷಿ ನೀಡಿದ ಕ್ಷಣಗಳು...
ನಗರದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ ಈ ತಂಡದವರ ಮನಸ್ಸಿನಲ್ಲಿ ಖುಷಿಯ ನೆನಪುಗಳೂ ಬಹಳಷ್ಟಿವೆ. ಕಾರ್ಯಕ್ರಮವೊಂದರಲ್ಲಿ ನೃತ್ಯಪಟು ಪ್ರಭುದೇವ್ ಅವರೊಂದಿಗೆ ಹೆಜ್ಜೆ ಹಾಕಿದ ಹೆಗ್ಗಳಿಕೆ ಈ ತಂಡದ್ದು. ಆಡಿಯೊ ಬಿಡುಗಡೆ ಸಮಾರಂಭವೊಂದಕ್ಕೆ ಎ.ಆರ್. ರೆಹಮಾನ್ ಬಂದಿದ್ದಾಗ ಅವರಿಗಾಗಿ ಈ ತಂಡದ ಸದಸ್ಯರು ವಿಜುವಲ್ ಆ್ಯಕ್ಟ್ ಮಾಡಿ, ಅವರಿಂದ ಭೇಷ್ ಅನಿಸಿಕೊಂಡ ಸವಿ ನೆನಪನ್ನೂ ಖುಷಿಯಿಂದ ಮೆಲುಕುಹಾಕುತ್ತಾರೆ.

‘ನಾನು ಪ್ರಭುದೇವ ಅವರ ನೃತ್ಯ ನೋಡಿ ಬೆಳೆದಿದ್ದೆ. ಕಾರ್ಯಕ್ರಮವೊಂದರಲ್ಲಿ ಅವರ ಜತೆ ನೃತ್ಯ ಮಾಡುವಾಗ ತುಂಬ ಖುಷಿಯಾಗಿತ್ತು. ನಮ್ಮ ಜತೆ ಅವರು ನೃತ್ಯಭ್ಯಾಸ ಮಾಡುವುದಕ್ಕೂ ಬಂದಿದ್ದರು. ಅವರ ಜತೆ ಕಳೆದ ಆ ಕ್ಷಣ ಅವಿಸ್ಮರಣೀಯ’ ಎನ್ನುತ್ತಾರೆ ತೇಜಸ್.

ಆಡಿಯೊ ಬಿಡುಗಡೆ ಸಂದರ್ಭದಲ್ಲಿ ನಡೆಯುವ ನೃತ್ಯ ಕಾರ್ಯಕ್ರಮಕ್ಕಾಗಿ  ಶಿವರಾಜ್‌ ಕುಮಾರ್, ಉಪೇಂದ್ರ ಅವರಿಗೂ ನೃತ್ಯ ಕಲಿಸಿಕೊಟ್ಟ ಗರಿಮೆ ಈ ತಂಡದ್ದು.

ಈಗ ಸಿನಿಮಾ ಕ್ಷೇತ್ರದಲ್ಲಿರುವ  ಸಿಂಧು ಲೋಕನಾಥ್, ಭಾವನಾ ರಾವ್ ಇವರ ತಂಡದ ಸದಸ್ಯರಾಗಿದ್ದವರು.
ಹಿಪ್‌–ಹಾಪ್, ಬಿ–ಬೋಯಿಂಗ್, ಸ್ಟಾಂಪಿಂಗ್, ಕ್ರಂಪಿಂಗ್, ಲ್ಯಾಟಿನ್, ಬಾಲಿವುಡ್ ಶೈಲಿಯ ನೃತ್ಯ ಪ್ರದರ್ಶನ ನೀಡುತ್ತಾರೆ. ಹೊಸ ಹೊಸ ನೃತ್ಯ ಕಲಿಕೆಗಾಗಿ ಈ ತಂಡದವರು ಊರೂರು ಸುತ್ತುತ್ತಾರೆ. ಹೊಸತನ್ನು ಕಂಡಾಗ ಅದನ್ನು ತಮ್ಮ ತಂಡದಲ್ಲಿ ಬಳಸಿಕೊಳ್ಳುತ್ತಾರೆ. ಪ್ರಸ್ತುತ ಈ ತಂಡದಲ್ಲಿರುವವರು ಮಂಜುನಾಥ್, ನವೀನ್ ಪ್ರಜ್ವಲ್, ಮುತ್ತುರಾಜ್, ಮೆಲ್ವಿನ್ ಹ್ಯಾಡಿ, ಬಾಬು, ಶ್ವೇತಾ, ಸುರೇಖಾ.

ಹೊಸ ನೃತ್ಯಗಾರರೂ ತಮ್ಮ ತಂಡ ಸೇರಬಹುದು ಎಂದು ಆಹ್ವಾನ ನೀಡುವ ತೇಜಸ್ ಅವರಿಗೆ ಸಿನಿಮಾರಂಗದಲ್ಲಿ ನಿರ್ದೇಶಕನ ಟೋಪಿ ಧರಿಸುವ ಹಂಬಲವೂ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT