ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಶ್ವರಿ ಚಿತ್ರಮಂದಿರದಲ್ಲಿ 3ಡಿ ಸೌಂಡ್

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಹಳೆಯ ಚಿತ್ರಮಂದಿರಗಳಲ್ಲಿ ಬಹಳಷ್ಟು ಮಾಲ್‌ಗಳಾಗಿ, ಆಸ್ಪತ್ರೆಗಳಾಗಿ ಮಾರ್ಪಾಡಾಗುತ್ತಿದ್ದರೆ, ಇನ್ನೂ ಕೆಲವು ಅವಸಾನದ ಅಂಚಿನಲ್ಲಿವೆ.

ಪರಿಸ್ಥಿತಿ ಹೀಗಿರುವಾಗ ಬನ್ನೇರುಘಟ್ಟ ರಸ್ತೆಯ ಮಗ್ಗುಲಲ್ಲಿರುವ ಗುರಪ್ಪನಪಾಳ್ಯದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ‘ಮಹೇಶ್ವರಿ’ ಚಿತ್ರಮಂದಿರ ಅತ್ಯಾಧುನಿಕ ‘11.1 ಏರೋ’ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರಿಗೆ ಚಿತ್ರ ವೀಕ್ಷಣೆಗೆ ಹೊಸ ಅನುಭವ ನೀಡಲು ಸಜ್ಜಾಗಿದೆ.

ಜಾಗತಿಕ ಮಟ್ಟದ ಈ ತ್ರೀಡಿ ಧ್ವನಿ ತಂತ್ರಜ್ಞಾನವನ್ನು ಬಾರ್ಕೋ ಕಂಪನಿಯ ಸಹಯೋಗದೊಂದಿಗೆ ಮಹೇಶ್ವರಿ ಚಿತ್ರಮಂದಿರ ಅಳವಡಿಸಿಕೊಂಡಿದೆ. ಇದರಿಂದಾಗಿ ಚಿತ್ರಮಂದಿರದಲ್ಲಿ 360 ಡಿಗ್ರಿ ಸುತ್ತಳತೆಯಲ್ಲೂ ಪ್ರೇಕ್ಷಕರು ಸಿನಿಮಾದ ಸಂಗೀತ ಮತ್ತು ವಿಶೇಷ ಶಬ್ದಗಳನ್ನು ಆಸ್ವಾದಿಸಬಹುದಾಗಿದೆ.

‘ಏರೋ 11.1’ ತಂತ್ರಜ್ಞಾನವನ್ನು  2013ರಲ್ಲಿ ಬೆಂಗಳೂರಿನ ಮಾನಸ ಚಿತ್ರಮಂದಿರದಲ್ಲಿ ಅಳವಡಿಸಲಾಗಿದೆ. ಆದರೆ  ವಿಶ್ವ ಮಟ್ಟದ ಅಲ್ಟ್ರಾ–ಬ್ರೈಟ್ ಬಾರ್ಕೊ ಡಿಪಿ2ಕೆ–23ಬಿ ಪ್ರೊಜೆಕ್ಟರ್ ಹೊಂದಿರುವ ಮೊದಲ ಥಿಯೇಟರ್ ಎಂದರೆ ‘ಮಹೇಶ್ವರಿ’ ಎಂದು ಬಾರ್ಕೋ ಕಂಪನಿಯ ಮಧುಸೂದನ್ ಮಾಹಿತಿ ನೀಡಿದರು.

ಮಹೇಶ್ವರಿ ಒಂದು ಸಾವಿರ ಆಸನಗಳುಳ್ಳ ಐಷಾರಾಮಿ ಥಿಯೇಟರ್ ಆಗಿದ್ದು, ಬೆಂಗಳೂರಿನ ಮೇಲ್ವರ್ಗದ ಜನತೆ ಬಯಸುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಇಂದು ಸಿನಿಮಾ ವೀಕ್ಷಣೆಗೆ ಅನೇಕ ಪರ್ಯಾಯ ಮಾರ್ಗಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಥಿಯೇಟರ್‌ನೆಡೆಗೆ ಸಿನಿಪ್ರಿಯರನ್ನು ಆಕರ್ಷಿಸಲು ಸದಾ ಹೊಸತನ್ನು ಅಳವಡಿಸಿಕೊಳ್ಳಲೇಬೇಕು.

ಈ ನಿಟ್ಟಿನಲ್ಲಿ, ಸ್ಪಷ್ಟ ಹಾಗೂ ಅತ್ಯುತ್ತಮ ಗುಣಮಟ್ಟದ ಚಿತ್ರಪ್ರಸಾರ ವ್ಯವಸ್ಥೆಯೊಂದಿಗೆ, ಧ್ವನಿಯ ಗುಣಮಟ್ಟವೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಗ್ಗೆ ಯೋಚಿಸಿದಾಗ ‘ಏರೊ ಧ್ವನಿ’ ತಂತ್ರಜ್ಞಾನ ಹೆಚ್ಚು ಸೂಕ್ತ ಎನಿಸಿತು ಎನ್ನುವುದು ಮಹೇಶ್ವರಿ ಥಿಯೇಟರ್ ಮಾಲೀಕ ಮಂಜುನಾಥ ಅಭಿಪ್ರಾಯ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೊಚ್ಚಾಡಿಯನ್ ಚಿತ್ರ ಇದೇ 23ರಂದು ತೆರೆಕಾಣಲಿದ್ದು. ಮಹೇಶ್ವರಿ ಚಿತ್ರಮಂದಿರ ಕೊಚ್ಚಾಡಿಯನ್ ಚಿತ್ರದ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ಏರೋ 11.1
ವಿಶೇಷವಾಗಿ 3ಡಿ ಮಾದರಿಯಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಸ್ಪೀಕರ್ ವಿನ್ಯಾಸ ಇರುವ ವ್ಯವಸ್ಥೆಯೇ ‘ಏರೋ’. ಇದನ್ನು ಗ್ಯಾಲಾಕ್ಸಿ ಸ್ಟುಡಿಯೊದ ಸಿಇಒ ವಿಲ್‌ಫ್ರೆಡ್ ವಾನ್ ಬೆಲೆನ್  2005ರಲ್ಲಿ ಅಭಿವೃದ್ಧಿಪಡಿಸಿದರು. ಜಾಗತಿಕ ದೃಶ್ಯೀಕರಣ ಮತ್ತು ಡಿಜಿಟಲ್ ಸಿನಿಮಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬಾರ್ಕೊ ಕಂಪೆನಿ ಸಹಯೋಗದಿಂದ ಏರೋ 11.1 ಧ್ವನಿ ತಂತ್ರಜ್ಞಾನ ರೂಪುಗೊಂಡಿದೆ.

ಇದು ಮೂರು ಆಯಾಮಗಳನ್ನು (x,y,z) ಬಳಸಿಕೊಂಡು 3ಡಿ ಧ್ವನಿಯನ್ನು ಸೃಷ್ಟಿಸುತ್ತದೆ. ಏರೋ 11.1 ವ್ಯವಸ್ಥೆಯುಲ್ಲಿ ಕಿವಿ ನೇರಕ್ಕೆ, ಅದಕ್ಕೂ ಎತ್ತರದಲ್ಲಿ ಹಾಗೂ ತಲೆಯ ಮೇಲೆ, ಹೀಗೆ ಮೂರು ಹಂತದಲ್ಲಿ ಸ್ಪೀಕರ್ ಅಳವಡಿಸಲಾಗುತ್ತದೆ. ಇದರಿಂದ ಪ್ರೇಕ್ಷಕರಿಗೆ ನೈಜ ಧ್ವನಿಯ ಅನುಭವ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT