ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳತರ ನೆರಳು ಹೊಸತರ ಬೆರಳು!

ಕಲಾಪ
Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ಎತ್ತಿನ ಬಂಡಿಗಳು, ಕುದುರೆ ಗಾಡಿಗಳು ಟ್ರಾಫಿಕ್‌ ಮುಕ್ತ ಲಾಲ್‌ಬಾಗ್‌ ರಸ್ತೆಯಲ್ಲಿ ಲೀಲಾಜಾಲವಾಗಿ ಓಡುತ್ತಿವೆ. ವಿಶಾಲವಾದ ಹೊರಾಂಗಣ ಹೊಂದಿರುವ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ  ಕಪ್ಪು ಬಿಳುಪಿನ ಚಿತ್ರ ಕಥೆಗಳನ್ನು ಅಡಗಿಸಿಟ್ಟುಕೊಂಡಂತೆ ಇದೆ. ಸೆಂಚುರಿ ರಸ್ತೆ, ವಿಧಾನ ಸೌಧ ಹಾಗೂ ಹೈ ಕೋರ್ಟ್‌ನ ವಿಹಂಗಮ ನೋಟ ಹಲವು ನೆನಪುಗಳನ್ನು ದಾಟಿಸಿರಲಿಕ್ಕೂ ಸಾಕು. ಕ್ರಿ.ಶ. 1800ರಲ್ಲಿ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಎಷ್ಟು ಸುಂದರವಾಗಿತ್ತು ಗೊತ್ತೆ?

ನೋಡುಗರನ್ನು ಒಂದು ಶತಮಾನದಷ್ಟು ಹಿಂದಿನ ದಿನಮಾನಕ್ಕೆ ಈ ಚಿತ್ರಗಳು ಕೊಂಡೊಯ್ಯುತ್ತವೆ. ನಗರದ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿಯಿರುವ ಛಾಯಾ ಗ್ಯಾಲರಿಯಲ್ಲಿ ಇಂಥ ಅನನ್ಯ ಫೋಟೊಗಳನ್ನು ಕಣ್ತುಂಬಿಕೊಳ್ಳಬಹುದು.

ಕ್ರಿ.ಶ. 1900 ಹಾಗೂ 1800ರ  ಬೆಂಗಳೂರಿನ ಛಾಯಾ ಚಿತ್ರಗಳು, ರೇಖಾ ಚಿತ್ರಗಳು ಹಾಗೂ ರೇಖಾ ನಕ್ಷೆಗಳ ಸಂಗ್ರಹದ ಚಿತ್ರಪಟಗಳ ಪ್ರದರ್ಶನವನ್ನು ರಂಗೋಲಿ  ಮೆಟ್ರೋ ‘ವಿಶುವಲ್ ಟೇಲ್ಸ್ ಬೆಂಗಳೂರು – 1900’  ಎಂಬ ಹೆಸರಿನಲ್ಲಿ  ಏರ್ಪಡಿಸಿದೆ.

ರಂಗೋಲಿ ಮೆಟ್ರೋದ ಛಾಯಾ ಗ್ಯಾಲರಿಯಲ್ಲಿ ಸೆ.28 ರವರೆಗೆ ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ಪ್ರದರ್ಶನ ನಡೆಯಲಿದೆ. ‘ಬೆಂಗಳೂರಿಗರ ಒತ್ತಾಯದ ಮೇರೆಗೆ ಶತಮಾನಗಳಷ್ಟು ಹಳೆಯ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದೇವೆ. ನಗರದ ವೇಲ್ಸ್‌ ಸ್ಟುಡಿಯೋ ಹವ್ಯಾಸಿ ಛಾಯಾ ಚಿತ್ರ ಸಂಗ್ರಹಕರು ಹಾಗೂ ಫೇಸ್‌ ಬುಕ್‌ನ ಬೈಗಾನ್‌ ಗುಂಪಿನವರ ಹಳೆಯ ಚಿತ್ರಸಂಗ್ರಹಕರಿಂದ ಈ ಛಾಯಾ ಚಿತ್ರಗಳು, ರೇಖಾ ಚಿತ್ರಗಳನ್ನು ಸಂಗ್ರಹಿಸಿ ರಂಗೋಲಿ ಮೆಟ್ರೊ ವತಿಯಿಂದಲೇ ಪ್ರದರ್ಶಿಸಲಾಗುತ್ತಿದೆ’ ಎನ್ನುತ್ತಾರೆ ಗ್ಯಾಲರಿ ನಿರ್ವಾಹಕರು.

‘ಪರಿಸರ ಬದಲಾವಣೆಗಾಗಿ 60 ಮಾರ್ಗೋಪಾಯಗಳು’ ಎನ್ನುವ ಶೀರ್ಷಿಕೆಯಡಿ ಗುಡ್ ಪ್ಲಾನೆಟ್ ಸಂಸ್ಥೆಯ  ಸಂಸ್ಥಾಪಕ ಹಾಗೂ ಛಾಯಾಚಿತ್ರಕಾರ ಯಾನ್ ಆರ್ತೂಸ್ – ಬೆಟ್ರ್ಯಾಂಡ್ ಅವರ ಕ್ಯಾಮೆರಾದಲ್ಲಿ ಸೆರೆಯಾದ ಪರಿಸರ  ಸ್ನೇಹಿ ಅಭಿವೃದ್ಧಿ ಸಂಬಂಧಿಸಿದ 21 ಛಾಯಾಚಿತ್ರಗಳ ಪ್ರದರ್ಶನ ಕೂಡ ನಡೆಯುತ್ತಿದೆ.

ಪ್ರಕೃತಿ ಮತ್ತು ಮಾನವನ ಆರ್ಥಿಕತೆ, ವ್ಯವಸಾಯ ಶಕ್ತಿಯ ಸುಧಾರಣೆ ಸ್ವಾವಲಂಬನೆಗಾಗಿ  ಸುಸ್ಥಿರ ಪರಿಸರಾತ್ಮಕ ಅಭಿವೃದ್ಧಿಯ ಬಗೆಗಿನ ಸುಂದರ ಚಿತ್ರಗಳ ಪ್ರದರ್ಶನ ಸೆ.28 ರವರೆಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ರವರೆಗೆ ರಂಗೋಲಿ ಮೆಟ್ರೋದ ವಿಸ್ಮಯ ಗ್ಯಾಲರಿಯಲ್ಲಿ ಪ್ರದರ್ಶನ ನಡೆಯುತ್ತಿದೆ.

ಪ್ರವಾಹದಿಂದ ಗುಡಿಸಲಿಗೆ ನೀರು ಹರಿದು, ಮನೆ ಮಾರು ಕಳೆದುಕೊಂಡು ಬಿದಿರು ಬೊಂಬನ್ನೇ ಸೇತುವೆಯಂತೆ ಮಾಡಿಕೊಂಡು  ಕಾದು ಕುಳಿತು, ತಮ್ಮ ರಕ್ಷಣೆಗಾಗಿ ಧಾವಿಸುವರ ಬರುವಿಕೆಗಾಗಿ ಕಾಯುತ್ತಿರುವ ಎರಡು ಹಿರಿಕಿರಿ ಜೀವಗಳ  ಆಕಾಶದೆಡೆಗಿನ ಶೂನ್ಯ ನೋಟ, ವಿಶ್ವದ ಅತ್ಯಂತ ಹಿಂದುಳಿದ ಕೀನ್ಯಾದಾದ್ಯಂತ ರಾಷ್ಟ್ರದಲ್ಲಿ ಪರ್ಯಾಯ ಇಂಧನ ಶಕ್ತಿಗಾಗಿ ಸೌರವಿದ್ಯುತ್ ಫಲಕಗಳ ಘಟಕದ ಚಿತ್ರ,  ಅತ್ಯಂತ ಯೋಜನಾಬದ್ಧವಾಗಿ ನಿರ್ಮಿಸಿದ ಚೀನಾದ ಶಾಂಘೈ, ಬೀಜಿಂಗ್ ನಗರಗಳ  ಚಿತ್ರ, ಇಥಿಯೋಪಿಯಾದ ಸಮುದ್ರದಲ್ಲೇ  ವಿದ್ಯುತ್‌ ಉತ್ಪಾದನೆಗಾಗಿ ನಿರ್ಮಿಸಿರುವ  ಗಾಳಿ ಯಂತ್ರಗಳ ಚಿತ್ರಗಳು, ಟ್ರಾಫಿಕ್ ರಹಿತ ನಗರಗಳ ವಿಶಾಲ  ನೋಟಗಳು ಹಾಗೂ ಮಾಲಿನ್ಯ ರಹಿತ ಚಿತ್ತಾಕರ್ಷಕ ದಟ್ಟಾರಣ್ಯಗಳ ಸುಂದರ ಛಾಯಾಚಿತ್ರಗಳು ಇಲ್ಲಿವೆ. ಆಧುನಿಕತೆಯ ಗುಂಗಿನಲ್ಲೂ ಪರಿಸರಸ್ನೇಹಿ ಅಭಿವೃದ್ಧಿಯ ನೆಲೆಗಳಲ್ಲಿ ಯೋಚಿಸಲು ಈ ಫೋಟೊಗಳು ಪ್ರೇರೇಪಿಸುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT