ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಾರಣ ನಾಟಕದ ಉತ್ತಮ ಪ್ರಯೋಗ

ರಂಗಭೂಮಿ
Last Updated 6 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕನ್ನಡದ್ದಷ್ಟೇ ಅಲ್ಲ, ಭಾರತೀಯ ರಂಗಭೂಮಿ ಸಂದರ್ಭದಲ್ಲಿಯೂ ಪ್ರಸನ್ನ  ಬಹುಮುಖ್ಯ ರಂಗಕರ್ಮಿ. ಇದನ್ನು ಹೊರತುಪಡಿಸಿ ನೋಡಿದರೆ ಇಂದು ರಂಗಭೂಮಿಯೇತರ ಕಾರಣಗಳಿಂದಲೂ ಅವರು ನಮ್ಮ ನಡುವಿನ ಅಪರೂಪದ ಮತ್ತು ಅಷ್ಟೇ ವಿಶಿಷ್ಟ ವ್ಯಕ್ತಿಯಾಗಿ ನಿಲ್ಲುತ್ತಾರೆ.

ಕೈಮಗ್ಗದ ಕುರಿತು ಅವರು ತಪದಂತೆ ಕೈಗೊಂಡು ಬಂದಿರುವ ಹೋರಾಟ, ಇತ್ತೀಚೆಗಷ್ಟೇ ಬದನವಾಳು ಎಂಬಲ್ಲಿ ಯಾವ ಬೇಡಿಕೆಯೂ ಇಲ್ಲದೇ ಸುಸ್ಥಿರ ಬದುಕಿಗಾಗಿ ಅವರು ನಡೆಸಲು ಹೊರಟಿರುವ ಸತ್ಯಾಗ್ರಹ, ಇಂದಿನ ಲೋಲುಪ ಜಗತ್ತಿಗೆ ಅತಿರೇಕವಾಗಿ ಕಾಣುವ ಅವರ ಸರಳ ಬದುಕು, ಕಾರ್ಯಸಾಧುವಲ್ಲದಂತೆ ಕಾಣುವ ಅವರ ಯೋಚನೆ-ಯೋಜನೆಗಳು ಹೀಗೆ ಹಲವು ಕಾರಣಕ್ಕಾಗಿ ಆಧುನಿಕ ಬದುಕಿನ ಭಾಗವಾದ ನಾವ್ಯಾರೂ ಅನುಸರಿಸಲಾಗದ, ನೋಡಿ ‘ಲೈಕ್’ ಮಾಡಿ, ಕೊಂಚ ಮರುಗಿ ನಮ್ಮ ನಮ್ಮ ಆತ್ಮಕ್ಕೆ ಗಾಯವಾಗದಂತೆ ನಾಜೂಕಾಗಿ ಮೆಚ್ಚಿಕೊಳ್ಳಬಹುದಾದ ಒಂದು ಕಲ್ಪಿತ ಆದರ್ಶದ ಮೂರ್ತರೂಪವಾಗಿ ಪ್ರಸನ್ನ ಕಾಣಿಸುತ್ತಾರೆ.

ಆಧುನಿಕತೆಯ ಮದವೇರಿದ ಯಂತ್ರಪ್ರೇರಿತ ವಿನಾಶಕಾರಿ ಒಂಟಿಸಲಗದೆದುರು ಒಬ್ಬಂಟಿ ಹೋರಾಟಕ್ಕೆ ನಿಂತ ದುರಂತಮುಖಿ ನಾಯಕನಂತೆಯೂ ಕಾಣುತ್ತಾರೆ.

‘ಯಂತ್ರರಾಕ್ಷಸ ಮರ್ಧಿನಿ’ ನಾಟಕದ ಕುರಿತು ಹೇಳುವ ಮುನ್ನ ಆ ನಾಟಕವನ್ನು ರಂಗನಿರಂತರ ತಂಡಕ್ಕಾಗಿ ನಿರ್ದೇಶಿಸಿದ ಪ್ರಸನ್ನ ಅವರ ಕುರಿತು ಇಷ್ಟು ಹೇಳಲು ಕಾರಣವಿದೆ. ನಗರದ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ದ ಉದ್ಘಾಟನಾ ನಾಟಕವಾಗಿ ‘ಯಂತ್ರರಾಕ್ಷಸ ಮರ್ಧಿನಿ’ ಪ್ರದರ್ಶನವಾಯ್ತು.

ಲೇಖಕಿ ದು. ಸರಸ್ವತಿ ಮತ್ತು ಉದಯ ಕುಮಾರ ಜ್ಯೋತಿಗುಡ್ಡೆ ರಚಿಸಿರುವ ಈ ನಾಟಕ ಪ್ರಸನ್ನ ಅವರ ಸುಸ್ಥಿರ ಬದುಕಿನ ಸತ್ಯಾಗ್ರಹದ ಪ್ರಣಾಳಿಕೆಯಾಗಿಯೂ ಕಾಣುತ್ತದೆ. ‘ಯಂತ್ರ ರಾಕ್ಷಸ ಮರ್ಧಿನಿ’ ಸ್ಪಷ್ಟವಾಗಿ ಸಂದೇಶವನ್ನು ಹೇಳುವುದನ್ನೇ ಗುರಿಯಾಗಿಸಿಕೊಂಡಿರುವ, ಅದನ್ನು ತುಂಬ ನೇರವಾಗಿ ಹೇಳುವ ನಾಟಕ. ಹಾಗೆ ಹೇಳಲು ಭಾಷೆಯನ್ನೇ ಮುಖ್ಯವಾಗಿ ಬಳಸಿಕೊಂಡಿದೆ.

ಎಡ-ಬಲದ ವಿಡಂಬನೆ,  ಭೂಸುಧಾರಣೆ ಕಾಯ್ದೆಯ ಸುಗ್ರೀವಾಜ್ಞೆಯ  ವ್ಯಂಗ್ಯ, ಯಂತ್ರಗಳ ಆಕ್ರಮಣ, ಪರಿವರ್ತನೆಯ ಆಶಯ ಹೀಗೆ ಏನನ್ನೂ ಮುಚ್ಚಿಡದೆ ಕೊಂಚ ಅತಿಯ ನೆಲೆಯಲ್ಲಿ ವಾಚ್ಯವಾಗಿಯೇ ಹೇಳಿ ಮುಗಿಸುತ್ತದೆ. ‘ಮನುಷ್ಯ ಯಂತ್ರವನ್ನು ಆಳಬೇಕೇ ಹೊರತು ಯಂತ್ರಗಳು ಮನುಷ್ಯನನ್ನು ಆಳಬಾರದು’ ಎಂಬ ನೀತಿಯನ್ನೂ ನಾಟಕ ಆಡಿಯೇ ಮುಟ್ಟಿಸುತ್ತದೆ.

ಭಾರತದ ಯಾವ ಹಳ್ಳಿಯಲ್ಲಿಯಾದರೂ ನಡೆಯಬಹುದಾದ ಈ ಕಥನ ನಡೆಯುವುದು ತುಮಕೂರಿನ ತುರುವೆಕೆರೆಯ ಕೆಳ್ಳಟ್ಟಿ ಎಂಬ ಪುಟ್ಟಹಳ್ಳಿ ಮತ್ತು ಬೆಂಗಳೂರಿನ ನಡುವೆ. ಮಹಾನಗರದಲ್ಲಿ ಯಂತ್ರಗಳ ಮೂಲಕ ಮನುಷ್ಯನನ್ನು ಲೋಲುಪತೆಯಲ್ಲಿ ಮುಳುಗಿಸಿ ಅಡಿಯಾಳಾಗಿ ಮಾಡಿಕೊಂಡಿರುವ ಯಂತ್ರರಾಕ್ಷಸ, ಯಂತ್ರಗಳ ಹಂಗಿಲ್ಲದೇ ಬದುಕುತ್ತಿರುವ ಸಣ್ಣತಿಮ್ಮಿಯನ್ನು ತನ್ನ ದಾಸಳಾಗಿ ಮಾಡಿಕೊಳ್ಳಲು ಹೋಗಿ, ಆ ತಾಯಿಯ ಉಪದೇಶದ ಮಾತಿಗೆ ಮನಃಪರಿವರ್ತನೆಯಾಗಿ ಸೋಲುವ ವಿಷಯವೇ ಈ ನಾಟಕದ ಕಥಾವಸ್ತು.

ತಪ್ಪು ಒಪ್ಪು ಪಾತ್ರಗಳ ಮೂಲಕ ಆಗಿರುವುದು ಆಗಬೇಕಾಗಿರುವುದನ್ನು ಸಂಭಾಷಣೆಯಲ್ಲಿಯೇ ಹೇಳುತ್ತಾ ಹೋಗುವ ಈ ನಾಟಕವನ್ನು ಯಕ್ಷಗಾನ ಕಲೆಗೆ ಬಾಗಿಸಿಕೊಂಡು ಕಟ್ಟಿದ ರೀತಿಯಿಂದ ಗಮನ ಸೆಳೆಯುತ್ತದೆ. ಯಕ್ಷಗಾನದಲ್ಲಿರುವಂತೆ ವೇದಿಕೆಯ ಮೇಲೆ ಕುಳಿತಿರುವ ಹಿಮ್ಮೇಳವಿದೆ. ಪ್ರಸಂಗ ನಡೆಸುವ ಭಾಗವತನಿದ್ದಾನೆ. ಪದ್ಯ-ಕಥನದ ನಿರೂಪಣಾ ಕ್ರಮವಿದೆ.

ಯಂತ್ರ ರಾಕ್ಷಸನ ಮತ್ತವನ ದೂತನ ವೇಷಭೂಷಣವೂ ಬಹುತೇಕ ಯಕ್ಷಗಾನ ಪ್ರಕಾರವನ್ನೇ ಹೋಲುತ್ತವೆ. ನೃತ್ಯದಲ್ಲಿಯೂ ಯಕ್ಷಗಾನದ್ದೇ ಛಾಪು. ಹಾಗಿದ್ದೂ ಇದು ಯಕ್ಷಗಾನವಾಗದೆ ನಾಟಕವಾಗಿಯೇ ಉಳಿಯುತ್ತದೆ. ಈ ಸೂಕ್ಷ್ಮವನ್ನು ನಿರ್ದೇಶಕರು ನಾಟಕದುದ್ದಕ್ಕೂ ಬಳಸಿಕೊಂಡಿದ್ದಾರೆ. ತಾನು ಯಕ್ಷಗಾನ ಪ್ರಕಾರವನ್ನು ನಾಟಕದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆಯೇ ವಿನಾ ಯಕ್ಷಗಾನವನ್ನೇ ಮಾಡುತ್ತಿಲ್ಲ ಎಂಬ ಎಚ್ಚರ ಎದ್ದು ಕಾಣುತ್ತದೆ.

ನೃತ್ಯ, ಅಭಿನಯದ ವಿಷಯಕ್ಕೆ ಬಂದರೂ ಅನೇಕ ಸೂಕ್ಷ್ಮಗಳು ಗಮನ ಸೆಳೆಯುತ್ತವೆ. ಪಾತ್ರಗಳು ಸಂಭಾಷಣೆಯ ಮೂಲಕ ವಾಚ್ಯವಾಗಿಯೇ ಎಲ್ಲವನ್ನೂ ಹೇಳುತ್ತಾ ಹೋದರೂ ಆಂಗಿಕ ಅಭಿನಯ, ವೇಷ, ನೃತ್ಯ ಹೀಗೆ ಮಾತಿಗೆ ಹೊರತಾದ ಅಂಶಗಳು ಇದಕ್ಕೆ ಪರ್ಯಾಯವಾದ  ಅಭಿವ್ಯಕ್ತಿ ದಾರಿಯನ್ನು ಸೃಷ್ಟಿಸಿಕೊಳ್ಳುತ್ತಿರುತ್ತವೆ. ಯಕ್ಷಗಾನದಲ್ಲಿ ಖಳರಾಜನ ಪಾತ್ರವನ್ನು ಹೋಲುವ ಯಂತ್ರರಾಕ್ಷಸನ ಪಕ್ಕದಲ್ಲಿ ಅವನ ದೂತನಾಗಿ ವಿದೂಷಕನಿರುತ್ತಾನೆ. ಯಂತ್ರರಾಕ್ಷಸನ ವಿರೂಪದ ವೈಭವ, ಸರ್ವಾಧಿಕಾರದ ಹುಸಿತನವನ್ನು ಅವನ ಪಕ್ಕದ ದೂತನೇ ಸೂಚಿಸುತ್ತಿರುತ್ತಾನೆ.

ಅವನು ಯಂತ್ರರಾಕ್ಷಸನ ದೂತನೂ ಹೌದು, ಸಣ್ಣತಿಮ್ಮಿಯ ಪರಿಚಯಸ್ಥನೂ ಹೌದು. ಯಂತ್ರರಾಕ್ಷಸನ ದಾಸನಾಗಿರುವ, ಹಾಗಿದ್ದೂ ಅವನ ವಿನಾಶಕ ಗುಣವನ್ನು ಒಳಗಿಂದೊಳಗೇ ದ್ವೇಷಿಸುವ, ಅವನ ಸೋಲನ್ನೇ ಬಯಸುವ, ಆದರೆ ಅವನ ವಿರೋಧ ಕಟ್ಟಿಕೊಳ್ಳಲಾರದ ನಾಜೂಕಯ್ಯ. (ಯಂತ್ರರಾಕ್ಷಸ ಯಂತ್ರವನ್ನು ಬಳಸುವಂತೇ ಸಣ್ಣತಿಮ್ಮಿಯ ಮನವೊಲಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ದೂತ ಬೀಸುವ, ಹಾಲು ಕರೆಯುವ ಯಂತ್ರಗಳ ಪ್ರಯೋಜನದ ಬಗ್ಗೆ ನಟಿಸಿ ತೋರಿಸುತ್ತಲೇ ಅವುಗಳ ಕೀರಲು ಧ್ವನಿಯನ್ನೂ ಕೇಳಿಸಿ ಆ ಯಂತ್ರಗಳ ಕ್ರೂರಮುಖವನ್ನೂ ಕಾಣಿಸುತ್ತಿರುತ್ತಾನೆ.

ಯಂತ್ರ ರಾಕ್ಷಸ ತನ್ನಲ್ಲಿನ ಅಣುಶಕ್ತಿಯಿಂದ ಈ ಜಗತ್ತನ್ನು 30 ಸಲ ಸುಡಬಲ್ಲೆ ಎಂದು ಅಬ್ಬರಿಸುವಾಗ, ಒಂದು ಸಲ ಸುಟ್ಟ ಮೇಲೆ ಮತ್ತೆ 29 ಸಲ ಸುಡಲು ಏನು ಉಳಿದಿರುತ್ತದೆ? ಎಂದು ನಗುತ್ತಾನೆ.) ಯಕ್ಷಗಾನದ ಹಾಸ್ಯಪಾತ್ರಗಳಿಗೇ ವಿಶಿಷ್ಟವಾದ ನೃತ್ಯಶೈಲಿಯನ್ನು ಈ ಪಾತ್ರಕ್ಕೆ ಅಳವಡಿಸಿದ್ದು ತುಂಬ ಚೆನ್ನಾಗಿ ಹೊಂದಾಣಿಕೆಯಾಗಿದೆ.

ಇಲ್ಲಿನ ಪಾತ್ರಗಳಿಗೆ ರೂಪಿಸಲಾದ ವಸ್ತ್ರ ವಿನ್ಯಾಸವೂ ನಾಟಕದ ಆಶಯದ ಪರ್ಯಾಯ ಅಭಿವ್ಯಕ್ತಿ ದಾರಿಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ಪಡೆಯುತ್ತದೆ. ನಗರದಿಂದ ಬಂದ ಯಂತ್ರ ರಾಕ್ಷಸ ಮತ್ತು ಅವನ ದೂತ ಯಕ್ಷಗಾನದ ವೇಷ ಧರಿಸಿದ್ದರೆ, ಸಣ್ಣತಿಮ್ಮಿ ಮತ್ತು ಅವಳ ಮಗ ಮಾತ್ರ ಹಳ್ಳಿಬದುಕಿನ ಸಾಮಾನ್ಯ ಬಟ್ಟೆಗಳನ್ನೇ ಧರಿಸಿದ್ದಾರೆ. ಸಣ್ಣತಿಮ್ಮಿ ಮತ್ತು ಯಂತ್ರರಾಕ್ಷಸ ಹೀಗೆ ಎರಡು ವಿರುದ್ಧ ಲೋಕಗಳನ್ನು ಅವು ಸಮರ್ಥವಾಗಿ ಬಿಂಬಿಸುತ್ತವೆ. ಕೊನೆಯ ಭಾಗದಲ್ಲಿ ಯಂತ್ರರಾಕ್ಷಸ ಸಣ್ಣತಿಮ್ಮಿಯ ಮಾತು ಕೇಳಿ ಮನಃಪರಿವರ್ತನೆಯಾದ ನಂತರ ಒಂದೊಂದಾಗಿ ವೇಷವನ್ನು ಬಿಚ್ಚಿಡುವ ಸೂಚನೆಯೂ ಇದಕ್ಕೆ ಪೂರಕವಾಗಿಯೇ ಇದೆ.

ಹೀಗೆ ತೀರಾ ವಾಚ್ಯಗುಣದ ನಾಟಕವೊಂದು ಮಾತಿನಾಚೆಗೂ ಮತ್ತೊಂದು ಪರ್ಯಾಯ ನೆಲೆಯಲ್ಲಿ ಪ್ರೇಕ್ಷಕನನ್ನು ಮುಟ್ಟುವ ದಾರಿ ಹುಡುಕಿಕೊಳ್ಳುವ ಪರಿ ನಿಜಕ್ಕೂ ಕುತೂಹಲಕರವಾದದ್ದು. ಇದೇ ಕಾರಣಕ್ಕಾಗಿ ‘ಯಂತ್ರರಾಕ್ಷಸ ಮರ್ಧಿನಿ’ ಒಂದು ರಂಗಪ್ರಯೋಗವಾಗಿ ಗಮನಸೆಳೆಯುತ್ತದೆ. 

ಯಕ್ಷಗಾನದಲ್ಲಿಯಂತೇ ಇಲ್ಲಿಯೂ ಕಥನದ ನಿರೂಪಣೆಯಲ್ಲಿ ಸಂಭಾಷಣೆಯಷ್ಟೇ ಸಂಗೀತವೂ ಮಹತ್ವ ಪಡೆದುಕೊಂಡಿದೆ. ನಾಟಕ ರಚಿಸಿದ ಉದಯಕುಮಾರ್ ಜ್ಯೋತಿಗುಡ್ಡೆ ಅವರೇ ಭಾಗವತಿಕೆ ಮಾಡಿದ್ದಾರೆ. ಸುರೇಂದ್ರ ಎಸ್.ಜೆ ಅವರ ಚೆಂಡೆ, ರಾಘವೇಂದ್ರ ಅವರ ಮದ್ದಲೆ ಪ್ರೇಕ್ಷಕನನ್ನೂ ತಾಳಕ್ಕೆ ತಕ್ಕಂತೆ ಬೆರಳು ಕುಣಿಸುವಂತೆ ಮಾಡುತ್ತದೆ. ಯಂತ್ರ ರಾಕ್ಷಸನಾಗಿ ನಟಿಸಿರುವ ರಾಧಾಕೃಷ್ಣ ಉರಾಳ ಮತ್ತು ದೂತನಾಗಿ ನಟಿಸಿರುವ ಶ್ರೀನಾಥ ಗುಡ್ಡಿಬೆಟ್ಟು ಅವರೇ ಇದಕ್ಕೆ ನೃತ್ಯ ಸಂಯೋಜನೆಯ ಜತೆಗೆ ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ. ಸಣ್ಣತಿಮ್ಮಿಯ ಪಾತ್ರದಲ್ಲಿ ದು. ಸರಸ್ವತಿ ಅಭಿನಯಿಸಿದ್ದಾರೆ.

ಒಟ್ಟಾರೆ ಯಂತ್ರರಾಕ್ಷಸ ಮರ್ಧಿನಿ ಸಾಧಾರಣ ನಾಟಕವೊಂದರ ಉತ್ತಮ ಪ್ರಯೋಗ. ಪ್ರಸನ್ನ ಅವರ ಹೋರಾಟದ ಹಾದಿಯ ಒಂದು ಗುರುತಾಗಿಯೂ ಈ ನಾಟಕವನ್ನು ನೋಡಬಹುದು. ‘ಸುಸ್ಥಿರ ಬದುಕಿನತ್ತ ರಂಗಭೂಮಿ’ ಎಂಬ ಅಡಿಬರಹ ಇರುವ ಈ ರಂಗೋತ್ಸವದ ಆಶಯಕ್ಕೆ ಇದು ಉತ್ತಮ ಆರಂಭವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT