ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನನಗೊಂದು ಅಚ್ಚರಿ

ನಾ ಕಂಡ ಬೆಂಗಳೂರು
Last Updated 29 ಜನವರಿ 2017, 20:14 IST
ಅಕ್ಷರ ಗಾತ್ರ

ನಾನು 1959ರಲ್ಲಿ ಅಧ್ಯಾಪಕಿಯಾಗಿ ಬೆಂಗಳೂರಿಗೆ ಬಂದೆ. ಆಗ ನನ್ನ ಪಾಲಿಗೆ ಬೆಂಗಳೂರು ಅಂದರೆ  ಅಚ್ಚರಿ, ವಿಸ್ಮಯ, ಸ್ವಲ್ಪ ಆತಂಕ, ಸ್ವಲ್ಪ ಭಯ. 2017ರಲ್ಲೂ ಈ ಭಾವ ತುಸುವೂ ಬದಲಾಗಿಲ್ಲ.

ನನ್ನ ತವರು ತುಮಕೂರು ಹಾಗೂ ವಿದ್ಯೆಯ ಬೆಳಕು ಕೊಟ್ಟ ಮೈಸೂರು ದೊಡ್ಡ ನಗರಗಳೇ ಸೈ. ಆದರೆ ಆ ಎರಡೂ ನಗರಗಳಿಗಿಂತಾ ವಿಭಿನ್ನ ಅನುಭವಗಳನ್ನು ನೀಡಿದ್ದು ಬೆಂಗಳೂರು.


ಎಂ.ಎ ಪರೀಕ್ಷೆ ಮುಗಿದು, ಫಲಿತಾಂಶ ಬಂದು ವಾರ ಕಳೆದಿತ್ತು. ಅಂಕಪಟ್ಟಿ ತರೋಣ ಎಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಹೋದರೆ, ರಿಜಿಸ್ಟ್ರಾರ್, ‘ನಿಮ್ಮನ್ನು ಬೆಂಗಳೂರು ಮಹಾರಾಣಿ ಕಾಲೇಜಿಗೆ ಕನ್ನಡ ಅಧ್ಯಾಪಕಿಯಾಗಿ ನೇಮಿಸಲಾಗಿದೆ’ ಎಂದು ನೇಮಕ ಪತ್ರ ಕೊಟ್ಟರು.

ಸೆಪ್ಟೆಂಬರ್ 10, 1959ರಂದು ಅಣ್ಣನ ಜೊತೆ ಮಹಾರಾಣಿ ಕಾಲೇಜಿಗೆ ಬಂದು ಅಧ್ಯಾಪಕಿಯಾಗಿ ಕರ್ತವ್ಯಕ್ಕೆ ಹಾಜರಾದೆ. ಆ ಕಾಲಕ್ಕೆ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ನನಗೆ ಆಗ 23ರ ಹರೆಯ. ಇಲ್ಲಿನ ವಿದ್ಯಾರ್ಥಿನಿಯರು ‘ಘಾಟಿ ಹುಡುಗಿಯರು’ ಎಂಬ ಅಳುಕಿತ್ತು.

ಮೊದಲ ತರಗತಿಗೆ ‘ಐತಿಹಾಸಿಕ ಕಾದಂಬರಿ’ ಪಾಠ ಮಾಡಬೇಕಿತ್ತು. ಗುರುಗಳಾದ ಡಿ.ಎಲ್.ನರಸಿಂಹಾಚಾರ್ಯರ  ವಿದ್ವತ್ತು ನನ್ನ ನೆರವಿಗೆ ಬಂತು. ತರಗತಿ ಮುಗಿದ ಬಳಿಕ ಏಳೆಂಟು ವಿದ್ಯಾರ್ಥಿನಿಯರು ಬಂದು, ‘ತುಂಬಾ ಚೆನ್ನಾಗಿ ಪಾಠ ಮಾಡಿದಿರಿ ಮೇಡಂ, ಇಷ್ಟವಾಯಿತು’ ಎಂದರು. ‘ಘಾಟಿ ಹುಡುಗಿಯರು' ಭಾವನೆ ಮರೆಯಾಯಿತು.

ಕೆಲಸಕ್ಕೆ ಸೇರಿದಾಗ ನನ್ನ ಕುಟುಂಬಕ್ಕೆ ಆರ್ಥಿಕ ಸಂಕಷ್ಟಗಳಿದ್ದವು. ಅಣ್ಣ ಸಿ.ಆರ್.ಕೇಶವಮೂರ್ತಿ ಕಾರ್ಮಿಕ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದರು. ಆರಂಭದಲ್ಲಿ ಶೇಷಾದ್ರಿಪುರದಲ್ಲಿದ್ದ ಅವನ ಮನೆಯೇ ನನ್ನ ವಾಸಸ್ಥಾನವಾಗಿತ್ತು.

ಆಗ ಬಿಎಂಟಿಸಿ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. 11ನೇ ನಂಬರಿನ ಒಂದು ಬಸ್ಸು ಮಲ್ಲೇಶ್ವರಂ 18ನೇ ಕ್ರಾಸ್‌ನಿಂದ ಹೊರಟು ಶೇಷಾದ್ರಿಪುರ, ಆನಂದರಾವ್ ಸರ್ಕಲ್, ಮಹಾರಾಣಿ ಕಾಲೇಜು ಮೂಲಕ ಬಸವನಗುಡಿಗೆ ಹೋಗುತ್ತಿತ್ತು.

ನಾನು ಶೇಷಾದ್ರಿಪುರದಿಂದ ಆ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ಹಿಂತಿರುಗಿ ಬರುವಾಗ, ನಾನೂ ನನ್ನ ಹಿರಿಯ ಗೆಳತಿಯರಾದ ತಮಿಳು ವಿಭಾಗದ ಕ್ಯಾಪ್ಟನ್ ನಾಗಂಬಾಳ್, ಸಂಸ್ಕೃತ ವಿಭಾಗದ ಸೀತಮ್ಮ- ಮೂವರು ಶೇಷಾದ್ರಿಪುರಕ್ಕೆ ನಡೆದು ಬರುತ್ತಿದ್ದೆವು.

ಶೇಷಾದ್ರಿ ರಸ್ತೆಯ ಎರಡು ಬದಿಯಲ್ಲಿ ಚಪ್ಪರದಂತೆ ಹರಡಿಕೊಂಡ ದೊಡ್ಡ ಮರಗಳು. ವರ್ಷದುದ್ದಕ್ಕೂ ಅವುಗಳ ನೆರಳಿನಿಂದ ರಸ್ತೆ ಯಾವಾಗಲೂ ತಂಪು ತಂಪು. ಮಂದಮಾರುತ, ಮರಗಳ ತುಂಬ ಹೂವುಗಳು, ಅವುಗಳ ಸುವಾಸನೆ- ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ’ ಎನ್ನುವ ಸರ್ವಜ್ಞ ಕವಿಯ ಮಾತಿಗೆ ಸಾಕ್ಷಿ ನುಡಿಯುತ್ತಿತ್ತು. ಆ ರಸ್ತೆ, ನನ್ನ ಬದುಕಿನ ಭಾವಕೋಶದಲ್ಲಿ ಚಿರಸ್ಥಾಯಿಯಾಗಿದೆ.

ಕೆಲದಿನಗಳಲ್ಲಿ ಅಣ್ಣನಿಗೆ ಕಲಬುರ್ಗಿಗೆ ವರ್ಗವಾಯಿತು. ಆಗ ನಾನು ಮಲ್ಲೇಶ್ವರದ 8ನೇ ಕ್ರಾಸ್ ಬಳಿ ಬರುವ ಕಾಡುಮಲ್ಲೇಶ್ವರ ದೇವಾಲಯದ ಬೀದಿಯಲ್ಲಿ ಒಂದು ವಠಾರದ ಮನೆಯೊಂದನ್ನು ಬಾಡಿಗೆಗೆ ಪಡೆದೆ. ಅಲ್ಲಿ ತಾಯಿ ರಂಗಲಕ್ಷ್ಮಮ್ಮ ಹಾಗೂ ತಮ್ಮ, ತಂಗಿಯೊಡನೆ ವಾಸಿಸತೊಡಗಿದೆ.

ಸಹಪಾಠಿ ಎಚ್.ಪಿ.ನಾಗರಾಜಯ್ಯ (ಹಂಪನಾ) ಅವರ ಜೊತೆ 1961ರಲ್ಲಿ ಮದುವೆಯಾಯಿತು. ಅದೇ ಮನೆಯಲ್ಲಿ 14 ವರ್ಷ ವಾಸವಿದ್ದೆವು. ನಮ್ಮ ವಠಾರದ ಮುಂಭಾಗದಲ್ಲಿ ವಿಶಾಲ ಬಯಲಿದ್ದು, ಕಾಂಪೌಂಡ್ ಹಾಕಲಾಗಿತ್ತು.

ಗಾಳಿ-ಬೆಳಕು ಚೆನ್ನಾಗಿತ್ತು. ಒಂದು ತುದಿಯಲ್ಲಿ ಬಾವಿ, ಬಟ್ಟೆ ಒಗೆಯುವ ಎರಡು ಕಲ್ಲುಗಳಿದ್ದವು. ಮನೆಗಳಿಗೆ ನಲ್ಲಿ ಸಂಪರ್ಕ ಇರಲಿಲ್ಲ. ಬಾವಿಯಿಂದ ನೀರು ಸೇದಿಕೊಳ್ಳುತ್ತಿದ್ದೆವು. ದೇಹಕ್ಕೆ ಚೆನ್ನಾಗಿ ವ್ಯಾಯಾಮವಾಗುತ್ತಿತ್ತು. ನೀರೂ ಸಮೃದ್ಧವಾಗಿತ್ತು ಅನ್ನಿ.

ಕಾಂಪೌಂಡಿನಲ್ಲಿದ್ದ ಒಟ್ಟು ಆರು ಮನೆಯವರೂ ಒಂದೇ ಕುಟುಂಬದ ಸದಸ್ಯರಂತೆ ಅನ್ಯೋನ್ಯವಾಗಿದ್ದೆವು. ಒಬ್ಬರ ಮನೆಯಲ್ಲಿ ಯಾವುದೇ ಸಮಾರಂಭವಾದರೂ ಎಲ್ಲರ ನಡುಮನೆಯಲ್ಲಿಯೇ ಬಾಳೆ ಎಲೆ ಹಾಕಿ ಊಟ ಬಡಿಸಲಾಗುತ್ತಿತ್ತು.

ಮಹಾರಾಣಿ ಕಾಲೇಜಿಗೆ ಸೇರ್ಪಡೆಗೊಂಡ 15 ದಿನಗಳಲ್ಲಿ ಕಬ್ಬನ್ ಪಾರ್ಕ್‌ನಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ 15 ರೂಪಾಯಿ ಕೊಟ್ಟು ಸದಸ್ಯಳಾದೆ. ಕೆಲಸದ ನಡುವೆ ಎರಡು ಗಂಟೆ ಬಿಡುವು ದೊರೆತರೆ ನನ್ನ ಕಾಲುಗಳು ಗ್ರಂಥಾಲಯದ ಕಡೆಗೆ ಓಟ ಕೀಳುತ್ತಿದ್ದವು. ನನ್ನ ಜ್ಞಾನಭಂಡಾರವನ್ನು ಹೆಚ್ಚಿಸಿದ ನಗರ ಕೇಂದ್ರ ಗ್ರಂಥಾಲಯ ನನ್ನ ಅತ್ಯಂತ ಮಹತ್ವದ ತಾಣ.

ಮಲ್ಲೇಶ್ವರದ ಸಂಪಿಗೆ ರಸ್ತೆ, ಮಾರ್ಗೋಸಾ (ಬೇವಿನ ಮರದ) ರಸ್ತೆ ಹಾಗೂ ಎಂಟನೇ ಕ್ರಾಸ್ ಜಾಗಗಳು ನನ್ನ ಪ್ರೀತಿಯ ಒಂದು ಪುಟ್ಟ ಪ್ರಪಂಚ. ಕಾಲೇಜಿಗೆ ಹೋಗಲು ಮಾರ್ಗೋಸಾ ರಸ್ತೆಯಲ್ಲಿನ ಸಿಟಿ ಬಸ್‌ ಸ್ಟಾಪ್‌ಗೆ ಹೋಗಿ ಸರತಿಯಲ್ಲಿ ನಿಲ್ಲಬೇಕಿತ್ತು. 

ಜನರ ವಿವಿಧ ಸಲ್ಲಾಪ, ಗೊಣಗಾಟಗಳನ್ನು ಆಲಿಸುತ್ತಿದ್ದೆ. ಒಮ್ಮೊಮ್ಮೆ ನಾನೂ ಸೇರುತ್ತಿದ್ದೆ. ಸಂಜೆ ಮನೆಗೆ ಹಿಂದಿರುಗಿ ಬರುವಾಗ 8ನೇ ಕ್ರಾಸ್‌ನ ಎರಡೂ ಬದಿಗಳಲ್ಲಿ ಇರುತ್ತಿದ್ದ ಅಂಗಡಿಗಳಲ್ಲಿ ವ್ಯಾಪಾರ ಮಾಡಿ ಮನೆಗೆ ಮರಳುತ್ತಿದ್ದೆ. ಒಂದು ಬಾರಿ ಒಂದು ಅಂಗಡಿಗೆ ಹೋದರೆ ಆ ಅಂಗಡಿ ನಮ್ಮದೇ ಏನೋ ಎನ್ನುವ ಭ್ರಮೆ ಹುಟ್ಟಿಸುವಂತಹ ಆತ್ಮೀಯತೆ ಮಾರಾಟಗಾರರ-ಕೊಳ್ಳುವವರ ಮಧ್ಯೆ ಏರ್ಪಡುತ್ತಿತ್ತು.

ತಿಪಟೂರು ತೆಂಗಿನಕಾಯಿ, ಸುವಾಸನೆ ಬೀರುತ್ತಿದ್ದ ಕಾಫಿಪುಡಿ ಅಂಗಡಿ, ಅರಿಸಿಣ–ಕುಂಕುಮ ರಾಶಿಯಿಂದ ಕಂಗೊಳಿಸುವ ಗ್ರಂಥಿಗೆ ಅಂಗಡಿಗಳು, ಸಂಪಿಗೆ ರಸ್ತೆಯ ಎಂಟನೇ ಕ್ರಾಸಿನ ಮೂಲೆಯಲ್ಲಿದ್ದ ಚೊಳ್ಳೆಹಣ್ಣಿನ ಮರ. ನನ್ನ ಅಣ್ಣನ ಮಕ್ಕಳನ್ನೋ, ಗ್ರಂಥಿಗೆ ಅಂಗಡಿಯ ಹುಡುಗನನ್ನೋ ಮರಕ್ಕೆ ಹತ್ತಿಸಿ ಹಣ್ಣು ಕೀಳಿಸಿಕೊಂಡು ತಿಂದ ಅಂಟಿನ ಹಣ್ಣಿನ ರುಚಿ- ಹೀಗೆ ಸಿಹಿ ನೆನಪುಗಳು.

ಎಂಟನೇ ಕ್ರಾಸಿನಲ್ಲಿರುವ ಗಾಂಧಿ ಸಾಹಿತ್ಯ ಸಂಘದಲ್ಲಿ ಸಂಜೆ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಸಭಿಕಳಾಗಿ ಹೋದುದಕ್ಕಿಂತಾ ಅತಿಥಿಯಾಗಿ ಹೋದದ್ದೇ ಜಾಸ್ತಿ.

ರಾಜರತ್ನಂ, ಪು.ತಿ.ನ ಸ್ನೇಹ
ಮಾರ್ಗೋಸಾ ರಸ್ತೆಯ ಎಂಟನೇ ಕ್ರಾಸಿನ ಮೂಲೆಯಲ್ಲಿ ಮಲ್ಲೇಶ್ವರಂ ಟಿಫನ್ ರೂಮ್ ಇತ್ತು. ಜಿ.ಪಿ.ರಾಜರತ್ನಂ ಅವರಿಗೆ ಇದು ಪ್ರಿಯವಾದ ಜಾಗ. ಅವರು ಹರಟೆಗಾಗಿ ನಮ್ಮನ್ನು ಅಲ್ಲಿಗೆ ಕರೆಸುತ್ತಿದ್ದರು. ಅವರೊಂದಿಗೆ ಮಾತನಾಡುತ್ತಾ ಜಾಮೂನ್, ಕೇಸರಿಬಾತ್, ಮಸಾಲೆದೋಸೆ ಮೆಲ್ಲುತ್ತಿದ್ದೆವು. 14ನೇ ಕ್ರಾಸಿನಲ್ಲಿದ್ದ ಸಾಹಿತಿ ಪು.ತಿ.ನರಸಿಂಹಚಾರ್ ಸಹ ಆತ್ಮೀಯರಾಗಿ ದ್ದರು. ಅವರ ಮಕ್ಕಳು ನನ್ನ ವಿದ್ಯಾರ್ಥಿನಿಯರಾಗಿದ್ದರು.

ಈಗ ಬೆಂಗಳೂರಿನಲ್ಲಿ ಎಲ್ಲವೂ ಬದಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಆತಂಕವನ್ನು ಹೆಚ್ಚಿಸಿದೆ. ನಾನು ಇದೇ ಬೆಂಗಳೂರಿನಲ್ಲಿ ಹೆಚ್ಚಿನದನ್ನು ಪಡೆದಿದ್ದೇನೆ. ಸ್ವಲ್ಪ ಕಳೆದುಕೊಂಡಿದ್ದೇನೆ.

ರಸ್ತೆಯ ತಂಪು ನೆರಳಿನ ಮರಗಳು ಶೂನ್ಯ ಸ್ಥಿತಿಗೆ ತಲುಪಿವೆ. ನಾವು ವಾಸವಿದ್ದ ಮನೆಗಳ ಜಾಗದಲ್ಲಿಂದು ದೊಡ್ಡ ಅಪಾರ್ಟ್‌ಮೆಂಟ್ ಬಂದಿದೆ. ಪ್ರಶಾಂತವಾಗಿದ್ದ ದೇವಾಲಯ ಬೀದಿ ಇಂದು ವೈವಿಧ್ಯಮಯ ಅಂಗಡಿ, ಹೋಟಲುಗಳಿಂದ ತುಂಬಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT