ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಾನಾ ಹಾಡಲೇಬೇಕು

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆಕೆ ಹಾಡಿದ್ದಾಳೆ, ಹಾಡಲಿ ಬಿಡಿ, ಹಾಡಲು ಬಿಡಿ, ಹಾಡುವ ಪ್ರತಿಭೆ ಅವಳಿಗೆ ದೈವದತ್ತವಾಗಿ ಬಂದುದು. ಅದನ್ನು ನಾವು ಗೌರವಿಸೋಣ. ಸಂಗೀತ ಅಥವಾ ಯಾವುದೇ ಬಗೆಯ ಕಲೆಗೆ ಧರ್ಮದ ನಿರ್ಬಂಧ ಏಕೆ?

ಸುಹಾನಾ ಹಾಡುವಾಗ ನನಗೆ ಎದೆತುಂಬಿ ಬಂತು. ಎಷ್ಟು ಶುದ್ಧವಾದ ಉಚ್ಛಾರ, ಎಷ್ಟು ಶುದ್ಧವಾದ ಕನ್ನಡ! ಕನ್ನಡದ ಸೊಗಡನ್ನು ಆಕೆ ಇನ್ನಷ್ಟು ಶ್ರೀಮಂತಗೊಳಿಸಿದ್ದಾಳೆ. ಹಾಡುಗಾರನಿಗೆ ಯಾವ ಹಾಡಾದರೇನು? ಅವಳು ಸಂಗೀತವಾಗಿ ಅದನ್ನು ಪರಿಭಾವಿಸುತ್ತಾಳೆಯೇ ವಿನಾ ಧರ್ಮದ ಆಯಾಮದಿಂದಲ್ಲ.

ಹೆಣ್ಣುಮಗಳೊಬ್ಬಳು ವಾಹಿನಿಯೊಂದರಲ್ಲಿ ಧೈರ್ಯವಾಗಿ ನಿಂತು ಹೀಗೆ ಹಾಡಿದ್ದನ್ನು ಈವರೆಗೆ ನಾನಂತೂ ನೋಡಿರಲಿಲ್ಲ. ನಮ್ಮ ಸಮುದಾಯದಲ್ಲಿ ಪ್ರತಿಭೆಗಳಿಲ್ಲ ಅಂತಲ್ಲ. ಸಮಾಜದ ಟೀಕೆ, ಕಟ್ಟುಪಾಡುಗಳಿಗೆ ಹೆದರಿ ಅವು ಬೆಳಕಿಗೆ ಬಾರದೆ ಕಮರಿ ಹೋಗಿವೆ, ಹೋಗುತ್ತಲೇ ಇವೆ.

ಆದರೆ ಸುಹಾನಾ ತನ್ನ ಪ್ರತಿಭೆಯನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಾವು ನಮ್ಮ ಸಮುದಾಯದ ಹೆಣ್ಣುಮಗಳ ಈ ಅಪರೂಪದ ಪ್ರತಿಭೆಗೆ ಪ್ರೋತ್ಸಾಹ ಕೊಡಬೇಕಾಗಿದೆ.

ಇಷ್ಟಕ್ಕೂ, ಸುಹಾನಾ ಹಾಡಿನ ಬಗ್ಗೆ ಅಪಸ್ವರ ಎತ್ತಿರುವ ಮಂದಿ ಕುರಾನ್‌ ಮತ್ತು ಷರಿಯ ಅಂದರೇನು ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು.  ಆ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳದೇ ಇಸ್ಲಾಂ ಹೆಸರಿನಲ್ಲಿ ಹೀಗೆ ತಕರಾರು ಎತ್ತುವುದು ಧರ್ಮಕ್ಕೆ ಮಾಡುವ ದ್ರೋಹವಾಗುತ್ತದೆ. ಇಂಥ ಗೊಂದಲಗಳು ಆರಂಭದಲ್ಲಿ ನನಗೂ ಇದ್ದವು. ಕುರಾನ್‌ ಮತ್ತು ಷರಿಯ ಓದಿ ಅರ್ಥ ಮಾಡಿಕೊಂಡ ಬಳಿಕ ಅವು ಪರಿಹಾರವಾದವು.

ಸಂಗೀತ ಮತ್ತು ನೃತ್ಯವನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ.  ಆದರೆ ಮೇರು ಕಲಾವಿದ ಬಿಸ್ಮಿಲ್ಲಾ ಖಾನ್‌ ಕಾಶಿ ವಿಶ್ವನಾಥ ದೇಗುಲದಲ್ಲಿ ಶಹನಾಯಿ ನುಡಿಸುತ್ತಿದ್ದರು. ಮೊಹಮ್ಮದ್‌ ರಫಿ ಅವರ ಹಾಡುಗಳನ್ನು ಇವತ್ತಿಗೂ ನಾವು ಕೇಳಿ ಆನಂದಿಸುತ್ತೇವೆ. ಫರ್ವೀನ್ ಸುಲ್ತಾನಾ ಅವರ ಗಾಯನ ಕಾರ್ಯಕ್ರಮಕ್ಕೆ ಇಂದಿಗೂ ಲಕ್ಷಾಂತರ ಮಂದಿ ಸೇರುತ್ತಾರೆ. ಆಸ್ಕರ್‌ ಪ್ರಶಸ್ತಿ ಗೆದ್ದ  ಎ.ಆರ್.ರೆಹಮಾನ್‌ ಅವರನ್ನು ಕೊಂಡಾಡುತ್ತೇವೆ.

ಇವರೆಲ್ಲಾ ಧರ್ಮಕ್ಕೆ ನಿಷ್ಠರಾಗಿದ್ದು, ನಿಯಮಿತವಾಗಿ ನಮಾಜ್‌ ಮಾಡುತ್ತಾ, ವ್ರತಾಚರಣೆಗಳನ್ನು ಪಾಲಿಸುತ್ತಿಲ್ಲ ಎಂದು ಅರ್ಥವೇ? ಅವರನ್ನು ಒಪ್ಪಿಕೊಳ್ಳುವ ನಾವು ಸುಹಾನಾಳ ಹಾಡುಗಾರಿಕೆಯನ್ನು ಧರ್ಮನಿಂದನೆಯಾಗಿ ಹೇಗೆ ಪರಿಗಣಿಸಲು ಸಾಧ್ಯ? ಧರ್ಮದ ಕಾರಣಕ್ಕೆ ಗ್ರಾಮೀಣ ಪ್ರತಿಭೆಯನ್ನು ವಿರೋಧಿಸುವುದು ಎಷ್ಟು ಸರಿ?

ಫೇಸ್‌ಬುಕ್‌ನಲ್ಲಿ ಕೂಡಾ ಇದಕ್ಕೆ ಸಂಬಂಧಿಸಿದ ವಾದ ನಡೀತಿದೆ. ಕೆಲವರು, ಆಕೆ ಹಾಡಿದ್ದು ತಪ್ಪಲ್ಲ ಬುರ್ಖಾ ಹಾಕಿಕೊಂಡು ಹಾಡಿದ್ದು ತಪ್ಪು ಎಂದು ಹೇಳಿದ್ದಾರಂತೆ.

ಬುರ್ಖಾ ಯಾವುದು, ತಲೆಗೆ ಸ್ಕಾರ್ಫ್‌ನಂತೆ ಕಟ್ಟಿದ ಉಡುಪಿಗೆ ಏನಂತಾರೆ ಎಂದೇ ಗೊತ್ತಿಲ್ಲದಿದ್ದರೆ ಷರೀಯ ಬಗ್ಗೆ ಮಾತನಾಡಲು ಹೋಗಲೇಬಾರದು. ತಲೆಯಿಂದ ಕಾಲಿನವರೆಗೆ ಧರಿಸುವ ಕಪ್ಪು ಹಾಗೂ ಇತರ ಬಣ್ಣದ ಉಡುಪು ಬುರ್ಖಾ. ತಲೆಯಿಂದ ಭುಜದವರೆಗೆ ಸ್ಕಾರ್ಫ್‌/ ಶಾಲ್‌ನಿಂದ ಮುಚ್ಚುವುದನ್ನು ಹಿಜಾಬ್‌ ಅನ್ನುತ್ತೇವೆ. ಅದು ಬುರ್ಖಾ ಆಗುವುದಿಲ್ಲ.

ನನ್ನ ಪ್ರಕಾರ ಸುಹಾನಾ ಹಾಡಲೇಬೇಕು. ಅಗತ್ಯಬಿದ್ದರೆ ಅವಳಿಗೆ ರಕ್ಷಣೆ ಒದಗಿಸಬೇಕು. ವಾಹಿನಿ ಮತ್ತು ತೀರ್ಪುಗಾರರು ಮಾತ್ರವಲ್ಲ ಎಲ್ಲಾ ನಾಗರಿಕರು ಸುಹಾನಾ ಪರ ನಿಲ್ಲಬೇಕು.
(ನಿ: ರೋಹಿಣಿ ಮುಂಡಾಜೆ)

*
ಬಿಸ್ಮಿಲ್ಲಾ ಖಾನ್‌, ಮೊಹಮ್ಮದ್‌ ರಫಿ, ಫರ್ವೀನ್‌ ಸುಲ್ತಾನಾ, ಎ.ಆರ್.ರೆಹಮಾನ್‌ ಧರ್ಮಕ್ಕೆ ನಿಷ್ಠರಾಗಿಲ್ಲವೇ? ಅವರನ್ನು ಒಪ್ಪಿಕೊಳ್ಳುವ ನಾವು ಸುಹಾನಾಳ ಹಾಡುಗಾರಿಕೆಯನ್ನು ಧರ್ಮನಿಂದನೆಯಾಗಿ ಪರಿಗಣಿಸಲು ಹೇಗೆ ಸಾಧ್ಯ?
–ಕೆ.ಎಸ್‌. ನಿಸಾರ್‌ ಅಹಮದ್ ಕವಿ

*
ಸುಹಾನಾ ದನಿಯ ಮಾಧುರ್ಯ ಕಿವಿತುಂಬಿಕೊಳ್ಳಲು  ಕೋಡ್‌ ಸ್ಕ್ಯಾನ್‌ ಮಾಡಿ: http://bit.ly/2n9heMa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT