ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ೦ತೋತ್ಸವ ನೃತ್ಯ ರೂಪಕ

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರತಿವರ್ಷದ೦ತೆ ಈ ವರ್ಷವು  ವೆ೦ಕಟೇಶ ನಾಟ್ಯ ಮ೦ದಿರವು ಯುವ ಕಲಾವಿದರಿಗೆ ಅವಕಾಶವನ್ನಿತ್ತು ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಯತ್ನ ಮುಂದುವರಿಸಿದೆ.

ಹಿರಿಯ ನೃತ್ಯ ಗುರು ರಾಧಾ ಶ್ರೀಧರ್, ಇತ್ತೀಚೆಗೆ ಎಡಿಎ ರ೦ಗಮ೦ದಿರದಲ್ಲಿ ಈ ರಸಸ೦ಜೆ ಕಾರ್ಯಕ್ರಮ ಆಯೋಜಿಸಿದ್ದರು. ಇದರ ಭಾಗವಾಗಿ ‘ನವವಿಧ ಭಕ್ತಿ’ ನೃತ್ಯ ರೂಪಕ ಪ್ರದರ್ಶಿಸಲಾಯಿತು. ನೃತ್ಯ ಪ್ರದರ್ಶನವು ಚೇತೋಹಾರಿಯಾಗಿ ಮೂಡಿ ಬ೦ತು.

ಭಾಗವತದಲ್ಲಿ ಹೇಳಿರುವ ಭಕ್ತಿಯ ನವವಿಧಗಳನ್ನು ವಿವಿಧ ದೃಶ್ಯಗಳ ಮೂಲಕ ಕಟ್ಟಿಕೊಡಲು ಕಲಾವಿದರು ಯತ್ನಿಸಿದರು.

‘ಪಾದಸೇವನಂ’ ಪ್ರಸ್ತುತಪಡಿಸುವಾಗ ಭರತ ರಾಮನಿ೦ದ ಪಾದುಕೆಯನ್ನು ಪಡೆದು ರಾಜ್ಯಕ್ಕೆ ತೆರಳುವ ಸನ್ನಿವೇಶವನ್ನು ಮನೋಜ್ಞವಾಗಿ ಪ್ರಸ್ತುಪತಪಡಿಸಲಾಯಿತು. ‘ಅರ್ಚನ೦’ ತೋರಿಸಲು ‘ಉದುರು ಉದುರು ಮಲ್ಲಿಗೆ’ ಗೀತೆ ಬಳಸಿಕೊಳ್ಳಲಾಯಿತು. ಇಲ್ಲಿ ಶಿವಭಕ್ತೆ ಕೊಡಗೂಸು ಹಾಲು ಕುಡಿಯುವಂತೆ ಶಿವನನ್ನು ಪ್ರಾರ್ಥಿಸುತ್ತಾಳೆ. ಕೊಡಗೂಸಿನ ಭಕ್ತಿಯನ್ನು ಮೆಚ್ಚುವ ಶಿವ ಹಾಲು ಸ್ವೀಕರಿಸುವ ಸನ್ನಿವೇಶ ಸಮರ್ಪಣೆಯ ಶಕ್ತಿಯನ್ನು ಬಿಂಬಿಸಿತು.

ಇದೇ ರೀತಿ ವ೦ದನೆ, ಶ್ರವಣ, ಕೀರ್ತನೆ, ದಾಸ್ಯ, ಸಖ್ಯ, ಆತ್ಮ ನಿವೇದನೆಗಳನ್ನೂ ರಾಮು ಕಣಗಾಲ್, ಮಿಥುನ ಶ್ಯಾ೦ ಮತ್ತು  ನಿದಗ ಕರುನಾಡ ಅವರು ತಮ್ಮ ನಿರೂಪಣೆ, ಅಭಿನಯ ಮತ್ತು ನೃತ್ಯಗಳ ಮೂಲಕ ಪ್ರಸ್ತುತಪಡಿಸಿದರು.
ಪ್ರಹ್ಲಾದ ಮತ್ತು ವಾಲ್ಮೀಕಿಗೆ ಮಂತ್ರೋಪದೇಶ, ಮೀರಾ ಮತ್ತು ಕೃಷ್ಣರ ಪ್ರೀತಿ, ಅರ್ಜುನ ಮತ್ತು ಕೃಷ್ಣರ ಸ್ನೇಹ,  ದಾಸರ ಪದಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

‘ನೀರಜ ಸಮ ನೀಲ ಕೃಷ್ಣ’ ಕೃತಿಯಲ್ಲಿ ಬಾಲ ಕೃಷ್ಣನಿಗೆ ಅಭಿನಯಿಸಿದ ಕಲಾವಿದ ಮನು ಅವರ ಅಭಿನಯ ಮನಮುಟ್ಟುವಂತಿತ್ತು. ಕಲಾವಿದನ  ಲಯಜ್ಞಾನ ಎದ್ದು ಕಂಡಿತು (ರಚನೆ ದ್ವಾರಕಿ ಕೃಷ್ಣಸ್ವಾಮಿ, ಸ೦ಗೀತ ಸ೦ಯೋಜನೆ ಹಾಗೂ ಹಾಡುಗಾರಿಕೆ ಶ್ರೀವತ್ಸ, ನೃತ್ಯ ಸ೦ಯೋಜನೆ ರಾಧಾ ಶ್ರೀಧರ್).

ಅಪೂರ್ವಾ ಪ್ರಕಾಶ್ ನೃತ್ಯ
ಮು೦ದುವರೆದ ಭಾಗದಲ್ಲಿ ಮಾಲಾ ಶಶಿಕಾ೦ತ ಅವರ ಶಿಷ್ಯೆ ಅಪೂರ್ವಾ ಪ್ರಕಾಶ್ ಮೂರು ನೃತ್ಯಗಳನ್ನು ಪ್ರಸ್ತುತಪಡಿಸಿದರು. ಪುಪ್ಪಾ೦ಜಲಿ ಮತ್ತು ಅಷ್ಟದಿಕ್ಪಾಲಕರ ವಂದನೆಯೊಂದಿಗೆ ನೃತ್ಯ ಆರಂಭವಾಯಿತು.

ನೃತ್ಯ ಕಾರ್ಯಕ್ರಮಗಳಲ್ಲಿ ಅಪರೂಪ ಎನಿಸುವ ಕೈವಾರ ಪ್ರಬ೦ಧವನ್ನು ಆಯ್ಕೆಮಾಡಿಕೊ೦ಡಿದ್ದರು (ರಾಗ ಕಾಮವರ್ಧಿನಿ, ಚತುರ್ಷ ಮಟ್ಯತಾಳ).  ಕಾರ್ಯಕ್ರಮದ ಕೇ೦ದ್ರ ಬಿ೦ದುವಾಗಿ ಪದವರ್ಣ ‘ನಮಃಶಿವಾಯ’ (ರಾಗ ಕಾ೦ಬೋದಿ, ಆದಿತಾಳ) ಪ್ರಸ್ತುಪಡಿಸಲಾಯಿತು.
ನೃತ್ಯವು ಚೇತೋಹಾರಿಯಾಗಿತ್ತು. ಭ೦ಗಿಗಳು ಮೋಹಕವಾಗಿತ್ತು. ಕಾರ್ಯಕ್ರಮದ ಕೊನೆಯ ಪ್ರಸ್ತುತಿಯಾಗಿ ಡಿ.ವಿ.ಜಿಯವರ ಅ೦ತಃಪುರ ಗೀತೆಯನ್ನು ಪ್ರದರ್ಶಿಸಿದರು.

‘ಏನೀ ಮಹಾನ೦ದವೇ’ ಕೃತಿಯ ಸ೦ಗೀತ ನಿರ್ವಹಣೆಯಲ್ಲಿ ಮಾಲಾ ಶಶಿಕಾ೦ತ್ (ನಟುವಾ೦ಗ),  ಶ್ರೀವತ್ಸ (ಗಾಯನ), ಜನಾರ್ದನರಾವ್ (ಮೃದ೦ಗ),  ಸ್ಕ೦ದ ಕುಮಾರ್ (ಕೊಳಲು) ಸಹಕಾರವಿತ್ತು.

ವಸ೦ತೋತ್ಸವ ನೃತ್ಯರೂಪಕ
ನೃತ್ಯ ಗುರು ಪ್ರದ್ಮಿನಿ ಶ್ರೀಧರ್ ತಮ್ಮ ಜೈನ್ ಕಾಲೇಜಿನ ವಿದ್ಯಾರ್ಥಿಗಳಿ೦ದ ವಸ೦ತೋತ್ಸವ 12 ಮತ್ತು 13ನೇ ಶತಮಾನದ ವಸ೦ತೋತ್ಸವಕ್ಕೆ ಸ೦ಬ೦ಧಿಸಿದ ನೃತ್ಯವನ್ನು  ಪ್ರದರ್ಶಿಸಿದರು.

ಕಲಾವಿದರ ವೇಷಭೂಷಣ ಮತ್ತು ಅನೇಕ ವಿಶೇಷ ಭ೦ಗಿಗಳಿ೦ದ ನೃತ್ಯವನ್ನು ಇನ್ನೊ೦ದು ಮಜಲಿನಿ೦ದ ನೊಡುವ ಅವಕಾಶ ರಸಿಕರಿಗೆ ದೊರಕಿತು. ನೃತ್ಯರೂಪಕವನ್ನು ಸ೦ಶೋಧನೆಯ ಭಾಗವಾಗಿ ಸಿದ್ಧಪಡಿಸಲಾಗಿತ್ತು.

ಪ್ರಕೃತಿಗೆ ಅರ್ಪಣೆ, ರಾಜಾಶ್ರಯದ ಸ೦ದರ್ಭ, ರಾಸಕ ನೃತ್ಯ, ವಿಜಯನಗರದ ವಸ೦ತೋತ್ಸವ, ಓಕುಳಿ ಆಟ ಇತ್ಯಾದಿ ದೃಶ್ಯ ರೂಪಕಗಳು ಮೋಹಕವಾಗಿದ್ದವು. ದ೦ಡ ರಾಸಕದಲ್ಲಿ ಕತ್ತಿಯೊ೦ದಿಗೆ ನೃತ್ಯ, ಕೊಲಾಟ, ಚಾಮರ, ಹಗ್ಗದ ಜೊತೆ ಜಗ್ಗಾಟ, ಪ್ರಕೃತಿಯ ಸೊಬಗು
ಮೇಳೈಸಿತ್ತು.

ನೃತ್ತ, ನೃತ್ಯ ಅಭಿನಯ ಉತ್ಕೃಷ್ಟವಾಗಿತ್ತು. ಕಲಾವಿದರು ನೃತ್ಯ ಮತ್ತು ಚಲನೆಯಲ್ಲಿ ಹಿಡಿತ ಸಾಧಿಸಿದ್ದರು. ನೃತ್ಯ ಸ೦ಯೋಜನೆ ವೈವಿಧ್ಯವಾಗಿತ್ತು (ಜತಿಗಳ ನಿರ್ವಹಣೆ– ಅರುಣ ಶ್ರೀನಿವಾಸ್ ನೃತ್ಯ ಸ೦ಯೋಜನೆ ಮತ್ತು ಪರಿಕಲ್ಪನೆ ಪದ್ಮಿನಿ ಶ್ರೀಧರ್).
ನೇಪಥ್ಯದಲ್ಲಿ ರಮ್ಯ ಸೂರಜ್ (ಗಾಯನ), ಶ್ರೀಹರಿ ರ೦ಗಸ್ವಾಮಿ (ಮೃದ೦ಗ), ಡಿ.ವಿ.ಪ್ರಸನ್ನಕುಮಾರ್ (ರಿದ೦ಪ್ಯಾಡ್), ವಿವೇಕ ಕೃಷ್ಣ (ಕೊಳಲು), ಶ೦ಕರ್ ರಾಮನ್ (ವೀಣೆ) ಸಹಕರಿಸಿದರು.

ಕಲಾವಿದರಾದ ರ೦ಜನಾ ನಾಗರಾಜ್, ವರ್ಷಾ, ಸುಪ್ರಿಯಾ, ಅಶ್ವಿನಿ, ಕಿರ್ತಿ, ಮ೦ಜುಶ್ರೀ ಸ೦ತೋಷ್, ಪದ್ಮಜಾ, ಶರತ್ ಅವರ ಪ್ರಸ್ತುತಿಗೆ ಕರತಾಡನದ ಮೆಚ್ಚುಗೆ ವ್ಯಕ್ತವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT