ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಟ್‌ ಪೇಂಟಿಂಗ್‌ ಚಿತ್ತಾರ

Last Updated 9 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಕಲೆ ಕರಗತವಾಗುತ್ತಾ ಹೋದಂತೆ ಮನಸ್ಸು ಹೊಸತನದ ಹುಡುಕಾಟದಲ್ಲಿ ತೊಡಗುತ್ತದೆ. ಅದೇ ಆಸೆಗೆ ಕಟ್ಟುಬಿದ್ದು ವಿಭಿನ್ನ ಕಲೆಯನ್ನು ತನ್ನದಾಗಿಸಿಕೊಳ್ಳುತ್ತಾ ಸಾಗಿದವರು ನಿವೇದಿತಾ ಚಿರಂತನ. ವಿಶೇಷ ಎನಿಸುವಂತಹ ಉಡುಗೊರೆಗಳನ್ನು ವಿಶೇಷ ಸಂದರ್ಭಗಳಲ್ಲಿ ಸ್ನೇಹಿತರಿಗೆ ನೀಡಿ ಖುಷಿಪಡುವ ಮನಸ್ಸು ಅವರದ್ದು. ಹೀಗಾಗಿಯೇ ತಾನೇ ತಯಾರಿಸಿದ ವಸ್ತುವೊಂದನ್ನು ನೀಡಬೇಕು ಎಂದು ಅವರ ಮನಸ್ಸು ಬಯಸಿ ಪಾಟ್‌ ಪೇಂಟಿಂಗ್‌ನತ್ತ ಅವರ ಮನಸ್ಸು ವಾಲಿತು.

ತಮ್ಮ ಆಸಕ್ತಿಯ ಕಲೆಗಾಗಿ ದೊಡ್ಡ, ಚಿಕ್ಕ ಪಾಟ್‌ಗಳನ್ನು ಕೊಂಡುತಂದು ಅದರ ಮೇಲೆ ಚಿತ್ತಾರ ಮೂಡಿಸಲು ಮುಂದಾದರು. ಕರಕುಶಲ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲದ ಅವರು ಆಭರಣ ತಯಾರಿಸುವುದು, ಕ್ರೋಶೆ, ಹೊಲಿಗೆ, ಪೇಂಟಿಂಗ್‌ ಮುಂತಾದವನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಪಾಟ್‌ ಪೇಂಟಿಂಗ್‌ ಅನ್ನೂ ತೀರಾ ಸುಲಭವಾಗಿ ಮಾಡಿದ ನಿವೇದಿತಾ ‘ಹೆಚ್ಚಿನ ಎಲ್ಲಾ ಸ್ನೇಹಿತರಿಗೆ ಇವುಗಳನ್ನೇ ಉಡುಗೊರೆಯಾಗಿ ನೀಡಿ ಹಿಗ್ಗಿದ್ದೆ’ ಎಂದು ನಗುತ್ತಾರೆ.

ಸಮಯ ಸಿಕ್ಕಾಗಲೆಲ್ಲಾ ಒಂದಲ್ಲ ಒಂದು ಕಲೆಗಾರಿಕೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳುವ ನಿವೇದಿತಾ ಪಾಟ್‌ ಪೇಂಟಿಂಗ್‌ ಕಲೆಯ ಪಟ್ಟುಗಳನ್ನು ಅಂತರ್ಜಾಲದಲ್ಲಿ ನೋಡಿ ಪುಳಕಿತರಾಗಿದ್ದು. ಪುಳಕದ ಆತುರದಲ್ಲೇ ಪಾಟ್‌ ಪೇಂಟಿಂಗ್‌ ಮಾಡಲು ಶುರುವಿಟ್ಟುಕೊಂಡ ಅವರಿಗೆ ತನ್ನ ಕೈಯಿಂದ ಅರಳಿದ ಕಲೆಯನ್ನು ನೋಡಿ ಆಶ್ಚರ್ಯದೊಂದಿಗೆ ಖುಷಿಯೂ ಆಯಿತು. ಹೆಚ್ಚಿನವರು ಕ್ಯಾನ್ವಾಸ್‌ ಹಾಗೂ ಪೇಪರ್‌ ಮೇಲೆ ಕಲ್ಪನೆಯನ್ನು ಹರಿಯಬಿಡುತ್ತಾರೆ. ಆದರೆ ತಾನು ವಿಭಿನ್ನವಾಗಿರಬೇಕು ಎಂಬುದು ನಿವೇದಿತಾ ಅವರ ಬಯಕೆ.

‘ಪಾಟ್‌ ಪೇಂಟಿಂಗ್‌ ಮಾಡಬೇಕು ಎಂಬ ಯೋಚನೆ ಬಂದ ಕೂಡಲೇ 3ಡಿ ಚಿತ್ರಗಳನ್ನು ಬಿಡಿಸಬೇಕು ಎಂದು ನಿರ್ಧರಿಸಿದೆ. ಅಲ್ಲಿ ಸೃಜನಶೀಲತೆಗೆ ಹೆಚ್ಚು ಅವಕಾಶವಿದ್ದು, ಮನಸ್ಸಿಗೆ ತೋಚಿದ್ದನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವ ಅವಕಾಶಗಳಿವೆ’ ಎನ್ನುವ ಅವರು ಅಂದಚೆಂದದ ಪಾಟ್‌ಗಳು ಕಂಡಕೂಡಲೇ ಅವುಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ‘ಪೇಂಟಿಂಗ್‌ ನನಗೆ ಹೆಚ್ಚು ಖುಷಿ ಕೊಡುತ್ತದೆ. ಕೈಯಲ್ಲಿ ಕುಂಚ ಹಿಡಿದು ಚಿತ್ರವಾಗುವಷ್ಟು ಹೊತ್ತು ನಾನು ಬೇರೆಯದೇ ಪ್ರಪಂಚದಲ್ಲಿರುತ್ತೇನೆ. ಸಮಯ ಕಳೆದದ್ದರ ಅರಿವು ನನಗಿರುವುದಿಲ್ಲ. ಮನಸ್ಸಿಗೆ ಸಂತೋಷ, ನೆಮ್ಮದಿ ಎರಡೂ ಇದರಿಂದ ದಕ್ಕುತ್ತದೆ.

ಒಮ್ಮೆಲೇ ಹಿಡಿದ ಕೆಲಸ ಮುಗಿಸುವುದು ನನಗೆ ಅಸಾಧ್ಯ. ಯಾಕೆಂದರೆ ಐದು ವರ್ಷದ ಮಗನಿದ್ದಾನೆ. ಅವನ ಬೇಕು ಬೇಡಗಳನ್ನು ನೋಡಿಕೊಂಡು ಕಲಾದಾರಿಯಲ್ಲಿ ಪಯಣಿಸುವ ನನಗೆ ಏಳು ಇಂಚಿನ ಪಾಟ್‌ ಮೇಲೆ ಚಿತ್ರ ಮೂಡಿಸಿ ಮುಗಿಸಲು ಕನಿಷ್ಠ 30ರಿಂದ 40 ಗಂಟೆ ಬೇಕಾಗುತ್ತದೆ. ಆತ ಶಾಲೆಗೆ ಹೋದಾಗ ಸಿಗುವ ಸಮಯದಲ್ಲಿ ಕುಂಚ ಹಿಡಿದು ಕೂರುತ್ತೇನೆ’ ಎನ್ನುತ್ತಾರೆ ಅವರು. ಹಸೆ (ವಾರ್ಲಿ) ಚಿತ್ರಕಲೆಗೆ ಹೆಚ್ಚು ಪ್ರಾಧಾನ್ಯ ಇರುವ ಶಿವಮೊಗ್ಗದವರು ನಿವೇದಿತಾ. ‘ಅಲ್ಲಿ ಪ್ರತಿ ಮನೆಯಲ್ಲೂ ಈ ಚಿತ್ರದ ಗಂಧವಿದೆ.

ಹೀಗಾಗಿ ಕಲೆ ತನ್ನಲ್ಲಿ ಸಹಜವಾಗಿಯೇ ಮೈಗೂಡಿತು’ ಎನ್ನುವ ಅವರು, ಪಾಟ್‌ಗಳ ಮೇಲೂ ವಾರ್ಲಿ ಚಿತ್ರ ಮೂಡಿಸುತ್ತಾರೆ. ಪೇಂಟಿಂಗ್‌ ಎಂದರೆ ಅದು ಬಣ್ಣಗಳ ತೇರು ಎನ್ನುವುದು ನಿವೇದಿತಾ  ಭಾವನೆ. ಈ ಪೇಂಟಿಂಗ್‌ ನೋಡಿದರೇ ಅವರಿಗೆ ಬಣ್ಣಗಳ ಬಗ್ಗೆ ವಿಶೇಷ ಒಲವಿದೆ ಎಂಬುದು ಅರ್ಥವಾಗುತ್ತದೆ. ಬಣ್ಣಗಳ ಲೇಪನದಲ್ಲಿಯೇ ಚಿತ್ರಗಳ ಪ್ರಾಮುಖ್ಯವನ್ನು ಎತ್ತಿಹಿಡಿಯಬಹುದು ಎನ್ನುವ ಅವರು, ಆಕ್ರಿಲಿಕ್‌ ಪೇಂಟ್‌ ಅನ್ನು ಹೆಚ್ಚು ಬಳಸುತ್ತಾರೆ.

ಟೆರ್ರಾಕೋಟಾ ಮೇಲೆ ಆಕ್ರಿಲಿಕ್‌ ಪೇಂಟ್‌ನಿಂದ ಅಂದವಾದ ಚಿತ್ರ ಮೂಡಿಸಬಹುದು ಎಂಬುದು ಅವರ ಈ ಆಯ್ಕೆಗೆ ಕಾರಣ. ಪೇಂಟಿಂಗ್‌ ಮಾಡುವುದಕ್ಕೂ ಮುನ್ನ ಪಾಟ್‌ ಅನ್ನು ನುಣುಪಾಗಿಸಿಕೊಳ್ಳುವ ಅವರು ಚಿತ್ರಗಳ ಹಿನ್ನೆಲೆ ಹೆಚ್ಚು ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ. ‘ಹಿನ್ನೆಲೆ ಅಂದವಾಗಿದ್ದಷ್ಟೂ ಚಿತ್ರ ಎದ್ದು ಕಾಣುತ್ತದೆ’ ಎನ್ನುವ ಅವರು, ಪಾಟ್‌ನಲ್ಲಿ ಹೊಳಪು ಮೂಡಿಸುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT