ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ನಾಟಕಗಳೇ ನನ್ನ ಉಸಿರು’

ರಂಗ ಸಾಧಕ
Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಮೂರೂವರೆ ವರ್ಷದ ಪುಟ್ಟ ಮಕ್ಕಳಿಂದ ಹಿಡಿದು ಹೈಸ್ಕೂಲ್‌ವರೆಗಿನ ಮಕ್ಕಳಿಗೆ ಅವರವರ ವಯಸ್ಸಿನ ಹಂತಕ್ಕೆ ಅನುಗುಣವಾಗಿ ನಾಟಕಗಳನ್ನು ಹೆಣೆದು, ಆಡಿಸುವೆ.
 
ಮಕ್ಕಳ ಸೈಕಾಲಜಿ, ಪರಿಸರದ ಪ್ರಭಾವ, ಅವರ ಸಮಸ್ಯೆಗಳನ್ನು ರಚನೆ/ನಿರ್ದೇಶನದಲ್ಲಿ ಅಳವಡಿಸಿಕೊಳ್ಳುತ್ತೇನೆ. ಮಕ್ಕಳಿಗೆ ನಾಟಕಗಳನ್ನು ಹೇಳಿಕೊಡುವುದೆಂದರೆ ನನಗೆ ತುಂಬಾ ಇಷ್ಟ. ಏಕೆಂದರೆ ಅವರ ಜೊತೆ ನಾನೂ ಮಗುವಾಗಿ ಬಿಡುತ್ತೇನೆ. ಮಕ್ಕಳ ನಾಟಕಗಳೇ ನನ್ನ ಉಸಿರು.
 
ಸಣ್ಣ ಮಕ್ಕಳಿಗೆ ರೈಮ್ಸ್‌ ಹೇಳಿ ಕೊಡುತ್ತೇನೆ. ಅದು ಕೇವಲ ಹಾಡು ಆಗಿರುವುದಿಲ್ಲ. ಹಾಡಿನ ಮರ್ಮ ಅರಿಯಲು ರಂಗಮೂಲ ನೆಲೆಯಲ್ಲಿ ತಿಳಿಸಿಕೊಡುತ್ತೇನೆ. 
 
‘ರಂಗಮುಖೇನ ಶಿಕ್ಷಣ’ ಎಂಬುದರ ಮೂಲ ಆಶಯವಿದು. ಇದನ್ನೇ ನನ್ನೆಲ್ಲ ಮಕ್ಕಳ ನಾಟಕಗಳಲ್ಲಿ ಅಳವಡಿಸಿಕೊಂಡಿದ್ದೇನೆ. ಮಕ್ಕಳಿಗೆ ಶ್ಲೋಕವನ್ನು ಹೇಳಿಕೊಡುತ್ತೇನೆ. ಶ್ಲೋಕಗಳು ಅವರ ಭಾಷೆ, ಉಚ್ಚಾರಣೆ ಚೆನ್ನಾಗಿ ಅನುಸರಿಸಲು ಸಾಧ್ಯವಾಗುತ್ತದೆ. ಅಲ್ಪಪ್ರಾಣ, ಮಹಾಪ್ರಾಣ ಗಳ ವ್ಯತ್ಯಾಸ ತಿಳಿಯಲು ಸಹಕಾರಿ. 
 
‘ಗುಮ್ಮ’ ಎಂಬ ನಾಟಕ ರಚಿಸಿದ್ದೆ. ಮಕ್ಕಳು ಊಟ ಮಾಡದಿದ್ದರೆ, ಹೇಳಿದ್ದನ್ನು ಕೇಳದಿದ್ದರೆ ‘ಗುಮ್ಮ ಹಿಡ್ಕೊಂಡು ಹೋಗ್ತಾನೆ’ ಎಂತಲೋ ಅಥವಾ ‘ಪೊಲೀಸ್ ಹಿಡ್ಕೊಂಡು ಹೋಗ್ತಾರೆ’ ಎಂದೋ ಹೆದರಿಸುತ್ತಾರೆ. ಕೆಲವರಂತೂ ದೇವರನ್ನೂ ಗುಮ್ಮನೆಂಬ ಬೆದರು ಬೊಂಬೆಯಾಗಿಸುತ್ತಾರೆ. ಹೀಗೆ, ಗುಮ್ಮ ಎಂಬ ಸುಳ್ಳು ಕಲ್ಪನೆಯಲ್ಲಿ ಮಗುವಿನ ಮನಸ್ಸಿನ ಅಂತರಾಳದಲ್ಲಿ ಭಯ ಹುಟ್ಟು ಹಾಕಲಾಗುತ್ತದೆ. ‘ಗುಮ್ಮ’ನೆಂದು ನಮ್ಮನ್ನು ಹೆದರಿಸಬೇಡಿ ಎಂದು ಹಿರಿಯರಿಗೆ ತಿಳಿಸುವ ಮತ್ತು ಮಕ್ಕಳೂ ತಿಳಿದುಕೊಳ್ಳುವ ಈ ನಾಟಕಕ್ಕೆ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. 
 
ಅಜ್ಜಿ ಕಲ್ಪನೆಯನ್ನು ಬಿಂಬಿಸುವ  ‘ಮಾತಾಮಹಿ’ ಎಂಬ ನನ್ನ ರಚನೆಯ ನಾಟಕವನ್ನು 200 ಮಕ್ಕಳು ಅಭಿನಯಿಸಿದ್ದರು. ನಾಟಕದಲ್ಲಿ ಅಜ್ಜಿ ಮನೆಗೆ ಬಂದ ಮಕ್ಕಳು ಅಜ್ಜಿ ನೀಡುವ ಜಾತ್ರೆಗಳ ಚಿತ್ರಣ, ಹೇಳುವ ಕೃಷ್ಣನ ಕಥೆಗಳಿಂದ ಆಕರ್ಷಿತರಾಗಿ ಅವಳನ್ನು ಬಿಟ್ಟು ಹೋಗಲು ಇಚ್ಛಿಸುವುದಿಲ್ಲ. ಈ ನಾಟಕ ಮಕ್ಕಳಿಗೆ ತುಂಬಾ ಖುಷಿಕೊಟ್ಟಿತ್ತು. 
 
ಶಾಲೆಗಳಲ್ಲಿ ಮಕ್ಕಳಿಗೆ ನಾಟಕಗಳನ್ನು ಹೇಳಿಕೊಡುವುದರ ಜೊತೆಗೆ ನನ್ನದೇ ಆದ ‘ಬೊಂಬೆ ತಂಡ’ ಕಟ್ಟಿಕೊಂಡಿದ್ದೇನೆ. ನಾನಿರುವ ಹನುಮಂತ ನಗರದ ಪರಿಸರದಲ್ಲಿ ಮಕ್ಕಳ ಬೀದಿ ತಂಡ ರಚಿಸಿ ಅವರಿಗೆ ನಾಟಕ ಹೇಳಿ ಕೊಡುತ್ತೇನೆ. 
 
ಶಿವಾಜಿನಗರದ ಲಿಂಗರಾಜಪುರದಲ್ಲಿ ಕೇಶವ ಸಮಿತಿಯು ಕೊಳೆಗೇರಿ ಮಕ್ಕಳಿಗಾಗಿ ನಡೆಸುವ ಅನೌಪಚಾರಿಕ ಶಿಕ್ಷಣದಲ್ಲಿ ‘ನಾವು ಸಮಾಜದಲ್ಲಿ ಒಬ್ಬರು’ ನಾಟಕ ಸಿದ್ಧಪಡಿಸಿದ್ದೆ. ಇದರಲ್ಲಿ ಕೊಳೆಗೇರಿಯ 150 ಮಕ್ಕಳು ಪಾತ್ರಧಾರಿಗಳಾಗಿದ್ದರು. 
 
ಕುಡಿದು ಬರುವ ಅಪ್ಪನು ಅಮ್ಮನಿಗೆ ಹೊಡೆಯುವ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ದೃಶ್ಯಗಳೂ ಇದ್ದವು. ನಿತ್ಯವೂ ಮನೆಯಲ್ಲಿ ನಡೆಯುತ್ತಿದ್ದ ಈ ಘಟನೆಯನ್ನು ಅನುಭವಿಸಿದ ಪಾತ್ರಧಾರಿ ಮಗು ರಂಗವಾಗಿ ನೈಜವಾಗಿ ಕಣ್ಣೀರುಹಾಕಿ ದುಖಿಃಸಿದ್ದಳು. ಮರುದಿನ ಆ ಮಗುವಿನ ತಂದೆ ನನ್ನ ಬಳಿ ಬಂದು, ‘ಸಾರ್, ನಾನು ಮಕ್ಕಳು, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಾಟಕ ನೋಡಿ ನನಗೆ ಮಗು ಎಷ್ಟು ಬೇಸರ ಮಾಡಿಕೊಂಡಿದೆ ಎಂದು ತಿಳಿಯಿತು, ಕುಡಿಯೋದನ್ನು ಬಿಟ್ಟುಬಿಡುತ್ತೇನೆ’ ಎಂದು ಹೇಳಿದ್ದರು. 
 
ಮಲ್ಲೇಶ್ವರದ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಕೇಂದ್ರ ‘ಅರುಣ ಚೇತನ’ದ ಮಕ್ಕಳಿಂದಲೂ ನಾಟಕ ಮಾಡಿಸಿದ್ದೇನೆ. ಈ ಮಕ್ಕಳು ರಂಗದಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಾಗದ ಕಾರಣ ಅವರಿಗಾಗಿಯೇ ವಿಶೇಷ ಪ್ರಯೋಗ ಮಾಡಿದ್ದೆ. 
 
ಮಕ್ಕಳ ಬ್ಯಾಲೆಗಳ ರಚನೆ/ನಿರ್ದೇಶನ ನನಗೆ ತುಂಬಾ ಇಷ್ಟ. ‘ಗೋವಿನ ಹಾಡು’ ಬ್ಯಾಲೆ ರಚಿಸಿದ್ದೇನೆ. ಅದರಂತೆ ಪುಟ್ಟ ಮಕ್ಕಳಿಗಾಗಿ ‘ನೀರೆಯರು’, ‘ನಾನು ಮತ್ತು ನನ್ನ ದೇಶ’, ‘ನಾನು ಮತ್ತು ನನ್ನ ಪರಿಸರ’ ರಚನೆಗಳನ್ನು ಕಟ್ಟಿಕೊಟ್ಟಿದ್ದೇನೆ. ನಾನು ಮತ್ತು ನನ್ನ ಪರಿಸರ ನಾಟಕದಲ್ಲಿ ಮಕ್ಕಳು ಗುಬ್ಬಚ್ಚಿ, ಕಾಗೆ, ಮರಗಳಾಗಿ ನಟಿಸುತ್ತಾರೆ. ‘ಸ್ವಚ್ಛ ಭಾರತ’ದ ಆಶಯವನ್ನು ಇದು ಹೊಂದಿದೆ.
 
ಸ್ವಾಮಿ ವಿವೇಕಾನಂದರ ಚಿಂತನೆಗಳು ನನ್ನ ಮೇಲೆ ಪ್ರಭಾವ ಬೀರಿವೆ. ನಾನು ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆ-ತಾಯಿ ಭಟ್ಕಳ ಮೂಲದವರು. ನನ್ನ ಪತ್ನಿ ಜ್ಯೋತಿ ಶಿರಸಿಯವರು. ಅವರು ಸಂಗೀತ ಕಲಾವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT