ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ವಿದ್ಯುದಾಗಾರ ಉತ್ಪಾದನೆ ಸ್ಥಗಿತ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದ  ವಿದ್ಯುತ್‌ ಉತ್ಪಾದನೆಯ ಪ್ರಮುಖ ಜಲಾಶಯ ಲಿಂಗನಮಕ್ಕಿ ಭರ್ತಿಗೆ  ಇನ್ನೂ 27 ಅಡಿ ನೀರಿನ ಅಗತ್ಯವಿದ್ದು, ಬೇಸಿಗೆಯಲ್ಲಿ ವಿದ್ಯುತ್‌ ಅಭಾವ ಎದುರಿಸಲು ಈಗಿನಿಂದಲೇ ನೀರಿನ ಮಿತ ಬಳಕೆ ಮಾಡಲು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಮುಂದಾಗಿದೆ.

ಜಲಾಶಯದ ನೀರು ಬಳಸಿಕೊಂಡು ಮಹಾತ್ಮ ಗಾಂಧಿ, ಶರಾವತಿ,  ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ವಿದ್ಯುದಾಗಾರಗಳ ಮೂಲಕ 1469.8 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಆದರೆ, ನೀರಿನ ಮಿತ ಬಳಕೆಯ ಕಾರಣ ಕಳೆದ ನಾಲ್ಕು ದಿನಗಳಿಂದ ಮಹಾತ್ಮ ಗಾಂಧಿ ವಿದ್ಯುದಾಗಾರದಲ್ಲಿ ವಿದ್ಯುತ್‌ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಶರಾವತಿ ವಿದ್ಯುದಾಗಾರದಲ್ಲಿ ಸರಾಸರಿ 600 ಮೆಗಾವಾಟ್‌ ಮಾತ್ರ ಉತ್ಪಾದಿಸಲಾಗುತ್ತಿದೆ.

ರಾಜ್ಯದಲ್ಲಿ ಪ್ರತಿದಿನ ಸುಮಾರು 10 ಸಾವಿರ ಮೆಗಾವಾಟ್‌ ವಿದ್ಯುತ್‌ಗೆ ಬೇಡಿಕೆ ಇದೆ. ಶರಾವತಿ ಕಣಿವೆ ಯೋಜನೆಯ   ವಿದ್ಯುದಾಗಾರಗಳಿಂದಲೇ (ಖಾಸಗಿಯೂ ಸೇರಿ) 1,500ಕ್ಕೂ ಹೆಚ್ಚು ಮೆಗಾವಾಟ್‌ ವಿದ್ಯುತ್‌ ದೊರೆಯುತ್ತದೆ. ಈಗ ಉತ್ಪಾದನೆ ಕಡಿಮೆ ಮಾಡುವ ಮೂಲಕ ಜಲಾಶಯದಲ್ಲಿ ನೀರು ಉಳಿಸಿಕೊಂಡು ಬೇಸಿಗೆಯಲ್ಲಿ ಬಳಕೆ ಮಾಡಿಕೊಳ್ಳಲು ಕೆಪಿಸಿ ನಿರ್ಧರಿಸಿದೆ.

ಜಲಾಶಯದ ಸಂಗ್ರಹಣಾ ಸಾಮರ್ಥ್ಯ 151.75 ಟಿಎಂಸಿ. ಪ್ರಸ್ತುತ ಜಲಾಶಯದಲ್ಲಿ 77.843 ಟಿಎಂಸಿ ಮಾತ್ರ ನೀರಿದೆ. ಜಲಾಶಯ ಭರ್ತಿಯಾಗಲು ಇನ್ನೂ 73.907 ಟಿಎಂಸಿ ನೀರು ಬೇಕಿದೆ. ಜಲಾಶಯ ಪ್ರದೇಶದ ವ್ಯಾಪ್ತಿಯಲ್ಲಿ 2 ತಿಂಗಳಿನಿಂದ ಸಾಧಾರಣ ಮಳೆಯಾಗುತ್ತಿರುವುದರಿಂದ ನಿತ್ಯ ಸರಾಸರಿ 7 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಒಂದು ಮೆಗಾವಾಟ್ ವಿದ್ಯುತ್‌ ಉತ್ಪಾದಿಸಲು 9 ಕ್ಯುಸೆಕ್‌ ನೀರು ಬಳಕೆಯಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿದರೆ 13 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಬೇಕಾಗುತ್ತದೆ.

ಸಂಗ್ರಹವಿರುವ 77.843 ಟಿಎಂಸಿ ಬಳಸಿದರೆ ಬೇಸಿಗೆ ಆರಂಭಕ್ಕೂ ಮೊದಲೇ ಜಲಾಶಯ ಖಾಲಿಯಾಗುತ್ತದೆ. ‘ವಿದ್ಯುತ್‌ ಬೇಡಿಕೆ ನೋಡಿಕೊಂಡು ಉತ್ಪಾದನೆ ಮಾಡಲಾಗುತ್ತಿದೆ. ನೀರಿನ ಮಿತ ಬಳಕೆಗೆ ಆದ್ಯತೆ ನೀಡಲಾಗಿದೆ. ಮಹಾತ್ಮ ಗಾಂಧಿ ವಿದ್ಯುದಾಗಾರದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕಾಲುವೆಗಳ ಹೂಳು ತೆಗೆಸಲಾಗುತ್ತಿದೆ.

ಇನ್ನೂ ಕೆಲವು ದಿನ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ನಂತರ ಮೇಲಧಿಕಾರಿಗಳ ಸೂಚನೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎನ್ನುತ್ತಾರೆ ಶರಾವತಿ ವಿದ್ಯುದಾಗಾರದ ಮುಖ್ಯ ಎಂಜಿನಿಯರ್‌ ಕೆ.ಆರ್‌.ಶಿವಾಜಿ. ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ ಅವಘಡ ನಡೆದ ನಂತರ ನಾಲ್ಕು ತಿಂಗಳು ವಿದ್ಯುತ್‌ ಉತ್ಪಾದನೆ ಸ್ಥಗಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT