ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ಹನಿ ಸೇರಿದರೆ ಹಳ್ಳ: ಹೇಮಂತ್‌ರ ‘ಸ’ ಗಣಿತ!

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ನಾನೀಗ ಧೈರ್ಯ ಮಾಡಿದ್ದೇನೆ. ಪ್ರಯತ್ನ ಫಲಿಸದಿದ್ದರೆ ನಗೆಪಾಟಲಿಗೀಡಾಗುವುದು ಗ್ಯಾರಂಟಿ. ಯಶಸ್ವಿಯಾದರೆ ಎಷ್ಟೋ ಹೊಸಬರಿಗೆ ಹೊಸ ಹಾದಿ ತೆರೆದುಕೊಳ್ಳಲಿದೆ’ – ತಮ್ಮ ನಿರ್ದೇಶನದ ‘ಸ’ ಚಿತ್ರವನ್ನು ತೆರೆಕಾಣಿಸುತ್ತಿರುವ ಸಂದರ್ಭದಲ್ಲಿ ಹೇಮಂತ್ ಹೆಗಡೆ ಅವರ ಆತ್ಮವಿಶ್ವಾಸದ ಮಾತಿದು.

ಚಿತ್ರವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿ, ಮೊದಲ ದಿನವೇ ಹಾಕಿದ ಬಂಡವಾಳ ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸುವುದು ಈಗಿನ ಟ್ರೆಂಡ್. ಆದರೆ, ಹೇಮಂತ್ ಆ ನಂಬಿಕೆಗೆ ವಿರುದ್ಧ.

‘ನೂರೆಂಟು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಿನಿಮಾವೊಂದು, ವಾರದಲ್ಲಿ ಆರೇಳು ಥಿಯೇಟರ್‌ಗಳಿಗೆ ಇಳಿಯುವ ಬದಲು, ಅದೇ ಆರೇಳು ಚಿತ್ರಮಂದಿರಗಳಿಂದ ನೂರೆಂಟು ಚಿತ್ರಮಂದಿರಗಳಿಗೆ ವಿಸ್ತರಣೆಯಾಗಬೇಕು’ ಎಂಬುದು ಅವರ ನಂಬಿಕೆ. ಅದಕ್ಕಾಗಿ ಅವರು ತಮ್ಮ ಚಿತ್ರವನ್ನು ಕೇವಲ 6 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕು, ಮೈಸೂರು ಮತ್ತು ಮಂಗಳೂರಿನ ತಲಾ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ‘ಸ’ ತೆರೆ ಕಾಣುತ್ತಿದೆ.

ಆತ್ಮವಿಶ್ವಾಸವೇ ಕಾರಣ
‘ಇದು ಚರ್ವಿತಚರ್ವಣ ಚಿತ್ರವಲ್ಲ. ಪಕ್ಕಾ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್ ಸಿನಿಮಾ. ಕಾಮಿಡಿ ಚಿತ್ರಗಳಿಗೆ ಅಂಟಿಕೊಂಡಿದ್ದ ನಾನು, ಅದರಿಂದ ಹೊರಬಂದು ಇದನ್ನು ಮಾಡಿದ್ದೇನೆ. ಸಾಮಾನ್ಯವಾಗಿ ಸಸ್ಪೆನ್ಸ್‌– ಥ್ರಿಲ್ಲರ್ ಸಿನಿಮಾಗಳಲ್ಲಿ ಅರ್ಧದ ಹೊತ್ತಿಗೆ ಮುಂದೇನಾಗುತ್ತದೆ ಎಂದು ಊಹಿಸಬಹುದು. ಆದರೆ, ನನ್ನ ಚಿತ್ರದಲ್ಲಿ ಆ ರೀತಿ ಆಗದು. ಕಡೆಯ ಫ್ರೇಮ್‌ವರೆಗೆ ಪ್ರೇಕ್ಷಕನನ್ನು ಕುತೂಹಲದಿಂದ ಹಿಡಿದಿಟ್ಟುಕೊಳ್ಳುತ್ತದೆ’ ಎಂದು ಹೇಮಂತ್ ಚಿತ್ರದ ವಿಶೇಷವನ್ನು ಬಿಚ್ಚಿಡುತ್ತಾರೆ.

‘ಚಿತ್ರದ ವಿಶೇಷತೆ ಸ್ಕ್ರೀನ್ ಪ್ಲೇ. ಏಳು ಪ್ರಮುಖ ಪಾತ್ರಗಳು ಸೇರಿದಂತೆ 9 ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಯಾರೂ ತೀರಾ ಒಳ್ಳೆಯವರಲ್ಲ. ಅತಿ ಕೆಟ್ಟವರೂ ಅಲ್ಲ. ಪರಿಸ್ಥಿತಿಯ ಕೈಗೊಂಬೆಗಳಾಗಿ  ವರ್ತಿಸುತ್ತಾರಷ್ಟೆ. ನಾನೂ ಸೇರಿದಂತೆ ಸಿನಿಮಾದಲ್ಲಿರುವ ಎಲ್ಲ ಕಲಾವಿದರ ಇಮೇಜ್ ಅಥವಾ ಶೇಡ್‌ ಇಲ್ಲಿ ಬದಲಾಗಿದೆ’ ಎಂದು ಅವರು ಚಿತ್ರದ ಬಗ್ಗೆ ಹೇಳುತ್ತಾರೆ.

ಪ್ರಯೋಗದ ಹಿಂದೆ ಸ್ಫೂರ್ತಿ
ಹೇಮಂತ್‌ರ ಈ ನಿರ್ಧಾರಕ್ಕೆ ಹಾಲಿವುಡ್‌ನ ಸೂಪರ್‌ಸ್ಟಾರ್ ಲಿಯೋನಾರ್ಡೊ ಡಿಕ್ಯಾಪ್ರಿಯೊ ಅಭಿನಯದ ‘ದಿ ರೆವನಾಂಟ್‌’ ಚಿತ್ರ ಸ್ಫೂರ್ತಿಯಂತೆ. ‘ವಿಭಿನ್ನವಾದ ಕಥೆಯ ಆ ಚಿತ್ರ ಸಿನಿಮಾ ಸೂತ್ರಗಳನ್ನು ಮೀರಿದ್ದಾಗಿದೆ.

ಸೂಪರ್‌ಸ್ಟಾರ್ ನಟನಿದ್ದರೂ ನಿರ್ದೇಶಕ ಅಮೆರಿಕದಾದ್ಯಂತ ಕೇವಲ 5 ಚಿತ್ರಗಳಲ್ಲಿ ಬಿಡುಗಡೆ ಮಾಡಿ ಹೊಸ ಪ್ರಯೋಗ ಮಾಡಿದ. ಪ್ರೇಕ್ಷಕರಿಂದಲೇ ಅದಕ್ಕೆ ಹೆಚ್ಚಿನ ಪ್ರಚಾರ ಸಿಕ್ಕ ಬೆನ್ನಲ್ಲೇ, ಸುಮಾರು 2 ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಿದ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ತಮ್ಮ ಈ ಪ್ರಯೋಗಕ್ಕಾಗಿ  ಹೇಮಂತ್ ಎರಡು ತಿಂಗಳ ಅವಧಿಯಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಕುರಿತು ಅಧ್ಯಯನ ನಡೆಸಿ, ಲೆಕ್ಕಾಚಾರ ಹಾಕಿದ್ದಾರೆ.

‘ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಆದರೆ, ಇದೆಲ್ಲಕ್ಕಿಂತ ‘ಮೌತ್‌ ಟು ಮೌತ್ ಪಬ್ಲಿಸಿಟಿ’ (ಬಾಯಿಂದ ಬಾಯಿಗೆ ಪ್ರಚಾರ) ಪರಿಣಾಮಕಾರಿ. ಜನರನ್ನು ಚಿತ್ರಮಂದಿರದತ್ತ ಸೆಳೆಯುವ ಈ ಪ್ರಚಾರ ಎಲ್ಲರನ್ನು ತಲುಪಲು ಕನಿಷ್ಠ ಒಂದು ವಾರವಾದರೂ ಬೇಕು.

ಅದಕ್ಕಾಗಿ ಜಾಹೀರಾತಿಗಾಗಿ ಹಣ ಖರ್ಚು ಮಾಡದೆ, ನಮ್ಮ ‘ಸ’ ಬಗ್ಗೆ ಅಂತಹದ್ದೊಂದು ಟಾಕ್ ಹುಟ್ಟುವಂತೆ ಮಾಡಲು ನಿರ್ಧರಿಸಿದ್ದೇನೆ. ಅದಕ್ಕಾಗಿ ವಾರದ ಮಟ್ಟಿಗೆ ಆರು ಥಿಯೇಟರ್‌ಗಳಲ್ಲಿ ಈ ಪ್ರಯೋಗ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ.

ಅನಿವಾರ್ಯ ಪ್ರಯೋಗ
ವಿವಿಧ ಹಿನ್ನೆಲೆಯ 50 ಜನರನ್ನು ಸ್ಥಳವೊಂದರಲ್ಲಿ ಸೇರಿಸಿ, ಟೈಟಲ್ ಕಾರ್ಡ್ ತೋರಿಸದೆ ಹೇಮಂತ್‌ ತಮ್ಮ ಸಿನಿಮಾ ಪ್ರದರ್ಶಿಸಿದರಂತೆ. ಆ ಪೈಕಿ 48 ಮಂದಿ ಚಿತ್ರ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ನೀಡಿದರಂತೆ. ಈ ಮೆಚ್ಚುಗೆ ಅವರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.

‘ನಮ್ಮ ಚಿತ್ರ ತಲೆಗೆ ಸ್ಪಲ್ಪ ಕೆಲಸ ಕೊಡುತ್ತದೆ. ಹಾಗಾಗಿ ‘ಎ’ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು, ಮಲ್ಪಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಅಂದರೆ, ನೀರನ್ನು ಕೆಳಗಿನಿಂದ ಮೇಲಕ್ಕೆ ಹರಿಸದೆ, ಮೇಲಿನಿಂದ ಕೆಳಕ್ಕೆ ಹರಿಸುವ ಕೆಲಸವಿದು. ಇದಕ್ಕೆ ನಿರ್ಮಾಪಕರ ಸಾಥ್ ಕೂಡ ಇದೆ. ಅವರಿಗೆ ಹಾಲಿವುಡ್‌ ಸಿನಿಮಾಗಳು ಮತ್ತು ಅಲ್ಲಿನ ಪ್ರಯೋಗಗಳ ಬಗ್ಗೆಯೂ ಅರಿವಿದೆ’ ಎಂದು ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT