ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಬದುಕಿಗೆ ಆಸರೆಯಾದ ‘ಗುಡಿ’

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬಸವನಗುಡಿಯಲ್ಲಿರುವ ‘ಗುಡಿ’ ಕರಕುಶಲ ಕಲೆಗಳ ವಿಶಿಷ್ಟ ತಾಣ. ಉತ್ತರ ಭಾರತದ ಧೋಕ್ರಾ, ಬಸ್ತಾರ್ ಶಿಲ್ಪಗಳಿಂದ ಆರಂಭವಾಗಿ ನಮ್ಮದೇ ಆದ ಶಿಕಾರಿಪುರದ ಗೂಡುದೀಪಗಳವರೆಗೆ ಕೌಶಲದ ಬೆಡಗು ಇಲ್ಲಿ ಮೇಳೈಸಿದೆ.

ಒಟ್ಟಂದದಲ್ಲಿ ಹೇಳಬೇಕೆಂದರೆ ಈ ‘ಗುಡಿ’ ಅಂಗಡಿಯಲ್ಲಿ ವೈವಿಧ್ಯಮಯ ಕಲಾಕೃತಿಗಳಿವೆ. ಹೆಂಗಳೆಯರ ಅಚ್ಚುಮೆಚ್ಚಿನ ಟೆರ್ರಾಕೋಟಾ ಜುವೆಲ್ಲರಿ, ತೋರಣಗಳು, ಸೆರಾಮಿಕ್‌ ಅಲಂಕಾರಿಕ ವಸ್ತುಗಳು, ಬಂಗಾಳದ ಕಾಳಿಘಾಟ್‌ ಚಿತ್ರಕಲೆಗಳು, ಟಸ್ಸಾರ್‌ ಬಟ್ಟೆಯ ಮೇಲೆ ಚಿತ್ರಿಸಿದ ಮಹಾರಾಷ್ಟ್ರದ ವರ್ಲಿ ಕಲಾಕೃತಿಗಳು, ರಾಜಸ್ತಾನದ ಸೂಕ್ಷ್ಮರೇಖೆ ಚಿತ್ರಕಲೆ, ಪಟಚಿತ್ರ, ಚನ್ನಪಟ್ಟಣದ ಆಟಿಕೆಗಳೂ ಇವೆ. ಧೋಕ್ರಾದಲ್ಲಿ ಮೂಡಿಬಂದ ಗೌರಿದೀಪವಂತೂ ಅದ್ಭುತ ಕಲಾರಚನೆ ಹೊಂದಿದೆ.

ಹತ್ತಿ ಬಟ್ಟೆಗೆ ಆಧುನಿಕ ಸ್ಪರ್ಶ
ಹತ್ತಿಬಟ್ಟೆಯ ಹೊಸ ವಿನ್ಯಾಸದ ಉಡುಪುಗಳ ಲೋಕವು ಗಮನ ಸೆಳೆಯುವಂತಿದೆ. ಶಿಕಾರಿಪುರ ತಾಲ್ಲೂಕಿನ ಬಡ ಹೆಣ್ಣು ಮಕ್ಕಳನ್ನು ಸಬಲರನ್ನಾಗಿಸುವ ಉದ್ದೇಶವನ್ನು ಗುಡಿ ಹೊಂದಿದೆ.

ಕುರ್ತಾಗಳು, ಚೂಡಿದಾರ್‌ಗಳು, ಹಾಫ್‌ಟಾಪ್‌, ಖಾದಿ ಸೆಟ್‌ಗಳು, ಉದ್ದನೆಯ ಸ್ಕರ್ಟ್‌ಗಳು, ರ್‍ಯಾಪರ್‌ ಸ್ಕರ್ಟ್‌ಗಳು, ಪಲಾಝೋ, ಪಟಿಯಾಲಾ ಪ್ಯಾಂಟ್‌ಗಳು ನವೀನ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚುತ್ತಿವೆ. 

ಬಹುತೇಕ ಉಡುಪುಗಳಿಗೆ ಸಸ್ಯಜನ್ಯ ಪರಿಸರ ಸ್ನೇಹಿ ಬಣ್ಣಗಳೇ ಬಳಕೆಯಾಗಿವೆ. ಪುರುಷರ ಜುಬ್ಬ, ಪೈಜಾಮ, ಇತರ ಉಡುಪುಗಳೂ ಇವೆ.  ಶಿಶುವಿನಿಂದ ಹಿಡಿದು ವೃದ್ಧರವರೆಗೆ ವಿವಿಧ ವಯೋಮಾನದವರಿಗೆ ಒಪ್ಪುವಂಥ ಉಡುಗೆಗಳು ಇಲ್ಲಿವೆ.

ಪುಟ್ಟ ಕೈಚೀಲ, ಮೊಬೈಲ್‌ ಇಡುವ ಪರ್ಸ್‌ಗಳು, ಹೆಗಲಿಗೆ ಹಾಕಬಹುದಾದ ಬ್ಯಾಗ್‌ಗಳು, ತರಕಾರಿ ತರುವ ಚೀಲಗಳವರೆಗೆ ವೈವಿಧ್ಯಮಯ ವಿನ್ಯಾಸದ ವರ್ಣಮಯ ಚಿತ್ತಾರದ ಗುಣಮಟ್ಟದ ಹತ್ತಿಯ ಬ್ಯಾಗ್‌ಗಳು ಗಮನ ಸೆಳೆಯುತ್ತವೆ.

ಕುರ್ತಾ ಮತ್ತು ಜುಬ್ಬಾಗಳನ್ನು ಹೊಲಿಯುವಾಗ ಉಳಿದ ಕಟ್‌ಪೀಸ್‌ಗಳನ್ನು ಕುಶಲತೆಯಿಂದ ಜೋಡಿಸಿ ಈ ಪರ್ಸ್‌, ಬ್ಯಾಗ್‌ಗಳನ್ನು ಹಳ್ಳಿ ಹೆಣ್ಣುಮಕ್ಕಳು ರೂಪಿಸಿದ್ದಾರೆ.

ಕುಶಲತೆಯಲ್ಲಿ ಅನಾವರಣಗೊಂಡ ರಾಜಸ್ತಾನಿ ಸುಂದರಿಯ ಪೆಟ್ಟಿಗೆ ಮನೆಯ ವಿಶಾಲ ಗೋಡೆಯನ್ನು ಅಲಂಕರಿಸುವದಷ್ಟೇ ಅಲ್ಲ, ಒಳಗಡೆ ಕೀಗಳನ್ನು ಇಡುವ ಸುರಕ್ಷಿತ ತಾಣವೂ ಆಗಿದೆ. ರಾಜಸ್ತಾನಿ ಕಲಾ ಜುವೆಲ್ಲರಿ ಬಾಕ್ಸ್‌, ಸಾರಂಗಪುರ ಜುವೆಲ್ಲರಿ ಬಾಕ್ಸ್‌ ಗಳು, ಕೀ ಹುಕ್ ಬಾಕ್ಸ್‌ಗಳೂ ಇವೆ.

ಒಡಿಶಾದ ಸ್ಯಾಂಡ್‌ಸ್ಟೋನ್‌ ಶಿಲ್ಪಗಳು, ಕೇರಳ ‘ಕುಂಭ’ ಕಲಾ ವಸ್ತುಗಳು, ಮಾರ್ಬಲ್‌ ವಿಗ್ರಹಗಳು, ಮರ, ಹಿತ್ತಾಳೆಯ ಬಳೆಗಳು, ಶಿಕಾರಿಪುರದಲ್ಲಿಯೇ ತಯಾರಾದ ವಿಶೇಷ ವಿನ್ಯಾಸದ ಮರದ ಕೆತ್ತನೆಯ ಕನ್ನಡಿಗಳು, ಪಶ್ಚಿಮ ಬಂಗಾಳದ ಗೋಲ್ಡನ್‌ ಗ್ರಾಸ್‌ನ ಚಾಪೆಗಳು, ಕರ್ಟ್‌ನ್‌ಗಳು, ಮ್ಯಾಟ್‌ಗಳು  ನಿತ್ಯ ಬಳಕೆಗೆ ಮತ್ತು ಪೂಜೆ, ಇತರ ಸಮಾರಂಭದ ವೇಳೆ ಉಪಯೋಗಿಸಲು ಕಳೆ ನೀಡುತ್ತವೆ.

ಟೆರ್ರಾಕೋಟಾ ಜ್ಯುವೆಲ್ಲರಿ
ಶಿಕಾರಿಪುರ ಮಹಿಳೆಯರು ತಯಾರಿಸಿದ ಟೆರ್ರಾಕೋಟಾ ಒಡವೆಗಳು ‘ಗುಡಿ’ ಸಂಸ್ಥೆಯ ಅನನ್ಯ ಉತ್ಪನ್ನಗಳು ಎನಿಸಿಕೊಂಡಿವೆ. ಸೂರ್ಯ, ಹೂವು, ಗಿಡ, ಮರ, ನದಿ, ಇತರ ಪ್ರಾಕೃತಿಕ ಸೊಬಗಿನ ಇವು ವಿನ್ಯಾಸ ಮತ್ತು ಕ್ರಿಯಾಶೀಲತೆಯಲ್ಲಿ ಮೇಲುಗೈ ಪಡೆದಿವೆ. ಮೆತ್ತನೆಯ ಮಣ್ಣನ್ನು ಕಲೆಸಿ, ಹದನಾಗಿ ಸುಟ್ಟು, ವಿಶಿಷ್ಟ ವಿನ್ಯಾಸದ ಕಿವಿಯೋಲೆ, ಸರಗಳನ್ನು ರೂಪಿಸಿ, ಸೂಕ್ಷ್ಮವಾಗಿ ಚಿತ್ತಾರವನ್ನು ಮೂಡಿಸಲಾಗಿದೆ.
ಸಂಪರ್ಕ: 080 26622410

*
ಕಲಾವಿದರಿಗೆ, ಮಹಿಳೆಯರಿಗೆ ಕೆಲಸ ನೀಡಬೇಕು. ಅವರ ಕರಗಳಿಂದ ಅರಳಿದ ಕಲಾಕೃತಿಗಳು ಮನೆ, ಮಹಲುಗಳನ್ನು ತಲುಪಬೇಕು ಎಂಬ ಆಶಯದೊಂದಿಗೆ ‘ಗುಡಿ’ ಸಂಸ್ಥೆಯನ್ನು ಕಟ್ಟಿದ್ದೇವೆ.
–ತಾಜುಮಾ ಇಕ್ಬಾಲ್‌, ‘ಗುಡಿ’ ಸಂಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT