ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಮಲ್ಲಿಯೋ ಸ್ವಾವಲಂಬಿಯೋ?

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಅರಳು ಹುರಿದಂತೆ ಪಟಪಟನೆ ಮಾತನಾಡುವ ನಟಿ ಕೃಷಿ ತಾಪಂಡ ಕೊಡಗಿನ ಬೆಡಗಿ. ಯಾರನ್ನೂ ಅವಲಂಬಿಸಬಾರದು, ಸ್ವಾವಲಂಬಿ ಆಗಿರಬೇಕು ಎಂಬ ನಿಲುವಿನ ಇವರು ಒಂದು ತಮಿಳು, ಎರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೆಸರು, ಹಣಕ್ಕಿಂತ ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವುದು ಕೃಷಿ ಹೆಬ್ಬಯಕೆ.

ಇವರು ಅಭಿನಯಿಸಿದ ತಮಿಳಿನ ‘ನೇ’, ಕನ್ನಡದ ‘ಕಹಿ’ ಸಿನಿಮಾಗಳು ಮಾರ್ಚ್‌ನಲ್ಲಿ ತೆರೆಕಾಣಲಿವೆ. ಸಿನಿಮಾ ಕ್ಷೇತ್ರಕ್ಕೆ ಬರಲು ಸವೆಸಿದ ಏಳುಬೀಳುಗಳ ಹಾದಿ ಕುರಿತು ಕೃಷಿ ತಾಪಂಡ ಬ್ರೇಕಿಲ್ಲದ ಟ್ರ್ಯಾಕಿನಲ್ಲಿ ‘ಮೆಟ್ರೊ’ದೊಂದಿಗೆ ಮಾತಿನ ಸವಾರಿ ಮಾಡಿದ್ದಾರೆ. ಕೊಡಗಿನಲ್ಲಿ ಹುಟ್ಟಿದ ಕೃಷಿಗೆ ಮೊದಲಿನಿಂದಲೂ ನಟನಾ ಕ್ಷೇತ್ರ ಇಷ್ಟ. ಓದಿಗಿಂತ ನೃತ್ಯ, ಕ್ರೀಡೆಯತ್ತ ಇವರ ಒಲವು ಹೆಚ್ಚಿತ್ತು. ಇವರು ರಾಜ್ಯಮಟ್ಟದ ಥ್ರೋ ಬಾಲ್ ಆಟಗಾರ್ತಿ. ಹೈಸ್ಕೂಲು ಶಿಕ್ಷಣ ಮುಗಿಸಿದ್ದು ಕೊಡಗಿನಲ್ಲಿ. ಕಾಲೇಜಿಗಾಗಿ ಮೈಸೂರಿಗೆ ಬಂದರು. ಅಲ್ಲಿಂದ ಪದವಿ ಶಿಕ್ಷಣಕ್ಕಾಗಿ ಬಂದದ್ದು ಬೆಂಗಳೂರಿಗೆ.

ಸ್ವಾವಲಂಬನೆಯ ಹಂಬಲ
ಸ್ವಾವಲಂಬಿಯಾಗಿ ಬದುಕಬೇಕು ಎಂಬ ಆಸೆ ಹೊತ್ತುಕೊಂಡಿರುವ ಕೃಷಿ ತಮ್ಮ ಪಾಕೆಟ್ ಮನಿಗಾಗಿ ಮನೆಯವರನ್ನು ಅವಲಂಬಿಸದೆ ತಾವೇ ದುಡಿಯತೊಡಗಿದರು. ಬೆಳಿಗ್ಗೆ ಕಾಲೇಜು, ಸಂಜೆ ಖಾಸಗಿ ಕಂಪೆನಿಯೊಂದರಲ್ಲಿ ದುಡಿತ. ಸಂಜೆ ಐದು ಗಂಟೆಗೆ ಕೆಲಸದ ಪಾಳಿ ಶುರುವಾಗಿ ರಾತ್ರಿ ಎರಡಕ್ಕೆ ಮುಗಿಯುತ್ತಿತ್ತು. ಮೊದಲು ಒಂಬತ್ತು ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದ ಕೃಷಿ ಹಂತ ಹಂತವಾಗಿ ಮೇಲಕ್ಕೇರಿ ಮೂವತ್ತು ಸಾವಿರ ಸಂಬಳ ಎಣಿಸಲು ಶುರುಮಾಡಿದರು. ಓದುತ್ತಿರುವಾಗಲೇ ಕೆಲಸ ಮಾಡುತ್ತಿದ್ದ ಖಾಸಗಿ ಕಂಪೆನಿಯೊಂದರ ಟೀಮ್ ಲೀಡರ್ ಪಟ್ಟ ಗಿಟ್ಟಿಸಿಕೊಂಡರು.

‘ನನಗೆ ನೃತ್ಯವೆಂದರೆ ತುಂಬ ಪ್ರೀತಿ. ಕ್ಲಾಸಿಕ್, ಪಾಶ್ಚಾತ್ಯ, ಹಿಪ್–ಹಾಪ್ ನೃತ್ಯಗಳನ್ನು ಕಲಿತಿದ್ದೇನೆ. ಇದರ ಜತೆಗೆ ಥ್ರೋ ಬಾಲ್, ಹಾಕಿ ಆಟ ನನಗೆ ತುಂಬ ಇಷ್ಟ. ನಟಿಯಾಗಬೇಕು ಎಂಬ ಆಸೆ ಬಾಲ್ಯದಿಂದಲೇ ನನ್ನಲ್ಲಿತ್ತು. ಮನೆಯವರಿಗೆ ನನ್ನ ಮೇಲೆ ನಂಬಿಕೆ ಇತ್ತು. ಆದರೆ ಓದಿನ ಬಗ್ಗೆ ನಾನು ಹೆಚ್ಚು ಗಮನ ನೀಡದೇ ಇರುವುದು ಅವರಿಗೆ ಸ್ವಲ್ಪ ಮಟ್ಟಿಗೆ ಬೇಸರವಾಗಿತ್ತು. ಈಗ ನನ್ನನ್ನು ನೋಡಿ ಖುಷಿಪಡುತ್ತಾರೆ. ನನಗೂ ತೃಪ್ತಿ ಇದೆ’ ಎನ್ನುತ್ತಾರೆ ಕೃಷಿ.

ನಟನೆಯ ಬಾಗಿಲು ತೆರೆದಿದ್ದು...
‘ಮಿಸ್ ಸೌತ್ ಇಂಡಿಯನ್ ಕ್ವೀನ್’ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ಕಿರೀಟ ಧರಿಸಿದರು ಕೃಷಿ. ಇದಾದ ಸ್ವಲ್ಪ ದಿನಗಳಲ್ಲಿ ತಮಿಳಿನ ‘ನೇ’ ಸಿನಿಮಾಕ್ಕೆ ಆಯ್ಕೆಯಾದರು. ಅಲ್ಲಿ ಶೂಟಿಂಗ್ ಮುಗಿಯುತ್ತಿದ್ದಂತೆ ಕನ್ನಡದ ‘ಕಹಿ’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಆಮೇಲೆ ‘ಅಕಿರಾ’ ಸಿನಿಮಾಕ್ಕೂ ಆಯ್ಕೆಯಾದರು. ‘ಪ್ರತಿಭೆಯ ಜತೆಗೆ ಆತ್ಮವಿಶ್ವಾಸ ಇರಬೇಕು ಆಗ ಅವಕಾಶಗಳು ಸಿಗುತ್ತವೆ. ನಮ್ಮನ್ನು ಗುರುತಿಸುತ್ತಾರೆ’ ಎನ್ನುವುದು ಕೃಷಿ ಅನುಭವದ ಮಾತು.

‘ನಾನು ಇಂಡಸ್ಟ್ರಿಗೆ ಬಂದಾಗ ಇಲ್ಲಿ ಯಾರೂ ನನಗೆ ಗೊತ್ತಿರಲಿಲ್ಲ. ನಾನೇ ಎಲ್ಲರ ಹತ್ತಿರ ಹೋಗಿ ಮಾತನಾಡಿದೆ. ಯಾವುದೇ ಹಿನ್ನೆಲೆ, ಕಾಂಟ್ಯಾಕ್ಟ್‌ ಇಲ್ಲದೇ ನಾನು ಈ ಕ್ಷೇತ್ರಕ್ಕೆ ಬಂದವಳು. ದುಡಿದ ಹಣ ಸ್ವಲ್ಪ ಕೈಯಲ್ಲಿತ್ತು. ಒಂದು ವೇಳೆ ನನಗೆ ಇಲ್ಲಿ ಅವಕಾಶ ಸಿಗದೇ ಹೋದರೂ ಬದುಕು ಸಾಗಿಸಬೇಕಿತ್ತು. ನನ್ನದು ಆತುರದ ನಿರ್ಧಾರವೂ ಆಗಿರಲಿಲ್ಲ’ ಎಂದು ತಮ್ಮ ಪಯಣದ ಹಾದಿ ಕುರಿತು ವಿವರಿಸುತ್ತಾರೆ.

ಸಿನಿಮಾ ಅನುಭವ
ತಮಿಳಿನ ‘ನೇ’ ಸಿನಿಮಾದಲ್ಲಿ ಕೃಷಿ ಅವರದ್ದು ಸ್ಲಂ ಹುಡುಗಿ ಪಾತ್ರ. ಇದರ ಶೂಟಿಂಗ್ ನಡೆದದ್ದೂ ಸ್ಲಂನಲ್ಲಿಯೇ. ಎರಡು ಮೂರು ದಿನ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗಿತ್ತು. ಇನ್ನು ಸ್ಲಂನಲ್ಲಿ ಮಾತನಾಡುವ ತಮಿಳು ಸ್ವಲ್ಪ ಭಿನ್ನವಾಗಿರುವುದರಿಂದ ಅದನ್ನು ಕಲಿಯುವುದಕ್ಕಾಗಿ ಒಂದಷ್ಟು ದಿನ ಸ್ಲಂನಲ್ಲಿರುವವರ ಜತೆ ಒಡನಾಡಿದ ಛಲಗಾತಿ.

‘ಇವಳಿಗೆ ಯಾಕಾದರೂ ಪಾತ್ರ ನೀಡಿದೆವೋ ಎಂದು ನಿರ್ದೇಶಕರಿಗೆ ಅನಿಸಬಾರದು, ನಾನು ಯಾಕಾದರೂ ಈ ಸಿನಿಮಾ ಒಪ್ಪಿಕೊಂಡೆನೋ ಎಂದು ನನಗೂ ಅನಿಸಬಾರದು. ಹಾಗಾಗಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಈ ಸಿನಿಮಾಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ. ಕೆಲಸದ ತೃಪ್ತಿಯೇ ನನಗೆ ಖುಷಿ ನೀಡಿದೆ’ ಎನ್ನುತ್ತಾರೆ ಕೃಷಿ. ಬೆಂಗಳೂರಿಗರ ಕಷ್ಟ–ಸುಖ ಪ್ರತಿಬಿಂಬಿಸುವ ‘ಕಹಿ’ ಚಿತ್ರ ಇವರಿಗೆ ಸಾಕಷ್ಟು ಖುಷಿಯ ಅನುಭವಗಳನ್ನು ನೀಡಿದೆ ಎಂದು ಮಾತು ಸೇರಿಸುತ್ತಾರೆ.

ಆಂಗಿಕ ಸೌಂದರ್ಯಕ್ಕೆ ನಗುವೇ ಕಾರಣ
ಚೆನ್ನಾಗಿ ತಿನ್ನುವ ಕೃಷಿ ಯಾವತ್ತೂ ಡಯಟ್ ಮಾಡಿಲ್ಲ. ಇದರ ಜತೆಗೆ ಚಾಕೊಲೆಟ್ ಪ್ರಿಯೆ. ಅನ್ನ ತಿನ್ನುವುದಕ್ಕಿಂತ ಹೆಚ್ಚು ಹಣ್ಣು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಯಾವುದಾದರೂ ಹೊಸ ಹಣ್ಣು ಬಂದರೆ ರುಚಿ ನೋಡದೇ ಇರುವುದಿಲ್ಲ. ‘ಚೆನ್ನಾಗಿ ತಿನ್ನುತ್ತೇನೆ. ಯಾರೇ ಸಿಕ್ಕಿದರೂ ಮಾತನಾಡುತ್ತೇನೆ. ಮಾತಿನಿಂದಲೇ ನಾನು ತಿಂದಿದೆಲ್ಲಾ ಜೀರ್ಣವಾಗುತ್ತದೆ’ ಎಂದು ನಗು ಬೆರೆಸಿ ಹೇಳುತ್ತಾರೆ.

ಪಾರ್ಲರ್‌ನಿಂದ ದೂರ
ಮೇಕಪ್ ಇಷ್ಟಪಡದ ಸಹಜ ಸುಂದರಿ. ಮನೆಯಲ್ಲಿ ಸಿಗುವ ಹಾಲು, ಹಳದಿ, ಕೆನೆ ಉಪಯೋಗಿಸಿಕೊಂಡು ಮುಖದ ಆರೈಕೆ ಮಾಡಿಕೊಳ್ಳುತ್ತಾರೆ. ಶೂಟಿಂಗ್‌ನಿಂದ ಬಿಡುವು ಸಿಕ್ಕಾಗೆಲೆಲ್ಲಾ ಸ್ನೇಹಿತರ ಜತೆ ಸೇರಿಕೊಂಡು ಊರು, ಕಾಡು ತಿರುಗಾಡುವುದೇ ಇವರ ಹವ್ಯಾಸ. ‘ನಗುತ್ತಾ ಇರಿ. ಎಲ್ಲರ ಜತೆ ಸ್ನೇಹದಿಂದ ಇರಿ. ಆಗ ಬದುಕು ಸುಂದರವಾಗಿರುತ್ತದೆ’ ಎನ್ನುವುದು ಕೃಷಿ  ಹಿತನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT