ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾರಿ’ಯ ಒಡಲಲ್ಲಿ ವೇದಾವತಿ ವಿಲಾಸ

ಸುತ್ತಾಣ
Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಸುತ್ತಲೂ ಹಬ್ಬಿ ನಿಂತ ಹಸಿರು ಬೆಟ್ಟಗಳ ಸಾಲು, ಬೆಟ್ಟಗಳ ನಡುವೆ ಅಲೆಅಲೆಯಾಗಿ ಬಳುಕುವ ವೇದಾವತಿ, ಸಣ್ಣಗೆ ತೀಡುವ ಮೆಲುಗಾಳಿ, ಹಿತವೆನಿಸುವ ವಾತಾವರಣವಿರುವ ಈ ತಾಣದ ಹೆಸರು ‘ಮಾರಿ ಕಣಿವೆ’!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಹರಿಯುವ ವೇದಾವತಿಗೆ ಅಣೆಕಟ್ಟೆ ಕಟ್ಟಿ ಅದಕ್ಕೆ ವಾಣಿವಿಲಾಸ ಸಾಗರ ಎಂಬ ಮೋಹಕ ಹೆಸರು ಇಟ್ಟಿದ್ದರೂ ಇದು ಹೆಸರಾಗಿರುವುದು ಮಾರಿ ಕಣಿವೆ ಎಂದೇ. ವೇದಾವತಿ ನದಿಯ ನೀರು ವಾಣಿವಿಲಾಸ ಸಾಗರವನ್ನು ತುಂಬಿ ತೂಬುಗಳ ಮೂಲಕ ಹೊರ ಚಿಮ್ಮುವ ದೃಶ್ಯ ಕಣ್ಣಿಗೆ ಹಬ್ಬನ್ನುಂಟು ಮಾಡುತ್ತದೆ.  ಸುತ್ತಲಿನ ಹಸಿರ ಸಿರಿಯ ನಡುವೆ ಬಳುಕುವ ನೀರಿನಲೆ ನೋಡಿದಾಗ ಭೂಮಿಯ ಮೇಲಿನ ಸ್ವರ್ಗ ಎಂದರೆ ಇದೇ ಏನೋ ಎನ್ನುವಂಥ ಅನುಭವ ಉಂಟಾಗುತ್ತದೆ.

ಬೆಂಗಳೂರಿನಿಂದ 190 ಕಿ.ಮೀ ದೂರದಲ್ಲಿದೆ ವೇದಾವತಿಯ ಒಡಲು. ಹಾಗೆಯೇ, ಚಿತ್ರದುರ್ಗದಿಂದ 40ಕಿ.ಮೀ. ಹಾಗೂ ಹಿರಿಯೂರಿನಿಂದ 10 ಕಿ.ಮೀ ದೂರದಲ್ಲಿದೆ. ಕೇವಲ ಇಲ್ಲಿನ ಪ್ರಕೃತಿ ರಮಣೀಯತೆ ಕಣ್ತುಂಬಿಕೊಳ್ಳಲು ಮಾತ್ರವಲ್ಲ, ಜಲಕ್ರೀಡೆ, ಚಾರಣ ಹಾಗೂ ಸಾಹಸ ಪ್ರಿಯರಿಗೂ ಇದು ಹೇಳಿ ಮಾಡಿಸಿದ ತಾಣವಾಗಿದೆ.

ವೇದಾವತಿ ನದಿಯ ಹಿನ್ನೀರಿನಲ್ಲಿ ನೀರಾಟವಾಡುವುದೇ ಒಂದು ಅನನ್ಯ ಅನುಭವ. ಈ ಅಣೆಕಟ್ಟೆಯ ಇನ್ನೊಂದು ವಿಶೇಷವೆಂದರೆ ಇಲ್ಲಿ ನೀರು ಸಂಗ್ರಹಗೊಳ್ಳುವುದನ್ನು ಎತ್ತರದಿಂದ ನೋಡಿದರೆ ಅದು ಭಾರತದ ನಕ್ಷೆಯನ್ನು ಹೋಲುತ್ತದೆ! ವೇದಾವತಿಯ ಒಡಲು ಆಳವಿರುವುದರಿಂದ  ಹಿನ್ನೀರಿಗೆ ಇಳಿಯುವ ಮೊದಲು ಜಾಗರೂಕತೆ ಅಗತ್ಯ. ಸುರಕ್ಷತಾ ಸಾಮಗ್ರಿಗಳಿಲ್ಲದೆ ಹಿನ್ನೀರಿಗಿಳಿದರೆ ಪ್ರಾಣಕ್ಕೆ ಸಂಚಕಾರದ ಭೀತಿ ಇದ್ದಿದ್ದೇ.

ಚಾರಣ ಪ್ರಿಯರಿಗೆ ಹಿನ್ನೀರಿನ ಪಕ್ಕದಲ್ಲಿಯೇ ಛತ್ರಿ ಆಕಾರದ ದೊಡ್ಡ ಗುಡ್ಡ  ಇದೆ. ಅದನ್ನು ಛತ್ರಿ ಗುಡ್ಡವೆಂದೇ ಕರೆಯುತ್ತಾರೆ. ಮತ್ತೊಂದು ಗುಡ್ಡಕ್ಕೆ ರಂಗನಾಥ ಸ್ವಾಮಿ ಬೆಟ್ಟ ಎಂಬ ಹೆಸರಿಂದ ಕರೆಯುತ್ತಾರೆ. ಈ ಬೆಟ್ಟವನ್ನು ಏರಿ ಹೋದರೆ ಪವನ ವಿದ್ಯುತ್‌ ಉತ್ಪಾದನೆಯ ಬೃಹತ್‌ ಫ್ಯಾನ್‌ಗಳನ್ನು ಕಾಣಬಹುದು. ಈ ಗುಡ್ಡದ ಮೇಲಿನಿಂದ ಅಣೆಕಟ್ಟಿನ ಸುತ್ತಲಿನ ಸೌಂದರ್ಯವನ್ನು ಕಾಣುವುದೇ ಆನಂದ.

ಅನುಮತಿ ಅಗತ್ಯ
ವಾಣಿವಿಲಾಸ ಸಾಗರದ ಹಿನ್ನೀರಿನಲ್ಲಿ ಜಲಕ್ರೀಡೆಯನ್ನು ಆಟವಾಡಲು ನಗರದ ನೃಪತುಂಗ ರಸ್ತೆಯಲ್ಲಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿರುವ   ಜನರಲ್ ತಿಮ್ಮಯ್ಯ ಸಾಹಸ ಕ್ರೀಡೆಗಳ ಅಕಾಡೆಮಿಯಲ್ಲಿ ಅನುಮತಿ ಪಡೆಯುವುದು ಅಗತ್ಯವಾಗಿದೆ. ಈ ಅಕಾಡೆಮಿ ಮಾರಿಕಣಿವೆಯಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತದೆ. ಆಸಕ್ತರು ಅಕಾಡೆಮಿಯ ಮೂಲಕ ತರಬೇತಿ ಪಡೆದು ಇಲ್ಲಿ ಸಾಹಸ ಕ್ರೀಡೆಗೆ ಮುಂದಾಗಬಹುದು.

ವೇದಾವತಿ ನದಿಯು ಮೊದಲು  ‘ವೇದ’ ಹಾಗೂ ‘ಆವತಿ’ ಎಂದು ಎರಡು ವಿಭಾಗಗಳಾಗಿ ಹರಿದು ಅದು ಪುರ ಎಂಬಲ್ಲಿ ಸಂಧಿಸಿ

ವೇದಾವತಿಯಾಗಿ ಹರಿಯುತ್ತದೆ. ಕಾಡು ಮೇಡು ಸುತ್ತಿ ಬರುವ ವೇದಾವತಿ ಮಾರಿ ಕಣಿವೆಯಲ್ಲಿ ವಾಣಿ ವಿಲಾಸ ಸಾಗರದ ಒಡಲು ಸೇರುತ್ತಾಳೆ.

ಹೀಗೆನ್ನುತ್ತದೆ ಇತಿಹಾಸ
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ತಾಯಿ ವಾಣಿ ವಿಲಾಸ ಅವರ ಹೆಸರನ್ನು  ಈ ಅಣೆಕಟ್ಟಿಗೆ ನಾಮಕರಣ ಮಾಡಲಾಗಿದೆ. ಮೈಸೂರು ಗೆಜೆಟಿಯರ್‌ ಪ್ರಕಾರ ವಾಣಿ ವಿಲಾಸ ಸಾಗರವು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. 1906–07ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಸರ್‌.ಎಂ.ವಿಶ್ವೇಶ್ವರಯ್ಯ ಮತ್ತು ತಾರಚಂದ್‌ ದಲ್ಲಾಲ್‌ ಅವರ ನೇತೃತ್ವದಲ್ಲಿ ಈ ಅಣೆಕಟ್ಟೆ ಕಟ್ಟಲಾಯಿತು.

ಇಲ್ಲಿ ಮಾರಿಕಾಂಬ ದೇವಾಲಯವಿದ್ದ  ಕಾರಣ ಸ್ಥಳೀಯರು ಇದನ್ನು ಮಾರಿ ಕಣಿವೆ ಎಂದೇ ಕರೆಯುತ್ತಾರೆ. ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸಕ್ಕೆ ಮಾರಿ ಕಣಿವೆಗೆ ಹೋಗಿ ಬರಬಹುದು. ಎರಡು ಮೂರು ದಿನಗಳ ರಜೆ ಇದ್ದರೆ ವೇದಾವತಿಯ ಹಿನ್ನೀರು ಹಾಗೂ ಗುಡ್ಡಗಳಲ್ಲಿ ಚಾರಣಕ್ಕೆ ಹೊರಡಬಹುದು. ಸಾಧ್ಯವಾದರೆ ಚಿತ್ರದುರ್ಗದ ಕೋಟೆಗೆ ಲಗ್ಗೆ ಇಟ್ಟು ಬರಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT