ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದ ವಸ್ತುವಿಗೆ ಕುಶಲಸ್ಪರ್ಶ

ಹವ್ಯಾಸದ ಹಾದಿ
Last Updated 10 ಮೇ 2015, 19:30 IST
ಅಕ್ಷರ ಗಾತ್ರ

ನಾವೆಲ್ಲರೂ ಶಾಲಾ ದಿನಗಳಲ್ಲಿ ಪೇಪರ್, ಪಾಟರಿ, ಓರಿಗಾಮಿ, ಚಿತ್ರಕಲೆ ಹೀಗೆ ಹಲವು ಕರಕುಶಲ ಕಲೆಯನ್ನು ಸಣ್ಣ ಮಟ್ಟದಲ್ಲಿ ಅಭ್ಯಾಸ ಮಾಡಿರುತ್ತೇವೆ.  ಶಾಲೆ ಹಂತ ಕಳೆಯುತ್ತಿದ್ದಂತೆ ಆ ಅಭ್ಯಾಸವೂ ನಮ್ಮ ಕೈತಪ್ಪಿ ಹೋಗುತ್ತವೆ. ಆದರೆ ರಿನಿ ಜೋಶಿ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಅವರ ಅಂದಿನ ಕಲಾಸಕ್ತಿ ಇಂದಿಗೂ ಹಾಗೇ ಉಳಿದುಕೊಂಡು ಹೊಸ ಹೊಸ ಪ್ರಯೋಗಗಳಿಗೆ ಮುನ್ನುಡಿ ಬರೆಯುತ್ತಿದೆ.

‘ಚಮ್ಕೀಲೆ ಚೀಸ್’ ಎಂಬ ಪೋರ್ಟಲ್‌ ಆರಂಭಿಸಿ, ಬಿಸಾಡುವ ವಸ್ತುಗಳಿಂದ ಸುಂದರ ಕಲಾಸಾಮಗ್ರಿಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದಾರೆ ಅವರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ‘ಹಳೆಯದಾದ, ಉಪಯೋಗಕ್ಕೆ ಬಾರದ ಹಲವು ವಸ್ತುಗಳಿಗೆ ಸುಂದರ ರೂಪ ನೀಡಲು ಸಾಧ್ಯವಿದೆ. ಅವುಗಳಿಂದ ಮನೆಯ ಅಂದವನ್ನು  ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲ,  ಪ್ರೀತಿ ಪಾತ್ರರಿಗೆ ಉಡುಗೊರೆಯಾಗೂ ನೀಡಬಹುದು’ ಎಂದು ವಿವರಣೆ ನೀಡುವರು.

‘ರೆಡ್ಯೂಸ್, ರೀ ಯೂಸ್ ಮತ್ತು ರಿಸೈಕಲ್’ ಎಂಬುದನ್ನು ತಮ್ಮ ಧ್ಯೇಯವಾಗಿಸಿಕೊಂಡು ಈ ಕಲಾ ಸಾಮಗ್ರಿಗಳನ್ನು ತಯಾರಿಸುತ್ತಾರೆ ರಿಶಿ. ಉಪಯೋಗಕ್ಕೆ ಬಾರದ ಖಾಲಿ ಬಾಟಲಿ, ಉಪ್ಪಿನಕಾಯಿ ಜಾಡಿ, ಸೆರ್‍ಯಾಮಿಕ್ ಪಾಟ್, ಕ್ಯಾನ್‌ಗಳು ಇವರು ತಮ್ಮ ಕಲೆಗೆ ಆರಿಸಿಕೊಂಡ ವಸ್ತುಗಳು. ಇವುಗಳ ಬಗ್ಗೆ ಆಸಕ್ತಿ ಮೂಡಲೂ ಕಾರಣವಿದೆಯಂತೆ.

‘ನನ್ನ ತಾಯಿಗೆ ಮನೆಯಲ್ಲಿ ಕೆಲವು ಹಳೆಯ ವಸ್ತುಗಳನ್ನು ಎಸೆಯಲು ಮನಸ್ಸಾಗುತ್ತಿರಲಿಲ್ಲ, ತಂದೆಗೆ ಅವೆಲ್ಲವನ್ನು ಮನೆಯಲ್ಲಿ ಇಟ್ಟುಕೊಳ್ಳಲೂ ಇಷ್ಟವಿರಲಿಲ್ಲ. ಆದ್ದರಿಂದ ಇವೆಲ್ಲದರಲ್ಲೂ ಚಿತ್ರಕಲೆ ಬಿಡಿಸುವಂತೆ ಅಮ್ಮ ಪ್ರೇರೇಪಿಸಿದರು. ಸೀಮೆ ಎಣ್ಣೆ ದೀಪ, ಉಪ್ಪಿನ ಕಾಯಿ ಡಬ್ಬ ಹೀಗೆ ಹಲವು ವಸ್ತುಗಳ ಮೇಲೆ ಪೇಂಟ್ ಮಾಡಿ ಹೊಸ ರೂಪ ಕೊಟ್ಟಾಗ ಇಬ್ಬರಿಗೂ ಇಷ್ಟವಾಯಿತು’ ಎಂದು ಉತ್ಸಾಹದಿಂದ ಹೇಳಿಕೊಂಡರು ಅವರು.

ತಮಗೆ ಉಡುಗೊರೆ ಕೊಡಲು ಬಯಸುವ ಮಂದಿಗೂ ರಿಶಿ, ‘ನೀವೇ ಸ್ವತಃ ಮಾಡಿದ ಉಡುಗೊರೆ ಕೊಡಿ’ ಎನ್ನುತ್ತಾರಂತೆ. ಏಕೆಂದರೆ ‘ಪ್ರತಿಯೊಬ್ಬರಿಗೂ ಕಸದಿಂದ ಹೊಸದನ್ನು ಮಾಡುವ ಮನಸ್ಸಾಗಬೇಕು.  ಅಂಗಡಿಯಲ್ಲಿ ಉಡುಗೊರೆ ತೆಗೆದುಕೊಳ್ಳುವುದಕ್ಕಿಂತ ತಾವೇ ಮಾಡಿ ನೀಡಿದರೆ ಅದು ಖುಷಿ ನೀಡುತ್ತದೆ’ ಎಂದು ಕಾರಣ ಕೊಡುತ್ತಾರೆ ಅವರು.

‘ನಾನು ವಿನ್ಯಾಸ ಮಾಡಿದ ಈ ಉತ್ಪನ್ನಗಳನ್ನು ಸುಮ್ಮನೆ ಮಾರುವುದಕ್ಕಿಂತ, ಕೊಳ್ಳುವವರ  ಮನಸ್ಸಿನಲ್ಲಿ ಏನಿದೆ ಎಂಬುದನ್ನು  ತಿಳಿದುಕೊಂಡು ಅದನ್ನು ಚಿತ್ರ ಬಿಡಿಸಿ ಕೊಡುತ್ತೇನೆ’ ಎನ್ನುತ್ತಾರೆ ಅವರು. ಆದ್ದರಿಂದಲೇ ಅವರ ಯಾವುದೇ ಉತ್ಪನ್ನಕ್ಕೂ ನಿರ್ದಿಷ್ಟ ಬೆಲೆ ಎಂಬುದಿಲ್ಲ.

ಪ್ರೈಮರಿಯಲ್ಲಿ ಓದುತ್ತಿರುವಾಗಲೇ ರಿಶಿ ಅವರಿಗೆ ಕಲೆಯ ಬಗ್ಗೆ ಆಸಕ್ತಿ ಮೂಡಿತ್ತು. ಐದನೇ ತರಗತಿಯಲ್ಲಿದ್ದಾಗ ಪಾಟ್‌ ಪೇಂಟಿಂಗ್ ಅನ್ನು ಶಾಲೆಯಲ್ಲಿ ಕಲಿತಿದ್ದ‌ರು. ನಂತರ ಸ್ವ ಆಸಕ್ತಿಯಿಂದ ಹಲವು ರೀತಿಯ ಪಾಟ್‌ಗಳನ್ನು ಸಂಗ್ರಹಿಸಿ ಬಣ್ಣ ಹಚ್ಚಲು ಆರಂಭಿಸಿದರು.

ಮೊದಮೊದಲು ಅಂದುಕೊಂಡ ಹಾಗೆ ಯಾವುದೂ ಆಗುತ್ತಿರಲಿಲ್ಲ. ಆದರೆ ಆಗಲಿಲ್ಲ ಎಂದು ಅವರು ಸುಮ್ಮನೆ ಕೂರಲಿಲ್ಲ. ಎನಾಮಲ್ ಬಳಸುತ್ತಿದ್ದ ಅವರು ಸ್ನೇಹಿತರೊಬ್ಬರ ಸಲಹೆಯಂತೆ ವಾಲ್ ಪೇಂಟಿಂಗ್ ಬಳಸಲು ಆರಂಭಿಸಿದರು.  ಸಣ್ಣ ಅಂಗಡಿಗಳಿಗೆ ಹೋಗಿ, ಅವರಿಂದ ಪೇಂಟ್‌ ಸ್ಯಾಂಪಲ್‌ಗಳನ್ನು ತಂದರು. ಬಣ್ಣಗಳಲ್ಲಿ ಹೆಚ್ಚು ಆಯ್ಕೆ ಇರಲಿಲ್ಲ. ಕಪ್ಪು, ಕೆಂಪು, ಹಸಿರು, ಹಳದಿ ಇವಿಷ್ಟರಲ್ಲೇ ಹಲವು ಪ್ರಯೋಗಗಳನ್ನು ಮಾಡಿದರು.

ಹೀಗೆ ಒಮ್ಮೆ ಅವರ ಮನೆಯನ್ನು ನವೀಕರಿಸುತ್ತಿದ್ದಾಗ ರಾಶಿ ರಾಶಿ ಒಡೆದ ಟೈಲ್ಸ್‌ ಸಿಕ್ಕವು. ಅವುಗಳನ್ನು ಕಂಡಾಕ್ಷಣ ಅದರಲ್ಲೂ ಏನಾದರೂ ಪ್ರಯೋಗ ಮಾಡಬೇಕು ಎಂಬ ಯೋಚನೆ ಅವರ ತಲೆ ಹೊಕ್ಕಿತು. ಟೈಲ್‌ ಮತ್ತು ಎನಾಮಲ್ ಬಳಸಿ ‘ದಿ ಲಾಸ್ಟ್ ಸಪ್ಪರ್’ ಚಿತ್ರ ಬಿಡಿಸಿದರು. ಅದು ಅದ್ಭುತವಾಗಿ ಮೂಡಿಬಂದದ್ದನ್ನು ನೋಡಿದ ಅವರ ಕುಟುಂಬ ಮತ್ತು ಗೆಳೆಯರು ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಲು ಸಲಹೆ ನೀಡಿದರು.

ಇವರ ಪರಿಸರಸ್ನೇಹಿ ಉತ್ಪನ್ನಗಳ ಹಿಂದೆಯೂ ಒಂದು ಕಥೆಯಿದೆ. ‘ನನಗೆ  ಯಾವಾಗಲೂ ಪಾರ್ಟಿ ಮಾಡುವ  ಕೆಲ ಸ್ನೇಹಿತರಿದ್ದರು. ಪಾರ್ಟಿಯಲ್ಲಿ ವ್ಯರ್ಥವಾದ ಬಾಟಲಿಗಳನ್ನು ನನಗೆ ಕೊಡಲು ಹೇಳುತ್ತಿದ್ದೆ. ಪ್ರತಿ ವಾರವೂ ಒಂದಷ್ಟು ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ಡೆಸ್ಕ್‌ಟಾಪ್ ಪ್ಲಾಂಟರ್‌ ಮತ್ತು ಇನ್ನಿತರ ಕಲಾ ಸಾಮಗ್ರಿಗಳಾಗಿ ಪರಿವರ್ತಿಸಿಕೊಳ್ಳುತ್ತಿದ್ದೆ. ಅದನ್ನು ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಿದೆ’ ಎಂದು  ವಿವರಿಸಿದರು. ಇಕ್ಕಟ್ಟಾಗುತ್ತಿರುವ ನಗರಗಳಲ್ಲಿ ಈ ಬಾಟಲ್ ಪ್ಲಾಂಟರ್‌ಗಳು  ಗಿಡ ನೆಡುವ ಅವಶ್ಯಕತೆಯೊಂದಿಗೆ ಮನೆಯನ್ನು ಸುಂದರವಾಗಿಡಲು ಸಹಾಯ ಮಾಡುತ್ತವೆ’ ಎಂಬುದು ಅವರ ಅನುಭವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT