ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರ ಕನವರಿಕೆಯ ‘ದೃಶ್ಯ’

ಅಂಕದ ಪರದೆ
Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ಒಂಬತ್ತು ವರ್ಷಗಳಿಂದ ವಿದ್ಯಾರ್ಥಿಗಳು, ಹೊಸಬರನ್ನೇ ಕಟ್ಟಿಕೊಂಡು ನಾಟಕ ಮಾಡುವ ಏಳು ಬೀಳುಗಳ ನಡುವೆಯೇ ಗಟ್ಟಿ ಹೆಜ್ಜೆಗಳನ್ನೂರಿ ಒಂದೊಂದೇ ಮೆಟ್ಟಿಲನ್ನೇರುತ್ತಿರುವ ರಂಗತಂಡ ‘ದೃಶ್ಯ’. ಈ ದೃಶ್ಯದ ಹಿಂದಿನ ಸೂತ್ರಧಾರಿ ದಾಕ್ಷಾಯಿಣಿ ಭಟ್‌.
ನೀನಾಸಮ್‌ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದ ದಾಕ್ಷಾಯಿಣಿ ಭಟ್‌ ಅವರು ಎಸ್‌. ಮಾಲತಿ, ಪ್ರಕಾಶ ಗರುಡ ಅವರ ಗೊಂಬೆಮನೆಯಲ್ಲಿ ಕೆಲಸ ನಿರ್ವಹಿಸಿದರು.

2001ರಲ್ಲಿ ಬೆಂಗಳೂರಿಗೆ ಬಂದ ದಾಕ್ಷಾಯಿಣಿ ಬೇರೆ ಬೇರೆ ತಂಡಗಳಿಗೆ ನಾಟಕ ನಿರ್ದೇಶಿಸುವುದು ಮತ್ತು ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಂಗ ತರಬೇತಿಗಳನ್ನು ನೀಡುವ ಕಾರ್ಯದಲ್ಲಿ ತೊಡಗಿಕೊಂಡರು. 2005ರ ಹೊತ್ತಿಗೆ 30ಕ್ಕೂ ಹೆಚ್ಚಿನ ನಾಟಕಗಳನ್ನು ನಿರ್ದೇಶಿಸಿದ್ದರು. ಆದರೆ ಇಲ್ಲಿ ಸ್ವಂತಿಕೆಯ ಅಭಿವ್ಯಕ್ತಿಗೆ ಕೆಲವು ಮಿತಿಗಳಿವೆ ಎಂದು ಅವರಿಗೆ ಅನ್ನಿಸತೊಡಗಿತು. ತಮ್ಮದೇ ಕನಸುಗಳನ್ನು ಸಾಕಾರಗೊಳಿಸಲು ಸ್ವಂತ ವೇದಿಕೆಯೊಂದರ ಅಗತ್ಯ ಕಾಡತೊಡಗಿತು. ಇದಕ್ಕೆ ಪೂರಕವಾಗಿ ಇವರು ತರಬೇತಿ ನೀಡಿದ ಅನೇಕ ಕಾಲೇಜಿನ ವಿದ್ಯಾರ್ಥಿಗಳೂ ಬೆಂಬಲ ನೀಡಿದರು.

2005ರಲ್ಲಿ ‘ದೃಶ್ಯ’ ರೂಪಿಸುವ ಆಲೋಚನೆ ಆರಂಭಗೊಂಡಿದ್ದು ಹೀಗೆ. ಈ ಸಮಯದಲ್ಲಿ ದಾಕ್ಷಾಯಣಿ ಭಟ್‌ ಅವರಿಗೆ ಬೆಂಬಲವಾಗಿ ನಿಂತವರು ಎಂಇಎಸ್‌ ಕಾಲೇಜಿನ ವಿದ್ಯಾರ್ಥಿ ವಿವೇಕ್‌ ಮತ್ತು ನ್ಯಾಷನಲ್‌ ಕಾಲೇಜಿನ ವಿದ್ಯಾರ್ಥಿ ದೀಪಕ್‌. ತಮ್ಮ ತಂಡದ ಆಶಯ, ಉದ್ದೇಶಗಳನ್ನು ಅವರು ವ್ಯಾಖ್ಯಾನಿಸುವುದು ಹೀಗೆ: ‘ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಸ್ಥಿತಿಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟ ಸಮಾನ ಮನಸ್ಕರ ತಂಡ ದೃಶ್ಯ’.
2006ರಲ್ಲಿ ಕಾರ್ಯಾರಂಭ ಮಾಡಿದ ಈ ತಂಡದ ಮೊದಲ ನಾಟಕ ದಾಕ್ಷಾಯಿಣಿ ಭಟ್‌ ಅವರ ನಿರ್ದೇಶನದ ‘ಗಾಜೀಪುರದ ಹಜಾಮ’. ಫ್ರೆಂಚ್‌ ಮೂಲದ ಈ ನಾಟಕವನ್ನು ಟಿ.ಎಸ್‌. ರಾಮಪ್ಪ ಕನ್ನಡಕ್ಕೆ ತಂದಿದ್ದಾರೆ. ದೃಶ್ಯ ತಂಡದ ಎರಡನೇ ಹೆಜ್ಜೆ ‘ಕಾಮಧೇನು’ ಎಂಬ ಬೀದಿ ನಾಟಕ.

ಇದರ ನಂತರ ಹನುಮಂತ ಹಾಲಗೇರಿ ಬರೆದಿರುವ ದೇವದಾಸಿ ಪದ್ಧತಿ ಕುರಿತಾದ ‘ದೇವರ ಹೆಸರಿನಲ್ಲಿ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಸ್ವಪ್ನ ವಾಸವದತ್ತಾ, ಮರುಗಡಲು, ಪೇಯಿಂಗ್‌ ಗೆಸ್ಟ್‌, ಬಸ್ತಿ, ಫ್ಲೌಟಸ್‌, ಕಂಬ್ಳಿಸೇವೆ, ವರ್ಷಗೀತೆ, ಸಮಾನತೆ, ಚಾಳೇಶ, ನಾನು ಮತ್ತು ಹೆಣ್ಣು ಹೀಗೆ ವೈವಿಧ್ಯಮಯ ನಾಟಕಗಳನ್ನು ಆಯ್ಕೆ ಮಾಡಿಕೊಂಡು ಪ್ರದರ್ಶಿಸುತ್ತಾ ಪಯಣ ಮುಂದುವರಿಸಿರುವ ದೃಶ್ಯ ತಂಡದ ಇತ್ತೀಚೆಗಿನ ನಾಟಕ ಡಾ. ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ ರಚಿಸಿದ ‘ಅಗ್ನಿವರ್ಣ’.

ಕಷ್ಟದ ದಾರಿಯ ಹಠದ ನಡಿಗೆ
ಹೊಸತನದ ತುಡಿತದಿಂದ ದಾಕ್ಷಾಯಿಣಿ ಭಟ್‌ ತಂಡವನ್ನೇನೋ ಆರಂಭಿಸಿದರು. ಆದರೆ ಅದನ್ನು ನಿಭಾಯಿಸಿಕೊಂಡು ಹೋಗುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತಂಡದಲ್ಲಿರುವವರೆಲ್ಲ ಬಹುತೇಕ ವಿದ್ಯಾರ್ಥಿಗಳೇ ಆಗಿದ್ದರು. ಕಷ್ಟಪಟ್ಟು ನಾಟಕವನ್ನೇನೋ ರೂಪಿಸುತ್ತಿದ್ದರು. ಆದರೆ ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯೇ ಸಿಗುತ್ತಿರಲಿಲ್ಲ. ಅಲ್ಲದೇ ಹಣಕಾಸಿನ ಮುಗ್ಗಟ್ಟೂ ತೀವ್ರವಾಗಿಯೇ ಕಾಡತೊಡಗಿತ್ತು. ದಾಕ್ಷಾಯಿಣಿ ಭಟ್ ತಮ್ಮ ವೈಯಕ್ತಿಕ ಸಂಪಾದನೆಯನ್ನೂ ಸುರಿದು ನಾಟಕಗಳನ್ನು ಮಾಡಿದರು. ಅದು ಸಾಲದಾದಾಗ ಸಾಲ ಮಾಡಿ ನಾಟಕ ಮಾಡಿದರು. ಇಂತಹ ಸಂಕಷ್ಟದಲ್ಲಿ ಸಹಾಯಕ್ಕೆ ಬಂದದ್ದು ನಾಟಕ ಸ್ಪರ್ಧೆಗಳು.

‘ರಂಗಭೂಮಿಯ ರಾಜಕೀಯದಲ್ಲಿ ಮುನ್ನುಗ್ಗುವುದು ನಮಗೆ ಕಷ್ಟವಾಗಿತ್ತು. ಆಗ ನಮಗೆ ಒದಗಿಬಂದದ್ದು ಸ್ಪರ್ಧೆಗಳು. ನಮ್ಮ ಬಹುತೇಕ ನಾಟಕಗಳನ್ನು ವಿವಿಧ ಸ್ಪರ್ಧೆಗಳಲ್ಲಿ ಪ್ರದರ್ಶಿಸಿದ್ದೇವೆ. ಪ್ರಶಸ್ತಿ–ಬಹುಮಾನಗಳೂ ಬಂದಿವೆ. ನಮ್ಮ ಮೊದಲ ನಾಟಕ ಗಾಜೀಪುರದ ಹಜಾಮ ಉತ್ತರ ಪ್ರದೇಶದಲ್ಲಿ ಬರೇಲಿಯಲ್ಲಿ ನಡೆದ ಅಂತರರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ 7ನೇ ಸ್ಥಾನ ಗಳಿಸಿತು. ಇದು ನಮಗೆ ಸಿಕ್ಕ ಮೊದಲ ಗೆಲುವು. ಹೋಟೆಲ್‌ನಲ್ಲಿ ಪೂರಿಯನ್ನು ತಿಂದು ಈ ಸಂಭ್ರಮವನ್ನು ಆಚರಿಸಿದ್ದೆವು. ನಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಇದಕ್ಕಿಂತ ಹೆಚ್ಚಿನ ಸಂಭ್ರಮಾಚರಣೆ ಸಾಧ್ಯವೂ ಇರಲಿಲ್ಲ’ ಎಂದು ಆರ್ದ್ರತೆಯಿಂದ ನೆನಪಿಸಿಕೊಳ್ಳುತ್ತಾರೆ ದಾಕ್ಷಾಯಿಣಿ. ಸ್ಪರ್ಧೆಗಳಲ್ಲಿ ಸಿಕ್ಕ ಗೆಲುವು ದೃಶ್ಯ ತಂಡಕ್ಕೆ ಆತ್ಮವಿಶ್ವಾಸದ ಜತೆಗೆ ಅಲ್ಪಪ್ರಮಾಣದ ಆರ್ಥಿಕ ಶಕ್ತಿಯನ್ನೂ ನೀಡಿತು. ಮುಂದಿನ ರಂಗಪಯಣಕ್ಕೆ ಈ ಎರಡೂ ಅಂಶಗಳೂ ಅವರಿಗೆ ಅವಶ್ಯಕವೇ ಆಗಿದ್ದವು.

‘ನಮ್ಮ ಕಷ್ಟಗಳನ್ನು ನೋಡಿ, ಯಾಕೆ ಸಾಲ ಮಾಡ್ಕೊಂಡು ನಾಟಕ ಮಾಡ್ತೀರಿ ಅಂತ ಕೆಲವರು ಬುದ್ಧಿ ಹೇಳಿದರು. ಇನ್ನು ಕೆಲವರು ಏನೋ ಮಾಡ್ತಿದ್ದಿಯಲ್ಲಾ ಮಾಡು ಎಂದು ಸಹಾನುಭೂತಿ ತೋರಿಸಿದರು. ಆದರೆ ಯಾರೊಬ್ಬರೂ ನಮ್ಮ ಸಹಾಯಕ್ಕೆ ನಿಲ್ಲಲಿಲ್ಲ. ನಾವೂ ಅದನ್ನು ಅಪೇಕ್ಷಿಸದೆ ಸಾಲವನ್ನೂ ನಾಟಕವನ್ನೂ ಹೆಚ್ಚು ಹೆಚ್ಚು ಮಾಡುತ್ತಲೇ ಬಂದೆವು’ ಎಂದು ನಡೆದು ಬಂದ ದಾರಿಯ ಬಗ್ಗೆ ನೆನೆಸಿಕೊಳ್ಳುವಾಗ ಅವರ ಮುಖದಲ್ಲಿ ಮೂಡುವ ನಗುವಿನಲ್ಲಿ ವಿಷಾದದ ಛಾಯೆ ದಟ್ಟವಾಗಿತ್ತು.

ಆದಾಯ ಮೂಲ
ದೃಶ್ಯ ತಂಡಕ್ಕೆ ಪ್ರೇಕ್ಷಕರು ನೀಡುವ ಹಣ, ಮತ್ತು ದಾಕ್ಷಾಯಿಣಿ ಅವರ ಖಾಸಗೀ ಗಳಿಕೆಯೇ ಪ್ರಮುಖ ಆದಾಯ ಮೂಲ. ಇದಲ್ಲದೇ ಸರ್ಕಾರ ನೀಡುವ ಸಣ್ಣಪುಟ್ಟ ಅನುದಾನಗಳು, ದೇಣಿಗೆಗಳೂ ಆಗಾಗ ಸಹಾಯಕ್ಕೆ ಬಂದಿದ್ದಿದೆ. ‘ಕಳೆದ ವರ್ಷ ನನಗೆ ₨ 10 ಲಕ್ಷ ಸಾಲವಿತ್ತು. ಈಗ ನಿಧಾನಕ್ಕೆ ತೀರಿಸುತ್ತಿದ್ದೇನೆ. ತಂಡದ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆ’ ಎನ್ನುತ್ತಾರೆ ದಾಕ್ಷಾಯಿಣಿ.
ವಿದ್ಯಾರ್ಥಿಗಳೇ ಸದಸ್ಯರು ದೃಶ್ಯ ತಂಡದ ಹೆಚ್ಚಿನ ಸದಸ್ಯರೆಲ್ಲ ವಿದ್ಯಾರ್ಥಿಗಳೇ. ಬೆಂಗಳೂರಿನವರಷ್ಟೇ ಅಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಅನೇಕ ವಿದ್ಯಾರ್ಥಿಗಳು ಈ ತಂಡದಲ್ಲಿ ತೊಡಗಿಕೊಂಡಿರುವುದು ಈ ತಂಡದ ವಿಶೇಷತೆಯಾಗಿದೆ. ಇವರಲ್ಲದೇ ದೀಪಕ್‌, ವಿವೇಕ್‌, ಡಾ. ವಸಂತ್‌ ಕುಮಾರ್‌, ಸುರೇಶ ಹೆಗಡೆ, ಅನಿಲ್‌ ಕುಮಾರ್‌, ದರ್ಶನ್‌, ಪ್ರವೀಣ ಕುಮಾರ್‌ ಈ ತಂಡದ ಖಾಯಂ ಸದಸ್ಯರು.

ಉಚಿತ ತರಬೇತಿ
ಕಳೆದ ಎರಡು ವರ್ಷಗಳಿಂದ ಆಸಕ್ತರಿಗಾಗಿ ದೃಶ್ಯ ತಂಡವು ಉಚಿತವಾಗಿ ರಂಗತರಬೇತಿ ತರಗತಿಗಳನ್ನು ನಡೆಸಿಕೊಂಡು ಬಂದಿದೆ. ಸಾಹಿತ್ಯ, ಭಾಷೆ, ಅಭಿನಯ, ರಂಗಸಜ್ಜಿಕೆ ಸೇರಿದಂತೆ ರಂಗಭೂಮಿಯ ಎಲ್ಲ ವಿಭಾಗಗಳ ಬಗ್ಗೆಯೂ ಇದರಲ್ಲಿ ತರಬೇತಿ ನೀಡಲಾಗುತ್ತದೆ. ಮುಂದೆ ದೃಶ್ಯ ತಂಡ ಆರ್ಥಿಕವಾಗಿ ಸಬಲವಾದ ಮೇಲೆ ಉಳಿಕೆಯ ಹಣದಲ್ಲಿ ಬಡ ಮಕ್ಕಳಿಗಾಗಿ ರಂಗಶಾಲೆಯನ್ನು ತೆರೆಯುವ ಯೋಜನೆಯೂ ದಾಕ್ಷಾಯಣಿ ಅವರ ಮನಸ್ಸಿನಲ್ಲಿದೆ.

ತಂತ್ರಜ್ಞಾನದಿಂದ ರಂಗಭೂಮಿ ಸಾಧ್ಯತೆ ವಿಸ್ತರಣೆ

*ಇತ್ತೀಚೆಗಿನ ರಂಗಭೂಮಿಯಲ್ಲಾದ ಬದಲಾವಣೆಗಳೇನು?
ಕಳೆದ ಎರಡು ವರ್ಷಗಳಲ್ಲಿ ನಾನು ಗಮನಿಸಿದಂತೆ ರಂಗತಂಡಗಳು ಹೆಚ್ಚಾಗಿವೆ. ಇಂದು ರಂಗಭೂಮಿಗೆ ಬರುತ್ತಿರುವವರಿಗೆ ಸಹನೆ ಕಡಿಮೆ. ಒಂದು ನಾಟಕ ಯಶಸ್ವಿಯಾಗುತ್ತಿದ್ದಂತೆ ಹೊಸ ತಂಡ ಕಟ್ಟುತ್ತೇನೆ ಎಂದು ಹೊರಡುತ್ತಾರೆ. ಇನ್ನು ಸರ್ಕಾರಗಳಿಂದ ಸಿಗುವ ಅನುದಾನ ಗಿಟ್ಟಿಸಿಕೊಳ್ಳಲಿಕ್ಕಾಗಿಯೇ ರಂಗತಂಡ ಕಟ್ಟುವವರೂ ಇದ್ದಾರೆ. ಹೀಗೆ ತಂಡಗಳು ಹೆಚ್ಚುತ್ತಿರುವುದರಿಂದಲೇ ರಂಗಭೂಮಿಯಲ್ಲಿ ನಟರ ಸಮಸ್ಯೆ ಉಂಟಾಗಿದೆ. ತಂಡಗಳ ಸಂಖ್ಯೆಗಿಂತ ನಾಟಕಗಳ ಗುಣಮಟ್ಟ ಮುಖ್ಯ. ದೊಡ್ಡ ಪ್ರಮಾಣದಲ್ಲಿ ಯುವಕರು ರಂಗಭೂಮಿಗೆ ಬರುತ್ತಿದ್ದಾರೆ. ಅವರು ಆಯ್ಕೆ ವಿಷಯದಲ್ಲಿ ಹುಷಾರಾಗಿರಬೇಕು.


*ರಂಗಭೂಮಿಯಲ್ಲಿ ಮಹಿಳೆಯ ಸ್ಥಾನ?
ರಂಗಭೂಮಿಯಲ್ಲೇ ಕೆಲಸ ಮಾಡುವ ಮಹಿಳೆಯರಲ್ಲಿ ಒಗ್ಗಟ್ಟಿಲ್ಲ. ವೈಯಕ್ತಿಕವಾಗಿ ನಾನು ಹೆಚ್ಚು ತೊಂದರೆ ಅನುಭವಿಸಿದ್ದು ಹೆಣ್ಣುಮಕ್ಕಳಿಂದಲೇ. ಮಹಿಳೆಯರು ಮಹಿಳೆಯರ ಪರವಾಗಿ ನಿಲ್ಲದಿದ್ದರೆ ಹೋಗಲಿ, ತಮ್ಮಷ್ಟಕ್ಕೆ ತಾವೂ ಇರುವುದಿಲ್ಲ. ಬದಲಿಗೆ ಕಾಲೆಳೆಯಲು ಸಿದ್ಧರಾಗಿರುತ್ತಾರೆ. ಪುರುಷ ಲೋಕದಿಂದ ಉಂಟಾಗುವ ಕಿರುಕುಳಗಳು ಅಷ್ಟಾಗಿ ನನಗೆ ತಾಕಿದ್ದು ಕಡಿಮೆ. ಈ ವಿಷಯದಲ್ಲಿ ನಾನು ಕಟ್ಟುನಿಟ್ಟಾಗಿದ್ದುದರಿಂದಲೇ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದೂ ಇದೆ.

*ರಂಗಭೂಮಿಯ ಮುಂದಿನ ದಿನಗಳು?
ರಂಗಭೂಮಿಗೆ ಸಾವಿಲ್ಲ. ಆದರೆ ಅದನ್ನು ಕಟ್ಟಿ ಹಾಕಿದರೆ ಕೊಳೆಯುತ್ತದೆ. ಹರಿಯಲು ಬಿಟ್ಟರೆ ಯಾವತ್ತೂ ತಾಜಾ ಆಗಿರುತ್ತದೆ. ಆರ್ಥಿಕವಾಗಿಯೂ ನಾಟಕ ಮಾಡುವುದು ಮೊದಲಿನಷ್ಟು ಕಷ್ಟವಲ್ಲ. ಇಂದಿನ ತಂತ್ರಜ್ಞಾನಗಳ ಬಳಕೆಯಿಂದ ಮುಂದಿನ ದಿನಗಳಲ್ಲಿ ರಂಗಭೂಮಿಯ ಹೊಸ ಸಾಧ್ಯತೆಗಳು ಹುಟ್ಟಿಕೊಳ್ಳಬಹುದು. ಗಟ್ಟಿಕೊಳ್ಳಬಹುದು ಎಂಬ ಆಸೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT