ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡ್ಕು: ಇನ್ನೊಂದು ಹುಡುಕುತಾಣ

Last Updated 18 ಜೂನ್ 2012, 19:30 IST
ಅಕ್ಷರ ಗಾತ್ರ

ನೀವು ಈಗ ತಾನೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದೀರಿ. ಮಗಳನ್ನು ಇಲ್ಲಿನ ಅತ್ಯುತ್ತಮ ಶಾಲೆಗೆ ಸೇರಿಸುವ ಬಯಕೆ ನಿಮ್ಮದು. ಆದರೆ ವಿವರಗಳು, ಸೂಕ್ತ ಮಾಹಿತಿ ನಿಮ್ಮ ಬಳಿ ಇಲ್ಲ. ನಿಮ್ಮ ಮನೆಯ ಆಜುಬಾಜಿನಲ್ಲಿ ಶಾಲೆ ಇದ್ದರೆ ಚೆನ್ನ ಎಂಬ ಭಾವನೆ ನಿಮ್ಮ ಪತ್ನಿಯದ್ದು. ನಿಮ್ಮ ಹತ್ತಿರ ಕಾರು ಇದೆ. ಅದನ್ನು ಮಾರಿ ಹೊಸ ಕಾರು ಕೊಳ್ಳುವ ಯೋಚನೆಯಲ್ಲಿದ್ದೀರಿ ಅಥವಾ ಒಂದು ಹಳೆಯ ಕಾರು ಕೊಳ್ಳಲು ಮನಸ್ಸು ಮಾಡಿದ್ದೀರಿ. ಆದರೆ ಎಲ್ಲಿ ಲಭ್ಯವಿದೆ ಎಂಬುದರ ಮಾಹಿತಿ ಸಿಕ್ಕುತ್ತಿಲ್ಲ. ಮುಂದಿನ ವಾರ ಮುಂಬೈಗೆ ಹೋಗುತ್ತಿದ್ದೀರಿ. ಮಹಾ ಸಾಗರದಂತಿರುವ ಆ ನಗರದಲ್ಲಿ ಉಳಿದುಕೊಳ್ಳುವುದಕ್ಕೆ ದುಬಾರಿಯೂ ಅಲ್ಲದ, ಉತ್ತಮ ಸೌಲಭ್ಯ ಹೊಂದಿರುವ ಹೋಟೆಲ್‌ಗಳ ಬಗ್ಗೆ ವಿವರ ಬೇಕು. ನಿಮ್ಮ ಆಪ್ತರು ಅಲ್ಲಿ ಯಾರೂ ಇಲ್ಲ. ಮಾಡುವುದೇನು? ಇಂತಹ ಹಲವು ಸನ್ನಿವೇಶಗಳನ್ನು ಪಟ್ಟಿ ಮಾಡಬಹುದು. ಎಲ್ಲದಕ್ಕೂ ನೀಡಬಹುದಾದ ಒಂದೇ ಸಲಹೆ ಎಂದರೆ `ಹುಡ್ಕು.ಕಾಮ್~ನಲ್ಲಿ  (hudku.com) ಹುಡುಕಿ!

`ಹುಡ್ಕು.ಕಾಮ್~ ಅಂತರರಾಷ್ಟ್ರೀಯ ಮಟ್ಟದ ಸ್ಥಳೀಯ ಶೋಧ ತಾಣ. ಕನ್ನಡದ `ಶೋಧ~ ಪದದ ಸಮಾನರ್ಥಕವಾದ `ಹುಡುಕು~ ಪದ ಇಲ್ಲಿ `ಹುಡ್ಕು~ ಆಗಿದೆ. ಈ ತಾಣ ಬೆಂಗಳೂರಿನಲ್ಲಿ ರೂಪುಗೊಂಡಿರುವುದು ವಿಶೇಷ. ಇಂಟರ್‌ನೆಟ್ ಬಳಕೆದಾರರಿಗೆ ದಿನನಿತ್ಯದ ಅಗತ್ಯಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಈ ಜಾಗತಿಕ ಶೋಧ ತಾಣ ಮೊನ್ನೆ ಮಾರ್ಚ್‌ನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಶೋಧ ತಾಣ ಎಂದ ಕೂಡಲೇ ನೆನಪಿಗೆ ಬರುವುದು, ಗೂಗಲ್, ಯಾಹೂ, ಬಿಂಗ್ ಮುಂತಾದ ತಾಣಗಳು. ಆದರೆ `ಹುಡ್ಕು.ಕಾಮ್~ ಈ ರೀತಿಯದ್ದಲ್ಲ. ಇದು ಸಂಪೂರ್ಣ ವರ್ಗೀಕೃತ ಜಾಹೀರಾತು ತಾಣ. ಅಂತರರಾಷ್ಟ್ರೀಯ ಯೆಲ್ಲೋ ಪೇಜಸ್ (yellow pages) ಮತ್ತು ಅಂತರರಾಷ್ಟ್ರೀಯ ಕ್ಲಾಸಿಫೈಡ್‌ಗಳ (ವರ್ಗೀಕೃತ ಜಾಹೀರಾತುಗಳ)  ಸಂಪೂರ್ಣ ಮಾಹಿತಿ `ಹುಡ್ಕು.ಕಾಮ್~ನಲ್ಲಿ ಲಭ್ಯ. ಇದರ ಜೊತೆಗೆ ರಿಯಲ್ ಎಸ್ಟೇಟ್, ಆಟೊಮೊಬೈಲ್‌ಗೆ ಸಂಬಂಧಿಸಿದ ವರ್ಗೀಕೃತ ಮಾಹಿತಿಗಳೂ ಸಿಗುತ್ತವೆ.

ಹಾಗೆ ನೋಡಿದರೆ, ವರ್ಗೀಕೃತ ಜಾಹೀರಾತು ಶೋಧ ತಾಣಗಳು ಹೊಸದೇನಲ್ಲ. ಈಗಾಗಲೇ ಇಂತಹ ಸಾಕಷ್ಟು ತಾಣಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, `ಹುಡ್ಕು.ಕಾಮ್~, ಪ್ರಸ್ತುತ ಲಭ್ಯವಿರುವ ಎಲ್ಲಾ ತಾಣಗಳಿಗಿಂತ ಸಂಪೂರ್ಣ ಭಿನ್ನ ಎಂದು ಹೇಳುತ್ತಾರೆ ಅದರ ರೂವಾರಿಗಳು. ವಿವರಗಳನ್ನು ಅತ್ಯಂತ ಸರಳ ಮತ್ತು ಸ್ಪಷ್ಟವಾಗಿ ಹುಡುಕಲು ಸಾಧ್ಯವಿದೆ ಎಂದೂ ಮಾತು ಸೇರಿಸುತ್ತಾರೆ ಹುಡ್ಕು.ಕಾಮ್‌ನ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಸಿ.ಆರ್. ಬಾಲಾಜಿ.

`ನಮ್ಮ ಶೋಧ ತಾಣದಲ್ಲಿ ಗೂಗಲ್, ಯಾಹೂ, ಬಿಂಗ್, ಮುಂತಾದ ಅಂತರರಾಷ್ಟ್ರೀಯ ಶೋಧ ತಾಣಗಳು ಬಳಸುತ್ತಿರುವ ತಂತ್ರಜ್ಞಾನವನ್ನು ಬಳಸಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಕ್ಲಾಸಿಫೈಡ್ಸ್ ಶೋಧ ತಾಣಗಳು ಇಂತಹ ತಂತ್ರಜ್ಞಾನ ಹೊಂದಿಲ್ಲ. ನಮ್ಮ ತಾಣ ಗ್ರಾಹಕ ಬಳಕೆ ಸ್ನೇಹಿಯಾಗಿದೆ. ಶೋಧ ವಿಧಾನವೂ ತುಂಬಾ ಸರಳ. ಗ್ರಾಹಕರಿಗೆ ಬೇಕಾದ ನಿರ್ದಿಷ್ಟ ಮಾಹಿತಿಯನ್ನಷ್ಟೇ ನಾವು ನೀಡುತ್ತೇವೆ~ ಎಂಬುದು ಅವರು ಕೊಡುವ ವಿವರಣೆ.

`ಆಫ್ರಿಕಾದ ಮೂಲೆಯೊಂದರಲ್ಲಿ ತಾಳೆ ಗರಿಗಳಿಂದ ವಿವಿಧ ಆಕರ್ಷಕ ಕಲಾಕೃತಿಗಳನ್ನು ರಚಿಸುವ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿ ಇರುತ್ತಾನೆ ಎಂದಿಟ್ಟುಕೊಳ್ಳಿ. ಆತನಿಗೆ ತನ್ನ ಕಲಾಕೃತಿಗಳನ್ನು ವಿದೇಶಿಯರಿಗೆ ಮಾರಾಟ ಮಾಡಬೇಕು ಎಂದಿರುತ್ತದೆ. ಆದರೆ ಅದಕ್ಕೆ ಅವಕಾಶ ಇರುವುದಿಲ್ಲ. ಆದರೆ ಹುಡ್ಕು.ಕಾಮ್ ತಾಣದ ಮೂಲಕ ಆತ ತನ್ನ ಆಸೆಯನ್ನು ಈಡೇರಿಸಿಕೊಳ್ಳಬಹುದು. ನಮ್ಮ ತಾಣದ ಮೂಲಕ ಆತ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಬಹುದು. ಇದೇ ನಮ್ಮ ತಾಣದ ವಿಶೇಷತೆ. ಈಗಾಗಲೇ ಸಾವಿರಾರು ಜನರು ತಮಗೆ ಬೇಕಾದ ಮಾಹಿತಿಯನ್ನು ಹುಡ್ಕು.ಕಾಮ್‌ನಲ್ಲಿ ಹುಡುಕಲು ಆರಂಭಿಸಿದ್ದಾರೆ~ ಎನ್ನುವ ಅವರು, ಕೇವಲ ಮೂರು ತಿಂಗಳ ಅವಧಿಯಲ್ಲಿ ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿರುವುದನ್ನೂ ಹಂಚಿಕೊಳ್ಳುತ್ತಾರೆ.

ಬಾಲಾಜಿ ಪ್ರಕಾರ 180 ರಾಷ್ಟ್ರಗಳ 2000ಕ್ಕೂ ಅಧಿಕ ನಗರಗಳ ಜನರು ತಾಣದಲ್ಲಿ ತಡಕಾಡಿದ್ದಾರೆ. ಪ್ರತಿದಿನ 20 ಸಾವಿರದಿಂದ 25 ಸಾವಿರ `ಹಿಟ್~ಗಳನ್ನು ಪಡೆಯುವುದು ಅವರ ಗುರಿ. ಗೂಗಲ್, ಯಾಹು ಮುಂತಾದ ಅಂತರರಾಷ್ಟ್ರೀಯ ಶೋಧ ತಾಣಗಳಿಗೆ ಪೈಪೋಟಿ ನೀಡಲು ಹೊರಟಿಲ್ಲ. ಅದು ಸಾಧ್ಯವೂ ಇಲ್ಲ. ಸ್ಥಳೀಯವಿರುವ ವರ್ಗೀಕೃತ ಜಾಹೀರಾತು ತಾಣಗಳಿಗೆ ಸ್ಪರ್ಧೆ ನೀಡುವುದೇ `ಹುಡ್ಕು.ಕಾಮ್~ನ ಏಕಮೇವ ಉದ್ದೇಶ.
`ಜಾಗತಿಕವಾಗಿ ವರ್ಗೀಕೃತ ಮಾಹಿತಿಗಳನ್ನು ಕಲೆ ಹಾಕುವ ಒಂದು ಸ್ಥಳೀಯ ತಾಣ ಸ್ಥಾಪಿಸಬೇಕೆಂಬ ಆಸೆ ಇತ್ತು. ಜನರಿಗೆ ಬಳಸಲು ಸುಲಭವೂ ಆಗಬೇಕು. ನಿರ್ದಿಷ್ಟವಾದ, ಅತ್ಯಂತ ಸ್ಪಷ್ಟ ಮಾಹಿತಿಯೂ ಜನರಿಗೆ ಸಿಗುವಂತೆ ಮಾಡಬೇಕು ಎಂಬ ಉದ್ದೇಶವೇ ಈ ಹುಡ್ಕು.ಕಾಮ್ ರೂಪುಗೊಳ್ಳಲು ಕಾರಣವಾಯಿತು~ ಎನ್ನುತ್ತಾರೆ ಬಾಲಾಜಿ.

ಕೊನೆಗೆ: ಎಂ.ಜಿ. ರೋಡಿನಲ್ಲಿ ರಸಾಸ್ವಾದ ಉಣಬಡಿಸುವ ಹೋಟೆಲ್‌ನ ಮಾಹಿತಿ ಬೇಕು ಎಂದಿಟ್ಟುಕೊಳ್ಳಿ. `ಹುಡ್ಕು.ಕಾಮ್~ ಮುಖಪುಟಕ್ಕೆ ತೆರಳಿ  restaurants in MG roadಎಂದು ಬರೆದು ಹುಡುಕಿ...  

`ಹುಡ್ಕು~ವಿನ ಜನಕರು

ಅರುಣ್ ಕುಮಾರ್ ಸಿ.ಆರ್. ಬಾಲಾಜಿ 

ಹುಡ್ಕು.ಕಾಮ್ ನಿರ್ವಹಣೆ ಮಾಡುತ್ತಿರುವುದು ಐದು ಜನರ ತಂಡ. ಈ ತಾಣ ಅರುಣ್ ಕುಮಾರ್ ಅವರ ಕನಸಿನ ಕೂಸು. ಅವರು ಈ ತಾಣದ ಸಂಸ್ಥಾಪಕ ಮತ್ತು ಸಿಇಒ. ಅವರ ಜೊತೆಗೆ ಬಾಲಾಜಿ ಸೇರಿದಂತೆ ನಾಲ್ವರ ತಂಡ ಇದೆ. ಒಂದು ವರ್ಷದ ಅವಧಿಯಲ್ಲಿ ಹುಡ್ಕು.ಕಾಮ್ ರೂಪುಗೊಂಡಿದೆ. ಅರುಣ್ ಕುಮಾರ್ ಅವರ ಹೆಸರಿನಲ್ಲಿ ನಾಲ್ಕು ಪೇಟೆಂಟ್‌ಗಳಿವೆ. ತಾಣಕ್ಕೆ ತಾಂತ್ರಿಕ ಬಲ ನೀಡುತ್ತಿರುವ ಮೆಹೆರ್ ಸಿಂಹಾದ್ರಿ, ಅರುಣ್ ಕುಮಾರ್ ಬೆನ್ನಿಗಿದ್ದಾರೆ. ಬಾಲಾಜಿ, ಸಿಂಹಾದ್ರಿ, ಅರುಣ್ ಕುಮಾರ್ ಮೂವರೂ ಐಐಟಿ/ಆರ್‌ಇಸಿಯ ತಜ್ಞರೇ. ಈ ತಂಡ ಈಗ ಹುಡ್ಕು.ಕಾಮ್‌ನ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುವುದರಲ್ಲಿ ನಿರತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT