ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸದ ಗರಿ ಮೂಡಿಸಿದ ಹಳೆಯ ನಾಣ್ಯ

ಹವ್ಯಾಸದ ಹಾದಿ
Last Updated 9 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮನಸ್ಸಿಗೆ ಖುಷಿ ನೀಡುವ ಯಾವುದೇ ಕೆಲಸವನ್ನು ಹವ್ಯಾಸ ಎನ್ನಬಹುದು. ಮನೆಯಲ್ಲಿ ಎಂದೋ ಸಿಕ್ಕ ಹಳೇ ನಾಣ್ಯಗಳು ಪುರಾತನ ಹಾಗೂ ವಿದೇಶಿ ನಾಣ್ಯಗಳ ಸಂಗ್ರಹಕ್ಕೆ ಸ್ಫೂರ್ತಿಯಾಯಿತು.

ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರಿಟನ್‌, ಸಿಂಗಪುರ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಕಜಕಿಸ್ತಾನ, ಸೌದಿ ಅರೇಬಿಯಾ, ಇರಾನ್‌, ಒಮಾನ್‌, ಕತಾರ್‌,  ವೆಸ್ಟ್‌ಇಂಡೀಸ್‌, ಟ್ರಿನಿಡಾಡ್‌ ಮತ್ತು ಟೊಬಾಗೋ, ಕೀನ್ಯಾ, ಇಟಲಿ, ಚೀನಾ, ಬ್ರೆಜಿಲ್‌, ರಷ್ಯಾ, ರೊಮೆನಿಯಾ, ಆಸ್ಟ್ರೇಲಿಯಾ ಮುಂತಾದ ವಿದೇಶಗಳ ನಾಣ್ಯ, ಕರೆನ್ಸಿ ನೋಟುಗಳನ್ನು ಸಂಗ್ರಹಿಸಿದ್ದಾರೆ. 

ನಗರದ ಗಿರಿನಗರದ ನಿವಾಸಿಯಾಗಿರುವ ಎನ್‌.ಗಣೇಶ ಶರ್ಮ ಅವರು ವೃತ್ತಿಯಲ್ಲಿ ಪುರೋಹಿತರು. ವಿಜಯನಗರ ಸಾಮ್ರಾಜ್ಯದ ಕಾಲದಿಂದ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿ ಕಾಲದವರೆಗೆ ದೇಶದಲ್ಲಿ ಚಲಾವಣೆಯದಲ್ಲಿದ್ದ ನಾಣ್ಯಗಳು, ಕರೆನ್ಸಿ ನೋಟುಗಳು ಸೇರಿದಂತೆ 50ಕ್ಕೂ ಹೆಚ್ಚು ರಾಷ್ಟ್ರಗಳ ನಾಣ್ಯಗಳು ಇವರ ಸಂಗ್ರಹದಲ್ಲಿವೆ. ಅಂದರೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ದೇಶಿ –ವಿದೇಶಿ ನಾಣ್ಯಗಳ ಸಂಗ್ರಹವನ್ನು ಇವರು ‘ಕಾಯಿನ್‌ ಆಲ್ಬಂ’ ಮಾಡಿ ಜೋಪಾನ ಮಾಡಿದ್ದಾರೆ. 

‘ಪೌರೋಹಿತ್ಯ ನಡೆಸುವ ಕುಟುಂಬವಾದ್ದರಿಂದ ನಮ್ಮ ಮನೆಯಲ್ಲಿ ಹಳೇ ನಾಣ್ಯಗಳು ಇದ್ದವು. ಏನೋ ಹುಡುಕಾಟ ನಡೆಸುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದವು. ಆಗ ನಾನೇಕೆ ಇಂತಹ ನಾಣ್ಯಗಳನ್ನು ಸಂಗ್ರಹಿಸಿಡಬಾರದು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡಿತು. ನಂತರ  ಸ್ನೇಹಿತರು, ಪರಿಚಯಸ್ಥರಿಂದ ನಾಣ್ಯಗಳನ್ನು ಸಂಗ್ರಹಿಸಿ, ಅದರ ಮೌಲ್ಯಕ್ಕೆ ತಕ್ಕ ಹಣವನ್ನು ನೀಡಲು ಪ್ರಾರಂಭಿಸಿದೆ. ಒಮ್ಮೆ ದುಬೈನಿಂದ ಬಂದವರು ಅಲ್ಲಿನ ನಾಣ್ಯಗಳನ್ನು ತಂದುಕೊಟ್ಟರು. ಹೀಗೆ ವಿದೇಶಿ ನಾಣ್ಯಗಳ ಸಂಗ್ರಹಕ್ಕೂ ಕೈಹಾಕಿದೆ’ ಎನ್ನುತ್ತಾರೆ ಗಣೇಶ ಶರ್ಮ. 

ನೆರೆಮನೆಯ ರಾಘವೇಂದ್ರ ಅಡಿಗರು ವಿದೇಶಿ ನಾಣ್ಯಗಳ ಬಗೆಗಿನ ವಿವರ, ಅಲ್ಲಿನ ಕರೆನ್ಸಿಗಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕಿ ಒದಗಿಸಿ, ಸಹಾಯ ಮಾಡುತ್ತಿದ್ದಾರೆ.  ಭಾರತದ ಹಳೆಯ ನಾಣ್ಯ ಹಾಗೂ ವಿದೇಶಿ ನಾಣ್ಯ, ಕರೆನ್ಸಿ ನೋಟುಗಳನ್ನು ಇನ್ನು ಹೆಚ್ಚು ಸಂಗ್ರಹಿಸಬೇಕು ಎಂಬ ಗುರಿ ಗಣೇಶ ಶರ್ಮ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT