ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಸಂಗ್ರಹದ ಸಂಭ್ರಮ

ಹವ್ಯಾಸದ ಹಾದಿ
Last Updated 26 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ಅನೇಕರು ಆಹಾರ ಮಳಿಗೆಗಳಿಗೆ ನಿತ್ಯವೂ ಹೋಗುತ್ತಾರೆ. ಕೆಲವರಿಗೆ ಅಲ್ಲಿನ ವೇಗದ ಸೇವೆ ಇಷ್ಟವಾದರೆ, ಇನ್ನು ಕೆಲವರಿಗೆ ಅಲ್ಲಿನ ಬೆಲೆ ಇಷ್ಟವಾಗುತ್ತದೆ. ಆದರೆ ಇದೆಲ್ಲಕ್ಕಿಂತಲೂ ಭಿನ್ನವಾಗಿ  ಯೋಚಿಸಿ ಆಹಾರ ಮಳಿಗೆಗಳಿಗೆ ಭೇಟಿ ನೀಡುವವರು 23 ವರ್ಷದ ‘ಶ್ರವಣ್‌ ನಾಗೇಶ್‌’.

ಮೆಕಾನಿಕಲ್‌ ಎಂಜಿನಿಯರ್‌ ಆಗಿರುವ ಶ್ರವಣ್‌ ಬಳಿ ವಿವಿಧ ರೂಪ, ವಿನ್ಯಾಸದ 210ಕ್ಕೂ ಅಧಿಕ ಬೊಂಬೆಗಳ ಸಂಗ್ರಹವಿದೆ. ಮೆಕ್‌ಡೊನಾಲ್ಡ್‌, ಕೆಎಫ್‌ಸಿ, ರೆಡ್‌ ರೋಸ್ಟರ್‌, ಹಂಗ್ರಿ ಜಾಕ್‌ ಮುಂತಾದ ಆಹಾರ ಮಳಿಗೆಗಳಲ್ಲಿ ನೀಡಿದ ಹಲವು ಬೊಂಬೆಗಳನ್ನು ಇವರು ಸಂಗ್ರಹಿಸಿಟ್ಟಿದ್ದಾರೆ. ಇಷ್ಟೇ ಅಲ್ಲದೆ ತಮ್ಮ ಕುಟುಂಬದವರು ನೀಡಿದ ಬೊಂಬೆಗಳು ಸೇರಿದಂತೆ ‘ಸೆರಿಲ್ಯಾಕ್‌’ ಹಾಗೂ ‘ಚಾಕೊಲೇಟ್‌’ ಪೊಟ್ಟಣಗಳೊಂದಿಗೆ ಸಿಗುವ ಬೊಂಬೆಗಳನ್ನು ಕೂಡ ಇವರು ಸಂಗ್ರಹಿಸಿದ್ದಾರೆ.

‘ನಮ್ಮ ತಂದೆ ಸೇಲ್ಸ್ ವೃತ್ತಿಯಲ್ಲಿ ಇರುವುದರಿಂದ ನಾವು ಯಾವಾಗಲೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಿರುಗಾಡುತ್ತಿರುತ್ತೇವೆ. ತಂದೆಯೊಬ್ಬರೇ ಅರ್ಧದಷ್ಟು ಪ್ರಪಂಚವನ್ನು ತಿರುಗಾಡಿದ್ದಾರೆ. ಪ್ರತಿ ಬಾರಿ ಅವರು ವಿದೇಶಿ ಪ್ರವಾಸದಿಂದ ಹಿಂದಿರುಗುವಾಗ ಬೊಂಬೆಗಳನ್ನು ತರುತ್ತಾರೆ’ ಎನ್ನುತ್ತಾರೆ ಶ್ರವಣ್‌.

‘ನನಗೆ ಪುಟ್ಟ ಪುಟ್ಟ ವಸ್ತುಗಳನ್ನು ಸಂಗ್ರಹಿಸುವುದೆಂದರೆ ಇಷ್ಟ. ಚಿಕ್ಕ ವಸ್ತುಗಳು ಯಾವಾಗಲೂ ಪುಟಾಣಿ ಮಕ್ಕಳಂತೆ ಮುದ್ದಾಗಿ, ಆತ್ಮೀಯವಾಗಿ ಇರುತ್ತವೆ. ದೊಡ್ಡವರಾದಂತೆ ಮಕ್ಕಳು ಹೇಗೆ ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಾರೋ ಅಂತೆಯೇ ದೊಡ್ಡ ವಸ್ತುಗಳು ಕೂಡ ಎನ್ನುವುದು ನನ್ನ ಭಾವನೆ ಎನ್ನುವುದು ಶ್ರವಣ್‌ ಅವರ ಮನದಾಳದ ಮಾತು.

ಶ್ರವಣ್‌ ತಂದೆ ಇಂದು ಕೂಡ ವಿವಿಧ ಕಡೆಗಳಿಗೆ ಪ್ರವಾಸಕ್ಕೆ ಹೋದಾಗ ಬೊಂಬೆಗಳೊಂದಿಗೆ ಹಿಂದಿರುಗುತ್ತಾರಂತೆ.  ಇವರ ಈ ಬೊಂಬೆ ವಾಂಛಲ್ಯ ಇಂದು  ಅವರ ತಾಯಿ ಹಾಗೂ 16 ವರ್ಷದ ತಮ್ಮನನ್ನು ಆವರಿಸಿದೆ. ಮನೆಗೆ ಹೊಸ ಹಾಗೂ ಸುಂದರ ಬೊಂಬೆಗಳು ಬಂದಾಗ ಅವರು ಕೂಡ ಶ್ರವಣ್‌ ಅವರೊಂದಿಗೆ ಸಂಭ್ರಮಿಸುತ್ತಾರೆ.

2003ರಿಂದ  ಫಾಸ್ಟ್ ಫುಡ್‌ ಊಟದ ಜೊತೆ ಸಿಗುವ ಬೊಂಬೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು ಶ್ರವಣ್‌. ‘ಮೊದಲ ಬಾರಿ ನಾನು ಆಸ್ಟ್ರೇಲಿಯಾದಲ್ಲಿದ್ದಾಗ ಊಟದ ಜೊತೆ ಬೊಂಬೆಯನ್ನು ಪಡೆದಿದ್ದೆ. ಅಲ್ಲಿಂದ ಇಲ್ಲಿಯವರಗೆ ನಾನು ಮೂರ್ನಾಲ್ಕು ದಿನಗಳಿಗೊಮ್ಮೆ ಆಹಾರ ಮಳಿಗೆಗಳಿಗೆ ಭೇಟಿ ನೀಡುತ್ತೇನೆ.  ತಿನ್ನುವುದಕ್ಕಾಗಿ ನಾನು ಎಂದಿಗೂ ಅಲ್ಲಿ  ಆಹಾರಗಳನ್ನು ಖರೀದಿಸುವುದಿಲ್ಲ. ತಿಂಡಿಗಳನ್ನು ಖರೀದಿಸಿ ಅದರೊಂದಿಗೆ ಬಂದ ಬೊಂಬೆಯನ್ನು ಮಾತ್ರ ಇಟ್ಟುಕೊಂಡು, ತಿಂಡಿಗಳನ್ನು ತಮ್ಮನಿಗೆ ಕೊಟ್ಟು ಬಿಡುತ್ತೇನೆ’ ಎಂದು ನಗುತ್ತಾರೆ ಶ್ರವಣ್‌.

ಬೆಂಗಳೂರಿಗೆ ಬಂದು ಅವರು ತಮ್ಮ ವಿದ್ಯಾಭ್ಯಾಸ ಮುಕ್ತಾಯಗೊಳಿಸಿದರು ಅಲ್ಲಿಗೆ ಅವರ ಬೊಂಬೆ ಸಂಗ್ರಹದ ಹವ್ಯಾಸವೂ ಮೊನಚು ಕಳೆದುಕೊಂಡಿತು. ‘ಆಸ್ಟ್ರೇಲಿಯಾದಲ್ಲಿ ಇದ್ದಾಗ ಪ್ರತಿ ತಿಂಗಳು ಜನಪ್ರಿಯ ಚಿತ್ರವೊಂದು ತೆರೆಗೆ ಬಂದಾಗ ಆ ಚಿತ್ರವನ್ನು ಕೇಂದ್ರೀಕರಿಸಿ ರಚಿಸಿದ ಬೊಂಬೆಗಳು ದೊರೆಯುತ್ತಿದ್ದವು.  ಆದರೆ ಭಾರತದಲ್ಲಿ ಮೂರು ತಿಂಗಳ ನಂತರವೂ ಅಂತಹ ಬೊಂಬೆಗಳು ದೊರೆಯುವುದಿಲ್ಲ ಹಾಗೂ ಅವು ಕ್ರೀಯಾತ್ಮಕವಾಗಿಯೂ ಇರುವುದಿಲ್ಲ ಎನ್ನುವುದು ಶ್ರವಣ್‌ ಅನುಭವ ನುಡಿ.

ಸದ್ಯಕ್ಕೆ ಶ್ರವಣ್ ಬಳಿ ಭಾರತ, ಸಿಂಗಪುರ, ಥಾಯ್ಲೆಂಡ್‌, ಮಲೇಷ್ಯಾ, ಚೀನಾ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ ಬೊಂಬೆಗಳ ಸಂಗ್ರಹವಿದೆ. ಡಿಸ್ನಿ ಶ್ರೇಣಿಗಳ ಸಂಗ್ರಹ ಇರುವ ಮಿಕ್ಕಿ, ಮಿನಿ, ಡೊನಾಲ್ಡ್‌,  ಡೈಸಿ ಹಾಗೂ ಪ್ಲೂಟೊ ಬೊಂಬೆಗಳು ನನ್ನ ಅಚ್ಚುಮೆಚ್ಚಿನ ಬೊಂಬೆಗಳು. 2006–07ರಲ್ಲಿ ಈ ಬೊಂಬೆಗಳು ನನ್ನ ಕೈಸೇರಿದವು. ನಮ್ಮ ತಂದೆ ಒಂದು ಆ ಡಿಸ್ನಿ ಶ್ರೇಣಿಯ ಬೊಂಬೆಯನ್ನು ತಂದಿದ್ದರು.

ಮುಂದೆ ಸಂಪೂರ್ಣ ಸೆಟ್‌ಗಳ ಬೊಂಬೆಯನ್ನು ಹುಡುಕಿ ಸಂಗ್ರಹಿಸಿದೆ’ ಎನ್ನುವ ಶ್ರವಣ್‌ ಅವರದು ಬೊಂಬೆ ಸಂಗ್ರಹಿಸುವ ಹುಮ್ಮಸ್ಸಿನ ಮನಸ್ಸು. ಇಲ್ಲಿಯವರೆಗೆ ಸುಮಾರು ₨ 54,000ಗಳಷ್ಟನ್ನು ಬೊಂಬೆಗಳ ಸಂಗ್ರಹಕ್ಕಾಗಿ ಖರ್ಚು ಮಾಡಿರುವ ನಾನು ಇಂದು ಇದಕ್ಕೆ ಒಗ್ಗಿ ಹೋಗಿದ್ದೇನೆ. ನನ್ನ ಕೋಣೆಯ ಬಹುಪಾಲು ಬೊಂಬೆಗಳಿಂದಲೇ ತುಂಬಿ ಹೋಗಿದೆ ಎಂದು ಸಂಭ್ರಮದಿಂದ ನುಡಿಯುತ್ತಾರೆ ಶ್ರವಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT