ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿ: ವಿಟ್ಲಪಿಂಡಿಗೆ ಸಕಲ ಸಿದ್ಧತೆ

ಶ್ರೀಕೃಷ್ಣ ಮಠಕ್ಕೆ ಸಾವಿರಾರು ಭಕ್ತರ ಭೇಟಿ
Last Updated 25 ಆಗಸ್ಟ್ 2016, 19:46 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಸಂಭ್ರಮ ಸಡಗರದಿಂದ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದರು. ನಗರದಲ್ಲಿ ಎಲ್ಲೆಡೆ ವಿವಿಧ ವೇಷಧಾರಿಗಳ ಭರಾಟೆಯೂ ಜೋರಾಗಿತ್ತು.

ಹಬ್ಬದ ಅಂಗವಾಗಿ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರು ವಸುದೇವ ಶ್ರೀಕೃಷ್ಣನನ್ನು ನಂದಗೋಕುಲಕ್ಕೆ ಕರೆದೊಯ್ಯುತ್ತಿರುವ ವಿಶೇಷ ಅಲಂಕಾರ ಮಾಡಿದ್ದರು.

ಬೆಳಿಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ಕೃಷ್ಣ ಮಠದತ್ತ ಬರಲಾರಂಭಿಸಿದರು. ಮಧ್ಯಾಹ್ನದ ವೇಳೆಗೆ ರಥ ಬೀದಿ ಜನರಿಂದ ತುಂಬಿ ಹೋಗಿತ್ತು. ಸರತಿ ಸಾಲು ರಾಜಾಂಗಣದವರೆಗೂ ಇತ್ತು.  ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ರಾತ್ರಿ 11.48ರ ಸುಮಾರಿಗೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.

ಬಿಲ್ವಾರ್ಚನೆ ಮಾಡಿದ ಅವರು ಶಂಖದಲ್ಲಿಯೂ ಅರ್ಘ್ಯ ನೀಡಿದರು. ರಾಜಾಂಗಣದಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು. ಹುಲಿ ವೇಷ ತಂಡಗಳ ಕುಣಿತದ ದೃಶ್ಯ ನಗರದೆಲ್ಲೆಡೆ ಕಂಡುಬಂತು. ಇದನ್ನು ಸಹ ಜನರು ಕುತೂಹಲದಿಂದ ವೀಕ್ಷಿಸಿದರು.

ಕೃಷ್ಣ ಮಠದ ಮಧ್ವಮಂಟಪದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಭಜನೆ ಸಂಜೆ 6 ಗಂಟೆಯ ವರೆಗೆ ನಿರಂತರವಾಗಿ ನಡೆಯಿತು. ಹಂಗಾರಕಟ್ಟೆಯ ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿತು.
*
ಬಿಗಿ ಬಂದೋಬಸ್ತ್‌ 
ಇಂದು ನಡೆಯುವ ವಿಟ್ಲಪಿಂಡಿ ಆಚರಣೆಗೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ. ರಥಬೀದಿಯ ಸುತ್ತಲೂ ಸುಮಾರು 20ಕ್ಕೂ ಅಧಿಕ ಕಮಾನುಗಳನ್ನು ನಿರ್ಮಿಸಲಾಗಿದ್ದು, ಅದಕ್ಕೆ ಮೊಸರು ಕುಡಿಕೆ ಕಟ್ಟಿ ಒಡೆಯಲಾಗುತ್ತದೆ. ವೇಷಧಾರಿಗಳು ಸಹ ಭಾರಿ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.

ಮಧ್ಯಾಹ್ನ 3.30ರ ಸುಮಾರಿಗೆ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ರಥೋತ್ಸವ ನಡೆಸಲಾಗುತ್ತದೆ. ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆಯೂ ನಡೆಯಲಿದೆ.

ಸಾವಿರಾರು ಜನರು ರಥೋತ್ಸವ ನೋಡಲು ಸೇರುವ ನಿರೀಕ್ಷೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಸಹ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT