ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿತ್ತಿಯ ಮೇಲೆ ಬಾಲ್ಯ

ಕಲಾಪ
Last Updated 15 ಅಕ್ಟೋಬರ್ 2015, 19:41 IST
ಅಕ್ಷರ ಗಾತ್ರ

ಬಾಲ್ಯವೆಂದರೆ ನೆನಪುಗಳ ಹಂದರ, ಭವಿಷ್ಯದ ಕನಸುಗಳಿಗೆ ಅದೇ ಸ್ಫೂರ್ತಿಯ ಸೆಲೆ. ಇದಕ್ಕೆ ಮಿಲಿಂದ್‌ ನಾಯಕ್‌ ಅವರ ಜೀವನವೇ ಸಾಕ್ಷಿ.

ಕೊಳದಲ್ಲಿ ಅರಳಿದ ಕಮಲ, ವಿಶಾಲವಾಗಿ ಹರಡಿಕೊಂಡಿರುವ ಮರದ ಟೊಂಗೆಗಳ ಸೂಕ್ಷ್ಮ ಚಿತ್ರ, ಬಾಲ್ಯದಲ್ಲಿ ನಡೆದಾಡಿದ ಹಳ್ಳಿ ಹಾದಿಯ ಸುಂದರ ಗದ್ದೆಗಳ ನಡುವಣ ಹಸಿರು ಹಾದಿ, ತೈಲ ವರ್ಣದ ಸುಂದರ ಚಿತ್ರಗಳು, ಇದೇ ಮಾದರಿಯ ಮೃದು ತೈಲ ವರ್ಣದ ವಿಶೇಷ ಶೈಲಿಯ ಕಲಾಕೃತಿಗಳು ಹಾಗೂ ಪಾಸ್ಟಲ್ಸ್  ಶೈಲಿಯ ಚಿತ್ರಗಳು ಕಣ್ತುಂಬಿಕೊಳ್ಳಲು ಸಿಕ್ಕಿದ್ದು ಬೆಂಗಳೂರಿನ ವಸಂತ ನಗರದ ಅರಮನೆ ರಸ್ತೆಯಲ್ಲಿನ ‘ಆರ್ಟ್‌ ಹಝ್‌ ’  ಗ್ಯಾಲರಿಯ ಚಿತ್ರಕಲಾ ಪ್ರದರ್ಶನ ವೇದಿಕೆಯಲ್ಲಿ.

ನಗರದ ಆರ್ಟ್ ಹಝ್‌ ವತಿಯಿಂದ ಅ.10ರಿಂದ ಅ.30ರವರೆಗೆ  ‘ಆಲ್ಟರ್‌ನೇಟ್‌ ಪರ್ಸೆಪ್ಷನ್ಸ್‌’ (ಪರ್ಯಾಯ ಗ್ರಹಿಕೆಗಳು) ಎನ್ನುವ ಹೆಸರಿನಲ್ಲಿ ಪ್ರಸಿದ್ಧ ಚಿತ್ರಕಲಾಕಾರ ಮಿಲಿಂದ್‌ ನಾಯಕ್‌ ಅವರ ಬಾಲ್ಯದಲ್ಲಿ ಗ್ರಹಿಸಿದ ಸರಣಿ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಮಿಲಿಂದ್‌ ನಾಯಕ್‌ ಮೂಲತಃ ಉಡುಪಿಯವರು.  ಚಿಕ್ಕಂದಿನಲ್ಲಿ ಸಾವಿತ್ರಮ್ಮ ಎನ್ನುವವರ ಮನೆಗೆ ಹಾಲು ತರಲು ಹೋಗುವಾಗ ಗದ್ದೆಗಳ ಹಾದಿಯಲ್ಲಿ ಚಿಕ್ಕ ಕೊಳವಿತ್ತು. ಅದರಲ್ಲಿನ ಕಮಲದ ಹೂ, ಹಸಿರು ವರ್ಣದ ಪಾಚಿ ಕಪ್ಪೆ, ಕಸ ಇವುಗಳೆಡೆಗಿನ ಸೂಕ್ಷ್ಮ  ನೋಟಗಳೇ ಅವರ ಚಿತ್ರಕಲೆಗೆ ಸ್ಫೂರ್ತಿಯಾಗಿದೆ. ಶ್ರಮವಹಿಸಿ ಸ್ವಪ್ರಯತ್ನದಿಂದ ಚಿತ್ರಗಳ ಬಿಡಿಸುವುದನ್ನು ಕಲಿತು, ಇಂದು ಈ ಕಲೆಯಲ್ಲಿ ಛಾಪು ಮೂಡಿಸಿದ್ದಾರೆ.

ತಮ್ಮ 12, 13 ನೇ ವಯಸ್ಸಿನಲ್ಲಿ ಕಂಡಂಥ ಚಿತ್ರಗಳನ್ನು ಸ್ಮೃತಿಪಟಲದಲ್ಲಿ ಇರಿಸಿಕೊಂಡು, ಅವುಗಳ ಬಿಡಿ ಬಿಡಿ ಚಿತ್ರಗಳನ್ನು ತಮ್ಮ ಕುಂಚದ ಮೂಲಕ ಬಿಡಿಸಿದ್ದಾರೆ. ಒಂದೇ ವೇದಿಕೆಯಲ್ಲಿ  ತಮ್ಮ ಬಾಲ್ಯದ ನೆನಪಿನ ಸರಣಿ ಚಿತ್ರಗಳನ್ನು  ಪ್ರದರ್ಶನ ಮಾಡುತ್ತಿರುವುದು ವಿಶೇಷ ಎನ್ನುತ್ತಾರೆ ಮಿಲಿಂದ್‌ ನಾಯಕ್‌.

ಇದುವರೆಗೂ ಅಂತರ ರಾಷ್ಟ್ರೀಯ ಮಟ್ಟದ ಮೂರು ಪ್ರದರ್ಶನಗಳು ಸೇರಿ ಒಟ್ಟು 35 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ರಚನೆಯ ಚಿತ್ರಗಳ  ಪ್ರದರ್ಶನ ಮಾಡಿದ್ದಾರೆ. 67 ವರ್ಷದ ಮಿಲಿಂದ್‌ ನಾಯಕ್‌ ಅವರು ತಾವು 13ನೇ ವಯಸ್ಸಿನಲ್ಲಿ ಗೋಕುಲ್‌ ದಾಸ್‌ ಶಣೈ ಎಂಬುವರ ಮಾರ್ಗದರ್ಶನದ ಮೂಲಕ ಚಿತ್ರಕಲೆಯ ಗೀಳು ಹತ್ತಿಸಿಕೊಂಡರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎಸ್‌.ಸಿ. ಪದವಿ ಗಳಿಸಿದ ಇವರು, ಬ್ಯಾಂಕ್‌ ಒಂದರಲ್ಲಿ ಎಂಟು ವರ್ಷ ಉದ್ಯೋಗ ಮಾಡಿ ನಂತರ ಬೆಂಗಳೂರಿನಲ್ಲಿ ಡಿಟಿಟಲ್‌ ಕಾಪಿ ಪ್ರಿಂಟಿಂಗ್‌ ಲ್ಯಾಬ್‌ ನಡೆಸಿದರು. ಮತ್ತೆ ಎಲ್ಲವನ್ನೂ ತೊರೆದು ಪೂರ್ಣಾವಧಿ ಕಲಾಕಾರನಾಗಿ ತಮ್ಮದೇ ವಿಶೇಷ ಶೈಲಿಯಲ್ಲಿ ಚಿತ್ರಕಲೆಯಲ್ಲಿ ಖ್ಯಾತಿ ಗಳಿಸಿದರು.

ತೈಲ ವರ್ಣ ಪಾಸ್ಟಲ್‌ 
ಅಮೆರಿಕದಲ್ಲಿ  ಪಾಸ್ಟಲ್‌ ಚಿತ್ರಕಲಾವಿದ ಉಲ್ಫ್‌ ಖಾನ್‌ ಅವರ ಚಿತ್ರಗಳಿಂದ ಪ್ರೇರಿತರಾಗಿ ಭಾರತದಲ್ಲಿ ಅಷ್ಟು ಪ್ರಚಾರವಿಲ್ಲದ ಈ ವಿಶೇಷ ತೈಲ ವರ್ಣ ಚಿತ್ರಕಲೆಯನ್ನು ಕಲಿತು ಚಿತ್ರಿಸಿದರು. ಇಳಿವಯಸ್ಸಿನ್ನಲ್ಲೂ ಸೃಜನಶೀಲರಾಗಿರುವುದು ವಿಶೇಷ.

ಇವರ ಚಿತ್ರಗಳು ನಗರದ ಆರ್ಟ್ ಹಝ್‌ ಗ್ಯಾಲರಿಯಲ್ಲಿ ಅ.30 ರವರೆಗೆ ‘ಅಲ್ಟರ್‌ನೇಟ್‌ ಪರ್ಸೆಪ್ಷನ್ಸ್‌’ (ಪರ್ಯಾಯ ಗ್ರಹಿಕೆಗಳು) ಎನ್ನುವ ಹೆಸರಿನಲ್ಲಿ ಪ್ರದರ್ಶನಗೊಳ್ಳಲಿವೆ. ಆಸಕ್ತರು ಚಿತ್ರಗಳನ್ನು ಕೊಳ್ಳಬಹುದಾಗಿದೆ.

ಹರಿದಾಸ ಭಟ್ಟರ ಪ್ರೋತ್ಸಾಹ
ಪದವಿ ಓದುವಾಗ ನಾನು ಚಿತ್ರಕಲೆಯನ್ನು ತ್ಯಜಿಸಿದ್ದೆ. ಈ ವೇಳೆ ತನ್ನ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿದಾಸ ಭಟ್ಟ ನನ್ನಲ್ಲಿದ್ದ ಕಲೆಯನ್ನು  ಪ್ರೋತ್ಸಾಹಿಸಿ ಮುಂದುವರಿಸುವಂತೆ ಮಾಡಿದರು. ಇದು ನನ್ನ ಕಲಾ ಜೀವನಕ್ಕೆ ಹೊಸ ದಾರಿ ತೋರಿ ಇಲ್ಲಿಯವರೆಗೆ ಕರೆತಂದಿದೆ ಎನ್ನುತ್ತಾರೆ  ಮಿಲಿಂದ್‌ ನಾಯಕ್‌.

ಪ್ರದರ್ಶನ ವೇಳೆ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10:30ರಿಂದ ಸಂಜೆ 6:30 ರವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT