ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಿಗೇ ಆರೋಗ್ಯ ಪಾಠ

Last Updated 7 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ತೋರಿದ, ಆರೋಗ್ಯ ಸಂಬಂಧಿ ಚಟುವಟಿಕೆಗಳಲ್ಲಿ ವರ್ಷವಿಡಿ ತೊಡಗಿಕೊಂಡ ಅತ್ಯುತ್ತಮ ಶಾಲೆಗೆ ‘ಹೆಲ್ದಿ ಸ್ಕೂಲ್ ಅವಾರ್ಡ್’ ಘೋಷಿಸುವ ಮೂಲಕ ನಗರದ ಶಾಲೆಗಳಲ್ಲಿ ಆರೋಗ್ಯ ಪ್ರಜ್ಞೆ ಬೆಳೆಸಲು ಮುಂದಾಗಿದೆ ಪರಿಕ್ರಮ ಹ್ಯುಮ್ಯಾನಿಟಿ ಫೌಂಡೇಶನ್. ಈ ಬಗ್ಗೆ ಫೌಂಡೇಶನ್‌ನ ಸಿಇಓ ಶುಕ್ಲಾ ಬೋಸ್ ಮಾತನಾಡಿದ್ದಾರೆ.

*‘ಹೆಲ್ದಿ ಸ್ಕೂಲ್ ಅವಾರ್ಡ್’ ಏನು ಹೇಗೆ?
ಪಾಠ ಮಾಡುವುದಷ್ಟೇ ಅಲ್ಲ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವ ಜೊತೆಗೆ ಅವರಿಗೊಂದು ಸ್ವಸ್ಥ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಿಕೊಡುವುದೂ ಶಾಲೆಗಳ ವ್ಯಾಪ್ತಿಗೆ ಸೇರುತ್ತದೆ. ಆದರೆ ಇಂದಿನ ಬದಲಾದ ಸಂದರ್ಭಗಳಲ್ಲಿ ಮೆಟ್ರೊ ನಗರಗಳ ಎಷ್ಟೋ ಶಾಲೆಗಳಲ್ಲಿ ಈ ಉದ್ದೇಶವೇ ಮರೆಯಾಗಿ ಹೋಗಿದೆ. ಮಕ್ಕಳ ಯೋಗಕ್ಷೇಮ ನಿರ್ವಹಣೆಯನ್ನೂ ತಮ್ಮ ವಾರ್ಷಿಕ ವೇಳಾಪಟ್ಟಿಯಲ್ಲಿ ಸೇರಿಸಿ, ಸಾಧಿಸಿದ ಶಾಲೆಗಳನ್ನು ಸನ್ಮಾನಿಸುವ ಹಾಗೂ ಪುರಸ್ಕರಿಸುವ ಯೋಜನೆಯೇ ‘ಹೆಲ್ದಿ ಸ್ಕೂಲ್ ಅವಾರ್ಡ್’.

*ಈ ಯೋಜನೆಗೆ ಪ್ರೇರಣೆ ಏನು?
ಹಲವು ದೇಶಗಳಲ್ಲಿ ಈಗಾಗಲೇ ಇಂತಹ ಪದ್ಧತಿ ಜಾರಿಯಲ್ಲಿದೆ. ಮಾತ್ರವಲ್ಲ, ಅಲ್ಲಿನ ಶಾಲಾ ಮಕ್ಕಳ ಆರೋಗ್ಯ, ವರ್ತನೆ ಹಾಗೂ ಸ್ವಭಾವಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಜೊತೆಗೆ ಶಾಲೆಯ ಸಂಸ್ಕೃತಿ ಮತ್ತು ಸಂಘಟನೆಯಲ್ಲಿಯೂ ಇದು ನಿರ್ಣಾಯಕ ಪಾತ್ರ ವಹಿಸಿದೆ ಎಂಬ ಸಂಗತಿಯೇ ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪರಿಚಯಿಸುವುದಕ್ಕಿರುವ ಪ್ರೇರಣೆ. ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತ ಬಂದ ಶಾಲೆಗಳಿಗೆ ‘ಆರೋಗ್ಯಪೂರ್ಣ ಶಾಲೆ’ ಎನ್ನುವ ಪ್ರಶಸ್ತಿ ನೀಡುವುದು ಬೆಂಗಳೂರಿಗೆ ಹೊಸದಷ್ಟೇ. ಬೇರೆ ಕಡೆ ಇದು ವರ್ಷಗಳಿಂದ ರೂಢಿಯಲ್ಲಿದೆ. ಆದರೆ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನವನ್ನು ಬೆಂಗಳೂರಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಕಳೆದ 14 ವರ್ಷಗಳಿಂದ ಬಡ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಕೆಲಸ ಮಾಡುತ್ತಿರುವ ಶುಕ್ಲಾ ಬೋಸ್, ಕೊಳಗೇರಿ ಮತ್ತು ಬೀದಿ ಮಕ್ಕಳಿಗಾಗಿ ಮಾಡಿದ ನಿಸ್ವಾರ್ಥ ಸೇವೆಗಾಗಿ ‘ಮದರ್ ತೆರೇಸಾ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾತ್ರವಲ್ಲ, ಅವರ ಸಾಮಾಜಿಕ ಕಾಳಜಿಯನ್ನು ಗುರುತಿಸಿ ವರ್ಷದ ಉದ್ಯಮಿ ಪ್ರಶಸ್ತಿ, ಭಾರತ್ ಗೌರವ್ ಪ್ರಶಸ್ತಿ ಮತ್ತು ವರ್ಷದ ಅತ್ಯುತ್ತಮ ಮಹಿಳೆ ಪ್ರಶಸ್ತಿಗಳೂ ಹುಡುಕಿಕೊಂಡು ಬಂದಿದೆ.

*ಈ ಕಾರ್ಯಕ್ರಮದ ಆಲೋಚನೆ ಹೊಳೆದದ್ದು ಹೇಗೆ?
ಸುಮಾರು ಎರಡು ದಶಕಗಳಿಂದ ಬಡ ಮತ್ತು ನಿರ್ಗತಿಕ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಲಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಸಂಗತಿ ಯಾವಾಗಲೂ ಕೊರೆಯುತ್ತಿತ್ತು. ಮಕ್ಕಳಿಗೆ ಜ್ವರ ಬಂದರೆ ಮಕ್ಕಳನ್ನು ಮನೆಗೆ ಕಳುಹಿಸುವುದೊಂದೇ ಮಾರ್ಗವಲ್ಲ. ಅವರ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಾಪಾಡುವುದು ಶಾಲೆಗಳ ಹೊಣೆಯಾಗಬೇಕು ಎನ್ನುವ ಕಳಕಳಿಯಿಂದ ಮೂಡಿದ ಯೋಚನೆ ಇದು.

*ಈ ಪ್ರಶಸ್ತಿಯ ಮೂಲ ಉದ್ದೇಶವನ್ನು ವಿವರಿಸಿ.
ಪ್ರಶಸ್ತಿ ಒಂದು ನೆಪವಷ್ಟೇ. ಮಕ್ಕಳ ಮನೋ–ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಲು ಶಾಲೆಗಳನ್ನು ಪ್ರೇರೇಪಿಸುವುದು ಹಾಗೂ ಆ ಮೂಲಕ ಶಾಲಾ ಆಡಳಿತದಲ್ಲಿ ಸುಧಾರಣೆ ತರುವುದು ಈ ಪ್ರಶಸ್ತಿಯ ಉದ್ದೇಶ. ನಗರದ ಶಾಲೆಗಳ ವಿನೂತನ ಆರೋಗ್ಯ ಚಟುವಟಿಕೆಗಳನ್ನು ಗುರುತಿಸುವುದು, ಮಾನ್ಯಮಾಡುವುದು ಮತ್ತು ಪ್ರಸಾರ ಮಾಡುವುದು ಇದರ ಮೂಲ ಉದ್ದೇಶ.

*ಯಾವ ಯಾವ ವಿಭಾಗಗಳಲ್ಲಿ ಆರೋಗ್ಯ ಪ್ರಶಸ್ತಿಗಳನ್ನು ನೀಡುವ ಉದ್ದೇಶವಿದೆ?
* ಸಲಹೆ ಮತ್ತು ಮಾನಸಿಕ ಆರೋಗ್ಯದಲ್ಲಿ ಸಕ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಶಾಲೆಗಳು
* ಹೊಸತನದ ಆರೋಗ್ಯ ಶಿಕ್ಷಣ ಪಠ್ಯಕ್ರಮ ಹೊಂದಿದ ಶಾಲೆಗಳು
* ಆರೋಗ್ಯಕರ ಜೀವನಕ್ಕಾಗಿ ವಿಶೇಷ ದೈಹಿಕ ಚಟುವಟಿಕೆ, ಕಾರ್ಯಕ್ರಮಗಳನ್ನು ನೆರವೇರಿಸುತ್ತ ಬಂದ ಶಾಲೆಗಳು
* ಉತ್ತಮ ಪೋಷಕಾಂಶ ಅಭ್ಯಾಸಗಳನ್ನು ಪ್ರೋತ್ಸಾಹಿಸಿದ ಶಾಲೆಗಳು

*ಪ್ರಶಸ್ತಿಗೆ ಅರ್ಜಿ ಹಾಕುವುದು ಹೇಗೆ?
ಪ್ರಶಸ್ತಿಯ ಬಗ್ಗೆ ಸಂಪೂರ್ಣ ವಿವರವುಳ್ಳ ವಿಶೇಷ ಪೋರ್ಟಲ್ ಒಂದನ್ನು ರಚಿಸಲಾಗಿದೆ. ಆಸಕ್ತಿ ಇರುವ ಶಾಲೆಗಳು www.schoolhealthawards.comಗೆ ಭೇಟಿ ನೀಡಬಹುದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಅಥವಾ ಅರ್ಜಿ ನಮೂನೆಯನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ತುಂಬಿ ಅಂಚೆ ಮೂಲಕ ಕಳುಹಿಸಲೂಬಹುದು. ಪ್ರವೇಶ ಸಂಪೂರ್ಣ ಉಚಿತ.

*ಆಯ್ಕೆ ಪ್ರತಿಕ್ರಿಯೆ ಹೇಗಿದೆ?
ವೈದ್ಯರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಇತರೆ ಪ್ರಖ್ಯಾತ ಜನರನ್ನು ಒಳಗೊಂಡಂತೆ ನಾಮನಿರ್ದೇಶಿತ ತೀರ್ಪುಗಾರರ ತಂಡವಿದೆ. ಅನೇಕ ವಿಭಾಗಗಳಲ್ಲಿ ವಿಜೇತವಾಗುವ ಒಂದು ಶಾಲೆಗೆ ‘ಆರೋಗ್ಯಪೂರ್ಣ ಶಾಲೆ’ ಎಂದು ಪುರಸ್ಕರಿಸಲಾಗುವುದು. ಫೆ. 7ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT