ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಿಂದ ಬೆಂಗಳೂರಿಗೆ...ಬಾಣಸಿಗನ ಪ್ರಯಾಣ ಕಥನ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಲಂಡನ್‌ನಿಂದ ದೆಹಲಿ ಸೇರಿ, ಅಲ್ಲಿಂದ ಕೋಲ್ಕತದಲ್ಲಿ ನೆಲೆಯೂರಿ, ಬೆಂಗಳೂರಿನಲ್ಲೂ ತಮ್ಮ ಕೈಚಳಕ ತೋರಿದ ಬ್ರಿಟಿಷ್ ಮುಖ್ಯ ಬಾಣಸಿಗ ಶಾನ್ ಕೆನ್‌ವರ್ದಿ ಅವರ ಅನುಭವ ಕಥನವಿದು.

ಅವರು ಭಾರತ ಪ್ರವೇಶಿದ್ದು 2000ರಲ್ಲಿ. ಭಾರತೀಯ ರುಚಿಮೊಗ್ಗು ವಿದೇಶಿ ಖಾದ್ಯಗಳಿಗೆ ತೆರೆದುಕೊಳ್ಳುತ್ತಿದ್ದ ಕಾಲಘಟ್ಟವದು. ಇಲ್ಲಿನ ಹೋಟೆಲ್ ಉದ್ಯಮಿಯೊಬ್ಬರ ಆಮಂತ್ರಣದ ಮೇರೆಗೆ ಭಾರತಕ್ಕೆ ಬಂದಿದ್ದ ಶಾನ್‌ಗೆ ಇದೇ ತವರಾಯಿತು. ಈಗ ಕೋಲ್ಕತ ಅವರ ಸ್ವಂತ, ಬೆಂಗಳೂರು ನೆಚ್ಚಿನ ಊರು. ತಿಂಗಳಿಗೆ 3–4 ದಿನವಾದರೂ ಬೆಂಗಳೂರಿನಲ್ಲಿಯೇ ಕಾಲೂರುವ ಶಾನ್‌ಗೆ ಇದು ಎರಡನೇ ನೆಚ್ಚಿನ ನಗರ.

‘ದಿ ಬೇರ್ ಕ್ಲಬ್’ ಆಲೋಚನೆ ಬಂದ ಮೇಲಿಂದ ತಪ್ಪದೇ ಬೆಂಗಳೂರಿಗೆ ಬರುವುದು ನಡೆದೇ ಇದೆ. ಆರು ವರ್ಷಗಳಿಂದ ಬೆಂಗಳೂರಿನ ನಂಟಿಗೆ. ಇದು ಯಾವತ್ತೂ ಬೋರ್ ಹೊಡೆಸದ, ಎವರ್‌ ಗ್ರೀನ್‌ ನಗರ’ ಎನ್ನುತ್ತಾರೆ ಶಾನ್.

‘ಆಗಿನ್ನೂ ಬೆಂಗಳೂರಿನಲ್ಲಿ ಆಹಾರ–ಆತಿಥ್ಯ–ಮನರಂಜನೆಯ ವಲಯ ಇಷ್ಟು ಎತ್ತರಕ್ಕೆ ಬೆಳೆದಿರಲಿಲ್ಲ. ಭಾರತದ ಯಾವುದೇ ನಗರದಲ್ಲಿ ಹೊಸದೆನ್ನುವುದೇನೂ ಕಾಣದ ದಿನಗಳವು.  ವರ್ಷಗಳಿಂದಲೂ ಉಳಿದಿದ್ದ ಕೆಲವು ರೆಸ್ಟೋರೆಂಟ್‌ಗಳಿದ್ದವಷ್ಟೇ. ಆದರೆ ಈಗ ಹಾಗಿಲ್ಲ, ಪ್ರಪಂಚದ ಯಾವುದೇ ಮೂಲೆಯಿಂದ, ಇನ್ನಾವುದೇ ಮೂಲೆಗೆ ನಮಗೆ ಬೇಕಾದ್ದನ್ನು ಕೇವಲ 36 ಗಂಟೆಗಳಲ್ಲಿ ತರಿಸಿಕೊಳ್ಳಬಹುದು’ ಎನ್ನುವುದು ಶಾನ್‌ ಗ್ರಹಿಕೆಗೆ ಸಿಗುವ ಸಂಗತಿ.

‘ಅದರಲ್ಲೂ ಬೆಂಗಳೂರು ಆಹಾರ ಪ್ರಿಯರಿಗೆ ಸಾಕಷ್ಟು ಅವಕಾಶಗಳನ್ನು ತೆರೆದಿಡುವ ನಗರ. ವ್ಯವಹಾರದ ದೃಷ್ಟಿಯಿಂದಲೂ ಬೆಂಗಳೂರಿನಲ್ಲಿ ಹೆಚ್ಚಿನ ಅವಕಾಶಗಳಿವೆ. ದಿನದಿನವೂ ಹೊಸ ಹುಟ್ಟು ಪಡೆಯುವ ಟ್ರೆಂಡ್‌ ಜೊತೆ–ಜೊತೆಗೆ ಸಾಗುವ ಯುವ ಸಂಸ್ಕೃತಿ ಇಲ್ಲಿದೆ. ಹಚ್ಚಿನ ಜನರು ಇಲ್ಲಿ ವಲಸಿಗರೇ ಇದ್ದಾರೆ. ಸಾಕಷ್ಟು ದುಡಿಯಲೂ ಇಲ್ಲಿ ಅವಕಾಶಗಳಿವೆ. ವಾರದ ಏಳು ದಿನ ದುಡಿಯುವ ಜನ ಬೆಂಗಳೂರಿನಲ್ಲಿ ಮಾತ್ರ ಸಿಗುತ್ತಾರೇನೊ, ಬೇರೆ ನಗರಗಳಲ್ಲಿ ನಾವು ಇದನ್ನು ಕಂಡಿಲ್ಲ. ಅಂತೆಯೇ ಹಾಗೆ ದುಡಿದ ಹಣವನ್ನು ಖರ್ಚು ಮಾಡಲೂ ಸಹ ಈ ಜನರು ಚಿಂತಿಸುವುದಿಲ್ಲ’ ಎನ್ನುತ್ತಾರೆ ಶಾನ್.

ಭಾರತ ಸೇರಿದ್ದು ಆಯ್ಕೆಯೂ, ಆಕಸ್ಮಿಕವೂ...
ಭಾರತಕ್ಕೆ ಕಾಲಿಟ್ಟ ತಮ್ಮ ರೋಚಕ ಕಥೆಯನ್ನು ಶಾನ್ ಹೀಗೆ ವಿವರಿಸುತ್ತ ಹೋಗುತ್ತಾರೆ– ಭಾರತ ಸೇರಿದ್ದು ಆಕಸ್ಮಿಕ. ನಂತರ ಅದೇ ಆಯ್ಕೆಯೂ ಆಗಿ ಹೋಯಿತು. ಒಮ್ಮೆ ಭಾರತಕ್ಕೆ ಹತ್ತಿರವಾದ ನಂತರ ಮತ್ತೆ ಇದನ್ನು ಬಿಟ್ಟು ಹೋಗಲು ಅವಕಾಶಗಳು ಬಂದರೂ ಮನಸ್ಸು ಬರಲಿಲ್ಲ.

ನನ್ನ ಜೀವನದ ಮಹತ್ವದ 11 ವರ್ಷಗಳನ್ನು ನಾನು ಲಂಡನ್‌ನಲ್ಲಿಯೇ ಕಳೆದಿದ್ದು. ಆದರೆ ಅಲ್ಲಿಂದ ಆಚೆ ಹೋಗಬೇಕು ಎನ್ನುವುದು ಚಿಕ್ಕ ವಯಸ್ಸಿನಲ್ಲಿಯೇ ನನ್ನ ಮನಸ್ಸಿನಲ್ಲಿ ಬಂದಿತ್ತು. ಆಸ್ಟ್ರೇಲಿಯಾ, ಸಿಂಗಪುರ್ ಹಾಂಕಾಂಗ್ ಮುಂತಾದ ದೇಶಗಳತ್ತ ಮುಖ ಮಾಡಿದ ಸಾಕಷ್ಟು ಜನ ಗೆಳೆಯರಿದ್ದರು.

ಆಗ ನಾನು ಲಂಡನ್‌ನ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ‘ವಿಶ್ವ ರಸಭಕ್ಷ್ಯಗಳ ಶೃಂಗಸಭೆ’ಗಾಗಿ ಸಿಂಗಪುರಕ್ಕೆ ಹೋಗಿದ್ದೆ. ಅಲ್ಲಿ ಭಾರತದ ಆಹಾರ–ಆತಿಥ್ಯ ವ್ಯವಹಾರದಲ್ಲಿ ಹೆಸರು ಮಾಡಿದ್ದ ಉದ್ಯಮಿಯೊಬ್ಬರ ಪರಿಚಯವಾಯಿತು. ಅಲ್ಲಿಂದ ಲಂಡನ್‌ಗೆ ಮರಳಿನ ನಂತರ ಅವರು ಮತ್ತೆ ನನ್ನನ್ನು ಸಂಪರ್ಕಿಸಿ ಭಾರತಕ್ಕೆ ಭೇಟಿ ನೀಡುವಂತೆ ಕೇಳಿದರು. ಅವರ ಮಾತಿನಂತೆ ದೆಹಲಿಗೆ ಬಂದೆ. ಮುಂದೆ ಅಲ್ಲಿಯೇ ಒಂದೆರಡು ವರ್ಷ ಕೆಲಸ ಮಾಡುವಂತೆ ಹೇಳಿದರು. ನಾನು ಅಲ್ಲಿಯೇ ಮುಂದುವರಿದೆ...

ಅದೊಂದು ಕರಾಳ ದಿನ. ಭಾರತೀಯರು ಎಂದೂ ಮರೆಯಲಾಗದ ದುರ್ಘಟನೆಯೊಂದು ನಡೆದುಹೋಯಿತು. ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳ ಮೇಲೆ ನಡೆದ 9/11 ದಾಳಿಯಿಂದ ಅತಿಥಿ–ಸತ್ಕಾರ ಉದ್ಯಮ ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಒಮ್ಮೆಲೇ ನೆಲಕ್ಕೆ ಕುಸಿಯಿತು.

ಆ ಸಮಯದಲ್ಲಿ ನಾನು ನನ್ನೂರು ಸೇರಿಕೊಳ್ಳುತ್ತೇನೆ ಎನ್ನುವ ನಿರೀಕ್ಷೆ ಇತ್ತು. ಆದರೆ ನಾನು ಆರಿಸಿಕೊಂಡಿದ್ದು ಕೋಲ್ಕತ ನಗರವನ್ನು. ‘ದಿ ಪಾರ್ಕ್’ನಲ್ಲಿ ಕೆಲಸ ಮಾಡಲು ನನಗೆ ಕರೆ ಬಂದಿತ್ತು.

ಆಸ್ಟ್ರೇಲಿಯಾ, ಸಿಂಗಪುರ ಬ್ಯಾಂಕಾಕ್ ಮತ್ತು ಹಾಂಕಾಂಗ್‌ನಲ್ಲಿ ಕೆಲಸ ಮಾಡಲೂ ಅವಕಾಶಗಳಿದ್ದವು. ಆದರೆ ನಾನು ಹಾಗೂ ಪತ್ನಿ ಪಿಂಕಿ ಕೊಲ್ಕತವನ್ನು ಆಯ್ದುಕೊಂಡೆವು. ಕಾರಣ ಬಂಗಾಳದ ಕಲಾವಿದೆ ಪಿಂಕಿ ಮತ್ತು ನಾನು ಮೊದಲ ಭೇಟಿ ಆಗಿದ್ದೂ ಅಲ್ಲಿಯೇ. ಕೆಲ ವರ್ಷ ನಾವಿಬ್ಬರೂ ಬರೀ ಸ್ನೇಹಿತರಾಗಿದ್ದವರು. ನಂತರ ಇಬ್ಬರ ಆಯ್ಕೆ–ಆಸಕ್ತಿ–ಇಷ್ಟಗಳು ಒಂದೇ ಎನ್ನುವುದನ್ನು ಮನಗಂಡು  ಸಂಗಾತಿಯಾದೆವು.

ಅಡುಗೆ ಮಾಡುವ ಹುಚ್ಚು
ನಾನು ತೀರಾ ಚಿಕ್ಕ ವಯಸ್ಸಿನಿಂದಲೂ ಅಡುಗೆ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದೆ. ನನ್ನ ಅಜ್ಜಿ ಅತ್ಯುತ್ತಮವಾಗಿ ಅಡುಗೆ ಮಾಡುತ್ತಿದ್ದಳು ಮತ್ತು ನಾನು ನನ್ನ ಹೆಚ್ಚಿನ ಸಮಯವನ್ನು ಅವಳೊಂದಿಗೇ ಕಳೆಯುತ್ತಿದ್ದೆ. ಮೊದಲ ಅಡುಗೆ ಪುಸ್ತಕ ನನ್ನ ಕೈಗೆ ಸಿಕ್ಕಾಗ ನನಗೆ ಕೇವಲ 10 ವರ್ಷ. ಬಾಣಸಿಗ ಅಂದರೆ ಏನು ಎನ್ನುವುದೂ ನನಗಾಗ ಅರ್ಥವಾಗಿರಲಿಲ್ಲ. ಆದರೆ ಅಡುಗೆ ಮಾಡುವುದನ್ನು ನಾನು ಬಹಳ ಎಂಜಾಯ್ ಮಾಡುತ್ತಿದ್ದೆ. ಮುಂದೆ ಇದು ನನ್ನ ಮನಸ್ಸನ್ನು ಆಕ್ರಮಿಸಿಕೊಂಡಿತ್ತು. ಅಡುಗೆ ಮಾಡುವುದಕ್ಕಾಗಿಯೇ ಶಾಲೆಯನ್ನೂ ಅರ್ಧಕ್ಕೆ ನಿಲ್ಲಿಸಿದೆ. ಈಗ ಇದೇ ನನ್ನ ಸರ್ವಸ್ವವಾಗಿದೆ.

ಯುವ ಬಾಣಸಿಗರಿಗೆ ಕಿವಿ ಮಾತು
ಭಾರತ ಸೇರಿದಂತೆ ವಿಶ್ವದಾದ್ಯಂತ ಬಹು ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಬಾಣಸಿಗರಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ವೈವಿದ್ಯಕ್ಕೆ ಉಜ್ವಲ ಭವಿಷ್ಯವಿದೆ. ಕೆಲ ವರ್ಷಗಳ ಹಿಂದೆ ಬೆರಳೆಣಿಕೆಯ ಹೋಟೆಲ್‌ಗಳಿದ್ದವು. ಈಗ ಹೆಜ್ಜೆಗೊಂದರಂತೆ ರೆಸ್ಟೋರೆಂಟ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT