ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಜ್ ರೋಮಾಂಚನ...

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಮೂವತ್ತು ಡಿಗ್ರಿ ಕೋನದಲ್ಲಿ ನಿರ್ಮಿಸಲಾಗಿರುವ ಟ್ರ್ಯಾಕ್‌ನಲ್ಲಿ ಚಲಿಸುವ ವಾಹನ ಕೆಲವು ಸೆಕೆಂಡುಗಳ ಕಾಲ ಅದೇ ಕೋನದಲ್ಲಿ ನಿಲ್ಲುವಾಗ ವಾಹನದಲ್ಲಿ ಕುಳಿತಿದ್ದವರ ಹೃದಯಬಡಿತ ಹೆಚ್ಚಾಗಿತ್ತು.
 
ನಲವತ್ತು ಡಿಗ್ರಿ ಕೋನದಲ್ಲಿ ನಿರ್ಮಿಸಿದ್ದ ಗುಡ್ಡವನ್ನು ಹೋಲುವ ಟ್ರ್ಯಾಕನ್ನು ವಾಹನ ನಿಧಾನವಾಗಿ ಏರುತ್ತಿದ್ದಾಗ, ಏರುತ್ತಲೇ ಮಧ್ಯದಲ್ಲಿ ಒಂದಷ್ಟು ಸೆಕೆಂಡ್‌ಗಳಷ್ಟು ಅವಧಿ ನಿಂತಾಗ ಹೃದಯವೇ ಬಾಯಿಗೆ ಬಂದ ಅನುಭವ.

ಅದೇ ಟ್ರ್ಯಾಕ್‌ನಲ್ಲಿ ವಾಹನ ಹಿಮ್ಮುಖವಾಗಿ ಗುಡ್ಡ ಏರಿದಾಗಲಂತೂ ಅದರಲ್ಲಿ ಕುಳಿತಿದ್ದವರ ಬಾಯಲ್ಲಿ ಅಚ್ಚರಿ-ಭಯ ಮಿಶ್ರಿತವಾದ `ವಾಹ್... ಹೋ...~ ಉದ್ಗಾರ. ಪಕ್ಕದಲ್ಲೇ ಇದ್ದ ಚಾಲಕ ಅಷ್ಟೂ ಜನರನ್ನು ನೋಡಿ ಒಮ್ಮೆ ಮಂದಹಾಸ ಬೀರಿದ.

ಐಷಾರಾಮಿ ವಾಹನಗಳ ತಯಾರಿಕಾ ಕಂಪೆನಿ ಮರ್ಸಿಡಿಸ್ - ಬೆಂಜ್‌ನ ಎಂ-ಶ್ರೇಣಿ, ಜಿಎಲ್-ಶ್ರೇಣಿ ಮತ್ತು ಜಿ 55 ಎಎಂಜಿ ಎಸ್‌ಯುವಿಗಳು (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಈ ರೀತಿ ಕಸರತ್ತು ನಡೆಸುತ್ತಿರುವುದನ್ನು ಕಂಡ ಕುತೂಹಲಿಗಳ ಮುಖದಲ್ಲೂ ಅಚ್ಚರಿಯ ನಗು. ಮತ್ತೊಂದು ಕಡೆ ಕಂಪೆನಿಯ ಸಿ-ಶ್ರೇಣಿ ಮತ್ತು ಇ-ಶ್ರೇಣಿಯ ಸೆಡಾನ್ ಕಾರುಗಳು ಮತ್ತೊಂದು ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದವು.

ಬೆಂಜ್ ಅಭಿಮಾನಿಗಳನ್ನು ಕಾರಲ್ಲಿ ಕುಳ್ಳಿರಿಸಿ, ನುರಿತ ಚಾಲಕರು ಕಾರಿನಲ್ಲಿ ಅಳವಡಿಸಿರುವ ತಂತ್ರಜ್ಞಾನ, ಅದು ಕಾರ್ಯನಿರ್ವಹಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಿದ್ದರು.

ಇದ್ದಕ್ಕಿದ್ದಂತೆ ವೇಗವಾಗಿ ಚಲಿಸಿದ ಕಾರು ಎದುರಿಗೆ ಇರುವ ವಸ್ತುವಿಗೆ ಇನ್ನೇನು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದಾಗ ಕರ್ಕಶ ಶಬ್ದ ಮಾಡುತ್ತಾ ಕಾರು ತನ್ನ ಮುಖವನ್ನು ಮತ್ತೊಂದು ದಿಕ್ಕಿಗೆ ಮುಖಮಾಡಿ ನಿಂತಿತ್ತು.

ಕಾರಲ್ಲಿ ಕುಳಿತಿದ್ದವರು ಅಬ್ಬಾ ಎಂದು ಬಿಗಿ ಹಿಡಿದ ಉಸಿರನ್ನು ಬಿಡುವಷ್ಟರಲ್ಲಿ ಚಾಲಕ ಕಾರಿನ ಬ್ರೇಕ್ ವ್ಯವಸ್ಥೆ, ಅದರಲ್ಲಿ ಅಳವಡಿಸಿರುವ ತಂತ್ರಜ್ಞಾನದ ಬಗ್ಗೆ ವಿವರಣೆ ನೀಡುತ್ತಾ ಕಾರನ್ನು ಮುಂದಕ್ಕೆ ಚಲಾಯಿಸಿದ.

ಮರ್ಸಿಡಿಸ್-ಬೆಂಜ್ ಇಂಡಿಯಾ ಕಂಪೆನಿ ಮಾರತ್‌ಹಳ್ಳಿಯಲ್ಲಿರುವ ಇಜೋನ್‌ನಲ್ಲಿ ಆಯೋಜಿಸಿದ್ದ `ಸ್ಟಾರ್‌ಡ್ರೈವ್ ಎಕ್ಸ್‌ಪೀರಿಯನ್ಸ್~ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.

 `ಸ್ಟಾರ್‌ಡ್ರೈವ್ ಎಕ್ಸ್‌ಪೀರಿಯನ್ಸ್~- ಮರ್ಸಿಡಿಸ್-ಬೆಂಜ್ ಇಂಡಿಯಾದ ಪರಿಕಲ್ಪನೆ. ಈ ಕಾರ್ಯಕ್ರಮದಲ್ಲಿ ಕಂಪೆನಿ ತಯಾರಿಸಿರುವ ವಾಹನಗಳಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತಾ ಸೌಲಭ್ಯಗಳನ್ನು ವಾಹನ ಪ್ರಿಯರು, ಕಂಪೆನಿಯ ಗ್ರಾಹಕರಿಗೆ ವಿವರಿಸಲಾಗುತ್ತದೆ. ಚಾಲನೆ ವೇಳೆ ಎದುರಾಗುವ ಅತ್ಯಂತ ಕ್ಲಿಷ್ಟ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ನುರಿತ ಚಾಲಕರು ಪ್ರಾತ್ಯಕ್ಷಿಕೆ ಮೂಲಕ ಹೇಳುವುದು ಇದರ ವೈಶಿಷ್ಟ್ಯ.

ಬೆಂಜ್ ಕಳೆದ ಎರಡು ವರ್ಷಗಳಿಂದ ದೇಶದ ವಿವಿಧ ನಗರಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಹಿಂದೆ `ಸ್ಟಾರ್‌ಡ್ರೈವ್~ಗೆ ಜನರಿಂದ ಬಂದ ಉತ್ತಮ ಪ್ರತಿಕ್ರಿಯೆಯನ್ನು ಗಮನಿಸಿ ಈ ವರ್ಷ ಒಟ್ಟು ಐದು ನಗರಗಳಲ್ಲಿ ಇದನ್ನು ಆಯೋಜಿಸಿದೆ.

ಈಗಾಗಲೇ ಕೇರಳದ ಕೊಚ್ಚಿಯಲ್ಲಿ ಕಾರ್ಯಕ್ರಮ ನಡೆದಿದೆ. ಚೆನ್ನೈ, ದೆಹಲಿ, ಚಂಡೀಗಡ ಮತ್ತು ಮುಂಬೈ ನಗರಗಳಲ್ಲೂ`ಸ್ಟಾರ್‌ಡ್ರೈವ್~ ಕುತೂಹಲಿಗಳಿಗೆ ರೋಮಾಂಚನ ನೀಡಲಿದೆ.

ಬೆಂಗಳೂರಿನಲ್ಲಿ ನಡೆದ ಸ್ಟಾರ್‌ಡ್ರೈವ್‌ನಲ್ಲಿ ಜಿಎಲ್-ಶ್ರೇಣಿ, ಎಂಎಲ್-ಶ್ರೇಣಿ ಎಸ್‌ಯುವಿಗಳು, ಸಿ-ಶ್ರೇಣಿ, ಇ-ಶ್ರೇಣಿಯ ಸೆಡಾನ್ ಕಾರುಗಳು ಭಾಗವಹಿಸಿದ್ದವು. ಕಾಡು ಮೇಡು ರಸ್ತೆಗಳಿಗೆ ಹೇಳಿ ಮಾಡಿಸಿದಂತಿರುವ ಜಿ 55 ಎಎಂಜಿ ಎಲ್ಲರ ಗಮನ ಸೆಳೆಯಿತು.
ಈ ವಾಹನಗಳಲ್ಲಿ ಪ್ರಯಾಣದ ಅನುಭವ ಪಡೆದ ಜನರಿಗೆ ಚಾಲಕರು, ಪ್ರೊ- ಎಂಜಿಯರಿಂಗ್ ಪ್ಯಾಕೇಜ್, ಸ್ವಯಂ ಬ್ರೇಕಿಂಗ್ ವ್ಯವಸ್ಥೆ, 4ಇಟಿಎಸ್, ಡೌನ್ ಹಿಲ್ ಸ್ಪೀಡ್ ರೆಗ್ಯುಲೇಷನ್ (ಡಿಎಸ್‌ಆರ್) ಸೇರಿದಂತೆ ಅಂತರರಾಷ್ಟ್ರೀಯ ಗುಣಮಟ್ಟದ ಸುರಕ್ಷತೆ ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡಿದರು.

ಗಮನ ಸೆಳೆದ ಎಸ್‌ಎಲ್‌ಎಸ್ ಎಎಂಜಿ!
`ಸ್ಟಾರ್‌ಡ್ರೈವ್~ನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ, ಭಾರತದ ಮಾರುಕಟ್ಟೆಗೆ ಈಗಷ್ಟೇ ಕಾಲಿಟ್ಟಿರುವ ಮರ್ಸಿಡಿಸ್ ಬೆಂಜ್ `ಎಸ್‌ಎಲ್‌ಎಸ್ ಎಎಂಜಿ~ ಎಲ್ಲರ ಗಮನಸೆಳೆಯಿತು.

ಕಡು ಕೆಂಪು ಬಣ್ಣದ, ಎರಡು ಆಸನ ಸಾಮರ್ಥ್ಯದ ಮೇಲಕ್ಕೆ ತೆರೆದುಕೊಳ್ಳುವ ಬಾಗಿಲನ್ನು ಹೊಂದಿರುವ ಐಷಾರಾಮಿ, ಅಷ್ಟೇ ದುಬಾರಿಯಾದ ಕಾರನ್ನು ಎಲ್ಲರೂ ನೋಡಿ ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT